ಕೋಪವೆಂಬುದು ಕೇಳು.....
ದಿಗ್ಗನೆದ್ದೆ.
ಎಂತದೋ ಒಂದು ಸದ್ದು ಗುಂಝ್ಝ್ ...ಅಂತ... ಏನಿದು?
ಗೊತಾಯ್ತು, ನನ್ನ ಜಂಗಮವಾಣಿಯದ್ದು ಅದು.,
ನಿನ್ನೆ ಸಂಜೆಯ ಖಾಸಗಿ ಸಮಾರಂಭಕ್ಕಾಗಿ ಅದನ್ನು ಅದುರುವ ಶಬ್ದಕ್ಕಾಗಿ ರೂಪಾಂತರಿಸಿದ್ದೆ, ಮರೆತೂ ಇದ್ದೆ.
ಕರೆ ತ್ಯಾಂಪನದ್ದು.
ಯಾಕೋ ಏನಾಯ್ತೋ......
ನಿನಗೆ ಅಲಸೂರ್ ಹತ್ರ ಯಾರದ್ದಾದರೂ ಪರಿಚಯವಿದೆಯಾ..?
ಯಾಕೆ ಏನಾಯ್ತು..?
ಅದೆಲ್ಲಾ ಬ್ಯಾಡ ಒಂದೇ ಉತ್ತರ ಕೊಡು
ಇವನೊಬ್ಬ ವಕೀಲರ ತರ ಹೌದು ಅಥವಾ ಇಲ್ಲ ಅಂತ ಹೇಳಲು ಇದೇನು ಪರೀಕ್ಷೆ ಯಾ? ಅಥವಾ ಪಾಟೀ ಸವಾಲಾ..??
ನೀನು ಯಾರು ಬೇಕು ಅಂದರೆ ತಾನೇ ನಾನು ಹೇಳಬಲ್ಲೆ..?
ಏಯ್, ಯಾರೋ ಒಬ್ಬರು ಮಿಲಿಟರಿಯಾ, ಪೋಲೀಸಾ ಅಥವಾ ರಾಜ ಕಾರಣಿಯಾ ಅಂತವರ ಪರಿಚಯ ಇದೆಯಾ..??
ಒಳ್ಳೆ ಪಚೀತಿ ಆಯ್ತಲ್ಲ... ಯಾವುದಕ್ಕೆ ಅಂತಾನೂ ಹೇಳಲಿಲ್ಲ ಪ್ರಾಣಿ, ಮಿಲಿಟರಿ ಬಿಟ್ಟು ಆರು ವರ್ಷ ಆಯ್ತು, ಪ್ರತಿ ಮೂರು ವರ್ಷಕ್ಕೊಮ್ಮೆ ಗುಳೆ ಏಳುವ ಸಂಪ್ರದಾಯದಲ್ಲಿ ನನ್ನ ಪರಿಚಯವಿರುವವರು ಯಾರಿದ್ದಾರೆ ಯಾರಿಲ್ಲ ಅಂತ ಹೇಳೋದು ಹೇಗೆ..? ನನ್ನ ಈ ಪ್ರಿಯೋರಿಟಿಯ ಕೆಲಸದ ಬಗ್ಗೆ ಎಲ್ಲಿಲ್ಲದ ಸಿಟ್ಟು ಬಂತು. ಅಲ್ಲ ಬೆಳಿಗ್ಗೆ ಆರಕ್ಕೆ ಮನೆಯಿಂದ ಹೊರಟರೆ ರಾತ್ರೆ ಒಂಬತ್ತಕ್ಕೆ ಮನೆ. ಹೀಗಿರೋವಾಗ ಯಾರನ್ನ ಯಾರ್ಯಾರ ಸಂಪರ್ಕವನ್ನ ನೆನಪಿನಟ್ಟು ಪೋಷಿಸಲಾಗುತ್ತೆ..?
ಏನು ಅರ್ಜೆಂಟೋ ಆತ ಸಂಪರ್ಕವನ್ನ ಕಡಿದೇ ಬಿಟ್ಟ.
ತಡೀರಿ, ಅವನು ಕೇಳಿದ ಮೂವರು ಬೇಕಾಗೋದು ಯಾವಾಗ?
ಏನಾದರೋ ದೊಡ್ಡ ಕಿತಾಪತಿಯಾದಾಗ ಮಾತ್ರ. ಅಂದರೆ ಅವನೋ ಅಥವಾ ತ್ಯಾಂಪಿಯೋ ಒಂದು ಸಮಸ್ಯೆಯಲ್ಲಿದ್ದಾರೆ. ಹೌದು,
ಆತ ಕರೆ ಮಾಡಿದ ಅಂದ್ರೆ ತ್ಯಾಂಪಿಯೇ ಏನೋ ಕಿತಾಪತಿ ಮಾಡಿರಬೇಕು.
ಜಂಗಮವಾಣಿ ಪರಿಶೀಲಿಸಿದೆ. ನಿಜ ಅಲಸೂರು ಕೆರೆಯ ಪಕ್ಕದಲ್ಲೇ....ಇದ್ದ ಹಾಗಿದೆ. ಆತ್ಮಹತ್ಯೆ........ ಮನ ಶಂಕಿಸಿತು, ಸಾಧ್ಯವೇ ಇಲ್ಲ ತ್ಯಾಂಪ ಹಾಗೆ ಮಾಡಿಕೊಳ್ಳಲು , ನನ್ನನ್ನು ಬೇರೆ ಸಂಪರ್ಕಿಸಿದ್ದಾನಲ್ಲ.
ಮತ್ತೆ ತ್ಯಾಂಪಿ... ಇದ್ದರೂ ಇರಬಹುದು. ಹೌದು ಹಿಂದೆಯೂ ಅಂತಹ ಸುಮಾರು ಘಟನೆಗಳಾಗಿವೆ.
ಒಮ್ಮೆ ಹೀಗಾಗಿತ್ತು...
ಅವಳ ಮನೆಗೆ ನನ್ನನ್ನೂ ಶೀನನನ್ನೂ ತುರಂತಾಗಿ ಕರೆಸಿದ್ದಳು.
ನಾವು ಅಲ್ಲಿಗೆ ಹೋದಾಗ...
ನಾನು ಬದುಕಲ್ಲ ಬಿಡಿ, ಎನ್ನುತ್ತಿದ್ದಾಳೆ ಕೈಯ್ಯಲ್ಲಿ ನಿದ್ದೆ ಮಾತ್ರೆಯ ಬಾಟ್ಲಿ ಹಿಡಿದು. ತ್ಯಾಂಪ ಕೊಸರಾಡುತ್ತಿರೋ ಅವಳ ಕೈಗಳೆರಡನ್ನೂ ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ.
ಏನಾಯ್ತು ಕೇಳಿದ ಶೀನ, ಆತ ತುಂಬಾನೇ ಕೂಲ್ ಮನುಷ್ಯ.
ನಾ ಇವರ ಜತೆ ಸಂಸಾರ ಮಾಡಿಕೊಂಡಿರಲಾರೆ, ಬಿಡಿ ನನ್ನ ಸಾಯಲು ಬಿಡಿ.
ತ್ಯಾಂಪನ ಮುಖ ನೋಡಿಯೇ ಗೊತ್ತಾಗಿತ್ತು ಅವನಿಗೆ ಕಾರಣ ತಿಳಿದಿಲ್ಲ ಅಂತ.
ಮೊದಲು ಅವಳ ಹತ್ತಿರವಿದ್ದ ಔಷಧಿ ಸೀಸೆ ನನಗಿತ್ತ ಶೀನ. ಹೇಳಮ್ಮ ಏನಾಯ್ತು ಬಿಡಿಸಿಹೇಳು
ನೋಡಿ ಇಲ್ಲಿ, ಏನಮ್ಮ ಇದು. ನಾನೂ ನೋಡಿದೆ ಸುಮಾರು ಎರಡು ಅಡಿ ಉದ್ದ ಇರೋ ಒಂದು ಕಡು ಕಪ್ಪು ತಲೆಗೂದಲು.
ಯಾರದ್ದಮ್ಮಾ ಇದು?
ಇದು ಅವರ ಹತ್ರ ಕೇಳಿ..
ತ್ಯಾಂಪನೆಡೆ ಚಾಚುತ್ತಾ ಸೀನ ಕೇಳಿದ ಯಾರದ್ದಪ್ಪಾ ಇದು?
ನಂಗೇನ್ ಗೊತ್ತು.?
ಅವರ ಅಂಗಿಯ ಹಿಂಬದಿ ಅಂಟಿಕೊಂಡಿತ್ತು, ಒಗೆಯಲು ತೆಗೆದಾಗ ಸಿಕ್ಕಿತ್ತು, ಕೇಳಿ ಅವರ ಹತ್ರ.. ಇಷ್ಟು ಹೇಳುವಷ್ಟರಲ್ಲಿ ಅವಳ ಕಣ್ಣಾಲಿಗಳು ತುಂಬಿ ಬಂದವು.ತ್ಯಾಂಪಿಯ ಒರಸೆ.
ತ್ಯಾಂಪ ಅದನ್ನ ತೆಗೆದುಕೊಂಡು ಯೊಚಿಸಿದ ಸ್ವಲ್ಪ ಘಟ್ಟಿಯಾಗಿಯೇ.
ರೀಟಾ, ಸೀತಾ, ಕಾವೇರಿ, ಮತ್ತು ನೀತಿಯದ್ದಲ್ಲ ಇದು ಯಾಕೆಂದರೆ ಎಲ್ಲರೂ ಬಾಬ್ ಕಟ್, ಮತ್ತೆ ಹನಿ ಮೇಡಮ್ ಬಾಯ್ ಕಟ್, ಮತ್ಯಾರಿದ್ದಾರೆ ನಮ್ಮ ಆಫೀಸಿನಲ್ಲಿ ಉದ್ದದ ಕೂದಲಿನವರು...ಮೊನ್ನೆ ಮೊನ್ನೆ ಬಂದ ಪೀ ಏ ಅಲ್ಲಲ್ಲ ಅವಳ ಕೂದಲು ಕೆಂಚು... ತ್ಯಾಂಪನ ಕಥೆಯೇ ಅಷ್ಟು
ನೋಡಿದ್ರಾ, ನೋಡಿದ್ರಾ, ಆಫೀಸಿನ ಎಲ್ಲಾ ಹೆಂಗಸರ ಬಗ್ಗೆನೂ ಅವರಿಗೆ ಗೊತ್ತು. ಇಂತ ಗಂಡನ ಬಳಿ ನಾನು ಸಂಸಾರ ನಡೆಸಲಾರೆ.
ತಡಿಯಮ್ಮಾ,
ಯಾವಾಗ ಹಾಕಿದ್ದಪ್ಪಾ ಈ ಶರ್ಟು..?
ನಿನ್ನೆ, ಆಫಿಸಿಂದ ಮನೆಗೆ ಹ್ಯಾಗೆ ಬಂದೆ
ಬಸ್ಸಿನಲ್ಲಿ..
ನಿನ್ನ ಹಿಂದೆ ಮುಂದೆ ಯಾರಾದರೂ ಹೆಂಗಸರಿದ್ರಾ, ಚೆನ್ನಾಗಿ ನೆನಪಿಸಿಕೊಂಡು ಹೇಳು
ಹೌದು, ಒಂದು ಚಿಕ್ಕ ಮಗುವೆತ್ತಿಕೊಂಡ ಉದ್ದ ಕೂದಲಿನ ಹೆಂಗಸು ಒಬ್ಬಳು ನಿಂತಿದ್ದಳು.
ಸರಿ ಬಿಡಮ್ಮಾ, ತ್ಯಾಂಪನಿಗೆ ಮಕ್ಕಳೆಂದರೆ ತುಂಬಾ ಪ್ರೀತಿ, ಆ ಮಗುವಿನ ಕಯ್ಯಲ್ಲಿ ತಾಯಿಯ ಕೂದಲು ತ್ಯಾಂಪನ ಅಂಗಿಗೆ ಸಿಕ್ಕಿಕೊಂಡಿರಬೇಕು. ಚಿಕ್ಕ ಚಿಕ್ಕ ವಿಷಯವನ್ನು ಬೇಟ್ಟ ಮಾಡುತ್ತಿದ್ದಿಯಲ್ಲ..?
‘ತಡಿ ತಡಿ ಹೊಸತಾಗಿ ನಮ್ಮ ಆಫೀಸಿಗೆ ಬಂದ ಮಂದಾ.......“ ಶೀನನ ಕಣ್ಣು ಸನ್ನೆ ಅರ್ಥವಾಗಿ ತ್ಯಾಂಪನನ್ನು ಅಲ್ಲಿಂದ ಬೇರೆಡೆ ಕರೆದೊಯ್ದಿದ್ದೆ..
ಏನಂತೆ ಅವರದ್ದು..
ಏನಿಲ್ಲ ಬಿಡಮ್ಮ ನನ್ನ ಹಳೆ ದೋಸ್ತ್ ಒಬ್ಬ ತ್ಯಾಂಪನ ಕಚೇರಿಗೆ ಬಂದಿದ್ದನಂತೆ.
ಮತ್ತೆ ಮಂದಾಕಿನಿಯೋ... ಅಂದ್ ಹಾಗಿತ್ತು
ಇಲ್ಲಮ್ಮ ಅವನ ಹೆಸರು ಮಂದಾ... ಹೌದು ಮಂದಾರ.....ನನ್ನ ಹಳೇ ಗೆಳೆಯ.
.........................................................
ಅಂತೂ ಶೀನನ ದೂರಾಲೋಚನೆಯಿಂದಾಗಿ ಸುಖಾಂತ್ಯವಾಗಿತ್ತು ಘಟನೆ.
ಸರಿ
ನಾನೇ ಅವನನ್ನು ಹುಡುಕುತ್ತ ಹೊರಟೆ ನಂದಿ ದುರ್ಗ ರಸ್ತೆಯಲ್ಲಿ...
ಹೌದು ಅಲಸೂರು ಕೆರೆಯ ಬಳಿ ಸಿಕ್ಕಿದ ಪ್ರಾಣಿ..
ಏನಾಯ್ತೋ..?
ತ್ಯಾಂಪಿ ಅಕ್ಸಿಡೆಂಟ್ ಮಾಡಿಕೊಂಡಿದ್ದಾಳೆ...?
ಯಾಕೆ ಏನಾಯ್ತು..?
ಬೆಳಗಿನಿಂದ ಹತ್ತು ಸಾರಿ ಕೇಳಿ ತಲೆ ಚಿಟ್ಟು ಹಿಡಿದಿದೆಯಪ್ಪಾ, ಎಲ್ಲರಿಗೂ ಹೇಳಿ ಹೇಳಿ ಸಾಕಾಯ್ತು...
ಅಲ್ಲಯ್ಯಾ, ಅದೇನು ಫೇಸ್ ಬುಕ್ ಸ್ಟೇಟಸ್ಸಾ.. ನಿಂದು, ನೋಡಿದ ಕೂಡಲೆ ಗೊತ್ತಾಗೋಕೆ, ನೀನು ಹೇಳಿದರೆ ತಾನೇ ಗೊತ್ತಾಗೋದು.
ಅವಳಿಗೆ ಕಾರು ಕಲಿಸೋದಕ್ಕೆ ಸಾಧ್ಯ ಇಲ್ಲ, ನಿಮ್ ಸ್ವಂತ ಕಾರು ತೆಗೆದು ಕಲೀರಿ ಅಂದ ಚಾಲಕ ಮಂಜ ಅವಳಿಗೆ ಸಿಕ್ಕಿದ್ದನಂತೆ
ಅದಕ್ಕೇ..
ಅವಳಿಗೆ ಹಳೆಯ ಆತ ಬೈದ ನೆನಪೆಲ್ಲಾ ಒಟ್ಟು ಸೇರಿ ಪಿತ್ತ ನೆತ್ತಿಗೇರಿತಂತೆ
ಸರಿ
ಇವಳು ಹತ್ತಿರ ನಿಲ್ಲಿಸಿದ್ದ ಕಾರು ಹತ್ತಿ ಆತನಿಗೆ ಬಯ್ಯುತ್ತಾ ಕಾರು ಆತನೆಡೆ ಬಿಟ್ಟಳತೆ.
ಅದಕ್ಕೇ
ಎರಡ್ಮೂರು ಸಾರಿ ಗುದ್ದಿಸಿದಳಂತೆ..
ಮತ್ತಿನ್ನೇನು, ಆ ಪ್ರಾಣಿ ಸತ್ತು ಪರಲೋಕಕ್ಕೆ ಹೋಗಿರಬೇಕು, ಆತನ ಮನೆಯವರು ಪೋಲೀಸ್ ಕಂಪ್ಲೆಂಟ್ ಕೊಟ್ಟಿರಬೇಕು,ಪೋಲೀಸರು ಅವಳನ್ನು....
ಸಾಕು ಸುಮ್ನಿರಯ್ಯಾ, ನಿನ್ನ ತರಲೆ ಕಥೆ...
ಮತ್ತಿನ್ನೇನು..?
ಆ ಮಂಜ ( ಅದು ವಾಹನ ಕಲಿಕಾ ತರಭೇತಿ ಶಾಲೆಯ ತರಭೇತುದಾರನ ಹೆಸರಿರಬೇಕು)ನೂ ವಾಹನ ಚಲಾಯಿಸುತ್ತಿದ್ದನಂತೆ.
ಓ ಅಂದರೆ ಅವನ ವಾಹನಕ್ಕೆ ಇವಳು ಗುದ್ದಿಸಿದಳಂತಾ..?
ಹೌದು
ಅಂದ್ರೆ ಅವನ ವಾಹನ ಚಪ್ಪಡಿಯಾಗಿರ ಬೇಕಲ್ವಾ, ತ್ಯಾಂಪಿ ಎರಡು ಸಾರಿ ತನ್ನ ವಾಹನದಿಂದ ಗುದ್ದಿಸಿದ್ದಾಳೆ ಎಂದರೆ..? ಮತ್ತೆ ಇವಳ್ಯಾಕೆ....
ಏನಯ್ಯಾ ಅಷ್ಟು ಅರ್ಜೆಂಟ್ ನಿಂಗೆ, ಪೂರ್ತಿ ಕೇಳಿಸ್ಕೋ..
ಸರಿ ಹೇಳು
ವಾಹನ ಚಪ್ಪಡಿಯಾಗಿದ್ದು ಹೌದು, ಆದರೆ ಅವನ ವಾಹನವಲ್ಲ, ತ್ಯಾಂಪಿ ಚಲಾಯಿಸಿದ ವಾಹನ..?
ಅದು ಹೇಗೆ.. ಆಗೋಕೆ ಸಾಧ್ಯ..?
ಯಾಕೆ ಆಗಲ್ಲ..?
ಅಂದ್ರೆ
ಮಂಜ ಚಾಯಿಸುತ್ತಾ ಇದ್ದದ್ದು...
ಹುಂ ಹೇಳು, ಇದ್ದದ್ದು...??
ರೋಡ್ ರೋಲರ್...
ಅಯ್ಯಯ್ಯೋ
ಮತ್ತೆ.. ಕೇಳು...
ಹೇಳು
ತ್ಯಾಂಪಿ ಅಷ್ಟು ಗಡಿಬಿಡಿಯಲ್ಲಿ ಚಾಲನೆ ಮಾಡಿದ್ದ ಜೀಪು ಯಾರದ್ದೆಂದುಕೊಂಡೆ..
ಹೌದು ಯಾರದ್ದು..?
ಪೋಲೀಸ್ ಜೀಪ್
ನನ್ನ ತಲೆ ತಿರುಗಿತು.
ಅಂದರೆ ತ್ಯಾಂಪಿ ಪೋಲೀಸ್ ಸ್ಟೇಷನ್ ಹತ್ರ ನಿಂತಿದ್ದ ಪೋಲೀಸ್ ಜೀಪನ್ನು ಹತ್ತಿ ಚಲಾಯಿಸಿ ಆ ಮಂಜ ಚಲಾಯಿಸುತ್ತಿದ್ದ ರೋಡ್ ರೋಲರಿಗೆ ಗುದ್ದಿದ್ದಾಳೆ.. ಪೋಲೀಸರು ಅವಳನ್ನು ಕರೆದುಕೊಂಡು ಹೋಗಿದ್ದಾರೆ...
ಪಾಪ ತ್ಯಾಂಪಿ ಎಲ್ಲಿದ್ದಾಳೆ ಈಗ.
ಅವಳನ್ನ ಅಣ್ಣಂದಿರು ಕರ್ಕೊಂಡು ಮನೆಗೆ ಹೋಗಿದ್ದಾರೆ, ಓಕೆ.... ಬಚಾವು
ಆದರೆ ..
ಏನು ಆದರೆ..??
ಅದನ್ನ ರಿಪೇರಿ ಮಾಡ್ಸಿ ಕೊಡೋ ಜವಾಬ್ದಾರಿ ನಂದು.
ಇನ್ಸೂರ್ ಇರತ್ತೆ, ಸರಕಾರೀ ವಾಹನ ಅಲ್ವಾ..
ಇಲ್ಲ ಕಣೋ ಅದೇ ತಲೆ ಬಿಸಿ ಈಗ... ಅದಕ್ಕೆ ಕಳೆದ ಎರಡು ವರ್ಷಗಳಿಂದ ಇನ್ಸೂ ಮಾಡ್ಸಿರಲಿಲ್ಲ, ಪೂರ್ತಿ ರಿಪೇರಿ ಹಣ ನಾನೇ ಕೊಡಬೇಕು... ಅಲ್ಲದೇ ಕೋರ್ಟ್ ಖರ್ಚು ಬೇರೆ....ಮತ್ತೆ ಇತ್ತೀಚೆಗೆ ಬಂದ ಸರಕಾರಿ ಕಾನೂನಿದೆಯಂತೆ, ನನ್ನ ಸಂಬಳದಲ್ಲಿ ಹತ್ತು ಪರ್ಸೆಂಟ್ ಕೂಡಾ ಪತ್ನಿಗೆ ಕೊಡಬೇಕಂತೆ.
ಕೊಡು.... ಸಂಬಳ ಸಿಗಲಿಲ್ಲವಾ,,?
ಸಿಕ್ಕಿತ್ತು ಆದರೆ ಕಳೆದ ಹತ್ತು ವರ್ಷ ದ ಲೆಕ್ಕಾಚಾರ ಮಾಡಿ ಈ ತಿಂಗಳ ಸಂಬಳ ಪೂರ್ತಿ ತೆಗೆದುಕೊಂಡು ಆಗಲೇ ಶಾಪಿಂಗ್ ಮುಗಿದ್ದಾಳೆ ಅವಳು.... ಹೌದು ನಿನ್ನ ಬ್ಯಾಂಕನಲ್ಲಿ ಎಷ್ಟಿದೆ..?
ಏಡುಕೊಂಡಲವಾಡಾ .....ಗೊವಿಂದಾ...ಗೋವಿಂದ.