Saturday, April 23, 2016

ಈ ಜೀವನ


ಕೆಲವೊಮ್ಮೆ ನಾವು ಜೀವನದಲ್ಲಿ ತುಂಬಾನೇ ನಿರಾಶರಾಗಿ ರುತ್ತೇವೆ....
ಆದರೆ ಅದೇ ಸಮಯದಲ್ಲಿ ಕೆಲವರು ನಮ್ಮಜೀವನದಂತಹ ಜೀವನವನ್ನು ಹೊಂದುವ ಸ್ವಪ್ನ ನೋಡುತ್ತಿರುತ್ತಾರೆ.
ಬಟ್ಟ ಬಯಲಲ್ಲಿ ನಿಂತ ಮಗುವೊಂದು ಮೇಲೆ ಆಗಸದಲ್ಲಿ ಸಾಗುತ್ತಿರುವ ವಿಮಾನವನ್ನು ನೋಡುತ್ತಾ ತಾನು ಅದರಲ್ಲಿ ಹೋಗಬೇಕೆಂದುಕೊಳ್ಳುತ್ತದೆ, ಆದರೆ ಅದೇ ವಿಮಾನದಲ್ಲಿದ್ದ ಪೈಲಟ್ ಆ ಮಗುವನ್ನು ನೋಡಿ ತನ್ನ ಮನೆಯ ನೆನಪು ತಂದುಕೊಂಡು ಅಲ್ಲಿಗೆ ತಲುಪುವ ಸ್ವಪ್ನ ನೋಡುತ್ತಾನೆ.
ಇದು ನಮ್ಮ ಜೀವನ. ನಮ್ಮ ಬಳಿ ಏನಿದೆಯೋ ಅದನ್ನೇ ಖುಷಿಯಲ್ಲಿ ಅನುಭವಿಸುವ ಆತ್ಮ ತೃಪ್ತಿ ಹೊಂದುವ ಅವಶ್ಯಕಥೆ ಜೀವನದ ಹಿರಿಮೆಯಲ್ಲಿರುತ್ತೆ.
ಹಣ ಐಶ್ವರ್ಯ ಆಸ್ತಿ ಅಂತಸ್ತೇ ಸುಖ ಜೀವನದ ಸೂತ್ರವಾಗಿರುತ್ತಿದ್ದರೆ ಶ್ರೀಮಂತರು ಖುಷಿಯಲ್ಲಿ ಸದಾ ಕುಣಿದಾಡುತ್ತಲೇ ಇರುತ್ತಿದ್ದರು, ಆದರೆ ನಿಜದಲ್ಲಿ ಬಡ ರೈತನ ಮಕ್ಕಳು ಕೂಡಾ ಹಾಗೆ ಮಾಡುತ್ತಿರುತ್ತಾರೆ.
ಅಥವಾ ಅಧಿಕಾರದಿಂದಲೇ ಸುರಕ್ಷೆ ಸಿಗುವಂತಾಗಿದ್ದರೆದೊಡ್ಡ ಅಧಿಕಾರಿಗಳು ರಾಜಕೀಯ ಮುಂದಾಳುಗಳು ಯಾವ ಸುರಕ್ಷಾ ಸಾಧನವಿಲ್ಲದೇ ನಿರ್ಭೀತತೆಯಿಂದ ತಿರುಗಾಡುತ್ತಿದ್ದರು, ಆದರೆ ಹಾಗೆ ತಿರುಗಾಡುತ್ತಿರುವವರು ಸಾಮಾನ್ಯರು ಹಾಗಾಗಿ ಇವರೇ ಸುಖ ನಿದ್ರೆಯನ್ನೂ ಮಾಡುತ್ತಿರುತ್ತಾರೆ.
ಸುಂದರತೆ ಮತ್ತು ಕೀರ್ತಿ ನಮ್ಮ ಸಂಭಂಧಗಳನ್ನು ಉಳಿಸಿಕೊಡುತ್ತಿದ್ದುದಾದರೆ ನಮ್ಮ ನಾಯಕ ನಾಯಕಿಯರು ಸಂಸಾರವಂತರಾಗಿ ಅತ್ಯಂತ ಸುಖ ಸಂತೋಷದಿಂದ ಜೀವಿಸುತ್ತಿದ್ದರು.. ಆದರೆ ಅಂತವರ ಜೀವನವೇ ಅತ್ಯಂತ ದುರ್ಭಲ ಈಗಂತೂ ಪ್ರತಿ ಅಂತವರ ಸಂಸಾರ ಜೀವನ ಡೈವೊರ್ಸ್ ನಲ್ಲೇ ಅಂತ್ಯ ಕಾಣುತ್ತಿದೆ.
ಆದುದರಿಂದ ನಮ್ಮ ಜೀವನ ನಾವು ಅಂದುಕೊಂಡರೆ ಅತ್ಯಂತ ಸುದರವಾಗಿರುತ್ತೆ.ಇಲ್ಲವಾದರೆ ಇಲ್ಲ ಇದು ನಮ್ಮೊಳಗೇ ಇದೆ....
ಈನಮ್ಮ ಜೀವನ ಇನ್ನೊಮ್ಮೆ ನಮಗೆ ಸಿಗದು.
ಅದಕ್ಕೆ ಇದನ್ನು ಸಂಪೂರ್ಣವಾಗಿ ಅನುಭವಿಸಿ.
ಸ್ವರ್ಗ ಇಲ್ಲಿಯೇ ಇದೆ
ನಮ್ಮ ಪ್ರಾಮಾಣಿಕತೆ ಮತ್ತು ಸರಳತೆಯೇ ಜೀವನದ ಉದ್ದೇಶವಾಗಿರಲಿ..
ಒಂದು ಟ್ರಕ್ ನ ಹಿಂದೆ ಬರೆದ ಈ ಉಲ್ಲೇಖ ಸಾರ್ವಕಾಲಿಕ ಸುಂದರ
ಜೀವನವೇ ಒಂದು ಪಯಣ
ಆರಾಮಾಗಿ ಸಾಗುತ್ತಲಿರು
ಉಬ್ಬರವಿಳಿತ ಬರುತ್ತಲೇ ಇರುತ್ತೆ
ಗೇರ್ ಬದಲಿಸಿ ಸಾಗುತ್ತಲೇ ಇರು...
ನಮ್ಮ ಪಯಣದ ಮಜಾ ಪಡೆಯಬೇಕೆಂದರೆ ನಮ್ಮ ಪರಿಕರ ಕಮ್ಮಿಯಿರಬೇಕು
ನಮ್ಮ ಜೀವನ ದ ಮಜಾ ಪಡೆಯಬೇಕೆಂದರೆ ಆಸೆ ಕಮ್ಮಿಯಿರಬೇಕು
ಇಲ್ಲಿಯವರೆಗಿನ ಅನುಭವ ಹೇಳುತ್ತೆ ನಮ್ಮ ಸ್ಥಿರತ್ವ ಮಣ್ಣಿನ ಮೇಲೆ ಎಲ್ಲಕ್ಕಿಂತ ಗಟ್ಟಿ...ಇರುತ್ತೆ
ಆದರೆ ಅದೇ ಅಮೃತಶಿಲೆ ಮೇಲೆಯಾದರೆ ಜಾರುವ ಸಂದರ್ಭ ಜಾಸ್ತಿ ಇರುತ್ತೆ
ಒಮ್ಮೆ ಯೋಚಿಸಿ....

Saturday, April 16, 2016

ಮುಂಜಾನೆಯ ಸವಿ ೨....ಕೆಲವೊಮ್ಮೆ ಮನಸ್ಸು ಕೇಳೊದಿಲ್ಲ.. ಆದರೆ ಒಂದು ವಿಷಯ ನಿಮ್ಮ ಮನಸ್ಸನ್ನು ನೀವು ಒತ್ತಾಸೆ ಮಾಡಿದಿರೋ ಪುಸಲಾಯಿಸಿದರೋ ಅದು ಖಂಡಿತಾ ನಿಮ್ಮ ಮಾತು ಕೇಳುತ್ತೆ ಅನುಮಾನವೇ ಬೇಡ..
ಮೊದಲನೇ ದಿನ ನೀವು ಎದ್ದು ಬಿಟ್ಟಿರಿ.. ಹೊರಗಡೆ ತಿರುಗಾಡಲೂ ಹೋದಿರಿ..
ಎರಡನೇ ದಿನ...?
ಮತ್ತೆ ಅದೆ ಮನಸ್ಸು ಹೇಳುತ್ತೆ ಇವತ್ತೊಂದು ದಿನ ಮಲಗಿ ಬಿಡೋಣ ಅಂತ...
ಆ ಮಾತು ಕೇಳಲು ಹೋದಿರೋ.... ಮುಗೀತು ಕಥೆ...
ಇನ್ನೊಂದು ವಿಷಯ ನಿಮಗೆ ನೆನಪಿರಲಿ...
ನಮ್ಮ ದೇಹಕ್ಕೆ  ನಿದ್ದೆ ಒಳ್ಳೆಯದು ಹೌದು... ಆದರೆ ಜಾಸ್ತಿ ನಿದ್ದೆ ಮಾಡೋದೂ ದೇಹಕ್ಕೆ ಒಳ್ಳೆಯದಲ್ಲ...
ಅನಾವಶ್ಯಕ ನಿದ್ದೆಯಿಂದ ನಾವು ಸೋಮಾರಿಗಳಾಗುವುದಲ್ಲದೇ, ಮೈ ಕೈ ನೋವೂ ಶುರುವಾಗುತ್ತೆ....

ನಿದ್ದೆ ಎಷ್ಟು ಬೇಕು ಅನ್ನೋದೂ ಒಂದು ಮುಖ್ಯ ವಾದ ವಾದದ ವಿಷಯವೇ...ಈಗ ತಾನೇ ಹುಟ್ಟಿದ ಮಕ್ಕಳು ಯಾವಾಗಲೂ ನಿದ್ದೆಯಲ್ಲೇ ಇರುತ್ತವೆ ೧೬ ರಿಂದ ೧೮ ಘಟೆಗಳ ಕಾಲ...
ನಂತರ ಅವರವರ ಅವಶ್ಯ ಕಥೆಗಳಿಗನುಗುಣವಾಗಿ ಬದಲಾಗುತ್ತಲೇ ಇರುತ್ತದೆ,,
ಮಕ್ಕಳಿಗೆ ೧೨ ಗಂಟೆ ಬೇಕಾದರೆ ನಂತರ ಆರರಿಂದ ಎಂಟು ಗಂಟೆ ಸಾಕು
ಅಲ್ಲದೇ ಒಂದು ಸಂಸ್ಕ್ರತ ಶ್ಲೋಕವೂ ಇದೆ...
ಮೈಥುನ ನಿದ್ದೆ ಮತ್ತು ಆಹಾರ ಮನುಷ್ಯ ನಿಯಂತ್ರಣದಲ್ಲಿರುತ್ತೆ ಅಂತ...

ನಿದ್ದೆಯ ಜಡತ್ವ ತೊಲಗಿಸಲು  ಬೆಳಿಗ್ಗೆ ಹಾಸಿಗೆಯಿಂದೆದ್ದು ಮುಖಕ್ಕೆ ನೀರು ಸಿಂಪಡಿಸಿ ತೊಳೆದುಕೊಳ್ಳಿ, ತಣ್ಣೀರು ಮುಖಕ್ಕೆ ಬಿದ್ದರೆ ಸಕಲೇಂದ್ರಿಯಗಳೂ ಜಾಗೃತವಾಗುತ್ತವೆ ಅಂತ ಕೇಳಿರುತ್ತೀರಲ್ಲವೇ.
ಮನೆಯಲ್ಲಿಯೇ ಸ್ವಲ್ಪ ಹೊತ್ತು ಅಡ್ಡಾಡಿ...

ಯಾವುದೇ ಯಂತ್ರವನ್ನು ಸದಾ ಕಾರ್ಯಗತವನ್ನಾಗಿಸಿದರೆ ಅದರ ಆಯುಷ್ಯ ಹೆಚ್ಚುತ್ತೆ ಅಂತ ಗೊತ್ತಲ್ಲ.
ನಮ್ಮ ದೇಹವು ಹಾಗೇ ತಾನೇ...
ಎಷ್ಟು ಅದನ್ನು ಉಪಯೊಗಿಸುತ್ತಾ ಇರುತ್ತೀರೋ ಅಷ್ಟೇ ಅದೂ ಚೈತನ್ಯದಾಯಕವಾಗಿಯೇ ಇರುತ್ತದೆ....

ಪ್ರತೀ ಅಂಗಕ್ಕೂ ವ್ಯಾಯಾಮ ಅಗತ್ಯ..
ಅದಕ್ಕೇ ನೀವು ಮಾಡೊ ನಡಿಗೆ, ಓಟ ಅಥವಾ ಶೀಘ್ರ ನಡಿಗೆ ಎಲ್ಲವಲ್ಲೂ ನಮ್ಮ ಕೈ ಕಾಲು ಕುತ್ತಿಗೆ ಸೊಂಟ ಕೈ ಕಾಲು ಗಂಟು ಭುಜ ಎಲ್ಲವೂ ಚಲನೆಯಲ್ಲಿರಲಿ..
ಇನ್ನೊಂದು ಮುಖ್ಯವಾದ ಮಾತು...
ನಿಮ್ಮ ವಿಹಾರ  ಅರ್ಧವೋ ಒಂದು ಗಂಟೆಯೋ   ಎಲ್ಲೂ ನಿಲ್ಲದಿರಲಿ.. ವಿಶ್ರಾಂತಿ ಬೇಡ ಮಧ್ಯದಲ್ಲಿ...

ಕೆಲವರು ಹೇಳ್ತಾರೆ ನಾನು ಮನೆಯಲ್ಲಿಯೇ ಇಡೀ ದಿನ ಅತ್ತ ಇತ್ತ ತಿರುಗಾಡುತ್ತೇನಲ್ಲ ಅದು   ಎರಡು ಮೂರು ಕಿ ಮೀ ಆಗೇ ಆಗುತ್ತೆ ನನ್ನದು ಇದೇ ವ್ಯಾಯಾಮ. ಅಂತ . ಇಲ್ಲ ಇದನ್ನು ವ್ಯಾಯಾಮ ಅಂತ ನಿಮ್ಮ ದೇಹ ಸ್ವೀಕರಿಸೊದಿಲ್ಲ.
ನಮ್ಮ ದೇಹದ ವ್ಯಾಯಾಮ ಅಂತ ದಿನಾ ಅದೇ ಸಮಯದಲ್ಲಿ ಅಷ್ಟೇ ಹೊತ್ತು ನೀವು ಏನು ಮಾಡುತ್ತೀರೋ ನೃತ್ಯ, ಓಟ, ಸೈಕ್ಲಿಂಗ್, ಈಜು ಆಟ, ಇವೆಲ್ಲವೂ ವ್ಯಾಯಾಮವೇ .
ನಿಜವಾಗಿ ಹೇಳಬೇಕೆಂದರೆ ವಾರಕ್ಕೆ ಮೂರು ದಿನ ದಿನ ಬಿಟ್ಟು ದಿನ ಅರ್ಧ ಗಂಟೆ ಹೊತ್ತು ಬ್ರಿಸ್ಕ್ ವಾಕಿಂಗ್ / ಓಟ ಧೀರ್ಘ ನಡಿಗೆ ಮಾಡಿದರೂ ಸಾಕು.

ಬೆಳಿಗ್ಗೆಯೇ ಯಾಕೆ ನಡುಗೆ ಮಾಡಬೇಕು ಎನ್ನುವುದು ನಿಮಗೆ ಗೊತ್ತಲ್ಲ.. ಈಗಿನ ಜನ ವಾಹನ ನಿಬಿಡ ಜಾಗದಲ್ಲಿ ಹಗಲು ಹೊತ್ತು ಇಡೀ ವಾತಾವತರಣವೇ ಮಲಿನವಾಗಿರುತ್ತೆ, ಹಾಗಾಗಿ ಬೆಳಗಿನ ಹೊತ್ತು ವಾತಾವರಣದಲ್ಲಿ ಆಮ್ಲಜನಕ ಜಾಸ್ತೀನೇ ಇರತ್ತೆ, ಬೆಳಗಿನ ಸೂರ್ಯ ರಶ್ಮಿ  ಕೂಡಾ ನಮ್ಮ ದೇಹಕ್ಕೆ ಒಳ್ಳೆಯದೇ ಅಂತಾರೆ ವೈದ್ಯರುಗಳು.

ಈ ನಡುಗೆಯಿಂದ ನಮ್ಮ ದೇಹದಲ್ಲಾಗುವ ಮಾರ್ಪಾಡುಗಳ ಬಗ್ಗೆ ಮುಂದೆ ಚರ್ಚಿಸೋಣ.

Friday, April 15, 2016

ಮುಂಜಾನೆಯ ಸವಿ.....೧ಬೆಳಿಗ್ಗೆ ಬೇಗ ಏಳಬೇಕು ಎದ್ದು ಬೇರೆಯವರ ಹಾಗೆ ನಾನೂ ವ್ಯಾಯಾಮ ಮಾಡಬೇಕು ಯೋಗಾ ಮಾಡಬೇಕು, ಬೆಳಿಗ್ಗೆ ಬೆಳಿಗ್ಗೆ ವಾಯು ವಿಹಾರ ಮಾಡಬೇಕು ಅನ್ನಿಸುವುದಿದೆ ಎಲ್ಲರಿಗೂ.
ಆದರೆ ಬೆಳಿಗ್ಗೆ ಬೇಗ ಏಳಬೇಕಲ್ಲ, ಬೆಳಗಿನ ಆ ಸವಿಸವಿ ಸುಖ ನಿದ್ದೆ ಬಿಡ ಬೇಕಲ್ಲ ಅನ್ನೋದು ಒಂದು ದೊಡ್ಡ ಪಿಡುಗು.ನೀವು ಮಾಡಬೇಕಾದುದು ಇಷ್ಟೆ..
ರಾತ್ರೆ ಸ್ವಲ್ಪ ಬೇಗ ಮಲಗಿಕೊಳ್ಳಿ. ಮಲಗುವ ಮೊದಲು ನಾಳೆ ನಾನು ಶತಾಯ ಗತಾಯ ಬೆಳಿಗ್ಗೆ ಬೇಗ ಏಳಲೇ ಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳಿ.
ಬೆಳಿಗ್ಗೆ ಎಷ್ಟು ಗಂಟೆಗೆ ಏಳಬೇಕೋ ಅಷ್ಟಕ್ಕೆ ಅಲಾರಾಮ್ ಇಟ್ಟುಕೊಳ್ಳಿ.
ಅಂದರೆ ಐದಕ್ಕೆ ಏಳಬೇಕಾದರೆ ನಾಲ್ಕೂವರೆಗೆ ಒಂದು ನಾಲ್ಕೂ ನಲವತ್ತಕ್ಕೆ ಇನ್ನೊಂದು ನಾಲ್ಕೂ ಐವತ್ತಕ್ಕೆ ಮತ್ತೊಂದು.
ಏಳಲು ನಿಮ್ಮ ಮನಸ್ಸು ಕೇಳೋದೆ ಇಲ್ಲ,
ಅದಕ್ಕೂ ಒಂದು ಉಪಾಯ ಇದೆ,
ಮನಸ್ಸಿಗೆ ಹೇಳಿಕೊಳ್ಳಿ ಇವತ್ತೊಂದು ದಿನ ಮಾತ್ರ..ಅಂತ
ನಾಲ್ಕೂ ಐವತ್ತಕ್ಕೆ ಎದ್ದು ಹಾಸಿಗೆ ಬಿಟ್ಟು ಮುಖಕ್ಕೆ ನೀರು ಹಾಕಿಕೊಳ್ಳಿ, ನೀರು ಮುಖಕ್ಕೆ ಬಿದ್ದ ಕೂಡಲೆ ಮೈ ಮನ ಎಚ್ಚರಾಗುತ್ವೆ.
ಕನ್ನಡಿಯ ಮುಂದೆ ನಿಂತು ಹೇಳಿಕೊಳ್ಳಿ..
ಬೇರೆಯವರೆಲ್ಲಾ ಮಲಗಿದ್ದರೆ ನಾನು ಮಾತ್ರ ಎದ್ದು ವ್ಯಾಯಾಮ ಮಾಡುತ್ತಿದ್ದೇನೆ ನಾನು ಗ್ರೇಟ್ ಅಂತ ಅಂದುಕೊಳ್ಳಿ..
ವೈದ್ಯರ ಬಳಿ ಹೋಗದೇ ಇರಬಹುದಾದ ಉಪಯುಕ್ತ ಸಲಹೆ ಯಾರಾದರೂ ನಿಮಗೆ ಕೊಡುತ್ತೀರಾದರೆ ಅದನ್ನುನೀವು ತೆಗೆದುಕೊಳ್ಳಲೇ ಬೇಕಲ್ಲವಾ..?
ಅದು ಇದೇ....
ನಿಮ್ಮ ದೇಹ ದಂಡಿಸುವುದು.
ಅಂದರೆ ನೀವು ತಿನ್ನುವಷ್ಟೂ ಕರಗಿಸಿಕೊಳ್ಳಲೇಬೇಕು.
ಹಿಂದೆಯಾದರೆ ಅಷ್ಟು ಕೆಲಸ ಮಾಡುತ್ತಿದ್ದರು, ನಡೆಯುವದು, ಭಾರ ಎತ್ತುವುದು , ಅರೆಯುವುದು ನೀರು ಸೇದುವುದು , ಆದರೆ ಈಗ....
ಸವಲತ್ತು ಜಾಸ್ತಿಯಾಗಿ ಅವೆಲ್ಲಾ ಮರೆತು ಹೋಗಿದೆಯಲ್ಲ...
ಮತ್ತೊಂದು ಸಲಹೆ ಎಂದರೆ ರಾತ್ರೆಯ ಆಹಾರ ಆದಷ್ಟೂ ಕಡಿಮೆ ಮಾಡಿ, ಹಣ್ಣು ಧಾರಾಳ ಇರಲಿ, ಆದರೆ ಸೇಬು ಬೇಡ...
ನಾನೊಬ್ಬನೇ/ ಳೆ ಇದನ್ನು ಮಾಡಬೇಕಲ್ಲ ಅನ್ನೋದಕ್ಕಿಂತ. ನಾನೊಬ್ಬನೇ/ ಳೇ ಇದನ್ನ ಮಾಡ್ತೀನಲ್ಲ, ಬೇರೆಯವರ ಹಾಗೆ ಸೋಂಭೇರಿ ಅಲ್ಲ ನಾನು , ನನ್ನ ದೇಹಕ್ಕೆ ಬೇಕಾದ ವ್ಯಾಯಾಮ ನಾನು ಮಾಡ್ತಿದ್ದೇನೆ, ಇದರಿಂದ ನನಗೆ ಒಳ್ಳೆಯದಾಗ್ತದೆ ಅನ್ನೋ ನಂಬಿಕೆ ಮುಖ್ಯ. ೨೧ ದಿನ ದ ವರ್ತುಲ ಅಂತಾರೆ. ಯಾವುದೆ ವಿಶಯ ಅಭ್ಯಾಸವನ್ನು ನಾವು ನಿಯಮಿತವಾಗಿ ೨೧ ದಿನ ಮಾಡಿದರೆ ನಮ್ಮ ದೇಹ ಅದನ್ನು ಸ್ವೀಕರಿಸುತ್ತದೆ. ಅದೇ ನಮ್ಮ ದೈನಂದಿನ ದಿನಚರಿಯಂತೆ.. ಬರೇ ೨೧ ದಿನ ಮಾಡೋದು ನೋಡಿ ತದ ನಂತರ ನಿಮ್ಮ ದೇಹವೇ ನಿಮಗೆ ತಿಳಿಸುತ್ತದೆ , ಇದು ಬೇಕು ಅಂತ.. ಸರೀನಾ..?
ಒಮ್ಮೆ ನೀವು ಬೆಳಿಗ್ಗೆ ಎದ್ದು ಹೊರ ಹೊರಟು ಪ್ರಕೃತಿಯಲ್ಲೊಮ್ಮೆ ತಿರುಗಾಡಿ ನೋಡಿ, ಆಗ ನಿಮಗೆ ಅರಿವಾದೀತು ಬೆಳಗನ್ನು ಸವಿಯಲು ಅದೆಷ್ಟು ಪುಣ್ಯ ಮಾಡಿರಬೇಕು ಅಂತ.
ನಾಳೆಯಿಂದಲೇ ಆರಂಭ ಮಾಡಿರಲ್ಲ.....
ಬೆಸ್ಟ್ ಆಫ್ ಲಕ್.....
Thursday, April 14, 2016

ಆ ಯುಗಾದಿಯ ಹೊಸ ಮಾಡಿನ ಹಬ್ಬ.


ರಾಮಾ ಹುಲ್ಲು ಸಾಕಕ್ಕೇನೋ ಅಲ್ದಾ...
ಅಮ್ಮ ಮನೆಯೊಳಗಿಂದಲೇ ಕೇಳಿದಳು.
ನಾಳೆ ಯುಗಾದಿ ಮನೆಗೆ ಹೊಸ ಮಚ್ಚು ( ಹುಲ್ಲು ಮುಚ್ಚುವಿಕೆ) ಮಾಡಲು ತಂದ ಒಣ ಹುಲ್ಲಿನ ಬಗ್ಗೆ ಕೇಳಿದ್ದಳು ಅಮ್ಮ ರಾಮನನ್ನು.
ಸಾಕಮ್ಮ ಅಲ್ದೇ ನಿಮ್ಮ ಹಟ್ಟಿಗೆ ( ಕೊಟ್ಟಿಗೆ- ದನ ಕರು ಎಮ್ಮೆಗಳಂತಹ ಜಾನುವಾರುಗಳನ್ನು ಕಟ್ತಲೋಸುಗ ಮಾಡಿರೋ ಮನೆಯಂತಹ ಕಟ್ಟೋಣ) ಬೇಕಾದಷ್ಟು ಕರಡ ಇತ್ತಲೇ.....? ಕಮ್ಮಿಯಾದರೆ ಭಂಢಾರರ ಮನೆಯಿಂದ ತಂದಾರ್ಯ್ತು ಬಿಡಿ.
ಪೇಟೆಯಲ್ಲಿಯಾದರೆ ಕರಡ (ಕಲ್ಲಿನ ಪಾರಿಯಲ್ಲಿ ಹುಟ್ಟುವ ಒಂದು ತರದ ಹುಲ್ಲು) ಸಿಗಲ್ಲ. ಆದರೆ ಹಳ್ಳಿಯಲ್ಲಿಯಾದರೆ ಅದಕ್ಕೆ ಕಮ್ಮಿಯಾಗದು.


ನಾವೆಲ್ಲಾ ಆಗಲೆ ಗೇರು ಮಿಜಿರು ( ಇನ್ನೂ ಹಣ್ಣಾಗದ ಮಿಡಿ ಗೇರು -) ಎಲ್ಲೆಂದೆಲ್ಲಾ ತರಬೇಕು ಅನ್ನುವುದರ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದೆವು.
ನಾಳೆ ಯುಗಾದಿಯ ಭಕ್ಷಗಳಲ್ಲಿ ಗೇರು ಬೀಜದ್ದೇ ಸಾಮ್ರಾಜ್ಯ. ತಾಳ್ಳು ( ಒಂದು ಬಗೆಯ ಪಲ್ಯ) , ಪಾಯಸ ಎಲ್ಲಾದಕ್ಕೂ ಈ ಹಸಿ ಗೇರು ಬೀಜವೇ ಮುಖ್ಯ.
ಮಿಜಿರನ್ನು ತಂದು ಮೆಟ್ಟು ಕತ್ತಿಯಲ್ಲಿ ಅರ್ಧಕ್ಕೆ ಸೀಳಿ ಚಿಕ್ಕ ಚೂರಿ ಅಥವಾ ಕತ್ತಿಯಿಂದ ಒಂದು ಕಡೆಯಿಂದ ಎಬ್ಬಿಸಿ ತೆಗೆಯೋ ಆತವೇ ಗಮ್ಮತ್ತಿನದು. ಅದರ ಸೊನೆ ಅಥವಾ ರಸ ಕೈಗೆ ತಾಗಿದರೆ ನಿಧಾನವಾಗಿ ಕೈಬೆರಳಿನ ಮೇಲ್ಮೈ ನ ಸ್ಪರ್ಷಜ್ಣಾನವೂ ತಪ್ಪಿ ಹೋಗೆ ನಾಲ್ಕೈದು ದಿನಗಳ ನಂತರ ನಿಧಾನವಾಗಿ ಚರ್ಮದ ತೆಳುವಾದ ಪದರವೇ ಉದುರಿ ಹೋಗುತ್ತದೆ. ಇದು ಸಾಧಾರಣ ಪ್ರತಿಕ್ರಿಯೆ ಆಗೆಲ್ಲಾ ಅಲ್ಲೆಲ್ಲಾ...ಮಧ್ಯಾಹ್ನದ ಅಮ್ಮನ ಕೈಯಡುಗೆಯ ಪರಿಮಳ ರುಚಿ ನಾವು ಮಾಡುವ ಕೆಲಸದಲ್ಲಿ ಮತ್ತಷ್ಟು ಉತ್ಸಾಹ ಹಣಿಕಿಕ್ಕುತ್ತಿತ್ತು.


ಇವತ್ತು ನಮ್ಮ ಅಡುಗೆ ಮನೆಯ ಹೊರಗಡೆ ಮೊನ್ನೆಯೇ ಮಾಡಿಟ್ಟ ಹೊಸ ಒಲೆಯಲ್ಲಿ. ಯಾಕೆಂದರೆ ಮಾಡಿನ ಹಳೇ ಹುಲ್ಲು ಉದುರಿಸುವಾಗ ಒಂದು ವರ್ಷದಷ್ಟು ಹಳೆಯದಾದ ತುಂಡು ತುಂಡು ಹುಲ್ಲುಗಳು ಮನೆಯೊಳಗೆಲ್ಲಾಬೀಳುತ್ತಿರುವಾಗ ಅಡುಗೆ ಮಾಡಲು ಸಾಧ್ಯವಿಲ್ಲವಲ್ಲ. ಅದಕ್ಕೇ ಹೊರ ಚಾವಡಿಯ ಕಡುಮಾಡಿನ ಹೊರಗೆ ಮೊದಲೇ ಒಂದೆರಡು ಒಲೆ ಮಾಡಿಟ್ಟದ್ದುಮಣ್ಣಿನ ಒಲೆ ಆಗಲೇ ಒಣಗಿದ್ದು ಅಡುಗೆಗೆ ರೆಡಿ. ಬೆಳಿಗ್ಪೆ ದಪ್ಪವಲಕ್ಕಿಯನ್ನು ಸ್ವಲ್ಪವೇ ಹೊತ್ತು ನೀರಲ್ಲಿ ನೆನೆಸಿ ತೆಗೆದಿಟ್ಟು ನಂತರ ಈರುಳ್ಳಿ ಎಣ್ಣೆಯಲ್ಲಿ ಹುರಿದು ಒಗ್ಗರಣೆ ಹಾಕಿ ಅವಲಕ್ಕಿ ಅದರಲ್ಲಿ ಬೆರೆಸಿ ಹದವಾಗಿ ಬೆಲ್ಲ ಮತ್ತು ತೆಂಗಿನ ತುರಿ ಸೇರಿಸಿದಾಗ ಅದರ ರುಚಿ ಮತ್ತು ಗಮಗಮ ತಿಂದೇ ಅರಿಯ ಬೇಕು ಇಲ್ಲವಾದರೆ ಅಮ್ಮನ ಕೈಗುಣಕ್ಕೆ ಮಾರು ಹೋದವರು ವಿರಳವೇ..


ರಾಮನ ಕೈಗುಣವೇ ಅಂತಹದ್ದು ಅರ್ಧವೇ ಗಂಟೆಯಲ್ಲಿ ಇಡೀ ಮನೆಯ ಹಳೆ ಹುಲ್ಲೆಲ್ಲನೆಲಕ್ಕೆ ಬಿದ್ದೇ ಬಿಟ್ತವು ಎಲ್ಲೆಲ್ಲಿ ತೆಂಗಿನ ಗರಿಗಳ ಚಾಪೆ ಹರಿದಿದೆಯೋ ಅಲ್ಲೆಲ್ಲ ನಿನ್ನೆಯೇ ಬಾರ್ಕೂರಿನಿಂದ ತರಿಸಿದ ತೆಂಗಿನಹೆಡೆಯ ಚಾಪೆ ಹಾಸಿದ್ದಾಯ್ತು. ನಂತರ ರಾಮ ತನ್ನ ಮೂವರು ಸಹಾಯಕರೊಂದಿಗೆ ಹೊಸ ಹುಲ್ಲು ಹರಡಲು ಆರಂಭಿಸಿದ. ಮಾಡಿನ ಕೆಳತುದಿಯಿಂದ ಆರಂಭವಾಗಿ ಹುಲ್ಲನ್ನು ಮೇಲಿಂದ ಮೇಲಿಂದ ಹರಡುತ್ತಾ ಮಾಡಿನ ಎತ್ತರಕ್ಕೂ ಉದ್ದಕ್ಕೂ ಹೊಸ ಹುಲ್ಲಿನ ಹರಹು ಅಂತಿಸಿಯೇ ಬಿಟ್ಟ. ಗುರಿಯಿಟ್ಟು ಕೆಳಗಿನಿಂದ ಬೀಸಿ ಒಗೆದ ಹುಲ್ಲಿನ ಕಟ್ಟನ್ನುಅವಲೀಲೆಯಿಂದ ಹಿಡಿದು ಕಟ್ಟು ಬಿಡಿಸಿ ಮಾಡಿನ ಮೇಲೆ ಹರಡುವುದರಲ್ಲಿ ಆತನಿಗೆ ಆತನೇ ಸಾಠಿ. ಬೆಳಿಗ್ಗೆ ಒಂಭತ್ತಕ್ಕೆ ಆರಂಭವಾದ ಈ ಮುಳಿ ಹುಲ್ಲಿನ ಹರಡಾಟ ಮಧ್ಯಾಹ್ನ ಹನ್ನೆರಡಕ್ಕೆಲ್ಲಾ ಇಡೀ ಮನೆಯ ಮಾಡು ಹೊಸ ಹುಲ್ಲಿನಿಂದಾವ್ರತವಾಗಿ ಬಿಟ್ಟಿತ್ತು. ನಂತರ ಅವನೇ ಮುಳಿ ಹುಳ್ಳಿನಿಂದಲೇ ಮಾಡಿಟ್ಟ ಹಗ್ಗ ವನ್ನು ಗಟ್ಟಿಯಾಗಿ ಎಳೆದು ಹರಡಿದ ಹುಲ್ಲಿನ ಮೇಲಿನಿಂದ ಕಟ್ಟಿ ಬಿಟ್ಟರೆ ಆತನ ಇಲ್ಲಿನ ಕೆಲಸ ಮುಗಿಯಿತು.
ನಂತರ ಜಾನುವಾರುಗಳ ಕೊಟ್ಟಿಗೆ ಗೆಯ ಸರದಿ ಇಲ್ಲೂ ಅಷ್ಟೇ ರಾಮನ ಕೈಚಳಕ ..

ಅವರೆಲ್ಲಲ್ಲರ ಭೇಟಿ ಹತ್ತಿರದ ಕಾಶಿಕಲ್ ಕೆರೆಗೆ, ಕೆರೆಯಲ್ಲಿ ಮಿಂದೆದ್ದು ಬಂದರೆಂದರೆ ನಮ್ಮ ಮನೆಯ ಚಾವಡಿಯಲ್ಲಿ ಎಲ್ಲರಿಗೂ ಸವಿ ರುಚಿ ಭೋಜನ. ಹಸಿ ಗೇರು ಬೀಜದ ಮತ್ತು ಎಳೆ ಹಲಸಿನ ಕಾಯಿಯ ಪಲ್ಯ, ಕಡಲೆಯ ಹುಳಿ, ಕೊಟ್ಟೆ ಕಡುಬು ಗೇರು ಬೀಜದ ಪಾಯಸ. ಉಪ್ಪಿನಕಾಯಿ ಮೊಸರು ಎಲ್ಲ ಸೇರಿದರೆ ಯುಗಾದಿಯ ಹಬ್ಬಕ್ಕೂ ಮನೆ ಮಾಡು ಹೊಸತಾದುದಕ್ಕೂ ಲಗತ್ತು.. ಸಾರ್ಥಕ.
ಮಾರನೆಯದಿನದಿಂದ ಹೊಸ ಮಾಡಿನ ಹೊಸ ಮನೆ.

Saturday, April 2, 2016

ಹಿಂತಿರುಗಿ ನೋಡಲಾರೆ
ಎಷ್ಟು ಮನಸ್ಸಿಂದ ದೂಡಿದರೂ ಬಂತೇ ಬಂತು ಆ ದಿನ
ಆ ರಜೆಯ ಅರುವತ್ತು ದಿನಗಳಲ್ಲಿ ನಮ್ಮವರ ಜತೆ ಕಳೆದ ದಿನಗಳ ಪ್ರೀತಿಯ ಸವಿ
ಅಪ್ಪ ಅಮ್ಮನ ತಮ್ಮ ತಂಗಿಯರ ನಿರಂತರ ಸವಿಯನ್ನೂ ಸವಿ ಸವಿದು ಸವಿದು ನಿಂತ...
ಆ ಕ್ಷಣ ಮರೆಯಲಾರೆ....


ಪ್ರಿಯತಮೆಯ ಜತೆಯಲ್ಲಿ ಕಳೆಯುತ್ತಿದ್ದ ಅಮರ ಕ್ಷಣಗಳು ಈ ಹೊತ್ತು ಈ ದಿನ ಶಾಶ್ವತವಾಗಬಾರದೇ ಅದೊಂದು ಅಮರ ಪ್ರೀತಿಯ ಮಿಲನದ ಕ್ಷಣದಲ್ಲೂ
ಅವಳ ಕಣ್ಣ ಕೊನೆಯಲ್ಲಿನ ವಿರಹದ ದಳ್ಳುರಿ ಸ್ಪಷ್ಟ ಕಾಣುತ್ತಿತ್ತು....
ಹೊರಡುವ ಕ್ಷಣದಲ್ಲೂ ಎಂದೆಂದಿಗೂ ಬೆಲೆ ಕಟ್ಟಲಾಗದ ಅಮ್ಮ ಅಪ್ಪರ ವಾತ್ಸಲ್ಯ .. ಮರೆಯಲೆಂತು....
ನನ್ನ ಹಾಗೇ ಒಂದು ತಿಂಗಳ ಮಗುವನ್ನೂ ಅಮ್ಮನ ಕಯ್ಯಲ್ಲಿಯೇ ಬಿಟ್ಟು ಹೊರಡುವಾಗಿನ ದುಗುಡ ಹೊತ್ತ ಸಹವರ್ತಿಗಳು..
ಒಂದೇ ಒಂದು ಸಾರಿ ಹಿಂತಿರುಗಿ ನೋಡು ಎನ್ನುತ್ತಿರೋ ಅವರೆಲ್ಲರ ಕಣ್ಣುಗಳನ್ನು ಬೇಡಿಕೆಗಳನ್ನು ನೋಡಿಯೂ
.
ಯಾರಿಗೆ ಗೊತ್ತು ನನಗೆ ನನ್ನ ಪ್ರತಿ ಮುಂದಿನ ಹೆಜ್ಜೆ ಹಿಂದೆ ಬಾರದೇ ಕೂಡಾ ಇರಬಹುದು....
ಆದರೂ...
ಇಲ್ಲ ಹಿಂತಿರುಗಿ ನೋಡಲಾರೆ ನಾನು..
ಕಣ್ಣಲೇ ಮಡುಗಟ್ಟಿ ನಿಂತ ನನ್ನ ಕಣ್ಣೀರು ಕಂಡರೆ
ದೃವಿಸದೇ ಇರಲಾರರೇ....
ಇಲ್ಲ ಇಲ್ಲ......
ಹಿಂತಿರುಗಿ ನೋಡಲಾರೆ.....
ಕಾಣದೇ ಇರಲೆಂದು ಆ ಕಣ್ಣೀರ,,,,

ಎಣ್ಣೆ ಹಚ್ಕೊ ಅಂದ್ರೆ...


"ಅಣ್ಣಾ ಅವ್ರು ಇನ್ನೂ ಮನೆಗೇ ಬಂದಿಲ್ಲ....!"
ತ್ಯಾಂಪಿಯ ಅಳಲು ನನಗೇ ಕರೆ ಮಾಡಿಸಿತ್ತು....
ಹೊತ್ತು ಕಂತಿ ರಾತ್ರೆಯಾಗಲು ಬಂತು... 
ಬೆಳಿಗ್ಗೆನೇ ಮನೆ ಬಿಟ್ಟು ಹೋದವ ಇನ್ನೂ ಬಂದಿಲ್ಲ ಅಂದ್ರೆ ಹೆಂಡತಿಯಾದವಳಿಗೆ ಆತಂಕ ಸಹಜ.
ನಿನ್ನೆ ಸಂಜೆನೇ ಅವನ ಕರೆ ಬಂದಿತ್ತು. ಹೋಳಿಯಲ್ಲಿ ಈ ಬಾರಿ ನಾಲ್ಕು ದಿನ ರಜೆ ಬಂದಿತ್ತಲ್ಲಾ, ಆಚೆ ಈಚೆ ಮನೆಯವರು ಉತ್ತರದವರೇ ಇದ್ದು ನಾಲ್ಕೂ ದಿನ ಬರ್ಜರಿ ಹೋಳಿಯಾಟ ತ್ಯಾಂಪನ ಗಲ್ಲಿಯಲ್ಲಿ.
ಕಳೆದ ವರ್ಷ ಯಾರೋ ಕಪ್ಪು ಪೈಂಟ್ ತ್ಯಾಂಪನ ತಲೆ ಕೂದಲಿಗೇ ಹಚ್ಚಿದ್ದರಂತೆ.
ಏನು ಮಾಡಿದರೂ ಹೋಗದೇ ತರಹೇವಾರಿ ಬಿಟ್ಟಿ ಸಲಹೆ ಕೇಳಿ ಯಾವುದೂ ಸರಿ ಹೋಗದೇ ಪೂರಾ ತಲೆ ಬೋಳು ಮಾಡಿಕೊಂಡು ಬರಬೇಕಾಯ್ತು.
ಬಾಕಿ ಮೈಯೆಲ್ಲಾ ಸೀಸದ ಬಣ್ಣದ ಉರಿ, ಅದೂ ಈ ಬಿಸಿಲಿಗೆ.... ಕೇಳೋದೇ ಬೇಡ ಯಾರ್ಯಾರಿಗೆಲ್ಲಾ ಶಾಪ ಹಾಕಿದರೂ
ಈ ಅಸಹಿಷ್ಣುತೆ ತರ..... ಬಿಡೋಕೂ ಇಲ್ಲ .....ಕಟ್ಟಿಕೊಳ್ಳೂಕೂ ಇಲ್ಲ.....

ಅನಂತರವೇ ಹೋಳಿ ಎಂದರೆ ಮಾರುದ್ದ ದೂರ.. ಆತನಿಗೆ..
ಅದಕ್ಕೇ ಈ ಬಾರಿ ಮೊದಲೇ ಅದಕ್ಕೆ ತಕ್ಕ ಉಪಾಯ ಹುಡುಕಬೇಕೆಂದುಕೊಂಡು ಅವರು ಹಾಕಿದ ಯಾವ ಬಣ್ಣವೂ ತನಗೆ ತಾಕದ ಹಾಗೆ ಏನು ಮಾಡಬೇಕು ಅಂತ ಬಿಟ್ಟಿ ಸಲಹೆ ಕೇಳಿದ್ದ.
ಹೋಳಿಗೆ ನಾವೆಲ್ಲಾ ಮೈಗೆ ಮುಖಕ್ಕೆ ತಲೆಗೆ ಎಲ್ಲಾತೆಂಗಿನೆಣ್ಣೆ ಹಚ್ಚಿಕೊಂಡು ಹೋಗುತ್ತಿದ್ದೆವು, ಯಾವ ಬಣ್ಣವೂ ನಮಗೆ ಹಾನಿ ಮಾಡಲಾರದ ಹಾಗೆ.
ಅದನ್ನೇ ಅವನಿಗೆ ಎಣ್ಣೆ ಹಚ್ಚಿಕೊಂಡರೆ ಯಾವ ಬಣ್ನವೂ ತಾಕೋದಿಲ್ಲ ಅಂತ ತಿಳಿಸಿ ಹೇಳಿದ್ದೆ.
.......................
ಮತ್ತೊಮ್ಮೆ ಕರೆ ಬಂತು.
ತ್ಯಾಂಪಿಯದ್ದೇ...
ಏನಾಯ್ತಮ್ಮ ಸಿಕ್ಕಿದ್ನಾ ತ್ಯಾಂಪ ಕೇಳಿದೆ..
ಹೌದು.....ನೀವೇ ಬರಬೇಕಂತೆ... ಅಂದಳು
ಎಲ್ಲಿದ್ದಾನೆ..? ಕೇಳಿದೆ.
ಪೋಲೀಸ್ ಸ್ಟೇಶನ್ ನಲ್ಲಿ ಅಂದಳು...
ಅಲ್ಯಾಕೆ ಹೋದ ಆತ...
ಏನಿಲ್ಲ ಅಣ್ಣ... ಅವರು ನಡೆದು ಹೋದರೆ ಕಷ್ಟ ಅಂತ ಆಟೋದಲ್ಲಿ ಹೋಗಿದ್ದರಂತೆ.. ಪೋಲೀಸು ಹಿಡಿದರಂತೆ..
ಅಲ್ಲಾ ಆಟೋ ದಲ್ಲಿ ಹೋದರೆ ಪೋಲೀಸ್ ಯಾಕಮ್ಮಾ ಹಿಡೀತಾರೆ ... ನಂಗೆ ಅಯೋಮಯ...
ನಮ್ಮ ಗಣೇಶನೇ ಪೋಲೀಸು
ಅವನಿಗೇ ಕರೆ ಮಾಡಿದೆ...
ಏನಯ್ಯಾ ಕುಡಿದು ಆಟೋ ಓಡಿಸಿದ್ದ ಅಂತ ಕೇಸಾಯ್ತಪ್ಪಾ...
ಯಾರು ಕುಡಿದದ್ದು..?
ಅಲ್ಲಯ್ಯಾ ಬಿಟ್ಟಿ ಸಲಹೆ ಅಂತ ಏನಾದ್ರೂ ಹೇಳೋದಾ..?
ನಂಗೇ ದಬಾಯಿಸಿದ್ದ ಚಾಲೀಸು ಅಲ್ಲಲ್ಲ.. ಪೋಳೀಸು....
ಯಾಕೆ ಅರ್ಥವಾಗದೇ ಕೇಳಿದೆ...
ನೀನೇ ಹೇಳಿದ್ದೆಯಂತೆ ಶರಾಬೆಲ್ಲಾ ಮೈಗೆ ಹಚ್ಚಿಕೊಂಡು ಆಟೋದಲ್ಲಿ ಕುಳಿತಿದ್ದ ತ್ಯಾಂಪ..
ಬೀಟಿನ ಪೋಳೀಸು ವಾಸನೆ ಬಂತು ಅಂತ ಆಟೋದವನನ್ನು ವಿಚಾರಿಸಿದ್ದ....
ಅದಕ್ಕೇ.....
ಎಲ್ಲಾ ನೀನೇ ಮಾಡಿದ್ದು... ಅಂತ ಗಳ ಗಳ ಅತ್ತ ತ್ಯಾಂಪ...
ಅಲ್ಲಯ್ಯಾ ನಾನು ಎಣ್ಣೆ ಅಂದದ್ದು ತೆಂಗಿನೆಣ್ಣೇ ಕಣಾ ..
ಯಾವ ಎಣ್ಣೆ ಅಂತ ಗೊತ್ತಾಗ್ಲಿಲ್ಲ, ನಿನ್ನನ್ನೇ ಕೇಳೋಣ ಅಂದ್ರೆ ನೀನು ಸಿಗಲಿಲ್ಲ ಅದಕ್ಕೇ....
ಅದಕ್ಕೇ ಮತ್ತೆ ಯಾರ ಬಳಿ ಕೇಳಿದೆ...
ಮುತ್ತನ ಹತ್ರ...
ಸರೀ ಹೋಯ್ತು..ಮುತ್ತ ಮೊದಲೇ ಕುಡುಕ, ಅವನಿಗೆ ಎಣ್ಣೆ ಅಂದ್ರೆ.....
ಮತ್ತೇನು ನೆನಪಾದೀತು....
ದೇವರೇ ಗತಿ....

Photo Curtsy: Internet  

Friday, April 1, 2016

ನೀವೇ ದೇವರಾಗಬಹುದು ಯಾರಿಗೂಮನಕಲಕುವ ನೈಜ ಘಟನೆ

ಹಿಮಾಲಯದಲ್ಲಿ ಮುಂದಿನ ಮೂರು ತಿಂಗಳಿರಲು ಹೊರಟಿದ್ದ ಮಿಲಿಟರಿ ತಂಡದಲ್ಲಿ ಹದಿನೈದು ಜವಾನರು ಮತ್ತು ಒಬ್ಬ ಮೇಜರಿದ್ದರು.
ಅವರಿಂದ ಬಿಡುಗಡೆ ಕಾದಿದ್ದ ತಂಡವೂ ಉತ್ಸುಕತೆಯಿಂದ ಇವರ ನಿರೀಕ್ಷೆಯಲ್ಲಿದ್ದರು.

ಅದೊಂದು ಅತ್ಯಂತ ಕಠಿಣ ಚಳಿಗಾಲವಾಗಿತ್ತು ಹಿಂದೆಯೇ ಆಗಾಗ್ಗೆ ಬಿದ್ದಿರುತ್ತಿದ್ದ ಮಂಜು ಕೂಡಾ ಅವರ ಕಷ್ಟವನ್ನು ಹೆಚ್ಚಿಸುತ್ತಲಿತ್ತು.
ಇಂತಹ ಕಟಗುಡುವ ಚಳಿಯಲ್ಲಿ ಒಂದು ಕಪ್ ಚಹಾ ಸಿಗುವಂತಿದ್ದರೆ..? ಆಸೆ ಮೇಜರಿಗೆ ಬಂದಿತ್ತಾದರೂ ಅವರಿರೋ ಪರಿಸ್ಥಿತಿಯಲ್ಲಿ ಇದು ಮರೀಚಿಕೆಯೇ..

ಆದರೂ ಅವರ ಪಯಣ ಸಾಗುತ್ತಲಿತ್ತು. ಸುಮಾರು ಒಂದು ಗಂಟೆಯ ನಂತರ ಒಂದು ಹಳೆಯ ಕಟ್ಟಡ ಕಂಡಿತವರಿಗೆ. ನೋಡುವಾಗ ಟೀ ಅಂಗಡಿಯ ತರ ಕಂಡರೂ
ಬೀಗ ಹಾಕಿಕೊಂಡಿದ್ದ ಬಾಗಿಲಿಂದ ಅವರನ್ನು ಸ್ವಾಗತಿಸಿತ್ತದು, ಅಪರ ರಾತ್ರೆಯ ಸಮಯ.

ನಮ್ಮ ದುರದೃಷ್ಟ ಸಹವರ್ತಿಗಳೇ ಚಹಾ ಸಿಗಲಿಕ್ಕಿಲ್ಲ .ಆದರೂ ನಾವೆಲ್ಲಾ ಇಲ್ಲಿಯೇ ಸ್ವಲ್ಪ ದಣಿವಾರಿಸಿಕೊಳ್ಳೋಣ ಎಂದರು ಮೇಜರ್ ನಿಜವಾಗಿಯೂ ಅವರಿಗೆ ಬೇಸರವಾಗಿತ್ತು.
ಕಳೆದ ಮೂರುಗಂಟೆಯಿಂದ ಪಯಣಿಸುತ್ತಿದ್ದ ಅವರೆಲ್ಲರೂ ದಣಿವಾರಿಸಿಕೊಳ್ಳೋ ತಹತಹದಲ್ಲಿದ್ದರು.ಸರ್ ಇದೊದು ಟೀ ಶಾಪ್. ನಾವು ಬೇಕೆಂದರೆ ಚಹಾ ಮಾಡಿಕೊಳ್ಳ ಬಹುದು ಆದರೆ ಅಂಗಡಿಯ ಬೀಗ ಮುರಿಯಬೇಕಾದೀತು, ಸಹಚರನೊಬ್ಬ ಸಲಹೆ ನೀಡಿದ.
ಮೇಜರ್ ಒಂದು ಬಗೆಯ ಇಬ್ಬಂದಿಯಲ್ಲಿ ತೊಳಲಾಡಿದರು ನ್ಯಾಯ ಅನ್ಯಾಯಗಳ ತಕ್ಕಡಿಯಲ್ಲಿ ದಣಿದ ಸಹಚರರ ಕಳೆಗುಂದಿದ ಮೋರೆ ತಕ್ಕಡಿಯನ್ನೇ ಮರೆ ಮಾಚಿತು.

ನಿಜವಾಗಿಯೂ ಒಳಗೆ ಚಹಾಕ್ಕ್ರೆ ಬೇಕಾದ ಸಲಕರಣೆಗಳಲ್ಲದೇ ಬಿಸ್ಕುಟ್ ಪಾಕೀಟುಗಳೂ ಸಿಕ್ಕಿದ್ದವು. ಉದರಂಭರಣೆಯ ವಿಧಿ ಮುಗಿದು ಅವರೆಲ್ಲರೂ ಹೊರಡಲು ತಯಾರಾದರು.
ಅಲ್ಲಿದ್ದವರು ಕಳ್ಳರಾಗಿರಲಿಲ್ಲ, ದೇಶ ಪ್ರೇಮ ದ್ಯೋತಕದ ಶಿಶ್ತಿನ ಸಿಪಾಯಿಗಳಾಗಿದ್ದವರು!!

ಮೇಜರ್ ತನ್ನ ಕಿಸೆಯಿಂದ ಸಾವಿರ ರೂನ ಒಂದು ಗರಿ ಗರಿ ನೋಟನ್ನು ತೆಗೆದು ಹೋಟೆಲ್ಲಿನ ಗಲ್ಲಾದ ಮೇಲಿಟ್ಟು, ಅದು ಮಾಲೀಕನ ದೃಷ್ಟಿಯನ್ನಾಕರ್ಷಿಸಲೋ ಎಬಂತೆ ಒಂದು ಸಕ್ಕರೆಯ ಡಬ್ಬವನ್ನು ನೋಟಿನ ಮೇಲಿಟ್ಟರು.
ಈಗ ಮೇಜರ್ ಮುಖದಮೇಲಿದ್ದ ಅಸಂತೃಪ್ತಿ ಮತ್ತು ಕೀಳರಿಮೆ ಮಾಯವಾಯ್ತು.
ಎಲ್ಲರನ್ನೂ ಕರೆದು ಶಟರ್ ಎಳೆದು ಹೊರಡಲು ಸೂಚಿಸಿದರು.
ಮೂರು ತಿಂಗಳು ಕಳೆದವು.
ದೈನಂದಿನ ಕಠಿಣತಮ ಕರ್ತವ್ಯ ಮುಗಿಯಿತು. ಅವರಲ್ಲಿ ಯಾರಿಗೂ ಜೀವಕ್ಕಪಾಯವಾಗಿರಲಿಲ್ಲ.
ಇನ್ನೊಂದು ಪಂಗಡ ಅವರನ್ನು ಬೀಳ್ಕೊಟ್ಟಿತು. ಇದು ಅನೂಚಾನ.
ಮೇಜರ್ ಗುಂಪು ಅಲ್ಲಿಂದ ಹೊರಟು ಅತೀ ಶೀಘೃದಲ್ಲೇ ಹಿಂದೆ ಚಹಾ ಸೇವಿಸಿದ ಅಂಗಡಿಯ ಬಳಿಯೇ ಬಂದು ಬೀಡು ಬಿಟ್ಟಿತು. ಆವತ್ತು ಚಹಾದ ಅಂಗಡಿ ಬಾಗಿಲು ತೆರೆದಿತ್ತು . ಮಾಲೀಕನೂ ಆಸೀನನಾಗಿದ್ದ. ಆತನಂತೂ ಹದಿನೈದು ಜನ ಗಿರಾಕಿಗಳನ್ನು ಒಮ್ಮೆಲೇ ಕಂಡು ಖುಷಿ ಪಟ್ಟ.
ಎಲ್ಲರೂ ಚಹಾ ಸೇವಿಸಿದ ಮೇಲೆ ಲೋಕಾಭಿರಾಮವಾಗಿ ಮೇಜರ್ ಆತನನ್ನು ಮಾತಿಗೆಳೆದರು. ಅಂತಹ ನಿರ್ಜನ ಪ್ರದೇಶದಲ್ಲೂ ಅಗಡಿಯಿಟ್ತ ಯಜಮಾನನಲ್ಲಿ ತನ್ನದೇ ಆದ ಕೌತುಕದ ಕಥೆಗಳಿಗೇನೂ ಬರವಿರಲಿಲ್ಲ.
ಅರೇ ಬಾಬಾ ದೇವರಿರುವುದೇ ಹೌದಾದರೆ ನಿಮ್ಮನ್ನು ರೀತಿಯಲ್ಲಿ ಇಟ್ಟಿರುವುದಾದರೂ ಯಾಕೆ ಎಂದು ನುಡಿದ ಸಹಚರರಲ್ಲೊಬ್ಬ.

"ಅರೇರೇ ಹಾಗೆ ಹೇಳಬೇಡಿ ಸಾಹೇಬರೇ ಭಗವಂತ ನಿಜವಾಗಿಯೂ ಇದ್ದಾನೆ, ಅದರ ಅನುಭವ ನನಗೆ ಮೂರು ತಿಂಗಳ ಹಿಂದೆ ಖಚಿತವಾಗಿ ದೊರಕಿತ್ತು..." ಅಂಗಡಿಯಾತ ನೆನಪಿನ ಕಾಲದಲ್ಲಿ ಹಿಂದೆ ತಲುಪಿದ್ದ..
"ಆಗ ನಾನು ನಿಜವಾಗಿಯೂ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿದ್ದೆ..
ನನ್ನ ಒಬ್ಬನೇ ಮಗನನ್ನು ಉಗೃವಾದಿಗಳು ಸಾಯ ಬಡಿದಿದ್ದರು, ಅವರಿಗೇ ಬೇಕಾಗಿದ್ದ ಅವನಲ್ಲಿರದಿದ್ದ ಯಾವುದೋ ಮಾಹಿತಿಗಾಗಿ. ನಾನು ಆತನನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಒಯ್ದಿದ್ದೆ. ಆತನಿಗೆ ಬೇಕಾದ ಔಶದಿಯನ್ನು ಕೊಳ್ಲಲೂ ನನ್ನ ಬಳಿ ಹಣವಿರಲಿಲ್ಲ. ಉಗೃವಾದಿಗಳ ಹೆದರಿಕೆಯಿಂದಾಗಿ ನನಗೆ ಯಾರು ಸಹಾಯ ಮಾಡಲೂ ಸಿದ್ಧರಿರಲಿಲ್ಲ. ನನಗೆ ಯಾವುದೇ ತರಹದ ಭರವಸೆಯ ಆಸೆಯೂ ಉಳಿದಿರಲಿಲ್ಲ.
ನೀವು ನಂಬುತ್ತಿರೋ ಇಲ್ಲವೋ ಸಾಹೇಬರೇ ಆದಿನ ಕೊನೆಗುಳಿದ ಒಂದೇ ದಾರಿಯಾದ ಭಗವಂತನಲ್ಲಿ ಕಣ್ಣಿರು ಹರಿಸಿ ಬೇಡಿಕೊಂಡೆ.
ಆದಿನ ಸಾಹೇಬರೇ ನಿಜವಾಗಿಯೂ ಭಗವಂತ ನಡೆದು ಬಂದಿದ್ದ ನನ್ನ ಅಂಗಡಿಗೆ ನನಗೆ ಗೊತ್ತಿಲ್ಲದೇ, .... ನಾನು ಅಂಗಡಿಗೆ ಬಂದು ನೋಡುತ್ತೇನೆ ನನ್ನ ಅಂಗಡಿಯ ಬೀಗ ಮುರಿದಿತ್ತು... ಆಕ್ಷಣಕ್ಕೆ ನನ್ನ ಕಥೆ ಮುಗಿದೇ ಹೋಯ್ತು ಎಂದುಕೊಂಡೆ..ನನ್ನ ಬಳಿ ಇದ್ದ ಒಂದೇ ಒಂದು ಆಸರೆಯನ್ನೂ ಕಳೆದುಕೊಂಡೆ ಅನ್ನಿಸಿತು.
ಆದರೆ ನೀವು ನಂಬಲೇ ಬೇಕು ಸಾಹೇಬರೇ ಭಗವಂತ ನನ್ನ ಮೇಜಿನ ಮೇಲೆ ಸಾವಿರ ರೂಪಾಯಿ ನನಗಾಗಿ ಕಳುಹಿಸಿದ್ದ. ಕ್ಷಣ ಸಾವಿರ ರುಪಾಯಿ ನನ್ನ ಪ್ರೀತಿಯ ಒಬ್ಬನೇ ಒಬ್ಬ ಮಗನ ಜೀವದ ಮೌಲ್ಯ ಆಗಿತ್ತು ಸಾಹೇಬರೇ ,
ನಿಜವಾಗಿಯೂ ಭಗವಂತ ಇದ್ದಾನೆ."
ಆತನ ಮುಖದ ಮೇಲಿದ್ದ ವಿಶ್ವಾಸ ಆತನ ಕಣ್ಣುಗಳಲ್ಲಿ ಪ್ರಜ್ವಲಿಸುತ್ತಿತ್ತು.
ಹದಿನೈದೂ ಜೋಡಿ ಕಣ್ಣುಗಳು ಕಲೆತವೊಮ್ಮೆಗೇ.
ಮೇಜರ್ ಮೇಲೆದ್ದು ತಮ್ಮ ಬಿಲ್ ಪಾವತಿಸಿ ಮಾಲೀಕನನ್ನೊಮ್ಮೆ ಅಪ್ಪಿಕೊಂಡರು.
ಹೌದು ನಿಜ ದೇವರಿದ್ದಾರೆ ... ನಿಮ್ಮ ಚಹಾ ಅಮೃತ...ಅವರಿಬ್ಬರ ಅಪ್ಪುಗೆಯ ಆಕ್ಷಣದಲ್ಲಿ ತಮ್ಮ ಸೇನಾಧಿಕಾರಿಯ ಕಂಗಳಂಚಿನಲ್ಲಿ ಮಡುಗಟ್ಟಿದ ಹನಿಯನ್ನು ಅವರೆಲ್ಲರೂ ನೋಡಿದರು.
ಅದೊಂದು ಅಪೂರ್ವ ಕ್ಷಣ.
ಸತ್ಯವೆಂದರೆ ನೀನೇ ದೇವಾರಾಗಬಹುದು ಯಾರಿಗೂ.....

ಕುಪ್ವಾರ ಸೆಕ್ಟರಿನಲ್ಲಿ ನಡೆದ ಘಟನೆಯಿದು...