Thursday, April 14, 2016

ಆ ಯುಗಾದಿಯ ಹೊಸ ಮಾಡಿನ ಹಬ್ಬ.


ರಾಮಾ ಹುಲ್ಲು ಸಾಕಕ್ಕೇನೋ ಅಲ್ದಾ...
ಅಮ್ಮ ಮನೆಯೊಳಗಿಂದಲೇ ಕೇಳಿದಳು.
ನಾಳೆ ಯುಗಾದಿ ಮನೆಗೆ ಹೊಸ ಮಚ್ಚು ( ಹುಲ್ಲು ಮುಚ್ಚುವಿಕೆ) ಮಾಡಲು ತಂದ ಒಣ ಹುಲ್ಲಿನ ಬಗ್ಗೆ ಕೇಳಿದ್ದಳು ಅಮ್ಮ ರಾಮನನ್ನು.
ಸಾಕಮ್ಮ ಅಲ್ದೇ ನಿಮ್ಮ ಹಟ್ಟಿಗೆ ( ಕೊಟ್ಟಿಗೆ- ದನ ಕರು ಎಮ್ಮೆಗಳಂತಹ ಜಾನುವಾರುಗಳನ್ನು ಕಟ್ತಲೋಸುಗ ಮಾಡಿರೋ ಮನೆಯಂತಹ ಕಟ್ಟೋಣ) ಬೇಕಾದಷ್ಟು ಕರಡ ಇತ್ತಲೇ.....? ಕಮ್ಮಿಯಾದರೆ ಭಂಢಾರರ ಮನೆಯಿಂದ ತಂದಾರ್ಯ್ತು ಬಿಡಿ.
ಪೇಟೆಯಲ್ಲಿಯಾದರೆ ಕರಡ (ಕಲ್ಲಿನ ಪಾರಿಯಲ್ಲಿ ಹುಟ್ಟುವ ಒಂದು ತರದ ಹುಲ್ಲು) ಸಿಗಲ್ಲ. ಆದರೆ ಹಳ್ಳಿಯಲ್ಲಿಯಾದರೆ ಅದಕ್ಕೆ ಕಮ್ಮಿಯಾಗದು.


ನಾವೆಲ್ಲಾ ಆಗಲೆ ಗೇರು ಮಿಜಿರು ( ಇನ್ನೂ ಹಣ್ಣಾಗದ ಮಿಡಿ ಗೇರು -) ಎಲ್ಲೆಂದೆಲ್ಲಾ ತರಬೇಕು ಅನ್ನುವುದರ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದೆವು.
ನಾಳೆ ಯುಗಾದಿಯ ಭಕ್ಷಗಳಲ್ಲಿ ಗೇರು ಬೀಜದ್ದೇ ಸಾಮ್ರಾಜ್ಯ. ತಾಳ್ಳು ( ಒಂದು ಬಗೆಯ ಪಲ್ಯ) , ಪಾಯಸ ಎಲ್ಲಾದಕ್ಕೂ ಈ ಹಸಿ ಗೇರು ಬೀಜವೇ ಮುಖ್ಯ.
ಮಿಜಿರನ್ನು ತಂದು ಮೆಟ್ಟು ಕತ್ತಿಯಲ್ಲಿ ಅರ್ಧಕ್ಕೆ ಸೀಳಿ ಚಿಕ್ಕ ಚೂರಿ ಅಥವಾ ಕತ್ತಿಯಿಂದ ಒಂದು ಕಡೆಯಿಂದ ಎಬ್ಬಿಸಿ ತೆಗೆಯೋ ಆತವೇ ಗಮ್ಮತ್ತಿನದು. ಅದರ ಸೊನೆ ಅಥವಾ ರಸ ಕೈಗೆ ತಾಗಿದರೆ ನಿಧಾನವಾಗಿ ಕೈಬೆರಳಿನ ಮೇಲ್ಮೈ ನ ಸ್ಪರ್ಷಜ್ಣಾನವೂ ತಪ್ಪಿ ಹೋಗೆ ನಾಲ್ಕೈದು ದಿನಗಳ ನಂತರ ನಿಧಾನವಾಗಿ ಚರ್ಮದ ತೆಳುವಾದ ಪದರವೇ ಉದುರಿ ಹೋಗುತ್ತದೆ. ಇದು ಸಾಧಾರಣ ಪ್ರತಿಕ್ರಿಯೆ ಆಗೆಲ್ಲಾ ಅಲ್ಲೆಲ್ಲಾ...ಮಧ್ಯಾಹ್ನದ ಅಮ್ಮನ ಕೈಯಡುಗೆಯ ಪರಿಮಳ ರುಚಿ ನಾವು ಮಾಡುವ ಕೆಲಸದಲ್ಲಿ ಮತ್ತಷ್ಟು ಉತ್ಸಾಹ ಹಣಿಕಿಕ್ಕುತ್ತಿತ್ತು.


ಇವತ್ತು ನಮ್ಮ ಅಡುಗೆ ಮನೆಯ ಹೊರಗಡೆ ಮೊನ್ನೆಯೇ ಮಾಡಿಟ್ಟ ಹೊಸ ಒಲೆಯಲ್ಲಿ. ಯಾಕೆಂದರೆ ಮಾಡಿನ ಹಳೇ ಹುಲ್ಲು ಉದುರಿಸುವಾಗ ಒಂದು ವರ್ಷದಷ್ಟು ಹಳೆಯದಾದ ತುಂಡು ತುಂಡು ಹುಲ್ಲುಗಳು ಮನೆಯೊಳಗೆಲ್ಲಾಬೀಳುತ್ತಿರುವಾಗ ಅಡುಗೆ ಮಾಡಲು ಸಾಧ್ಯವಿಲ್ಲವಲ್ಲ. ಅದಕ್ಕೇ ಹೊರ ಚಾವಡಿಯ ಕಡುಮಾಡಿನ ಹೊರಗೆ ಮೊದಲೇ ಒಂದೆರಡು ಒಲೆ ಮಾಡಿಟ್ಟದ್ದುಮಣ್ಣಿನ ಒಲೆ ಆಗಲೇ ಒಣಗಿದ್ದು ಅಡುಗೆಗೆ ರೆಡಿ. ಬೆಳಿಗ್ಪೆ ದಪ್ಪವಲಕ್ಕಿಯನ್ನು ಸ್ವಲ್ಪವೇ ಹೊತ್ತು ನೀರಲ್ಲಿ ನೆನೆಸಿ ತೆಗೆದಿಟ್ಟು ನಂತರ ಈರುಳ್ಳಿ ಎಣ್ಣೆಯಲ್ಲಿ ಹುರಿದು ಒಗ್ಗರಣೆ ಹಾಕಿ ಅವಲಕ್ಕಿ ಅದರಲ್ಲಿ ಬೆರೆಸಿ ಹದವಾಗಿ ಬೆಲ್ಲ ಮತ್ತು ತೆಂಗಿನ ತುರಿ ಸೇರಿಸಿದಾಗ ಅದರ ರುಚಿ ಮತ್ತು ಗಮಗಮ ತಿಂದೇ ಅರಿಯ ಬೇಕು ಇಲ್ಲವಾದರೆ ಅಮ್ಮನ ಕೈಗುಣಕ್ಕೆ ಮಾರು ಹೋದವರು ವಿರಳವೇ..


ರಾಮನ ಕೈಗುಣವೇ ಅಂತಹದ್ದು ಅರ್ಧವೇ ಗಂಟೆಯಲ್ಲಿ ಇಡೀ ಮನೆಯ ಹಳೆ ಹುಲ್ಲೆಲ್ಲನೆಲಕ್ಕೆ ಬಿದ್ದೇ ಬಿಟ್ತವು ಎಲ್ಲೆಲ್ಲಿ ತೆಂಗಿನ ಗರಿಗಳ ಚಾಪೆ ಹರಿದಿದೆಯೋ ಅಲ್ಲೆಲ್ಲ ನಿನ್ನೆಯೇ ಬಾರ್ಕೂರಿನಿಂದ ತರಿಸಿದ ತೆಂಗಿನಹೆಡೆಯ ಚಾಪೆ ಹಾಸಿದ್ದಾಯ್ತು. ನಂತರ ರಾಮ ತನ್ನ ಮೂವರು ಸಹಾಯಕರೊಂದಿಗೆ ಹೊಸ ಹುಲ್ಲು ಹರಡಲು ಆರಂಭಿಸಿದ. ಮಾಡಿನ ಕೆಳತುದಿಯಿಂದ ಆರಂಭವಾಗಿ ಹುಲ್ಲನ್ನು ಮೇಲಿಂದ ಮೇಲಿಂದ ಹರಡುತ್ತಾ ಮಾಡಿನ ಎತ್ತರಕ್ಕೂ ಉದ್ದಕ್ಕೂ ಹೊಸ ಹುಲ್ಲಿನ ಹರಹು ಅಂತಿಸಿಯೇ ಬಿಟ್ಟ. ಗುರಿಯಿಟ್ಟು ಕೆಳಗಿನಿಂದ ಬೀಸಿ ಒಗೆದ ಹುಲ್ಲಿನ ಕಟ್ಟನ್ನುಅವಲೀಲೆಯಿಂದ ಹಿಡಿದು ಕಟ್ಟು ಬಿಡಿಸಿ ಮಾಡಿನ ಮೇಲೆ ಹರಡುವುದರಲ್ಲಿ ಆತನಿಗೆ ಆತನೇ ಸಾಠಿ. ಬೆಳಿಗ್ಗೆ ಒಂಭತ್ತಕ್ಕೆ ಆರಂಭವಾದ ಈ ಮುಳಿ ಹುಲ್ಲಿನ ಹರಡಾಟ ಮಧ್ಯಾಹ್ನ ಹನ್ನೆರಡಕ್ಕೆಲ್ಲಾ ಇಡೀ ಮನೆಯ ಮಾಡು ಹೊಸ ಹುಲ್ಲಿನಿಂದಾವ್ರತವಾಗಿ ಬಿಟ್ಟಿತ್ತು. ನಂತರ ಅವನೇ ಮುಳಿ ಹುಳ್ಳಿನಿಂದಲೇ ಮಾಡಿಟ್ಟ ಹಗ್ಗ ವನ್ನು ಗಟ್ಟಿಯಾಗಿ ಎಳೆದು ಹರಡಿದ ಹುಲ್ಲಿನ ಮೇಲಿನಿಂದ ಕಟ್ಟಿ ಬಿಟ್ಟರೆ ಆತನ ಇಲ್ಲಿನ ಕೆಲಸ ಮುಗಿಯಿತು.
ನಂತರ ಜಾನುವಾರುಗಳ ಕೊಟ್ಟಿಗೆ ಗೆಯ ಸರದಿ ಇಲ್ಲೂ ಅಷ್ಟೇ ರಾಮನ ಕೈಚಳಕ ..

ಅವರೆಲ್ಲಲ್ಲರ ಭೇಟಿ ಹತ್ತಿರದ ಕಾಶಿಕಲ್ ಕೆರೆಗೆ, ಕೆರೆಯಲ್ಲಿ ಮಿಂದೆದ್ದು ಬಂದರೆಂದರೆ ನಮ್ಮ ಮನೆಯ ಚಾವಡಿಯಲ್ಲಿ ಎಲ್ಲರಿಗೂ ಸವಿ ರುಚಿ ಭೋಜನ. ಹಸಿ ಗೇರು ಬೀಜದ ಮತ್ತು ಎಳೆ ಹಲಸಿನ ಕಾಯಿಯ ಪಲ್ಯ, ಕಡಲೆಯ ಹುಳಿ, ಕೊಟ್ಟೆ ಕಡುಬು ಗೇರು ಬೀಜದ ಪಾಯಸ. ಉಪ್ಪಿನಕಾಯಿ ಮೊಸರು ಎಲ್ಲ ಸೇರಿದರೆ ಯುಗಾದಿಯ ಹಬ್ಬಕ್ಕೂ ಮನೆ ಮಾಡು ಹೊಸತಾದುದಕ್ಕೂ ಲಗತ್ತು.. ಸಾರ್ಥಕ.
ಮಾರನೆಯದಿನದಿಂದ ಹೊಸ ಮಾಡಿನ ಹೊಸ ಮನೆ.

No comments:

Post a Comment