Friday, April 1, 2016

ಹಲಸಿನ ಎಲೆಯ ಕೊಟ್ಟೆ ಕಡುಬು

ಹಲಸಿನ ಎಲೆಯ ಕೊಟ್ಟೆ ಕಡುಬು

ರವಿವಾರದ ಬೆಳಗಿನ ತಿಂಡಿಗೆ ಒಮ್ಮೊಮ್ಮೆಯಾದರೂ ಕೊಟ್ಟೆ ಕಡುಬು ಜಬರ್ದಸ್ತ್ ತಿಂಡಿ.
ತೆಂಗಿನ ಎಣ್ಣೆ ಉಪ್ಪಿನಕಾಯಿ ಇದ್ದರೇ ಸಾಕು, ಕೊಟ್ಟೆ ಕಡುಬು ಸವಿಯಲು. ಮೊದಲಾದರೆ ಬೆಣ್ತಿಗೆ ಅಕ್ಕಿಯನ್ನು ಅರ್ಧ ಗಂಟೆ ನೆನೆ ಹಾಕಿ ಗಾಳಿಯಲ್ಲಿ ಸ್ವಲ್ಪವೇ ಹೊತ್ತು ಬಾಡಿಸಿ( ಗಾರಿಸಿ) ಅಲ್ಪ ಸ್ವಲ್ಪ ಒದ್ದೆ ಇರುವಾಗಲೇ ಹುಡಿ ಮಾಡಿ ( ಹಿಟ್ಟಲ್ಲ, ರವೆ ರವೆಯಾಗಿ) ಅದೂ ಒಂದೇ ರೀತಿ ಸಿಗಬೇಕೆಂದರೆ ಸ್ವಲ್ಪ ಗಾಳಿಸಿದರಾಯ್ತು( ಜರಡಿಯಲ್ಲಿ),. ಅಯ್ಯೋ ಅಷ್ಟೇಲ್ಲಾ ಯಾಕೆ ತಲೆ ಬಿಸಿ ಮಾರ್ರೆ...
ಸೀದಾ ದಿನಸಿ ಅಂಗಡಿಗಿ ಇಡ್ಲಿ ರವೆ ಕೊಡಿ ಅಂದರಾಯ್ತು ......
ನೀರಲ್ಲಿ ನೆನೆ ಹಾಕಿ ನಂತರ ಹಿಂಡಿ ಹೊರ ತೆಗೆದರಾಯ್ತು. ಉದ್ದಿನ ಹಿಟ್ಟಿಗೆ ಸೇರಿಸಿದರಾಯ್ತು ಒಂದು ಅಳತೆ ಉದ್ದಿನ ಹಿಟ್ಟಿಗೆ ಎರಡೋ ಎರಡೂವರೆಯೋ ಅಳತೆ ಸೇರಿಸಿದರಾಯ್ತು ನಿಮ್ಮ ಬಂದ- ಕೊಟ್ಟೆಯ ಹಿಟ್ಟು ರೆಡಿ.

ಕೊಟ್ಟೆ:
ಅತ್ತ ಎಳೆದೂ ಅಲ್ಲ ಇತ್ತ ಬೆಳೆದ ಎಲೆಯೂ ಅಲ್ಲ ತುದಿತ ಎರಡು ಮೂರು ಚಿಗುರು ಎಲೆಗಳನ್ನು ಬಿಟ್ಟು ನಂತರದ ಮೂರೂ ನಾಲ್ಕು ಎಲೆಗಳನ್ನು ತೆಗೆದುಕೊಳ್ಳ ಬಹುದು. ಎಲೆಯನ್ನು ಮುದ್ದೆ ಮಾಡಿ ಬಿಟ್ಟರೆ ಪುನ ಮೊದಲಿನ ಸ್ಥಿತಿಗೆ ಬಂದರೆ ಸರಿಯಾದ ಎಲೆ ಅಂತ ಅರ್ಥ.

ಎಲೆಗಳನ್ನು ಸಂಜೆಯ ಒಳಗೆ ಅಥವಾ ಬೆಳಗಿನ ಹೊತ್ತು ತೆಗೆಯುವದು ಒಳ್ಳೆಯದು. ಸರಿ ಸುಮಾರು ಒಂದೇ ರೀತಿಯ ಎಲೆಗಳನ್ನು ನಾಲ್ಕು ನಾಲ್ಕರಂತೆ ಜೋಡಿಸಿಟ್ಟು ಕೊಳ್ಳಿ. ಮರದಿಂದ ಎಲೆ ತೆರ್ಗೆದ ಮೇಲೆ ನೀರಲ್ಲಿ ಹ್ಜಾಕಿ ಸರಿಯಾಗಿ ತೊಳೆದು ಒರೆಸಿ ಇಟ್ಟುಕೊಳ್ಳಬೇಕು. ಕಾರಣ ಇಷ್ಟೇ, ರಾತ್ರೆ ಸರಿಯಾಗಿ ಕಾಣದೇ ಎಲೆ ಅಂತ ಹಾವನ್ನೋ ಜೇಡವನ್ನೋ ಹುಳವನ್ನೋ ತೆಗೆದೀರಿ..

ಚಿತ್ರದಲ್ಲಿ ತೋರಿಸಿದಂತೆ ಮೂರೆಲೆ ಜೋಡಿಸಿ ಕಡ್ಡಿ ಸೇರಿಸಿ ( ಚಿತ್ರ ೧) ಮತ್ತೆ ನಾಲ್ಕನೆಯ ಎಲೆಯನ್ನು ಮೊದಲಿನ ಎಲ್ಲಾ ಎಲೆ ಬಳಸಿ ಸೇರಿಸಿ ಕಡ್ಡಿ ಸಿಕ್ಕಿಸಿ. ( ಚಿತ್ರ ೨)



ಎಲ್ಲವನ್ನೂ ಬಳಸಿ ಕೊಟ್ಟೆ ತರ ಬರುವಂತೆ ಒಂದೊಂದೂ ಎಲೆಯನ್ನು ಸೇರಿಸುತ್ತಾ ಕಡ್ಡಿ ಸಿಕ್ಕಿಸುತ್ತಾ ಹೋಗಿ ( ಚಿತ್ರ ೩,೪,೫)



ನಮ್ಮ ಕಡೆ ಕುಂದಾಪುರದ ಕಡೆ ಎಲೆಯ ಮೇಲ್ಮೈ ಒಳಗೆ ಬರುವಂತೆ ಕೊಟ್ಟೆ ಮಾಡಿದರೆ ಕಾಸರಗೋದು ಕಡೆ ಎಲೆಯ ಬೆನ್ನು

 ಒಳಗಿರುತ್ತದೆ. ಅದಕ್ಕೇ ನಮ್ಮಲ್ಲಿ ಎರಡೂ ತರ ಕೊಟ್ಟೆ ತಯಾರಾಗುತ್ತದೆ.



ಇಡ್ಲಿ ಕುಕ್ಕರಿನಲ್ಲಿಟ್ಟು ಬೇಯಿಸಿ. ಚಿಕ್ಕ ಎಲೆ ತಂದರೆ ಚಿಕ್ಕ ಕೊಟ್ಟೆ ಅರ್ಧ ಗಂಟೆಯಲ್ಲಿ ತಯಾರಾಗುತ್ತೆ. ದೊಡ್ಡ ಎಲೆಯಾದರೆ ದೊಡ್ಡ ಕೊಟ್ಟೆ ಬೇಯುವುದು ನಿಧಾನವಾಗುತ್ತೆ.



ಸಾಂಬಾರು ಸಾರು ಹುಳಿ ಕೊದ್ದೆಲು ಮೆಣಸುಗಾಯಿ ಯಾವುದನ್ನೂ ಇದರ ಜತೆ ಸವಿಯಬಹುದು.


ಇನ್ನೊಂದು ವಿಷಯ: ಒಂದು ಇದಕ್ಕೆ ಉಪಯೋಗಿಸೋ ಕಡ್ಡಿ ಹೊಸ ತೆಂಗಿನ ಕಡ್ಡಿಯಾದರೆ ಒಳಿತು. ಇನ್ನೊಂದು ವಿಷಯ ಕೊಟ್ಟೆ ಬೆಂದಾದ ಮೇಲೆ ಬಿಚ್ಚುವಾಗ ಸರಿಯಾಗಿ ಕಡ್ಡಿಯನ್ನು ಎಲೆಯನ್ನು ಹರಿಯದ ಹಾಗೆ ತೆಗೆದರೆ ಎಷ್ಟು ಬಾರಿಯೂ ಅದನ್ನೇ ಉಪಯೋಗಿಸಿಕೊಳ್ಳಬಹುದು.
ಗೇರು ಎಲೆ ದುರ್ಕನ ಎಲೆ ಮತ್ತು ನಾಗ ಸಂಪಿಗೆ ಮತ್ತು ತೇಗದೆಲೆಗಳಿಂದಲೂ ಕೊಟ್ಟೆ ಮಾಡ ಬಹುದಾಗಿದೆ. ಹಲಸಿನ ಎಲೆ ಶ್ರೇಷ್ಠ.

No comments:

Post a Comment