ಉತ್ಖತನ
೧. ಹಿತ ಶತ್ರು
"ನಮ್ಮ ಒಪ್ಪಂದದ ಪ್ರಕಾರ ನಾವು ನಿಮಗೆ ಕೊಟ್ಟ ಬಿಲ್ಲನ್ನು ನೀವು ವಾಪಾಸ್ಸು ಮಾಡದೇ
ನಿಮ್ಮಲ್ಲಿಯೇ ಇಟ್ಟುಕೊಳ್ಳೋ ಹಾಗಿಲ್ಲ, ಈ ಸಾರಿ ನಾವು ನಿಮಗೆ ನಮ್ಮ ಬಿಲ್ಲು
ಕಳುಹಿಸಿ ಒಂದು ತಿಂಗಳಾದರೂ ಅದನ್ನು ಪಾಸು ಮಾಡಲೂ ಇಲ್ಲ, ವಾಪಾಸ್ಸು ಕಳುಹಿಸಲೂ
ಇಲ್ಲ. ಅದಕ್ಕಾಗಿ ನಮ್ಮ ಈ ಒಪ್ಪಂದದ ಕರಾರಿನಲ್ಲಿದ್ದಂತೆ ನಮಗೆ ಆ ಹಣವನ್ನು ಬಡ್ಡಿ
ಸಮೇತ ತೆಗೆದು ಕೊಳ್ಳೋ ಹಕ್ಕು ಇದೆ, ಹಾಗಾಗಿ ಈ ಪತ್ರದ ಮೂಲಕ ನಾವು ಈ ವಿಷಯವನ್ನು
ಜ್ಞಾಪಿಸುತ್ತಿದ್ದೇವೆ."
ಪತ್ರವನ್ನು ಓದುತ್ತಾ ಹೋದಂತೆ ಬಾಸ್ ಮುಖ ಕೆಂಪು ಕೆಂಪಾಗಿತ್ತು.
"ನನ್ನ ಇಡೀ ಸರ್ವಿಸ್ಸಿನಲ್ಲೇ ಇಂತಹ ಪತ್ರವನ್ನು ಯಾವುದೇ ಕಂಟ್ರಾಕ್ಟರ್ ಕಡೆಯಿಂದ ಈ
ರೀತಿಯಲ್ಲಿ ಪಡೆದಿರಲಿಲ್ಲ, ಗೊತ್ತಾ ನಿಮಗೆ? ಸಮಯ ಬೇಕು! ಸಮಯ ಬೇಕು!! ಅನ್ನುತ್ತಾ
ತಿಂಗಳು ಮಾಡಿದಿರಲ್ಲಾ , ಅವರ ಬಿಲ್ಲು ಪಾಸು ಮಾಡದೇ, ಏನ್ರೀ ಹೇಳ್ತೀರಾ ಈಗ...?"
ನಿಮ್ಮನ್ನು ನಂಬಿದ್ದಕ್ಕೆ ಈ ರೀತಿ ಮಾಡಿದಿರಲ್ಲಾ ಎನ್ನುವಂತಿತ್ತು ಆ ನೋಟ.
"ನಾವೇನ್ರೀ ಮಾಡೋಕಾಗುತ್ತೆ, ಮಾಡೋದೆಲ್ಲಾ ಅವರೇ ಮಾಡಿ ಮುಗಿಸಿದಂತಿದೆ," ನಾನು
ಮನಸ್ಸಿನಲ್ಲೇ ಅಂತ ಹೇಳಿದ್ದೂ ಸ್ವಲ್ಪ ಗಟ್ಟಿಯಾಗೇ ಕೇಳಿಸಿತೂ ಅಂತ ಕಾಣ್ಸತ್ತೆ.
"ಏನ್ರೀ ಮತ್ತೆ ಗೊಣಗಾಟ..? ಎಂದರು ಬಾಸ್.
"ಏನಿಲ್ಲ ಸಾರ್ ಇದೂ ಕೂಡಾ ಕಳೆಯುತ್ತೆ " ಎಂದೆ ನಾನು.
ಎನ್ರೀ ಕಳೆಯುತ್ತೆ..? ಈಗಿನ ಈ ಕ್ಷಣದ, ಈ ಗಂಡಾಂತರ ಹೇಗೆ ಕಳೆಯುವದೂ ಅಂತ ತಲೆ
ಬಿಸಿಯಲ್ಲೇ ನಾನಿದ್ರೆ.............ಕಳೆಯುತ್ತೆ ಅಂತೆ !!,
ಕಳೆಯುತ್ತೆ........... ನನ್ನ ತಲೆ ....ನಿಮಗೇನ್ರೀ..?"
ನಾನದನ್ನೆಲ್ಲಾ ಕೇಳಿಕೊಳ್ಳೋ ಸ್ಥಿತಿಯಲ್ಲೇ ಇರಲಿಲ್ಲ, ಇದನ್ನ ಹೇಗೆ ನಿಭಾಯಿಸೋದು ಅಂತ ಯೋಚಿಸುತ್ತಿತ್ತು ಮನಸ್ಸು.
ಇವರು ಕೊಟ್ಟ ಬಿಲ್ಲಿನಲ್ಲಿ ಏನಾದರೂ ಕುಂದು ಕೊರತೆಯಿದ್ದರೆ ಮಾತ್ರ ಅದನ್ನು ತಡೆ
ಹಿಡಿಯಬಹುದು, ಶತ ಪ್ರತಿ ಶತ ದಾರಿ ಇದೆ ಅನ್ನಿಸುತ್ತಿತ್ತು ಮನಸ್ಸಿಗೆ , ಏನೋ ಇದೆ
ಹೌದು, ಆದರೆ ಏನದು... ಗೊತ್ತಾಗ್ತಾ ಇಲ್ಲ.
ಅದೇ ಗುಂಗಿನಲ್ಲಿ ಆಫೀಸು ಬಿಟ್ಟು ಹೊರ ಬಂದೆ.
ನಾನು ಈ ಪ್ರೋಜೆಕ್ಟ್ ವಹಿಸಿಕೊಂಡು ಜಾಸ್ತಿ ಸಮಯವಾಗಿರಲಿಲ್ಲ.
ಇದು ಆರಂಭವಾಗಿ ಬರೇ ಮೂರ್ನಾಲ್ಕು ತಿಂಗಳಾದರೂ ಕೆಲಸ ಸರಿಯಾಗಿ ಶುರುವಾಗಿರೋದೂ ಅಂದರೆ ಈಗಲೇ.
ನಾನು ಬರುವ ಮೊದಲು ಉತ್ಖನನ ಮಾತ್ರ ಆಗಿ ಹೋಗಿತ್ತು.
ಆಗ ನೋಡಿಕೊಳ್ಳುತ್ತಿರೋ ಮೆನೇಜರ್ ನಿಂದ ಮೋಸದಾಟದ ವಾಸನೆ ಬಂದು ಸೀನಿಯರ್ ಮೆನೇಜ್ಮೆಂಟ್ ನನ್ನನ್ನು ಈ ಪ್ರೋಜೆಕ್ಟ್ ಗೆ ವರ್ಗಾಯಿಸಿತ್ತು.
ಆದರೆ.....
ಉತ್ಖನನ ೨. ಬೀಸುವ ದೊಣ್ಣೆ ತಪ್ಪಿದರೆ.....
ಏನಾದರೂ ಮಾಡಿ ಈಗ ಬಂದ ಬಿಲ್ಲನ್ನು ವಾಪಾಸ್ಸು ಕಳುಹಿಸಿದರೆ ಬೀಸುವ ದೊಣ್ಣೆ ತಪ್ಪಿದ ಹಾಗೆ ಆಗತ್ತೆ.
ಈಗ ಬಿಲ್ಲನ್ನು ನಾನು ಕೂಲಂಕುಶವಾಗಿ ಪರಿಶೀಲಿಸುವಾಗ ಕೆಲವೊಂದು ಮುಖ್ಯವಾದ ಕೆಲಸಗಳಿಗೆ
ಬೇಕಾದ ಪರೀಕ್ಷಣಾಪತ್ರವನ್ನು ಜತೆಗಿರಿಸಲಿಲ್ಲ ಎನ್ನುವುದನ್ನು ಕಂಡುಕೊಂಡೆ, ಅದು ಸರಿ
ಆದರೆ ಈ ಬಿಲ್ಲು ನಮಗೆ ಕಳುಹಿಸಿ ತಿಂಗಳಾದ ವಿಷಯಕ್ಕೇನು ಮಾಡೋಣ.
ಒಂದು ವೇಳೆ ಎರಡು
ದಿನದ ಹಿಂದೆ ಅಂದರೆ ಶುಕ್ರವಾರ ನಾವೇನಾದರೂ ಏನಾದರೂ ಕಾರಣವಿಟ್ಟು ಮೆಮೋ ಕಳುಹಿಸಿದ್ದರೆ
ಆಗಿರುತ್ತಿತ್ತು. ಆದರೆ ಈಗ ಕಳುಹಿಸಿದರೆ ತಿಂಗಳಾದ ಮೇಲೆ ಆದ ಹಾಗೆ ಆಗತ್ತಲ್ಲವಾ.
ಆಗಲೇ ನನ್ನ ಕರವಾಣಿ ಕೊಯ್ಯೆಂದಿತು.
ಅನೂನ ದ್ದು
"ಅಪ್ಪಾ ರಾಗು ಏನು ಮಾಡಿದ ಗೊತ್ತೇ "
"ಹೇಳು"
"ನಾನು ಪರೀಕ್ಷೆಗಾಗಿ ಜಾಸ್ತಿ ಕಂಪ್ಯೂಟರಿನಲ್ಲಿ ಜಾಸ್ತಿ ಕುಳಿತುಕೊಳ್ಳದಿರಲಿ ಅಂತ
ಹೇಳಿದ್ದರೆ, ಆತ ಕಂಪ್ಯೂಟರಿನ ಗಡಿಯಾರವನ್ನೇ ವ್ಯತ್ಯಯ ಮಾಡಿ ಜಾಸ್ತಿ ಸಮಯ ಅದರಲ್ಲೇ
ಕಳೆದ. ನೀವು ಬಂದು ನೋಡಿ ಬೇಕಾದರೆ...."
ನನ್ನ ತಲೆಯಲ್ಲಿ ಸಾವಿರ ವೋಲ್ಟ್ ದೀಪ ಮಿಂಚಿತು.
"ವೆರಿ ಗುಡ್... .."
ಅವನಿಗೆ ಆಶ್ಚರ್ಯ!!! " ಅಪ್ಪಾ... ನಾನು ಹೇಳಿದ್ದು........"
"ಇರಲಿ ಬಿಡು ಮರಿ ನಾನು ಬಂದು ನೋಡಿಕೊಳ್ಳುತ್ತೇನೆ ಬಿಡು"
ಯುರೇಕಾ!!!
ಸೀದಾ ವಾಪಾಸ್ಸು ಬಾಸ್ ನ ಚೇಂಬರಿಗೆ ಹೋದೆ
ಸರ್ ನಿಮ್ಮ ಲ್ಯಾಪ್ ಟೋಪ್ ಕೊಡಿ ಒಂದು ನಿಮಿಷ
ನಾನು ಅವರ ಹೆಸರಿನಲ್ಲಿ ಒಂದು ಪತ್ರ ಬರೆದೆ ಕಲಾಮಾರನ್ ಗೆ
" ನಿಮ್ಮ ಬಿಲ್ಲಿನಲ್ಲಿ ಈ ಕೆಳಗೆ ನಮೂದಿಸಿದ ಪರೀಕ್ಷಣಾ ಪತ್ರ ಹಾಗೂ ಇನ್ನಿತರ
ವಿವರಣೆಯುಳ್ಳ ಕಾಗದ ಪತ್ರಗಳಿಲ್ಲದೇ ಇರುವುದರಿಂದ ನಿಮ್ಮ ಬಿಲ್ಲನ್ನು ತಡೆಹಿಡಿಯಲಾಗಿದೆ,
ಮತ್ತು ಬಹು ಮುಖ್ಯವಾದ ವಿವರಣೆಗಳಾದ ದೈನಂದಿನ ಕೆಲಸ ಕಾರ್ಯಗಳವಿವರ, ಉಪಯೋಗಿಸಿದ
ವಸ್ತುಗಳ ಪರೀಕ್ಷಣಾ ಪತ್ರ ಹಾಗೂ ಪಾವತಿ ಚೀಟಿ, ಇತ್ಯಾದಿ ವಿವರಣೆಗಳನ್ನು ಆದಷ್ಟು
ಬೇಗನೆ ನಮ್ಮ ತನಿಖೆಗಾಗಿ ಕಳುಹಿಸಿ.
ನಾವು ಮುಖತ ಎಷ್ಟು ಸಾರಿ ಹೇಳಿದ್ದರೂ ನೀವು
ಸರಿಯಾದ ಸಮಯದಲ್ಲಿ ವಿವರಣೆಗಳನ್ನು ನಮಗೆ ತನಿಖೆಗಾಗಿ ಕಳುಹಿಸದೇ ಇದ್ದುದರಿಂದ ಈ
ಬಿಲ್ಲನ್ನು ತಡೆಹಿಡಿಯಲಾಗಿದೆ. ನಾವು ಈ ಹಿಂದೆ ಕಳುಹಿಸಿದ ಯಾವ ಪತ್ರಕ್ಕೂ ನೀವು
ಉತ್ತರಿಸುವ ವ್ಯವಧಾನವನ್ನೂ ತೋರಿಸದೇ ಇರುವುದರಿಂದ ಈ ವಿಷಯವನ್ನು ತಮ್ಮ ಗಮನಕ್ಕೆ
ತರಲಾಗಿದೆ.
ದಯವಿಟ್ಟು ಇದಕ್ಕೆ ಕೂಡಲೇ ಉತ್ತರಿಸುವುದು."
"ಎನ್ರೀ ಮಾಡ್ತಾ ಇದ್ದೀರಾ.?"
ಅವರ ಯಾವ ಪ್ರಶ್ನೆಗೂ ಉತ್ತರಿಸದ ನಾನು, ಅದರ ಸಮಯ ಬದಲಾವಣೆ ಮಾಡಿ ಎರಡು ದಿನದ ಹಿಂದೆ
ಎಂದರೆ ಶುಕ್ರವಾರದ ತಾರೀಖನ್ನಾಗಿಸಿ ಈ ಪತ್ರವನ್ನು ರವಾನಿಸಿದೆ. ಸಾಮಾನ್ಯವಾಗಿ ಬಾಸ್
ತನ್ನದೇ ಮಿಂಚಂಚೆಯಲ್ಲಿ ಯಾವ ಪತ್ರವನ್ನೂ ರವಾನಿಸದಿದ್ದುದು ನಮಗೆ ವರದಾನವಾಗಿತ್ತು.
ಅಂದರೆ ಕಲಾಮಾರನ್ ಗೆ ನಮ್ಮ ಆಫೀಸಿನಿಂದ ಶುಕ್ರವಾರದ ತಾರೀಖಿನಲ್ಲಿ ಈ ಪತ್ರ ಮುಟ್ಟಿದರೆ ಅವನು ಉತ್ತರಿಸದೇ ಇದ್ದುದಕ್ಕಾಗಿ ಆತನದ್ದೇ ತಪ್ಪಾಗುತ್ತದೆ.
"ಅದು ಹೇಗ್ರೀ ಆಗತ್ತೆ..? ಅವರಿಗೆ ಅದು ಇವತ್ತೋ ನಾಳೆಯೋ ಅಲ್ಲ್ವಾ ಸಿಗೋದೂ..?" ಬಾಸ್ ನ ತರಲೆ ಪ್ರಶ್ನೆಗೆ
"ಅದೇನೇ ಇರಲಿ ಸಾರ್, ನಮ್ಮ ಪತ್ರ ಅವರಿಗೆ ಕಳುಹಿಸಿದ ತಾರೀಖೇ ಮುಖ್ಯ. ಅದು
ಮೊನ್ನೆಯದಲ್ಲವಾ? ಅಂದರೇ ಅವರೇ ತಿಳಿಸಿದ ಹಾಗೇ ಒಂದು ತಿಂಗಳಾಗಲು ಒಂದೇ ದಿನ ಮೊದಲು.
ಅಲ್ಲದೇ ಅವರು ಬರೆದ ಪತ್ರದ ತಾರೀಖು ನೋಡಿದಿರಾ? ಅದು ೩೧.೦೯.೨೦೧೦ ಎಂತ ಇದೆ" ಎಂದೆ
ನಾನು.
"ಹೌದು ಅದಕ್ಕೇ ನಾನು ಹೇಳಿದ್ದು , ಒಂದು ತಿಂಗಳಾಯ್ತಲ್ಲ..!!"
"ಅಲ್ಲಾ
ಸಾರ್ ಸಪ್ಟೆಂಬರ್ ನಲ್ಲಿ ಮೂವತ್ತು ದಿನಗಳು ಮಾತ್ರ ಮೂವತ್ತೊಂದು ಇಲ್ಲ, ಅಂದರೆ ಆ ಪತ್ರ
ಸಿಂಧುವೇ ಅಲ್ಲ, ಅಥವಾ ಅದು ಅಕ್ಟೋಬರ್ ಒಂದರಂದು ಬರೆದ ಪತ್ರ"
" ಆದರೆ ರಾವ್ ಅವರೇ
ನೀವು ಏನೇ ಹೇಳಿ ಇದು ತಪ್ಪಲ್ಲವಾ?" ಬಾಸ್ ನ ಪ್ರಶ್ನೆಗೆ ನನ್ನಲ್ಲಿ ಸರಿಯಾದ
ಉತ್ತರವಿರಲಿಲ್ಲ, ನಾನು ಇದನ್ನ ವಯ್ಯಕ್ತಿಕವಾಗಿ ತೆಗೆದುಕೊಂಡೆನಾ ಹೇಗೆ?
"ಸಾರ್
ಅವರು ಸರಿಯಾದ ದಾಖಲೆಗಳನ್ನು ನಮಗೆ ಕೊಡದಿರುವುದು ತಪ್ಪಲ್ಲವೇ, ಒಂದು ವೇಳೆ ಅದರಲ್ಲಿ
ಏನಾದರೂ ಹೇರಾ ಫೇರಿ ಕಂಡು ಬಂದರೆ, ನಾವು ಈಗ ಪಾಸು ಮಾಡಿದ ಹಣಕ್ಕೆ ನಾವೇ ಅಲ್ಲವೇ
ಜವಾಬ್ದಾರರು..?"
" ನನಗೇನೂ ಅದರಲ್ಲಿ ಏನೂ ತಪ್ಪು ಗೋಚರಿಸುತ್ತಿಲ್ಲ, ನಾನೂ ಅವರ ಕೆಲಸ ನೋಡಿದ್ದೆನಲ್ಲಾ, ಹಾಗೇನೂ ಹೇರಾ ಫೇರಿ ಮಾಡಿರಲಿಕ್ಕಿಲ್ಲ" ಬಾಸ್ ಉವಾಚ.
"ಹಾಗಿದ್ದಲ್ಲಿ ನೀವೇ ಈ ಬಿಲ್ಲನ್ನು ಪಾಸು ಮಾಡಿ ಸಾರ್, ನಾನು ಅದನ್ನು ಪಾಸು
ಮಾಡಬೇಕಾದರೆ ಎಲ್ಲಾ ವಿವರಗಳನ್ನೂ ಪ್ರತ್ಯಕ್ಷ ಪ್ರಮಾಣಿಸಿ ನೋಡಲೇ ಬೇಕು" ನನ್ನ
ಸ್ವರದಲ್ಲಿ ಗಡಸುತನವಿತ್ತೇ...?
ಬಾಸ್ ಸುಮ್ಮನಾದರು.
ಅಲ್ಲದೇ ನನಗೆ ಅವರು ದಾಖಲೆಗಳನ್ನು ಒಟ್ಟು ಮಾಡಿ ಕಳುಹಿಸುವವರೆಗೆ ನನಗೆ ಸಮಯ ಸಿಕ್ಕಿತಲ್ಲ.
ನನಗೆ ಅಷ್ಟು ಸಮಯ ಸಾಕು
ಕಳೆದ ಆರು ತಿಂಗಳಿನ ಎಲ್ಲ ದೈನಂದಿನ ವಿವರ ಪರಿಶೀಲಿಸ ತೊಡಗಿದೆ.
(ಮುಂದುವರಿಯುವುದು)
No comments:
Post a Comment