ಸೈಕಲ್ ಯಕ್ಷಗಾನ ಮತ್ತು ಸೀನನ ಭೂಮಿ ಗೀತ
ಮೊನ್ನೆ ಮೊನ್ನೆ ಊರ ಕಡೆ ಹೋಗಿದ್ದೆ.
ರಸ್ತೆಯಲ್ಲಿ ಸೀನನ ಧರ್ಮಪತ್ನಿ ಸಿಕ್ಕಿದಳು.
"ಏನಮ್ಮಾ ಎಲ್ಲಿ ರಾಯ?"
"ಏನ್ ಕೇಳ್ತೀರಾ? ನಿಮ್ಮ ಚೇತೂರವರ( ಗೊತ್ತಾಗ್ಲಿಲ್ವಾ ಚೇತನ್ ಕೋಡುವಳ್ಳಿ ಯವರು) ಸೈಕಲ್ ಪುರಾಣ ಕೇಳಿದಾಗ್ಲಿಂದ ಪರಿಸರ ಪ್ರೇಮಿಯಾಗಿ ಹೊಸ ಸೈಕಲ್ ತಂದಿದ್ದಾರೆ. ಅದನ್ನೇ ಕಲೀತಿದ್ದಾರೆ".
ಪಕ್ಕದಲ್ಲೇ ಬಾಂಬ್ ಬಿದ್ದಹಾಗೆ ಆಯ್ತು !!!.
ನಾನೂ ಅವನೂ ಒಮ್ಮೆ ಮನೆಯಿಂದ ಕದ್ದು ಶಂಕರನಾರಾಯಣಕ್ಕೆ ಯಕ್ಷಗಾನಕ್ಕೆಂತ ಹೋಗಿದ್ದೆವು ಸೈಕಲ್ಲಿನಲ್ಲಿ.
ಬೆಳಿಗ್ಗೆ ಐರ್ಬೈಲ್ ಉಬ್ಬಿನ ಮೇಲೆ ಬರುವಾಗ ಕೇಳಿದೆ" ಅಲ್ಲ ಸೀನಾ ಆ ಹಾಸ್ಯಗಾರನ ಅಸ್ಥಿಪಂಜರದ ಡ್ಯಾನ್ಸ್ ಎಷ್ಟು ಚಂದ ಇತ್ತು ಅಲ್ವಾ?" ಹಿಂದಿನಿಂದ ಉತ್ತರ ಬರಲಿಲ್ಲ. ಎದೆ ಧಸಕ್ಕೆಂದಿತು. ಹಿಂದೆ ನಿದ್ದೆ ಕಣ್ಣಿನಲ್ಲಿಕುಳಿತಿರಬೇಕಾದ ಪ್ರಾಣಿ ಪತ್ತೆಯಿಲ್ಲ.
ಶೇಶಿಯ ಗಲಾಟೆ ಕೇಳುವರಾರು?( ಅವಳ ಮಗನಿಲ್ಲದೇ ಮನೆಗೆ ಹೋದರೆ!!).
ಸೈಕಲ್ ಹಿಂದಕ್ಕೆ ತಿರುಗಿಸಿ ಹುಡುಕುತ್ತಾ ಹೊರಟೆ .
ಉಬ್ಬಿನ ಕೆಳಗಡೆ ಉಬ್ಬು ಶುರುವಾಗುವಲ್ಲಿ ಪಕ್ಕದ ತೋಡಿನ (ಸಣ್ಣ ತೊರೆ)ಹೊಂಡದಲ್ಲಿ ಕೌಚಿ ಮಲಗಿ ಗೊರಕೆ ಹೊಡೆಯುತ್ತಿದ್ದಾನೆ ಪ್ರಾಣಿ.
ಎಬ್ಬಿಸಿದರೆ "ಹೀಗೇ ನಿಧಾನ ಬಿಡು" ಕಾಮೆಂಟ್ ಬೇರೆ.
ಆಗ ನಾವೆಲ್ಲಾ ಅವನಿಗೆ ಕಲಿಸಲು ಹೊರಟು ನಮ್ಮ ನಾಲ್ಕೈದು ಜನರ ಸೈಕಲ್ ಬರ್ಬಾದ್ ಮಾಡಿಕೊಂಡು ಮನೆಯವರ ಕೈಲಿ .... ತಿಂದಾಗಿತ್ತು, ಅದು ಹಳೆ ವಿಷಯ.
ಈಗ..
ನಾನು ಏನನ್ನೋ ಹೇಳಲು ಬಾಯಿ ತೆರೆಯೋದ್ರಲ್ಲಿ ಸಾಲು ಮರದ ಉಬ್ಬಿನಿಂದ ಬಹಳ ಸ್ಪೀಡಿನಲ್ಲಿ ಬರುತ್ತಿರುವ ಸೀನ ಕಾಣೀಸಿದ
" ಏಯ್ ಗೇರ್ ಸೈಕಲ್ಲು ಬಿಟ್ಟೀದ್ದೀಯಾ?........." ಆತನು ಇನ್ನೂ ಏನೋ ಹೇಳುತ್ತಾ ನನ್ನಿಂದ ಒಮ್ಮೆಲೇ ಪಾಸಾಗಿ ಬಿಟ್ಟ.
ನಾನೂ ಆತ ಹೋದ ದಿಕ್ಕಿನಲ್ಲೇ ಲಗು ಬಗೆಯಿಂದ ಹೊರಟೆ.
ಅನತಿದೂರ ತಲುಪುವದರೊಳಗೆ ಪುನ ಅಷ್ಟೇ ಸ್ಪೀಡಿನಿಂದ ವಾಪಾಸ್ಸು ನನ್ನ ಕಡೆ ಬರುತ್ತಿದ್ದನಾತ.
" ಏಯ್ ಗೇರ್ ಸೈಕಲ್ಲು ಬಿಟ್ಟೀದ್ದೀಯಾ?......" ಪುನಹ ಅದೇಸ್ಟೈಲು, ಏನ್ಮಹಾ ಇವನಿಗೊಬ್ಬನ್ಗೇನಾ ಗೇರ್ ಸೈಕಲ್ಲು ಅನ್ನಿಸಿತ್ತು.
ಆಗಲೇ ಧಡ್ ಅಂತ್ ಶಬ್ದ ಕೇಳಿಸಿತು.
ಓಡಿದೆ ಅತ್ತಲೆ..........!!
ಸ್ವಲ್ಪ ದೂರದಲ್ಲೇ ಧರಾಶಾಹಿಯಾದ ಪರಿಸರಪ್ರೇಮಿಯನ್ನು ಕಂಡೆ.
ಪಕ್ಕದ ತೋಡಿನಲ್ಲಿ ಆತನ ಸೈಕಲ್!!! ಅದೂ ಭೂಮಿಗೀತ ಹಾಡುತ್ತಿತ್ತು.
ಆತನೆಂದ " ಏಯ್ ಗೇರ್ ಸೈಕಲ್ ಬಿಟ್ಟಿದ್ದೀಯಾ? ಇದನ್ನ ಹೇಗೆ ಬಿಡೋದೂ? ಅಂತ ನಾನು ಕೇಳಿದ್ದು......"
ಈತ ಬದಲಾಗುತ್ತಾನಾ?
....ಮಿಲಿಯನ್ ಡಾಲರ್ ಪ್ರಶ್ನೆ..!!!
No comments:
Post a Comment