Thursday, February 23, 2012

ತ್ಯಾಂಪನ ಇಲಿಯ ಪ್ರಹಸನ

ತ್ಯಾಂಪನ ಇಲಿಯ ಪ್ರಹಸನ

ಏಯ್!!
ತಲೆಯೆತ್ತಿ ನೋಡಿದೆ
ತ್ಯಾಂಪ!!??!!ಏನಪ್ಪಾ ವಿಷೇಷ?
ಏನಿಲ್ಲ ಕಣೋ ಬೋರಾಯ್ತು, ಬಂದ್ಬಿಟ್ಟೆ.
ಒಳ್ಳೆಯದಾಯ್ತು ಬಿಡು
ಏನೂ ಬೋರಾದ್ದದ್ದಾ..? ನಾನು ಬಂದದ್ದಾ..?
ಎರಡೂ, ಏನ್ ತಗೋತೀಯಾ..?
ನೀನೇನು ಕೊಡ್ತೀಯೋ ಅದು..ಯಾವುದಾದರೂ ಆದೀತು..
ಬೆಲ್ ಮಾಡಿದೆ ಮಂಜು ಬಂದ
ಎರಡು ಜ್ಯೂಸ್ ತಗೊಂಬಾ ಅಂದೆ ಆತ ಹೋದ
ಅಂದ ಹಾಗೇ ನಿನಗೊಂದು ಗುಡ್ ನ್ಯೂಸ್ ಇದೆ ಕಣೋ ಅಂದ
ಏನು  ಹೇಳು
ಸ್ವರ ಕಮ್ಮಿ ಮಾಡಿ ಅಂಗೈಯನ್ನು ಬಾಯಿಗೆ ಅಡ್ಡ ಹಿಡಿದು ನನ್ನ ಕಿವಿಯಲ್ಲಿ ಮಾತ್ರ ಹೇಳೊ ಹಾಗೆ ಅಂದ
"ಫೇಸ್ ಬುಕ್ ತಂದಿದ್ದೇನೆ"
"ಏನೂ....???" ನನಗೆ ಆಶ್ಚರ್ಯ ನಗು ಏಕ ಕಾಲಕ್ಕಾಯ್ತು . ನಾನು ಕೇಳಿದ್ದು ತಪ್ಪಾ ಅಥವಾ ಇವನು ಹೇಳಿದ್ದಾ ಅರ್ಥ ಆಗ್ಲಿಲ್ಲ
ಪುನಹ ಅದೇ ಶೈಲಿಯಲ್ಲಿ ನುಡಿದ
"ಫೇಸ್ ಬುಕ್ ತಂದಿದ್ದೇನೆ"
ಇವನು ಹಾಗೆ ಹೊತ್ತು ತರಲು ಅದೇನು ಶೀನನ ಜೋನಿ ಬೆಲ್ಲ ಕೆಟ್ಟೋಯ್ತಾ..??
"ಅಂದರೆ..??"  ಕೇಳಿದೆ
"ಕೊಡ್ತೀನಿ ಇರು, ಅಂತಾ ಅವಸರ ಯಾಕೆ..?, ಅದೆಲ್ಲಿಗೂ ಓಡಿ ಹೋಗೊಲ್ಲಾ ಬಿಡು"
"ಅಲ್ಲಪಾ ಫೇಸು ಬುಕ್ಕೂ ಅಂದ್ರೇನೂ, ನೀನು ತರೋದು ಅಂದ್ರೇನೂ ಅರ್ಥ ಆಗ್ಲಿಲ್ಲ ಕಣೋ " ಎಂದೆ
"ಅಯ್ಯೋ ನಿನ್ನ.........!!!".ನಾನೊಂದು ಪೆಕರು ಅನ್ನುವಂತೆ ನೋಡಿದ "ನೀನೊಬ್ಬ ಬ.ಪೆ ( ಬರೀ ಪೆದ್ದು)"
"ಯಾಕೋ ಹಂಗಂತೀ..??"
"ಅಲ್ವೇ ಮತ್ತೆ"
"ಯಾಕೆ?"
"ಅಲ್ಲಾನಾ ನಿನ್ನ ಆಫೀಸಲ್ಲಿ ಫೇಸ್ ಬುಕ್ ಮನಾ ( ಬ್ಯಾನ್) ಮಾಡಿದ್ದಾರೆ ಅಂದೆಯಲ್ಲಾ"
"ಹೌದೂ....??!!"
"ಅದಕ್ಕೇ ನಾನು ಅದನ್ನ ನಿನಗಾಗಿ ತಕೊಂಡು ಬಂದಿದ್ದೇನೆ, ನೀನು ಇನ್ನು ಆರಾಮ್ ಆಗಿ ಅದನ್ನ ನಿನ್ನ ಕಂಪ್ಯೂಟರಿನಲ್ಲಿ ಉಪಯೋಗಿಸಿಕೊಳ್ಳಬಹುದು..."
ನನಗೆ ನಗು ಬಂತು ಆದರೆ ಈಗ ತೋರಿಸಿಕೊಳ್ಳೋ ಹಾಗಿಲ್ಲ
"ನೀವೆಲ್ಲಾ ಓದಿದೋರೂ ಅಂತೀರಾ ನೋಡಿದ್ಯಾ ನಾನು ಕಮ್ಮಿ ಓದಿದವನಾದ್ರೂ ನಿನಗಿಂತ ಬುದ್ದಿವಂತ ಅನ್ನೋದನ್ನ ಒಪ್ತೀಯಾ ಹಾಗಾದರೆ..??"
"ನಿಜವಾಗಿಯೂ  ಒಪ್ಪಿಕೊಳ್ತೇನೆ ಬಿಡು.. ಕೊಡು ಮತ್ತೆ..."
"ಏಯ್!! ನಿನ್ನ್ ಆಫೀಸಿನ ಜೋಕ್ ತರಾ ಮಾಡ ಬೇಡ ಎಲ್ಲಿದೆ ನಿನ್ನ ಆ ಜ್ಯೂಸ್..??"
"ಬರತ್ತೆ ಬಿಡು..."
ಏ"ನು ಬರುತ್ತೆ...?? ನೀನೇನ್ ನನ್ನನ್ನ ನಿನ್ನ ಹಾಗೇ ಅಂದ್ಕೊಂಡ್ಯಾ..??"
"ಯಾಕಪ್ಪಾ..??"
"ನೀನು ಹೇಳಿದ ಜೋಕು ನನಗೂ ನೆನಪಿದೆ ಇನ್ನೂ... ಮೊದಲು ಜ್ಯೂಸು ತರಿಸು" ಅಂದ..

ಮೂರು ಸಲ ಬೆಲ್ ಮಾಡಿದರೆ

ನನಗೊಬ್ಬ ಕಂಜ್ಯೂಸ್ ಸ್ನೇಹಿತನಿದ್ದ. ಎಲ್ಲರಿಂದಲೂ ತಾನು ಖರ್ಚು ಮಾಡಿಸ್ತಾನಾದರೂ ತಾನು ಒಂದು ಪೈಸೆನೂ ಬಿಚ್ಚೋ ಜನ ಅಲ್ಲ. ಒಮ್ಮೆ ಯಾವುದೋ ಕೆಲ್ಸದ ನಿಮಿತ್ತ ಬನಶಂಕರಿಗೆ ಹೋಗಿದ್ದೆ. ನೋಡದೇ ಸುಮಾರು ಕಾಲ ಆಯ್ತಲ್ಲ ಅಂತ ಅವನ ಹತ್ರಾನೂ ಹೋಗಿದ್ದೆ.
"ಹೋ....... ಗೋಪಿ ತುಂಬಾ ಅಪರೂಪದ ಭೇಟಿ" ಎಂದ

"ಚಾಯ್ ತರಿಸಲಾ..??" ಎಂದಂದು ಒಂದು ಬೆಲ್ ಮಾಡಿದ
"ಬೇಡಪ್ಪಾ ಚಾಯ್ ಬಿಟ್ಟು ತುಂಬಾನೇ ಸಮಯ ಆಯ್ತಲ್ಲಾ" ಎಂದೆ
"ಹೋ ಹಾಗಾದರೆ ಕಾಫೀ..??" ಈಗ  ಎರಡು ಸಲ ಬೆಲ್ ಮಾಡಿದ
"ಈ ಉರಿ ಬಿಸಿಲಲ್ಲಿ..?" ಎಂದೆ
"ಹಾಗಾದರೆ ತಂಪು ಕಬ್ಬಿನ ಹಾಲು..?......... ಬೇಡ ಮೂಸುಂಬೀ ಜ್ಯೂಸ್ ಆದೀತು"  ಎಂದವ ನನ್ನ ಉತ್ತರಕ್ಕೂ ಕಾಯದೇ ಮೂರುಸಲ ಬೆಲ್ ಮಾಡಿದ.
ಅದೂ ಇದೂ ಮಾತನಾಡುತ್ತಾ ಕಾಲ ಕಳೆದೆವು, ಸರ್ದಾರ್ಜೀ ಜೋಕುಗಳಿಂದ ಮೊನ್ನೆ ಮೊನ್ನೆ ಕ್ರಿಕೆಟ್ ನಲ್ಲಿ ಸೋತ ವಿಷಯ ಸಹಾ ಬಂತು. ಇವನ ಜ್ಯೂಸ್ ಮಾತ್ರ ಬರಲೇ ಇಲ್ಲ ಅರ್ಧ ಗಂಟೆ ಕಾದು ನಾನೇ ಕೇಳಿದೆ "ಎಲ್ಲೋ ಜ್ಯೂಸು..?"
"ನೋಡಿದ್ಯಾ ನಮ್ಮ ಕೆಲಸಗಾರರು ಮೈಗಳ್ಳರು ........ಹೇಗೆ ಇವರನ್ನು ಸರಿ ಮಾಡೋದು ಗೊತ್ತಾಗೋಲ್ಲ ಕಣೋ, ನೀನೇ ನೋಡಿದ್ಯಲ್ಲ ಹೇಳಿ ಅರ್ಧ ಗಂಟೆ ಆಯ್ತು " ಎಂದ.
ನಾನೇ ಆಫೀಸಿನ ಒಳಹೊಕ್ಕೆ ಮಂಜು ಡಿಸ್ಪಾಚ್ ಸೆಕ್ಷನ್ ನಲ್ಲಿ ತೂಕಡಿಸುತ್ತಿದ್ದ.
ಎಚ್ಚರಿಸಿ ಕೇಳಿದೆ "ಯಾಕೋ ಸಾಹೇಬರು ಅಷ್ಟಲ್ಲದೇ ಹೇಳಿದ್ರೂ ನೀನೇನೂ ಕೆಲ್ಸ ಮಾಡೊಲ್ಲವಲ್ಲಾ" ಎಂದೆ
"ಅವರು ಏನೂ ಹೇಳ್ಲಿಲ್ಲ ಸಾರ್" ಎಂದ
"ನಾನೇ ಸ್ವತಃ  ನೋಡಿದ್ದೆ " ಅಂದೆ
"ಏನನ್ನು..?" ಕೇಳಿದ
" ಮೂಸುಂಬಿ ಜ್ಯೂಸಿಗೆ ಮೂರುಸಲ ಬೆಲ್ ಹೊಡೆದದ್ದನ್ನು" ಅಂದೆ
"ನೀವು ಹೊಸಬರು ಬಿಡಿ ಸಾರ್" ಎಂದ ಒಂದು ತರಾ ನಕ್ಕು
"ಆದರೆ ಬೆಲ್ಲ್  ಹೊಡೆದದ್ದಕ್ಕೂ  ಅದಕ್ಕೂ ಏನೋ ಸಂಬಂಧ" ಕೇಳಿದೆ ಜೋರಲ್ಲಿ
"ಅದೇ ಸಾರ್, ಮೂರು ಸಲ ಬೆಲ್ ಹೊಡೆದರೆ ಏನೂ ತರಬೇಡ ಅಂತಾನೇ ಅರ್ಥ".ಎಂದ ಮುಗುಮ್ ಆಗಿ


ಇದೇ ಜೋಕನ್ನ ಸೀನನಿಗೂ ಇವನಿಗೂ ಹೇಳಿದ್ದೆ  ಆಗ ಇಬ್ಬರೂ ನಕ್ಕಿದ್ದರು .ಈಗ ಅದನ್ನೇ ನನ್ನ ತಲೆಗೇ ಕಟ್ಟುತ್ತಿದ್ದಾನೆ
ಅಷ್ಟರಲ್ಲಿ ಮಂಜು ಜ್ಯೂಸ್ ತಂದ
ಕೊಳವೆ ಬಾಯಿಗಿಟ್ಟುಕೊಂಡು ಜೋರಾಗಿ ಸಪ್ಪಳ ಬರುವ ವರೆಗೆ ಹೀರಿ ಗ್ಲಾಸಿನಲ್ಲಿ ಅದರ ನೊರೆಯೂ ಬಿಡದಂತೆ ಖಾಲಿ ಮಾಡಿದ...
ಈಗ ಹೇಳು ಎಂದೆ..
ಏನು ಜ್ಯೂಸ್ ಬಗ್ಗೇನಾ ನಿನ್ನ ಫ್ರೆಂಡ್ ಬಗ್ಗೇನಾ?
"ಎರಡೂ ಅಲ್ಲ ನೀನೇನೋ ನನಗಾಗಿ ತಂದೆ ಎಂದೆಯಲ್ಲಾ ಅದರ ಬಗ್ಗೆ"
ಏನದು..??
"ನೀನು ಹೇಳಬೇಕು ಅದನ್ನ" ಅಂದೆ ನಾನು ಮತ್ತೆ ಮರೆವು ಬಂತಾ ಹೇಗೆ ಇವನಿಗೆ.
ಮೊದಲು ಬಂದಾಗ ನಾನೂ ಸೀನನೂ ಕಡಿಮೆ ಅಧ್ವಾನ ಪಡಲಿಲ್ಲ ಅವನನ್ನು ಸರಿ ಮಾಡಲು , ನಿಮ್ಹಾನ್ಸ್ ಗೆ ಬೇರೆ ಹೋಗಿದ್ದೆವು.
ಇಲ್ಲ ಹಾಗೇನೂ ಆಗಿರಲಿಕ್ಕಿಲ್ಲ. ಪುನಃ ಯಾಕೆ ... ಕೋಲು ಕೊಟ್ಟು...ತಿನ್ನಬೇಕು..??
ಅಷ್ಟರಲ್ಲಿ ಕಿಸೆಯಿಂದ ಕಪ್ಪಗಿನದ್ದೇನೋ ಹೊರತೆಗೆದ
ಅದೊಂದು ಕಪ್ಪನೆಯ ವಯರ್.
ಈ ವಯರಲ್ಲಿ...??
ಅಲ್ಲಪ್ಪಾ ಇದು ಇಲಿ" ಎಂದ
ಇಲಿಯಾ...??
ಹೌದು ಇಲಿ
ಇದು ಹೇಗೋ ಇಲ್ಲ..... ಇಲ್ಲಿ ಬೆಕ್ಕಿಲ್ಲವಾ..
ಅಷ್ಟರಲ್ಲಿ ಪೂರ್ತಿ ಹೊರತೆಗೆದ
ಅದೊಂದು ಮೌಸ್
ಇದರಲ್ಲಿ...??
ಹೌದು ಇದೆ
ಅಂದರೆ ಹೇಗೆ..?
ನಮ್ಮ ಅಫೀಸಿನ ಕಂಪ್ಯೂಟರಿನಿಂದ ಫೇಸ್ ಬುಕ್ ಸೆಲೆಕ್ಟ್ ಮಾಡಿ ಕಾಪಿ ಮಾಡಿಕೊಂಡು ತಂದಿದ್ದೇನೆ. ಎಲ್ಲಾ ಇದರಲ್ಲಿ ಇದೆ ಬಿಡು. ಅದನ್ನ ನಿನ್ನ ಕಂಪ್ಯೂಟರಿನಲ್ಲಿ ಅಂಟಿಸಿಕೋ. ಎಲ್ಲಾ ಬರತ್ತೆ. ಯಾರಾದರೂ ಬಂದರೆ ಈ ಇಲಿಯನ್ನು ತೆಗೆದು ಪಕ್ಕಕ್ಕೆ ಇಡು ಯಾರಿಗೂ ಗೊತ್ತಾಗಲ್ಲ.
ನಗಬೇಕೋ ಅಳಬೇಕೋ ಗೊತ್ತಾಗ್ಲಿಲ್ಲ
ಇವನನ್ನ ಹರಿಪ್ರಸಾದ ನಾಡಿಗರ ಹತ್ತಿರ ಹಳುಹಿಸಿದರೆ..??
ಬೇದವೇ ಬೇಡ ಪಾಪ ಮೊದಲೇ ಅವರಿಗೆ ಜಾಸ್ತೀ ಬ್ಯೂಸಿ, ಮತ್ತೆ ಇವ ಏನಾದರೂ ಅಲ್ಲಿಗೆ ಹೋದರೆ ಸಂಪದದ ಲಗಾಡಿ ತೆಗೆದಾನು.
ಮತ್ತೆ ಪ್ರಸನ್ನ ಶಂಕರ ಪುರರ ಹತ್ತರಾನೋ ಶ್ರೀಧರ ಬಂಡ್ರಿಯವ ಹತ್ರಾನೋ ಕಳುಹಿಸೋಣವೇ ಅಂದ್ಕೊಂಡೆ.
ಆದರೆ ನನ್ನ ತಲೆ ತಿಂದ ಹಾಗೆ ಅವರ ತಲೆ ನೂ ತಿಂದ್ರೆ ಕಷ್ಟ ಅನ್ನಿಸಿತು.
ಸರಿ  ಅಲ್ಲೇ ಇಡು ಎಂದೆ.
ಇವನ್ನೇನ್ರೀ ಮಾಡೋಣ..???

2 comments:

  1. ಹಹಹ.....ಫೇಸ್ ಬುಕ್ ನ ಕಾಪಿ ಮಾಡಿ ತಂದಿದ್ದು. ೩ ಸಲ ಬೆಲ್ ಮಾಡಿದ್ರೆ ಏನು ತರೋದ್ ಬೇಡ ಅಂತ ಅನ್ನೋದು....ಓದಿ ನಗು ತಡೆಯಲಾಗಲಿಲ್ಲ.....ಚೆನ್ನಾಗಿದೆ ಸರ್ ನಿಮ್ಮ ಬರಹ...ಲೈಕ್ ಇತ್ತ್...

    ReplyDelete
  2. ಶೆಟ್ರೇ ನಿಮ್ಮ ಮೆಚ್ಚುಗೆಯ ಪುರಸ್ಕಾರವೇ ನಮಗೆ ಅನ್ನ ನೀರು ಇಂತಹ ಬರಹಗಳಿಗೆ.
    ತ್ಯಾಂಪ ಸೀನ ಮೊದಲೊಮ್ಮೆ ನಮ್ಮ ಆಫೀಸಿಗೆ ಬಂದದ್ದು ಓದಿದ್ದೀರಾ...?
    ತ್ಯಾಂಪ ಸೀನನ ಕಂಪೂಟರ್ ಕಲಿಕೆ 1 ನೋಡಿ

    ReplyDelete