Saturday, November 17, 2012


ಸ್ವಾರ್ಥ


೧.   ಕನಸು

ಆದಿನ ನನಗೇ ನೋ ಸ್ವಲ್ಪ ಪೂರ್ವಾಭಾಸವಾಗಿತ್ತು. ಇವತ್ತು ಏನೋ ಆಗುತ್ತೆ ಅಂತ. ಬೆಳಿಗ್ಗೆ ಚುಮುಚುಮು ಚಳಿಯಲ್ಲಿ ಒಬ್ಬನೇ ತಿರುಗಾಡುವುದೆಂದರೆ ನನಗೆ ತುಂಬಾನೇ ಇಷ್ಟ. ಆ ಎತ್ತರವಾಗಿ ಬೆಳೆದಿದ್ದ ಮರಗಳಿಂದ ದಟ್ಟವಾಗಿದ್ದ ಲಾಲಭಾಗ್ ನ ಆ ವಿಷೇಷ ಸ್ಠಳ ನನಗೆ ಯಾವತ್ತೂ ಪ್ರಿಯವೇ.   ಬೆಳೆದ ಹಸಿರು ಚಿಮ್ಮುವ ಗಳುವಿನ ಗುಂಪಿನಲ್ಲಿ ನಾನು ನನ್ನನ್ನೇ ಮರೆಯುವಷ್ಟು ವಿವಶನಾಗುತ್ತಿದ್ದೆ. ತಮ್ಮಷ್ಟಕ್ಕೆ ತಾವೇ ಬೆಳೆಯುತ್ತಾ, ತನಗೇ ಎಂದೂ ಏನೂ ಅಪೇಕ್ಷೆ ಪಡದೇ ಸರ್ವರಿಗೂ ಸದಾ ಏನನ್ನಾದರೂ ಕೊಡುತ್ತಿರುವ ಇವುಗಳು ಪ್ರಕೃತಿಗೇ ಸವಾಲು ಹಾಕುತ್ತ ಮೆರೆಯುವ ಮಾನವನೆಷ್ಟು ಕುಬ್ಜ ಎಂಬುದನ್ನು ತೋರಿಸಿಕೊಡುತ್ತಿವೆ ಎನ್ನಿಸುತ್ತದೆ. ಪ್ರಕ್ಷುಬ್ದವಾಗಿರುವ ಮನಸ್ಸನ್ನು ಪ್ರಶಾಂತ ಮಾಡುವ ಗುಣ ಇವುಗಳಲ್ಲಿವೆ. ಮನುಷ್ಯನ ಜೀವನಗತಿಯಲ್ಲಿನ ಏರಿಳಿತಗಳು ಇವುಗಳ ಒಂದು ವರುಷದ ಮಾರ್ಪಾಡಿನಲ್ಲಿ ಸಾಂಕೇತಿಕವಾಗಿ ಪ್ರತಿನಿಧಿಸುವಂತಿದೆ.ಅರ್ಥ ಮಾಡಿಕೊಂಡರೆ ನಾವು ಹೇಗಿರಬೇಕು ಎಂಬುದನ್ನೂ ಇವುಗಳು ನಮಗೆ ಕಲಿಸುತ್ತಿರುತ್ತವೆ.ಸಹನೆ ಶಾಂತಿ ಗಂಭೀರತೆ ಮತ್ತು ಚೇತೋಹಾರೀ ಗುಣಗಳು....... ನನ್ನ ಮನಸ್ಸು ಯೋಚಿಸುವುದನ್ನೂ ನಿಲ್ಲಿಸಿತು, ಇಲ್ಲ ಇವತ್ತು ಎಂದಿನಂತಿಲ್ಲ ಈ ಜಾಗ. ಇವತ್ತು ಏನನ್ನೋ ಅಡಗಿಸಿಕೊಂಡಂತಿದೆ. ಯಾವುದೋ ರಹಸ್ಯ..? ನನಗೇ ನಗು ಬಂತು ಇಲ್ಲಿ ಯಾವ ರಹಸ್ಯ ಅಡಗಿಸಿಡಲು ಸಾಧ್ಯ..? ಇವತ್ಯಾಕೋ ಜಾಸ್ತಿಯೇ ಹಿಮ (ಮಂಜು) ಆವರಿಸಿದೆ ಅನ್ನಿಸಿತ್ತು.ಮೂರ್ನಾಲ್ಕು ಅಡಿ ಮುಂದೆ ಏನಿದೆ ಅಂತ ಗೊತಾಗದಂತೆ ಆವರಿಸಿದೆ ಹಿಮ( ಮಂಜು). ಆದರೂ ನಿರ್ಭಾವುಕವಾಗಿ ( ಈ ಶಬ್ದ ಯಾಕೀಗ..?) ಯಾಂತ್ರಿಕ ನಡೆ. ಆಗಲೇ ಅದು ಕಾಣಿಸಿತು. ಅಸ್ಪಷ್ಟವಾಗಿ. ಕದಲ್ಲುತ್ತಿದೆಯಾ ನಿಶ್ಚಲವಾ ಅಂತಾನೂ ಗೊತ್ತಾಗಿರಲಿಲ್ಲ. ಮನಸ್ಸು ಮುಂದೆ ಹೆಜ್ಜೆ ಹಾಕಲು ಅನುಮಾನಿಸುತ್ತಿರಬೇಕಾದರೆ, ಮುಂದಿನ ಸೆಕೆಂಡಿನ ಕೆಲವೇ ಅಂಶಗಳಲ್ಲಿ ನನ್ನ ಮೇಲೆ ಆಕ್ರಮಣ ಮಾಡಲು ಅಣಿವಾಗುತ್ತಿರುವ ಸಿಟ್ಟಿಗೆದ್ದ , ಜೊಲ್ಲು ಸುರಿಯುತ್ತಿರುವ ತೆರೆದ ಬಾಯಿ ,  ಮಡಿಸಿಕೊಂಡ ಬಾಲ,  ಕೆಂಪು ಕಣ್ಣಿನ ಉಗ್ರ ದೈತ್ಯಾಕಾರದ  ನಾಯಿ..? ಓಡಲೂ ಕಾಲು ಗಳು ಮನಸ್ಸಿನ ಆಜ್ಞೆಯನ್ನು ಸ್ವೀಕರಿಸುತ್ತಿಲ್ಲ. ಯಾಕೆ ನನ್ನ ದೇಹ ನನ್ನ ಮನಸ್ಸಿನಾಣತಿಯನ್ನು  ಸ್ವೀಕರಿಸುತ್ತಿಲ್ಲ.?..? ಎಲ್ಲಕ್ಕಿಂತ ನನ್ನ ಮನಸ್ಸನ್ನು ಘಾಸಿ ಮಾಡಿದ ವಿಷಯ . ಇದು ನನ್ನ ಆಲಿವ್, ನಾನೇ  ಅಕ್ಕರೆಯಿಂದ ಸಾಕಿದ, ನನ್ನ ಕೈಯಾರೆ ಬಾಟಲಿಯಲ್ಲಿ ಹಾಲು ಕುಡಿಸಿ ಎತ್ತಿಕೊಂಡು ಲಲ್ಲೆಗೆರೆಯುತ್ತಾ ಮನೆಯೆಲ್ಲಾ ತಿರುಗುತ್ತಾ, ಮಗುವಿನಂತೆ ಮನೆಯ ಸದಸ್ಯನಂತೆ ಎಣಿಸಿ ಸಾಕಿದ ನಾಯಿ. ಪ್ರಪಂಚದಲ್ಲಿ ಯಾವುದೇ ಜೀವಿಗಿಂತಲೂ ಹೆಚ್ಚಾಗಿ ಕ್ರತಜ್ಞತೆಯನ್ನು ಪ್ರೀತಿಯಲ್ಲಿ ಮಾತ್ರವೇ ಕೊಡಲು ಸಮರ್ಥತೆಯುಳ್ಳ ಈ ಪ್ರಾಣಿ ಈಗ ಮಾತ್ರ ತನ್ನ ಅನ್ನ ಕೊಟ್ಟವನನ್ನೇ ಗುರುತಿಸದೇ,  ಜನ್ಮ ಜನ್ಮಾಂತರದ ವೈರಿಯಂತೆ ನನ್ನನ್ನೇ ಇತಿಶ್ರೀ ಮಾಡಲು ಹೊಂಚಿ ಕಾದಿತ್ತಾ..?

ಬಾಲ್ಯದಲ್ಲಿ ನನ್ನ ಗೆಳೆಯನ ಅಣ್ಣನಿಗೆ ಹುಛ್ಚು ನಾಯಿ ಕಡಿದದ್ದಕ್ಕೆ ಅವನಿಗಾದ ಬವಣೆ ನನ್ನ ಮನಸ್ಸಿನಿಂದ  ಇಂದೂ ಮರೆಯಾಗಿಲ್ಲ. ಅವನನ್ನು ಒಂದು ಪಂಜರದಲ್ಲಿ ಕಟ್ಟಿ ಹಾಕಿದ್ದರು. ಆತ ಹುಚ್ಚು ನಾಯಿಯಂತೆಯೇ ಸರಳನ್ನೆಲ್ಲಾ ಕಚ್ಚುತ್ತಾ ಮುಲುಗುತ್ತಿದ್ದ. ನನಗೂ ಹಾಗೇ ಆಗುತ್ತಾ..? ಇನ್ನೂ ಇದಕ್ಕೆ ಔಷಧಿ ಕಂಡು ಹಿಡಿದಿಲ್ಲವೇ..

ಆಗಲೇ ನನಗೆ ಯಾವುದೋ ಕಾದಂಬರಿಯ ಸಾಲುಗಳು ನೆನಪಾದವು.

"ರೆಬೀಸ್ ಬರದಂತೆ ತಡೆಯಲು ವ್ಯಾಕ್ಸಿನ್ ಇದೆಯೇನೋ ಹೊರತಾಗಿ ಬಂದ ಮೇಲೆ ಯಾರೂ ಏನೂ ಮಾಡಲೂ ಸಾಧ್ಯವಿಲ್ಲ. ಮನುಷ್ಯನಿಗೆ ಯಾವಾಗಲಾದರೂ ಯಾವುದೋ ರೀತಿಯಲ್ಲಿ ಸಾವು ತಪ್ಪದಾದರೂ ಆದರು ರ್ಯಾಬೀಸ್ ಮೂಲಕ ಬರುವ ಸಾವು ಶತೃಗಳಿಗೂ ನಾವು ಬಯಸದಷ್ಟು ನಿಕೃಷ್ಟವಾಗಿರುತ್ತದೆ. ಮುಖದಲ್ಲಿ ಆತಂಕ. ರಾತ್ರೆಯಂತೂ ನಿದ್ದೆಯೇ ಇರದು. ಸ್ವಲ್ಪ ಸಪ್ಪಳವಾದರೂ ಮುಟ್ಟಿದರೂ ಬೆಚ್ಚಿ ಬೀಳುತ್ತಾನೆ. ಉಚ್ಚ್ವಾಸ ನಿಶ್ವಾಶಗಳವೇಗ ಹೆಚ್ಚಿ ಕಣ್ಣು ಮುಖ ಗಂಟಲಿನ ಮಾಂಸ ಖಂಡಗಳಿಗೆ ಪಕ್ಷವಾತ ಬಂದು ನುಂಗಲಾಗದ ಜೊಲ್ಲು ಹೊರಕ್ಕೆ ಉಕ್ಕುತ್ತಿರುತ್ತದೆಮೂತ್ರ ಕೋಶಕ್ಕೂ ಹಬ್ಬಿ ಮೂತ್ರ ನಿಂತು ಹೋಗಿ ಹೊಟ್ಟೆಯುಬ್ಬಿ, ಈ ಎಲ್ಲಾ ಶರೀರದಲ್ಲಿನ ಬದಲಾವಣೆಗೆ ಹುಚ್ಚರಾಗುತ್ತಾರೆ. ಫಿಟ್ಸ್ ನಲ್ಲಿ ಮಾಂಸ ಖಂಡಗಳು ಬಿಗಿದುಕೊಂಡು ಅವು ಸಡಿಲವಾಗದೇ ಇರೋದ್ರಿಂದ ಹೃದಯ ಕೂಡಾ ಒಂದು ವಾರದಲ್ಲಿ ನಿಂತೇ ಹೋಗುತ್ತೆ"

ಕ್ಷಣದಲ್ಲಿ ನನ್ನ  ಕಣ್ಣು ಮುಚ್ಚಿತ್ತು, ನಾನು ಧಡಕ್ಕನೆ ಕೆಳಗೆ ಬಿದ್ದಿದ್ದೆ.. ಆ ದೈತ್ಯಾಕಾರದ ಆಲಿವ್ ತೆರೆದ ಬಾಯಿಯಿಂದ ಬೀಳುತ್ತಿರುವ ಜೊಲ್ಲಿನ ಜತೆ  ಎದೆಯ ಮೇಲೆಯೇ ತನ್ನ ಮುಂದಿನ ಕಾಲೂರಿ ನಿಂತಿತ್ತು, ಯಾವ ಕ್ಷಣದಲ್ಲೂ  ನನ್ನ ಮ್ರತ್ಯುವನ್ನು ಅಹ್ವಾನಿಸುತ್ತ. ನಾನು ಕಣ್ಣು ಮುಚ್ಚಿಕೊಂಡೆ, ಮುಂದಿನ ಗಳಿಗೆಯನ್ನು ಎದುರಿಸಲು.


೨.   ಪೀಠಿಕೆ

ಯಾಕೆ ನನ್ನ ಚಿನ್ನ ..? ಇವತ್ಯಾಕಿಷ್ಟು ಬೇಸರ?
ಅಲ್ಲರಿ ನಮ್ಮ ಪುಟ್ಟ ಇವತ್ತು ಊಟವೂ ಮಾಡುತ್ತಿಲ್ಲ.
ಯಾಕೆ ಶಾಲೆಯಿಂದ ಬರುತ್ತಿರಬೇಕಾದರೆ ಏನನ್ನೋ ತಿಂದು ಬಂದಿರ ಬೇಕು.
ಇಲ್ಲ ಇವತ್ತು ಶಾಲೆಗೆ ಹೋಗಲೇ ಇಲ್ಲ ಆತ , ರೂಮಿನಲ್ಲೇ ಇದ್ದಾನೆ, ಬೆಳಗಿನಿಂದ ಹೊರಗೂ ಬಂದಿಲ್ಲ
ಯಾಕೆ ಏನಾಯ್ತು,  ಅಂದರೆ ಏನೋ ದೊಡ್ಡ ಬೇಡಿಕೆಯೇ ಇರಬೇಕು.
ಅದೇ ನಿನ್ನೆ ಹೇಳಿದ್ದೆನಲ್ಲಾ, ಅವನಿಗೆ ಡ್ರಮ್ಸ್ ಸೆಟ್ ಬೇಕಿತ್ತಂತೆ,
ನೆನ್ನೆಯೇ ಹೇಳಿದ್ದೆನಲ್ಲ, ಅವನು ಕೇಳಿದ ಸೆಟ್ ಗೆ ಮತ್ತು ಅದನ್ನು ಕಲಿಯುವದಕ್ಕೆ ಕನಿಷ್ಟವೆಂದರೂ ಒಂದು ಲಕ್ಷ ಬೇಕು ನನ್ನಲ್ಲಿ ಅಷ್ಟು ಹಣವಿಲ್ಲವಲ್ಲ  ಈಗ.
ಅದು ಅವನಿಗೆ ಗೊತ್ತಾಗಬೇಕಲ್ಲ, ಅವನದ್ದೊಂದೇ ರಾಗ, ಬೇಕೇ ಬೇಕು ಅಂತ. ಅಲ್ಲಾರಿ ನಾನೊಂದು ಮಾತು ಹೇಳಲಾ?
"ಹೇಳು.."
"ನನ್ನ ಹತ್ತಿರ ಒಡವೆಗಳಿವೆಯಲ್ಲಾ, ನಾನಂತೂ ಅವುಗಳನ್ನು  ಉಪಯೋಗಿಸುತ್ತಿಲ್ಲ, ಹೊರಗಡೆ ಕಳ್ಳ ಕಾಕರ ಸರ ಎಳೆಯುವವರ ಭರಾಟೆ. ಇದನ್ನೇ ಅಡವಿಟ್ಟು ಹಣ ಹೊಂದಿಸಿದರೆ ಆಯ್ತಲ್ಲಾ..?"
ಇದು ಮಾತ್ರ ಬೇಡವೇ ಬೇಡ, ನಾನು ಪ್ರೀತಿಯಿಂದ ನಿನಗೆ ಮಾಡಿಸಿದ್ದು ಅದು, ಅದಕ್ಕೆ  ಕಷ್ಟ ಪಟ್ಟಿದ್ದೆಷ್ಟಂತ ನಿನಗೇ ಗೊತ್ತು.
ನಾನೇ ನು ಮಾರಲು ಹೇಳಿದೆನಾ ನಿಮಗೆ..?   ನಂತರ ಅದನ್ನು ವಾಪಾಸು ತೆಗೆದುಕೊಂಡರಾಯ್ತು.
ಆದರೆ....
ಆದರೆ  ಹೋದರೆ ಏನಿಲ್ಲ, ನಾನು ಹೇಳಿದ್ದು ಕೇಳಿ. ಈಗ.
...........................................................

ಆದರೆ ಬಿಡಿಸಲು ಸಮಯದ, ಹಣದ ಅಭಾವವಾದಲ್ಲಿ ಅದು ಕೈತಪ್ಪಿ ಹೋಯಿತೆಂದೇ ಅರ್ಥ. 
ಹೀಗೆ ಹೋದದ್ದು ಅದೊಂದೇ ಅಲ್ಲ, ಪ್ರತಿಯೊಬ್ಬರ ಉಪವಾಸಕ್ಕೂ ಒಂದೊಂದು.
ಅಂತಹ ಸಂಸಾರಗಳೆಷ್ಟಿವೆಯೋ ಜಗದಲ್ಲಿ.
ಕೇಳುವ ಹೇಳುವ  ಹದಿನೈದು ಸಂವತ್ಸರಗಳು ಹೀಗೆಯೇ ಕೊಚ್ಚಿ ಹೋದವು
ಇದೇ ಅಲ್ಲವೇ  ಸ್ವಾರ್ಥದ ಪ್ರೀತಿಯ ಮಾಯೆ.

೩.  ಭ್ರಮೆ

"ನಮಸ್ಕಾರ"    ಶಬ್ದ ಕೇಳಿ ತಲೆಯೆತ್ತಿದೆ
"ನೀವೇನಾ ಕೃಷ್ಣ ಕುಮಾರ್, ನಿಮ್ಮ ಪರಿಚಯವಾದದ್ದು ತುಂಬಾ ಸಂತೋಷ."  ಸ್ವಲ್ಪ ತಡೆದು "ಏಯ್ ನೆನಪಾಗಿಲ್ಲವಾ. ನಾನು ಕೆ ಸಿ " ಎಂದನಾತ ಶುದ್ಧ  ಹಿಂದೀಯಲ್ಲಿ .
ಆಗಲೇ  ಹಳತೆಲ್ಲಾ ಪಕ್ಕನೆ ನೆನಪಾಯ್ತು,
ಕೆಲವೇ ಕ್ಷಣಗಳಲ್ಲಿ ನಾವು ಎಲ್ಲವನ್ನೂ ಜ್ಞಾಪಿಸಿಕೊಂಡು ಬಿಟ್ಟೆವು.
ನಾನೂ ಈತನೂ ಸುಮಾರು ೮-೧೦ ವರ್ಶಗಳ ಹಿಂದೆ ಜತೆಯಲ್ಲೇ ಇದ್ದೆವು. ನಮ್ಮದು ಪ್ರತಿ ಮೂರು ವರುಷಕ್ಕೊಮ್ಮೆ ಗುಳೆ ಏಳುವ ಸಂಪ್ರದಾಯದ ಕೆಲಸ.
ಆಗ ಸಿಕ್ಕಿದ ದಿಲ್ದಾರ್ ಸ್ನೇಹಿತ.  ಈತ ಹೆಸರು ಕಾಳಿಚರಣ್ ಸಿಂಘ್, ನಾವೆಲ್ಲಾ ಈತನನ್ನು ಕೆ ಸಿ ಎಂತಲೇ ಕರೆಯುತ್ತಿದ್ದೆವು. ನಾವಿಬ್ಬರೂ ಸಂಸಾರಸ್ಥರಾಗುವ ಮೊದಲೇ  ಸ್ನೇಹ ಬೆಳೆದು ಬಂದುದರಿಂದ ಹಳ್ಳಿಯ ನೆಲೆಯಿಂದ ಬಂದ ಆತನ ಶ್ರೀಮತಿಯೂ ನನ್ನ ಮನೆಯವರನ್ನು ಹೊಂದಿಕೊಂಡಿದ್ದಳು. ಆತನ ಇಬ್ಬರು ಮಕ್ಕಳೂ ನಮ್ಮಿದುರೇ ಬೆಳೆದರು. ಸರಿ ಸುಮಾರು ೯-೧೦ ವರುಷ ನಮ್ಮ ಸಂಸಾರ ಜತೆಯಲ್ಲೇ ಇದ್ದು, ನಮ್ಮ ಪ್ರತೀ ವರ್ಗಾವಣೆಯೂ ಸರಿ ಸುಮಾರು ಹತ್ತಿರ ಹತ್ತಿರವೇ ಇದ್ದುದರಿಂದ, ಸ್ವಾಭಾವಿಕವಾಗಿ ನಾವು ಮನೆಯವರ ಹಾಗೆ ಹೊಂದಿಕೊಂಡಿದ್ದೆವು. ಹಬ್ಬ ಹರಿದಿನಗಳಲ್ಲಿ ಅವರ ನಮ್ಮ ಸಂಭಂಧಿಗಳೂ. ಅವನ  ತುಡುಗ ತುಂಟ ಮಕ್ಕಳಿಗೂ ನಾನು ಪಾಠ ಹೇಳಿಕೊಡುವ ಮಾಸ್ಟರ್, ಅವುಗಳು  ಸ್ವಲ್ಪ ಮನುಷ್ತ್ಯರಂತಾಗಲು ನಾವಿಬ್ಬರೂ ಕಾರಣರಾಗಿದ್ದೆವು. ಆತ ಒಮ್ಮೆ ಊರಿಗೆ ಹೋಗಿದ್ದಾಗ, ಖಾಯಿಲೆ ಬಿದ್ದ ಮಕ್ಕಳನ್ನೂ ಆತನ ಶ್ರೀಮತಿಯವರನ್ನೂ ಕಾಳಜಿಯಿಂದ ನೋಡಿಕೊಂಡಿದ್ದೆವು.
ದೆಹಲಿಯಲ್ಲಾತ ಈಗ ಸೆಟಲ್ ಆಗಿದ್ದಾನೆ.
ಕ್ಲಾಸಿನಲ್ಲಿ ಹಿಂದೆ ಬಿದ್ದಿರುತ್ತಿದ್ದ ಆತನ ಶೈತಾನ್ ಮಕ್ಕಳು ಈಗ ಟ್ಯುಟೋರಿಯಲ್ ನಡೆಸುವಲ್ಲಿ ಅಪ್ಪನ ಜತೆ ಸೇರಿದ್ದವಂತೆ.
ತನ್ನ ಜೀವಿತಾವಧಿಯಲ್ಲಿ ಸೇರಿಸಿಟ್ಟ ಹಣದಿಂದ ಟ್ಯುಟೋರಿಯಲ್   ಆರಂಭಿಸಿದ ಈತ ಅದನ್ನೇ ಮಕ್ಕಳಿಗೆ ವಹಿಸುವ ಇರಾದೆ ಹೊಂದಿದ್ದಾನೆ.
ಅದೂ ಸರಿಯೇ,ಆತನಿಗೆ ಬೀಪಿ ಮತ್ತು ಶುಗರ್ ಕೂಡಾ ಇವೆಯಂತೆ. ಮೊದಲಿಗಿಂತ ಸ್ವಲ್ಪ ಹೆಚ್ಚಿಗೆಯೇ  ದಪ್ಪವಾಗಿ ಆತನ ದೇಹ ಕೂಡ ಅದನ್ನೇ ಉಸುರುತ್ತಿತ್ತು. .
ನನಗೂ , ಅವನಿಗೆ ವಿಶ್ರಾಂತಿಯ ಅವಶ್ಯಕತೆಯಿದೆ ಅನ್ನಿಸಿದ್ದರೂ,  ಮಂಗಗಳಂತಹಾ ಮಕ್ಕಳಿಗೇ ಎಲ್ಲವನ್ನೂ ಕೊಡುವುದು ಅದೇಕೋ ಸರಿ ಕಾಣಲಿಲ್ಲ
 "ಸರಿಯಪ್ಪಾ, ನಿನಗೆ ಈಗ ಬೇಕಾದದ್ದು ವಿಶ್ರಾಂತಿ. ಆದರೂ ಪೂರ್ತಿಯಾಗಿ ಮಕ್ಕಳ ಕೈಯಲ್ಲಿ ಕೊಡುವುದು ಉಚಿತವಲ್ಲ " ಎಂದೆ ನಾನು
ಅದೆಲ್ಲಾ ಆಮೇಲೆ ನೋಡೋಣ ಬಿಡು "  ಅಂದ ಹಾಗೆ ಇಲ್ಲಿ ಎಲ್ಲಾ ಚೆನ್ನಾಗಿದೆ ತಾನೇ, ಏನಾದರೂ ಬೇಕಿದ್ದಲ್ಲಿ ಸಂಕೋಚ ಪಡದೇ ಕೇಳು" ಎಂದ
ಹೊಸದಾಗಿ ದೆಹಲಿಗೆ ವರ್ಗವಾಗಿ ಬಂದ ನನಗೆ ಎಲ್ಲವೂ ಅಡಚಣೆಯೇ,
"ಎಲ್ಲಾದರೂ ಇರಲು ಮನೆ ಹೊಂದಿಸಿಕೊಡು ನೋಡುವಾ" ಎಂದೆ.
"ಸಂಕೋಚ ಯಾಕೆ ಯಾರ್  ನನ್ನಲ್ಲಿ,  ದೆಹಲಿಯಲ್ಲಿ ಅದಕ್ಕೇನೂ ಬರಗಾಲವಿಲ್ಲ ಬಿಡು,
ಯಾವಾಗ ಕರೆತರುವ ಯೋಚನೆಯಿದೆ..?ತಿಳಿಸು.ನಿನ್ನ ಸಂಸಾರಕ್ಕೆಇಷ್ಟವಾದ ಮನೆ ಕೊಡಿಸೋದು ನನ್ನ ಜವಾಬ್ದಾರಿ  ಆಯ್ತಾ."
ವಿಶ್ವಾಸದ ಅಲೆ ನನ್ನೆದೆ ತುಂಬಿತು ಹೇಳಿದೆ
 "ಹಾಗಾದರೆ  ಈಗಲೇ ಊರಿಗೆ ಹೊರಟು ನನ್ನ ಸಂಸಾರ  ಆದಷ್ಟು ಬೇಗ  ಕರೆದು ತರ್ತೇನೆ"
 "ಊರಿಂದ ಹೊರಡುವ ಮೊದಲು ನನಗೆ ತಪ್ಪದೇ ಫೋನ್ ಮಾಡು"   .ಆತ ಎಚ್ಚರಿಸಿದ.
ಹೊರಡುವ ಸಮಯದಲ್ಲೂ ಪಕ್ಕದಲ್ಲಿನ ಖಾನ್ ಕೇಸಿಗೆ ಹೇಳಿದ್ದ ಮಾತು ಅಸ್ಪಷ್ಟವೆಂಬಂತೆ ಕೇಳಿಸಿತ್ತು.
 " ನಿಮ್ಮದೇ ಮನೆ ಇದೆಯಲ್ಲ, ಈಗಂತೂ ಸುಮಾರು ದಿನಗಳಿಂದ ಖಾಲಿಯೇ ಇದೆ.......?"


೪. ವರ್ತಮಾನ

ಶ್ರೀಮತಿಗೆ ಕೇಸಿ ಬಗ್ಗೆ ಕೇಳಿಯೇ ಖುಷಿಯಾಗಿತ್ತು.
"ಅಂದ ಹಾಗೆ ಅವನ ಶ್ರೀಮತಿ ಹೇಗಿದ್ದಾಳಂತೆ ಈಗ..?"  ನನಗೆ ಒಮ್ಮೆಲೇ ಪಿಚ್ಚೆನ್ನಿಸಿತು.
"ನಮ್ಮದೇ ಮಾತಿನ ಗುಂಗಿನಲ್ಲಿ ನಾನು ಈ ವಿಷಯವನ್ನು ಮರೆತೇ ಬಿಟ್ಟಿದ್ದೆ....
ಒಮ್ಮೆಲೇ ಕೇಸಿ ಯಮೇಲೆ ಸಿಟ್ಟು ಬಂತು .
ಅವನಾದರೂ ತಿಳಿಸ ಬಾರದಿತ್ತಾ....?.
ಆದರೂ ನನ್ನವಳನ್ನು ಸಂತೈಸಲು ಹೇಳಿದ್ದೆ 
 "  ನೀನೇ ಕೇಳಿಕೋ.... ಹೇಗಿದ್ದರೂ ಅಲ್ಲಿಗೇ ಹೋಗುತ್ತೆವಲ್ಲ...!!"
ಮನೆಯಿಂದ ಹೊರಡುವ ಮುನ್ನ ನಾನು  ದೆಹಲಿಯಲ್ಲಿನ  ಕೆ ಸಿಂಘ್ ಗೆ  ಫೋನ್ ಮಾಡಿದೆ.
ಆದರೆ ಆಗ ಆತ ಯಾವುದೋ ಬೇರೆಯೇ ಲೋಕದಲ್ಲಿದ್ದ ಹಾಗಿತ್ತು.
"ಆಯ್ತು ಬನ್ನಿ"  ಅಂದಷ್ಟೇ ಹೇಳಿದ್ದ.
ಅಂತೂ ದೆಹಲಿಯಲ್ಲಿ ರೈಲಿನಿಂದ ಇಳಿದ ನಾವು ಸಿಂಘ್ ಹೇಳಿದಂತೆ ಅವನಿರುವ ರೋಹಿಣಿಯಲ್ಲಿನ ಅಪಾರ್ಟ್ಮೆಂಟ್ ಗೇ ಹೊರಟೆವು.
ನನ್ನ ಬೆಳಗಿನ ಫೋನ್ ಗಾಗಿ ಕಾಯದೇ ಆತನೇ ನನ್ನ ಬಳಿ ಬಂದ.
ನಮ್ಮನ್ನು ಅವನದ್ದೇ ಆದ ಮಕಾನಿಗೆ ಕರೆದೊಯ್ದ.
ಅದು ಆತ ತನ್ನ ಬದುಕಿನೆಲ್ಲಾ ಸಂಪತ್ತನ್ನು ಧಾರೆಯೆರೆದು ಸಂಪಾದಿಸಿಕೊಂಡ ಮಹಲು.
ಮೇಲಿನ ಎರಡೂ ಅಂತಸ್ತನ್ನು  ಟ್ಯುಟೋರಿಯಲ್ಸ್ ಗಾಗಿ ಉಪಯೋಗಿಸುತ್ತಿದ್ದಾರೆ.
ಕೆಳಗಡೆಯ ಮನೆಯಿಂದ ಸಿಂಘ್ ಗೆ ಬಾಡಿಗೆ ಬರುತ್ತಿತ್ತು. ಈಗ್ಗೆ ಕೆಲವು ಸಮಯದಿಂದ ಖಾಲಿಯಿದ್ದಂತಿತ್ತು.
ತನ್ನ ಮಕ್ಕಳನ್ನು ಚೆನ್ನಾಗಿ ಪ್ರೀತಿ ಅಕ್ಕರೆಯಿಂದ  ತನ್ನೆಲ್ಲಾ ಪ್ರೀತಿ ಧಾರೆಯೆರೆದ ಸಿಂಘ ಅವರನ್ನು ದೊಡ್ದವರನ್ನಾಗಿ ಮಾಡಲು ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನೂ ಬದಿಗೊತ್ತಿದ್ದ. ಕಲಿಯಲು ಹೆಚ್ಚೇನೂ ಆಸಕ್ತಿ ತೋರಿಸದಿದ್ದ ಅವರನ್ನು ತಮ್ಮ ಕಾಲ ಮೇಲೆ ನಿಂತುಕೊಳ್ಳುವಂತೆ ಮಾಡಲು ತನ್ನದೇ ಈ ಜಾಗದಲ್ಲಿ ಟ್ಯುಟೋರಿಯಲ್ ಒಂದನ್ನು ತೆರೆದಿದ್ದ.
ಮಕ್ಕಳು ಕಲಿತದ್ದಕ್ಕೆ ಹೊರಗಡೆ ಕೆಲಸ ಸಿಗದೇ ಇದ್ದರೂ  ಇಲ್ಲಿ ತಿಂಗಳಿಗೆ ನಲವತ್ತು ಐವತ್ತು ಸಾವಿರ ಸಂಪಾದಿಸುತ್ತಿದ್ದಾರೆ ಎನ್ನುತ್ತಿದ್ದ.
 ಸಿಂಘ ನ ಮಾತಿನಲ್ಲಿ ಅವನ ಮಕ್ಕಳ ಬಗೆಗೆ ಎಷ್ಟು ಹೇಳಿದರೂ ಕಡಿಮೆಯೆಂಬಂತಿತ್ತು. ಇಬ್ಬರೂ ತಂದೆ ತಾಯಿಯವರನ್ನು ದೇವರಂತೆ ಕಾಣುತ್ತಿದ್ದಾರೆ, ಇಂತಹ ಮಕ್ಕಳಿರುವುದೇ ತಂದೆ ತಾಯಿಯವರ ಭಾಗ್ಯ ಎಂದೆಲ್ಲಾ ಹೇಳುತ್ತಿದ್ದನಾದರೂ ಯಾವುದೋ ಒಂದು ಯೋಚನೆ ಆತನನ್ನು ಕಾಡಿದಂತಿತ್ತು.
"ನಮಸ್ತೇ ಭಾಭೀಜಿ ಹೇಗಿದ್ದೀರಾ..?"
 ನನ್ನ ಶ್ರೀಮತಿ ನಕ್ಕು ವಂದಿಸಿದಳು. "ನಿಮ್ಮ ಶ್ರೀಮತಿಯವರು ಹೇಗಿದ್ದಾರೆ ಅವರು ಯಾಕೆ ಬಂದಿಲ್ಲ"
  "  ಅವಳು ಬರುವ ಸ್ಥಿತಿಯಲ್ಲಿಲ್ಲ ,"   ಒಮ್ಮೆಲೇ ಅನ್ಯ ಮನಸ್ಕನಾದ ಕೇಸೀ.
"ರೈಲಿನಲ್ಲಿ ಬರುವಾಗಲೇ ನೀವು ಭಾಭೀಜಿ ಕಟ್ಟಿ ತಂದ ತಿಂಡಿಯೆಲ್ಲಾ ಮುಗಿಸಿರಬಹುದಲ್ಲಾ " ಎಂದ ಆತ ನನ್ನ ಉತ್ತರಕ್ಕೂ ಕಾಯದೇ.
"ಹತ್ತಿರದಲ್ಲೇಒಂದು ವೈಷ್ಣೋ ಧಾಭಾ ಇದೆ, ನಿಮಗೆಲ್ಲಾದರೂ ಹೊರಗಡೆ ಒಳ್ಳೆಯ ಶುದ್ಧವಾದ ಅಚ್ಚುಕಟ್ಟಾದ ರುಚಿಯಾದ , ತಿಂಡಿ ಊಟ ತಿನ್ನ ಬೇಕೆನಿಸಿದರೆ , ತೋರಿಸುತ್ತೇನೆ ಬಾ ,   ಎಂದು ಕರೆದೊಯ್ದಿದ್ದ
ನಮಗೆ ರೋಹಿಣಿಯಲ್ಲಿ  ಊಟ ತಿಂಡಿಗೂ  ಪರದಾಡ ಬೇಕಾದ ಪರಿಸ್ಥಿತಿಯಿರಲಿಲ್ಲ ನಿಜ . ಶ್ರೀಮತಿಗಂತೂ ಎಲ್ಲಾ ಕಡೆ ಸಸ್ಯಾಹಾರಿಗಳೇ  ಕಾಣಿಸಿದರಂತೆ. ಒಂದೇ ಒಂದು ಸಮಸ್ಯೆ ಎಂದರೆ ಎಲ್ಲಾ ಕಡೆ ಹೋಟೆಲ್ಲುಗಳು ಧಾಭಾಗಳು ಬೆಳಗ್ಗೆ ತೆರೆಯುವದೇ ಹತ್ತು ಹನ್ನೊಂದು ಘಂಟೆಯ ನಂತರ, ಇದೊಂದೇ ನಮಗೆಲ್ಲಾ ಬೆಳಗಿನ ದೊಡ್ಡ ತೊಡಕು.  ಬೆಳಿಗ್ಗೆ ಬೇಗ ಏಳುವ ಅಭ್ಯಾಸವಾಗಿದ್ದು,  ಇಲ್ಲಿನ ವ್ಯಾಪಾರಸ್ಥರ ರೀತಿಯ ರಾತ್ರೆ ತಡವಾಗಿ ಮಲಗಿ ಬೆಳಿಗ್ಗೆ ತಡವಾಗಿ ಏಳುವವರಲ್ಲವಲ್ಲ. ಹೊಟ್ಟೆಯ ಕೂಗು ಬೆಳಗಿನ ಎಂಟೂವರೆಗೇ ಬಂಬಡಾ ಬಾರಿಸುತ್ತಿರುತ್ತದೆ.
"ನಿಮ್ಮನ್ನು ನನ್ನ ಮನೆಗೇ  ಕರೆದು ಕೊಂಡು ಹೋಗಬಹುದಿತ್ತು.ಇವತ್ತು ನಮ್ಮ ಮನೆಯಲ್ಲಿ ಮಾಂಸಾಹಾರ, ಅಲ್ಲದೇ ಆದರೆ ಅಲ್ಲಿಯೂ ಈ ಟ್ಯೂಷನ್ ಹಾವಳಿಯಿದೆ. ನಿಮಗೆ ತೊಂದರೆ ಯಾಗಬಾರದಲ್ಲಾ,  ಬೇರೆ ಮನೆ ದೊರಕುವವರೆಗೆ ಇಲ್ಲಿಯೇ ಇರಿ"  ಎಂದಿದ್ದ ಕಾಳಜಿಯಿಂದ. ಕೇಸೀ.
"ಕೆ ಸಿ ನೀನು  ಇಷ್ಟು ಮಾಡಿದ್ದೇ ಹೆಚ್ಚು " ಎಂದೆಪ್ರೀತಿಯಿಂದ.
ಸಂಜೆ ನಾನೂ ನನ್ನ ಶ್ರೀಮತಿ  ಹೊರ ಸಂಜೆ ಯಾನ ಹೊರಟೆವು. ಹತ್ತಿರದಲ್ಲೇ ಕಂಡು ಬಂದ ಒಬ್ಬ ಪ್ರಾಪರ್ಟಿ ಡೀಲರ್ ಅಂಗಡಿಯಲ್ಲಿ ವಿಚಾರಿಸಿದೆವು. ಆತ ಬೆಳಿಗ್ಗೆಯೇ ಮೂರ್ನಾಲ್ಕು  ಮನೆ ತೋರಿಸುವ , ಅದರಲ್ಲೊಂದಾದರೂ ನಮಗೆ ಮೆಚ್ಚುಗೆಯಾಗುವ ಬರವಸೆಯಿತ್ತ.
ಶ್ರೀಮತಿಯನ್ನು ಮನೆಯ ಹತ್ತಿರ ಬಿಟ್ಟು ನಾನು ಸಿಂಘ್ ಮನೆಯತ್ತ ನಡೆದೆ.
ಹೋಗದಿದ್ದರೇ ಒಳ್ಳೆಯದಿತ್ತು ಅನ್ನಿಸುತ್ತಿದೆ ಈಗ.

೫. ಪ್ರಕೃತ

" ಯಾರನ್ನು ಕೇಳಿ  ಕೊಟ್ಟಿರಿ ನಮ್ಮ ಮನೆಯನ್ನು ನಿಮ್ಮ ಸ್ನೇಹಿತನಿಗೆ"

ಹಾಗಲ್ಲ ಮಗಾ, ಅವನು ನನ್ನ ಪ್ರಾಣ ಸ್ನೇಹಿತ , ನೀವೆಲ್ಲಾ ಸಣ್ಣವರಿರುವಾಗ ಎಷ್ಟು ಸಹಾಯ ಮಾಡಿದ್ದಾನೆ ಗೊತ್ತಾ..? " ಇದು ಕೇಸಿ ಯ ಸ್ವರವಲ್ಲವೇ..?

ನಾನು ಬಾಗಿಲು ತಟ್ಟಲು ಅನುಮಾನಿಸಿದ್ದೆ.

ಕಂಡರೂ ಕಾಣದಂತಿದ್ದ ತೆರೆದ ಬಾಗಿಲಿನ ಸಂದಿಯಲ್ಲಿ  ಮೇಜಿನ ಮೇಲಿದ್ದ ಅರ್ಧ ಮಧು ತುಂಬಿದ ಗ್ಲಾಸ್ ಮುಂದಿನ ಕಥೆ ಸಾರಿ  ಹೇಳುತ್ತಿತ್ತು.

"ನೋಡಪ್ಪಾ ನೀನೀಗ ನಮ್ಮ ಮೇಲೆ ಅವಲಂಬಿತ , ಅದಕ್ಕೇ ನಾನು ಹೇಳಿದಂತೆ ಕೇಳಲೇಬೇಕು.  ಹಿಂದೆ ನಡೆದದ್ದು,  ಮರೆತು ಬಿಡು ,ದೆಹಲಿಯಲ್ಲಿ ಬೇಕಾದಷ್ಟು ಮನೆಗಳಿವೆ ಬಾಡಿಗೆಗೆ, ಅವರಿಗೆ  ನಮ್ಮದೇ ಮಕಾನು ಅಗ ಬೇಕಂತಿಲ್ಲ, ನಾನು ಅದನ್ನು ನನ್ನ ಸ್ನೇಹಿತನಿಗೇ ಕೊಡುತ್ತೇನೆ."

"ಅಲ್ಲಾ.... ಅವನ ಋಣವೇ ಸಾಕಷ್ಟಿದೆ ತೀರಿಸಲು, ಮನೆ ಕೊಟ್ಟಾದರೂ ತೀರಿಸಬಹುದಲ್ಲಾ..., ನೋಡಪ್ಪಾ ನನ್ನ ಕಾರು ಮಾರಿದೆ, ನಾನೇನೂ ಹೇಳಲಿಲ್ಲ, ಅಮ್ಮನ ಹೆಸರಿಗಿದ್ದ ಮನೆಯನ್ನೂ ಮೋಸದಿಂದ ತಿಂದು ತೇಗಿದೆ, ಅದೇ ವ್ಯಥೆಯಿಂದ ಅವಳೂ ಕಣ್ಮುಚ್ಚಿದಳು.   ಅಂತಿಮ ಕಾಲಕ್ಕೆಂದು ಕೂಡಿಟ್ಟ ಹಣ ವನ್ನೂ ನೀರಿನಂತೆ ಖರ್ಚು ಮಾಡಿ ನಿನ್ನ ಚಟಗಳಿಗೆ ಬಲಿಯಾಗಿಸಿಕೊಂಡೆ"  ಕೇಸಿ ಮಾತನಾಡುತ್ತಾ ಆಡುತ್ತಾ ಗದ್ಗದಿತನಾಗಿದ್ದ.

"ಬಾಯ್ಮುಚ್ಚೋ ಮುದುಕಾ  ಸಾಕು ಮಾಡು ನಿನ್ನ ತಲೆ ಹರಟೆ....  ಊಟವಂತೂ ಸಿಗುತ್ತದಲ್ಲಾ....  ಬಿದ್ದಿರು ಮನೆಯ ಮೂಲೆಯಲ್ಲಿ, ನಾವು ಹೇಳಿದ ಹಾಗೆ ಕೇಳಿಕೊಂಡು "  ಕೈಯೆತ್ತಿದ್ದ ಆತನ ಮಗ ಮತ್ತೂ ಮುಂದೆ ಬಂದ.

ಇನ್ನು ಒಂದು ಕ್ಷಣವೂ ನಿಲ್ಲಲಾರೆ ಅನ್ನಿಸಿತ್ತು 
ಅಲ್ಲಿಂದ ಹೊರಬಂದೆ.
ಇವತ್ತು ಬಿದ್ದ ಕನಸಿಗೂ ಈ ಘಟನೆಗೂ ಮನಸ್ಸು ತಾಳೆ ಹಾಕಿತ್ತು.
ಈಗಲೂ ಕೇಸಿಯಲ್ಲಿ ಧೈರ್ಯ ತುಂಬಿ ಬದುಕನ್ನೆದುರಿಸುವ ಛಲ ತುಂಬ ಬಹುದೆನ್ನಿಸಿತ್ತು.
ಅವನು ತನ್ನ ವಿಶ್ರಾಂತಿ ಜೀವನ ಚೆನ್ನಾಗಿ ಕಳೆಯ ಬಹುದಾದಷ್ಟು.
ಹದ್ದು ಸಾಯುವರೆಗೆ ಒಂದೇ ಸಂಗಾತಿಯನ್ನು ಅವಲಂಬಿಸಿರುತ್ತದಂತೆ.
ಪ್ರಾಣಿಗಳಲ್ಲಿಯೂ ಸಹ ಬಾಳ್ವೆಯ ಚಿಂತನೆ ಕಂಡು ಬರುತ್ತದೆ.
ಕಮ್ಮಿಯೆಂದರೆ ಪ್ರಪಂಚದಲ್ಲಿನ ಕನಸು ಕಾಣುವ ಹಕ್ಕು ಮಾತ್ರ ಪ್ರಾಣಿಗಳಿಗೆ ಇರದದ್ದು,
ನಾವು ಕನಸು ಕಾಣುತ್ತೇವೆ ಆದರೆ ಎಂತಹಾ ವೈಪರೀತ್ಯ ನೋಡಿ .
ಪ್ರಾಣಿ ಪಕ್ಷಿಗಳ ಜೀವನದಲ್ಲಿ ಮಕ್ಕಳು ಮರಿಗಳ ಜವಾಬ್ದಾರಿ ಅವುಗಳನ್ನು ಬೆಳೆಸಿ ತನ್ನ ಅನ್ನ ಹುಡುಕಿಕೊಡುವ ವರೆಗೆ ಮಾತ್ರ ಸೀಮಿತ.
ಆದರೆ ನಮ್ಮಲ್ಲಿ....
ಮನುಷ್ಯ ಯಾಕೆ ಇಷ್ಟೊಂದು ಸ್ವಾರ್ಥಿಯಾಗುತ್ತಾನೆ.
ತನ್ನ ಹೆತ್ತವರನ್ನೇ ಕೊಲ್ಲುವಷ್ಟು.?
ಇದು ಬರೀ ಆಸೆಯಾ..?

No comments:

Post a Comment