Friday, May 15, 2015

ನಮ್ಮ ವ್ಯವಸ್ಥೆ!!





ಒಂದು ದನ ಕಾಡನ್ನು ಬಿಟ್ಟು ಏದುಸಿರು ಬಿಡುತ್ತಾ ಓಡುತ್ತಿತ್ತು.
ದಾರಿಯಲ್ಲಿ ಅದನ್ನು ನೋಡಿದ ಒಂದು ಆನೆ ಅದನ್ನು ನಿಲ್ಲಿಸಿ ದನ ಓಡುತ್ತಿರುವ ಕಾರಣವೇನೆಂದು ಕೇಳಿತು.
ಅದಕ್ಕೆ ದನ ಹೇಳಿತು:
ನಿನಗೆ ತಿಳಿಯದೇ ಹೊಸ ಕಾನೂನು ?, ನಮ್ಮ ಸರಕಾರ ಕಾಡಿನ ಎಲ್ಲಾ ಎಮ್ಮೆಗಳನ್ನು ಹಿಡಿದು ಜೈಲಿನೊಳಕ್ಕೆ ತಳ್ಳಲು ವಾರಂಟ್ ಹೊರಡಿಸಿದೆ.
ಆನೆ ನಕ್ಕು ಕೇಳಿತು:
ಸರಕಾರ ಹಿಡಿಯಲು ಹೇಳಿದ್ದು ಎಮ್ಮೆಗಳನ್ನು ತಾನೇ,, ನೀನಂತೂ ದನ , ಯಾಕೆ ಹೆದರಿ ಓಡುತ್ತಿದ್ದೀಯಾ..?
ಅದಕ್ಕೆ ದನ ಹೇಳಿತು
ಹೌದು ನಾನು ದನ ಅಂತ ನಿನಗೆ ಗೊತ್ತಿದೆ, ಆದರೆ ಆ ಹಿಡಿಯಲು ಬರುತ್ತಿರುವರನ್ನು ನಂಬುವ ಹಾಗಿಲ್ಲ,
ಒಮ್ಮೆ ನನ್ನನ್ನು ಹಿಡಿದರೆಂದರೆ ನಾನು ಎಮ್ಮೆ ಅಲ್ಲ ದನ ಅಂತ ಸಾಬೀತು ಪಡಿಸಲು ಇಪ್ಪತ್ತು ವರ್ಷವೇ ಬೇಕಾದಿತು

ಅದಕ್ಕೇ ಓಡುತ್ತಿದ್ದೇನೆ..ಎಂದಿತು.








ಇದನ್ನು ಕೇಳಿದ ಆನೆ ತಾನೂ ದನದ ಜತೆ ಓಡಲು ಆರಂಭಿಸಿತ್ತು
----------------------
## ವಾಟ್ಸಾಪ್ ಅಚ್ಚು



Thursday, May 7, 2015

ಮಾಕಾಡಿ ರಾಮನ ಹಂದಿ ಬೇಟೆ




ಏಯ್ ಪುಳಿಚಾರ್ ಮೇಲೆ ಬರಬೇಡ ಮುಳ್ಳೂ ಜಾಸ್ತಿ ಇವೆ, ಅಲ್ಲದೇ ನಿಂಗೆ ಮರ ಹತ್ತಲು ಬರಲ್ಲವಲ್ಲ..”  ಶೀನ ಮೇಲಿಂದ ಕೂಗಿ ಹೇಳಿದ.

ಅವನ ಮರದ ಮೂರು ನಾಲ್ಕು ಕೊಂಬೆಯ ಮೇಲಿದ್ದ.

ಅವನ ಮಾತು ಕೇಳಿ ನನಗೆ ಎಲ್ಲ್ಲಿಲ್ಲದ ಸಿಟ್ಟು ಬಂತು.

ಯಾಕೆ ಹತ್ತಲಾಗುವುದಿಲ್ಲ..? ನೀನೊಬ್ಬನೇ ಏನು. ಮಹಾ… ?

ಮತ್ತೆ ಮೊದಲು ಈಜು ಕಲಿತ ಹಾಗಾಗಬಾರದಲ್ಲ…!!

ಮರ ಹತ್ತ ಬೇಕೆಂಬ ನನ್ನ ಆಸೆಯೂ ಜರ್ರನೆ ಕೆಳಗಿಳಿದು ಬಿಟ್ಟಿತು. ಕಾರಣ ಚಾಂಪಿ ಮರದಲ್ಲಿನ ಮುಳ್ಳು ಮಾತ್ರವಲ್ಲ.. ಈ ಹಿಂದೆ ಇಂತದ್ದೇ ಪಯಣದಲ್ಲಿ ಈಜು ಕಲಿಸಿ ಕೊಡುವೆನೆಂದು ನನ್ನನ್ನು ಹೊಳೆಯಲ್ಲಿ ಮುಳುಗಿಸಿ ನೀರು ಕುಡಿಸಿ ಇನ್ನೇನು ಪರಲೋಕಕ್ಕೆ ಕಳುಹಿಸಿಯೇ ಬಿಟ್ಟಿದ್ದ ಮಹಾಶಯ. ಆ ದಿನ ಅವನಣ್ಣ ಪಿಣಿಯ ಬಾರದೇ ಹೋಗಿದ್ದಲ್ಲಿ ಈ ಕಥೆ ನಿಮಗೆ ತಿಳಿಯುತ್ತಿರಲಿಲ್ಲ.

ಚಾಂಪಿ ಹಣ್ಣಿನ ಬಣ್ಣವೂ ಅದರ ರುಚಿಯ ಹಾಗೇ ಬಲು ಗಾಢ…ಕೆಂಪು. ಮರದ ಹಣ್ಣುಗಳೇನೋ ನನ್ನನ್ನು ಆಕರ್ಷಿಸಿದ್ದವು. ಆದರೆ ಅವನ ಹಾಗೆ ಮರ ಹತ್ತಲು ಹೆದರಿಕೆ ಕಾರಣ ಮರದಲ್ಲಿದ್ದ ಮುಳ್ಳುಗಳು . ಹಣ್ಣುಗಳಿಂದ ತುಂಬಿದ ಚಿಕ್ಕ ಚಿಕ್ಕ ಗೆಲ್ಲುಗಳನ್ನು ಆಯ್ದು ತುಂಡು ಮಾಡಿ ಕೆಳಕ್ಕೆ ಬೀಳಿಸಿದ.

ಆಗಲೇ ಪಕ್ಕದಲ್ಲೇನೋ ಸದ್ದಾಯ್ತು.

ನಾವಿಬ್ಬರೂ ರಕ್ಷಿತ ಅಭಯಾರಣ್ಯದಲ್ಲಿದ್ದೆವು. ದೊಡ್ಡ ದೊಡ್ಡ ಕಿರು ಬೋಗಿ ಹಿರೇ ಭೋಗಿ ಧೂಪ ದೇವದಾರು ಮರಗಳು, ಅವುಗಳ ಅಗಾಧ ಹರವಿನಿಂದ ಕೆಳಗಿಳಿದ ಬಳ್ಳಿಗಳು, ಬುಡಗಳಲ್ಲಿ ಚಿಕ್ಕ ದೊಡ್ಡ ಹಸಿರು ಗಿಡ ಪೊದೆಗಳಿಂದ ಆವ್ರತವಾಗಿದ್ದು ಸೂರ್ಯನ ಬಿಸಿಲೂ ಕೋಲಿನಂತೆ ಮಾತ್ರ ಒಳ ಬರುವ ಹಾಗಿತ್ತು. ನಡೆಯುವಷ್ಟು ದಾರಿ ಮಾತ್ರ ಬಿಟ್ಟು ಮತ್ತೆಲ್ಲಾ ಹಸಿರಿನಿಂದಾವ್ರತ. ಶೀನನಿಗೆ ಎಲ್ಲವೂ ಕರತಲಾಮಲಕ.

ಕಾಡು ಪ್ರಾಣಿಯಾದರೆ…? ಎಂಬ ಹೆದರಿಕೆ ಆಕ್ಷಣದಲ್ಲಿ ಮೈ ಮನ ಆವರಿಸಿಕೊಂಡಿತು.

ಯಾ..ವುದೋ ಶಬ್ದ ಬರುತ್ತಿದೆ.. ಶೀನನಿಗೆಂದೆ..

ನಾನು ತೋರಿಸಿದ ಕಡೆ ನೋಡಿದ ಶೀನ….

ಹೌದು ಹಂದಿ ಇದ್ದ ಹಾಗೆ ಇದೆ…

ಆತ ನಕ್ಕ ಹಾಗೆ ಕಂಡಿತು…

ಕಾಡು ಹಂದಿಗಳ ಕೋರೆ ಹಲ್ಲುಗಳು ತುಂಬಾನೇ ಅಪಾಯಕಾರಿ ಅಂತ ಓದಿದ್ದೆ…

ಏನೋ ಮಾಡೋದು..?
Wild pig
ನೀನೇನೂ ಮಾಡೋದು ಬೇಡ, ಅದೇನಿದ್ದರೂ ಅದೇ ಮಾಡಿ ಮುಗಿಸುತ್ತೆ…ಬಿಡು ಇನ್ನಷ್ಟು ಹೆದರಿಸಿ ತನ್ನ ಮಾತು ಮುಂದುವರಿಸಿದ.. ಅದು ಪಕ್ಕನೆ ಅಡ್ಡಕ್ಕೆ ತಿರುಗಲಾರದು ಬಿಡು…ಅದರ ಬೆನ್ನು ಮೂಳೆಯೇ ಹಾಗಿದೆ. ಅದು ನಿನ್ನ ನೇರಕ್ಕೆ ಬರುತ್ತದೆ ಅಂತ ನಿನಗನ್ನಿಸಿದರೆ ಪಕ್ಕದ ಪೊದೆಯಲ್ಲಿ ಅಡಗಿಕೋ.

ಆತ ತಮಾಷೆ ಮಾಡಿದನೆಂದು ಆ ಕ್ಷಣ ಅನ್ನಿಸಲಿಲ್ಲ. ಅದಕ್ಕೇ ಪಕ್ಕಕ್ಕೆ ಓಡಿದೆ ನನ್ನೆದೆ ಬಡಿತ ನಿಂತಿರಲಿಲ್ಲ.

ನಿಜ ಅವನೆಂದದ್ದು. ಬೆಳೆದ ಕಾಡು ಹಂದಿಯದು, ಅದರ ಮುಖವೇ ವಿಕಾರವಾಗಿತ್ತು ಕೆಳದವಡೆ ಒಡೆದು ರಕ್ತ ಒಸರುತ್ತಿದ್ದ ಬಾಯಿ, ದೊಡ್ಡ ದೊಡ್ದ ಕೋರೆ ಹಲ್ಲುಗಳು ಒಟ್ಟಾರೆಯಾಗಿ ನೋಡಲು ಭಯ ಹುಟ್ಟಿಸುವಂತಿತ್ತು. ಬಂದ ನೇರಕ್ಕೇ ಓಡಿತದು. ಇಂತಹ ದಟ್ಟ ಕಾಡಿನಲ್ಲಿ ದಾರಿ ಅನ್ನೋದು ನಮಗೆ ಮಾತ್ರ, ಕಾಡು ಪ್ರಾಣಿಗಳಿಗಲ್ಲ. ಈಚೆಗೆ ಬಂದೆ.

ಯಾಕೋ ಅದರ ಬಾಯಲ್ಲಿ ರಕ್ತ ಕಣೋ..

ನನ್ನ ಎದೆ ಬಡಿತ ಇನ್ನೂ ನಿಂತಿರಲಿಲ್ಲ.

ಅದು ಕಂಬಳ ಗದ್ದೆಯ ಮನೆಯವರು ಇಟ್ಟ ಸಿಡಿ ಮದ್ದು.

ಪಾಪ….. ಯಾಕೆ..?

ಯಾಕೆಂದರೆ ಮಾಕಾಡಿ ನೀರೊಣಮಕ್ಕಿ ಕಂಬಳಗದ್ದೆ ಎಲ್ಲಾ ಕಡೆಯ ಕಬ್ಬು ಗೆಣಸು ಆಲೂ ಗಡ್ಡೆ, ಬತ್ತ ಎಲ್ಲವನ್ನೂ ಇಂತಹಾ ಕಾಡು ಪ್ರಾಣಿಗಳು ಹಾಳು ಮಾಡಿದರೆ ಇನ್ನೇನು ಮಾಡುತ್ತಾರೆ ಪಾಪ.. ಕಂಬಳಗದ್ದೆ ನಾಣಿ ಹೇಳುತ್ತಿದ್ದ ಮದ್ದಿಟ್ಟಿದ್ದಾರೆ ಅಂತ.

ಯಾಕೋ ಹಂದಿ ಪಾಪದ ಪ್ರಾಣಿ ಅನ್ನಿಸಿತು. ಆಹಾರ ಹುಡುಕಿ ಕೊಳೋದು ಅದರ ಧರ್ಮ..

ಅಲ್ಲಾ ಅದು ನಮ್ಮ ಗದ್ದೆಯ ಕಡೆ ಓಡಿತಲ್ಲಾ..?

ಹೌದು ಈ ಸಾರಿ ಅದು ನಮ್ಮ ಬೇಟೆ ಹಾಗಾದರೆ…

ಶೀನ ಹೇಳಿದ್ದು ನನಗೆ ಸರಿಯಾಗಿ ಅರ್ಥ ಆಗಲಿಲ್ಲ…..

ಈಗ ಮತ್ತೊಮ್ಮೆ ಸದ್ದಾಯ್ತು…

ಮುಳ್ಳಿನಿಂದಾವ್ರತವಾದ ಆ ಚಾಂಪಿ ಮರವನ್ನು ಏರಬೇಕೋ ಅಥವಾ ಎಲ್ಲಿಯಾದರೂ ಓಡಿ ಹೋಗಬೇಕೋ ಅಂತ ಯೋಚಿಸುವಷ್ಟರಲ್ಲಿ ಸದ್ದು ನನ್ನೆಡೆಗೇ ಬರುತ್ತಿದ್ದುದು ತಿಳಿಯಿತು.
ಅದರ ಜತೆಯಲ್ಲೇ ದಡದಡ ಓಡಿ ಬರುತ್ತಿದ್ದ ಒಂದು ಕಡಸು ( ದನ) ಅದರ ಹಿಂದೆ ಕೋಲು ಹಿಡಿದು ಓಡಿಸುತ್ತಿದ್ದ ಮುತ್ತನೂ ಕಂಡು ಬಂದರು.

ಆ ಕಡೆಯೇ ನೋಡುತ್ತಿದ್ದ ಶೀನ ದೊಪ್ಪನೆ ಮರದಿಂದ ಕೆಳಗೆ ಬಿದ್ದ ಅದೂ ಓಡುತ್ತಾ ಬರುತ್ತಿದ್ದ ದನದ ಇದಿರು. ದನ ಒಮ್ಮೆಗೇ ಗಾಬರಿಗೊಂಡು ತನ್ನ ವೇಗಕ್ಕೆ ಬ್ರೇಕ್ ಹಾಕಿ ತಾನು ಬಂದ ದಾರಿಯಲ್ಲೇ ತಿರುಗಿ ಓಟಕಿತ್ತಿತು. ಪಕ್ಕದ ಪೊದೆಯಿಂದ ಒಂದು ಮೊಲ ಟಣ್ಣನೆ ಜಿಗಿದು ಟುಣು ಟುಣು ಓಡಿತು.

ಮುತ್ತ ಕೂಗಿ ಹೇಳಿದ ಹಿಡ್ಕೋ ಅದನ್ನ…

ಆಗಲ್ಲ ಬಿಡು ಮೊಲನ ಹಿಡಿಯಬೇಕಾದರೆ ಇಳಿಜಾರಿನಲ್ಲೇ ಓಡಿಸಬೇಕು.. ಅದರ ಮುಂಗಾಲುಗಳು ಹಿಂಗಾಲುಗಳಿಗಿಂತ ಚಿಕ್ಕವು. ಬಿದ್ದಲ್ಲಿಂದ ಎದ್ದ ಶೀನ ಪಿಣಿಯಣ್ಣ ಮತ್ತು ರಾಮಣ್ಣ ಮಾತಾಡಿಕೊಳ್ಳುತ್ತಿದ್ದರು. ಆ ಹಂದಿಯನ್ನು ಹೊಡೆಯದೇ ಉಳೀಗಾಲ ಇಲ್ಲ ಅಂತ… ಅಂದರೆ ಮಾಕಾಡಿಯ ಕಡೆಯಿಂದ ಅವರೆಲ್ಲಾ ನಮ್ಮ ಕಡೆ ಓಡಿಸಿದ್ದಾರೆ ಅಂತ ಅರ್ಥ.

ಹ್ಯಾಗೋ ಆ ಗಡವ ಹಂದಿಯನ್ನು ಹೊಡೆಯೋದು..?

ಅದೇ ಕೋವಿ ತಕಂಡು ಅದನ್ನ ಹೊಡೆಯೋದು….!”

ಆತ ತೀರಾ ಸಾಧಾರಣವೆಂಬಂತೆ ಹೇಳಿದ್ದ.

ಪ್ರಾಣಿ ಹಿಂಸೆ ಮಹಾ ಪಾಪ ಅಲ್ಲವಾ..? ನಾನು ಸಸ್ಯಾಹಾರಿಯಾದುದರಿಂದ ಹಾಗೆಂದೆ.

ಪುಸ್ತಕದ ಬದನೆಕಾಯಿ, ಕೊಂದ್ ಪಾಪ ತಿಂದ್ ಪರಿಹಾರ ಎಂದು ಹೇಳಿ ನಕ್ಕ ಶೀನ.

ಅಂದರೆ..?

ಕಾಡು ಹಂದಿ ಮಾಂಸ ಎಂತ ರುಚಿ ಗೊತ್ತಾ ನಿಂಗೆ . ಕೇಳಿದನಾತ.

ಮತ್ತೆ ಹೇಗೆ ಕೊಲ್ತಾರೆ..?

ಕೋವಿಯಲ್ಲಿ

ಅದೆಲ್ಲಿದೆ..?

ನಿಮ್ಮ ಮನೆಯಲ್ಲೇ ಇದೆಯಲ್ಲಾ ಅಷ್ಟೂ ಗೊತ್ತಿಲ್ವಾ ಅನ್ನುವ ಹಾಗೆ ಮುಖ ಮಾಡಿದ್ದ.

ನೆನಪಾಯ್ತು.

ಹೌದು, ನಮ್ಮ ಮನೆಯಲ್ಲೊಂದು ನಾಡ ಕೋವಿಯಿತ್ತು ಆಗ.

Gun
ಸುತ್ತ ಮುತ್ತಲೂ ಕಾಡೇ ಕಾಡಾದುದರಿಂದ ಆಗಾಗ್ಗೆ ಅಲ್ಲಿಂದ ಕಾಡು ಪ್ರಾಣಿಗಳು ಗದ್ದೆಯಲ್ಲಿ ಬಂದು ಧಾಳಿ ಇಡೋದು ಮಾಮೂಲು ಕೂಡಾ, ಅವುಗಳಲ್ಲಿ ಹಂದಿ, ದೊಡ್ಡ ಗಡವ ಮಂಗ ( ನಾವೆಲ್ಲಾ ಅವಕ್ಕೆ ಬುಕ್ಕಎನ್ನುತ್ತಿದ್ದೆವು) ಮೊಲ ಜಿಂಕೆ ನವಿಲು ಕಿರುಬ, ತೋಳ, ನರಿ ಹೀಗೆ. ಕಾಡಿಗೇ ಹೋಗಿ ಬೇಟೆಯಾಡುವ ಸಂಪ್ರದಾಯ ಇಲ್ಲದಿದ್ದರೂ ನಮ್ಮ ಬೆಳೆಗಳಿಗೆ ಹಾನಿಯಾಗುವದನ್ನು ತಪ್ಪಿಸಲು. ಆ ಕೋವಿಯನ್ನು ಉಪಯೋಗಿಸುತ್ತಿದ್ದರು.

ಯಾರು ಬೇಟೆಯಾಡ್ತಾರೆ..?

ನಮ್ಮ ಮಾಕಾಡಿ ರಾಮಣ್ಣ….

ಆಗಲೇ ಒಂದು ಶಬ್ದ ಕೇಳಿಸಿತು

ಕೂಊಊಊಊಊಊಊಊಊಊಊಊಊಊಊ,

ಇನ್ನು ಮನೆಗೆ ಹೊರಡೋಣ ನಡಿ, ಕೆಲಸ ಬೇಕಾದಷ್ಟಿದೆ ಎಂದ ಶೀನ.

#########


ಇಷ್ಟರಲ್ಲೇ ನಿಮಗೆ ಬಾಲ್ಯದ ವಿಷಯ ಹೇಳುತ್ತಿದ್ದೇನೆ ಅಂತ ಅರ್ಥವಾಗಿರಬೇಕು. ಹಳ್ಳಿಯಲ್ಲಿ ಬೇಸಗೆ ರಜ ಮಕ್ಕಳಿಗೆ ಅಪ್ಯಾಯಮಾನ.
ನಾವಿದ್ದ ಚೌತಿಪಾಲು ಬೆಟ್ಟು ಅನ್ನೋದು ಸುಮಾರು ಹತ್ತು ಹದಿನೈದು ಊರುಗಳಿಂದ ಸುತ್ತುವರಿದ ಬೆಳ್ಳಾಲ ಗ್ರಾಮದ ಒಂದು ಭಾಗ. ಇಲ್ಲಿ ನೀರಾವರಿ ಇಲ್ಲದೇ ಇದ್ದುದರಿಂದ ಮಳೆ ನೀರಿನ ಮೇಲೇ ಕೃಷಿ ಎಲ್ಲಾ ಅವಲಂಬನ, ಬರೇ ಕಬ್ಬು, ಬತ್ತ ಮುಖ್ಯ ಬೆಳೆಯಾಗಿ ಬೆಳೆಸುತ್ತಾ ಮಧ್ಯೆ ದ್ವಿದಳ ಧಾನ್ಯಗಳನ್ನೂ ತರಕಾರಿಗಳನ್ನೂ ಬೆಳೆಯುವರು. ನಮ್ಮ ಮನೆ ಇರೋದು ಬೆಟ್ಟು ಅಂದೆನಲ್ಲ, ಮನೆಯ ಹಿಂದಿನ ಭಾಗವೆಲ್ಲಾ ಗುಡ್ಡವಾಗುತ್ತಾ ಹೋಗಿ ಮುಂದುವರಿಯುತ್ತದೆ. ಆದರೆ ಇದಿರು ಭಾಗ ಇಳಿಜಾರಾಗಿ ಬಯಲಾಗುತ್ತಾ ಸಾಗಿ ಗುಡ್ಡ ಹಾಗೂ ಬಯಲಿನ ಕಾಂಬಿನೇಶನ್ ನಲ್ಲೇ ಹರಡಿಕೊಂಡು ಮನೆಯಿಂದ ನಮ್ಮ ಶಾಲೆಗಿರೋ ನಾಲ್ಕು ಮೈಲನ್ನು ಆವರಿಸಿರುತ್ತದೆ. ನಮ್ಮ ಪ್ರಪಂಚ ಆಗ ಇಷ್ಟೇ. ಬಯಲಾಗುತ್ತಾ ಹೋದ ಜಾಗವು ಮುಂದೆ ಕೆರೆ, ತೋಡು ಹಾಗೂ ಮುಂಗಳಿಕೆಯ ನೀರಿನಿಂದಾಗಿ ಎರಡು ಬೆಳೆಗೆ ಮುಂದುವರಿದಿದೆ.

ಹಳ್ಳಿ ಜನರ ಒಗ್ಗಟ್ಟು ಸ್ವಾವಲಂಬನೆಯ ದಾರಿಯಲ್ಲಿ ಮಹತ್ವದ್ದು. ಅಲ್ಲಿನ ಜೀವನ ಶೈಲಿಯೇ ಹಾಗೆ ಪರಸ್ಪರ ಅವಲಂಬನೆ ಮತ್ತು ಸಹ ಜೀವನ ಪ್ರಕೃತಿದತ್ತ .

ಪಿಣಿಯ ನಮ್ಮ ಮನೆಯ ಹೆಂಗಸು ಮಕ್ಕಳೆಲ್ಲರನ್ನೂ ಅಪಾಯ ರಹಿತ ಆಯಕಟ್ಟಿನ ಜಾಗವೊಂದನ್ನು ಆಯ್ಕೆ ಮಾಡಿ ನಿಲ್ಲಿಸಿದ್ದ.

ಎಲ್ಲರೂ ಉಸಿರು ಬಿಗಿ ಹಿಡಿದು ನಿಂತಿದ್ದೆವು. ನನ್ನ ಅಕ್ಕ ನನ್ನ ಕಿವಿಯಲ್ಲಿ ಉಸಿರಿದಳು, ಗೋಪೂ ಹಂದಿ ತಿರುಗಿ ನಮ್ಮ ಮೇಲೇ ಬಂದರೆ..?

ತಕ್ಷಣ ಒಂದು ಅಕಾಸ್ಮಾತ್ ಮಿಂಚಿದ ಭಯ ನಮ್ಮೆಲ್ಲರಲ್ಲಿ ಹರಡಿಕೊಂಡಿತು. ಆಗ ಸೀನ ಹೇಳಿದ್ದ ಮಾತು ನೆನಪಿಗೆ ಬಂತು. ನಾವಿದ್ದದ್ದು ಕೆಳಗಿನ ಗದ್ದೆಯಲ್ಲಿ, ಹಂದಿ ಕಂಡಿದ್ದು ಮೇಲಿನ ತೋಡಿನಲ್ಲಿ. ಅದು ಓಡಿದರೆ ಸೀದಾ ತೋಡಿನಲ್ಲಿ ( ತೊರೆ) ಮುಂದಕ್ಕೆ ಓಡಬೇಕೇ ಹೊರತೂ ಹಿಂದಕ್ಕಲ್ಲ. ಅಲ್ಲದೇ ಮುಂದೆ ಹೋದಾಗಲೆಲ್ಲ ತೊರೆಯ ಆಳ ಕಡಿಮೆಯಾಗುತ್ತಾ, ಸುತ್ತಲಿನ ವಾತಾವರಣವೇ ನಿಧಾನವಾಗಿ ಗುಡ್ಡವಾಗುತ್ತಾ ಹೋಗುತ್ತದೆ. ಮಾಕಾಡಿ ರಾಮ ದೂರದಲ್ಲಿನ ಒಂದು ಕಾಸರಕನ ಮರದ ಮೊದಲಿನ ರೆಂಬೆಯ ಮೇಲೇ ಅಟ್ಟ ಮಾಡಿಕೊಂಡು ನಮ್ಮ ಕೋವಿ ಹಿಡಿದು ಕಾಯುತ್ತಿದ್ದ. ಅದು ಆತನ ಕಣ್ಣಿಗೆ ಕಂಡರೆ ಆತ ಕೊಲ್ಲದೇ ಬಿಡಲಾರ. ಹಾಗಾಗಲ್ಲ ಬಿಡು ಶೀನನೆಂದ ಮಾತು ಅವಳಿಗೆ ತಿಳಿಸಿದೆ.
ಆಗಲೇ ನಮ್ಮ ಎಡ ಗಡೆಯಿಂದ ಸದ್ದು ಕೇಳಿಸಿತು . ಮುತ್ತ ಶೀನ ಪಿಣಿಯರ ಗುಂಪು ನಗಾರಿ, ಡಬ್ಬಿ ಬಡಿಯುತ್ತಾ, ಕೂಗಿಕೊಂಡು ಗಲಾಟೆ ಮಾಡುತ್ತಾ ಬರುತ್ತಿದ್ದ ಶಬ್ದವದು. ದನಿಯೂ ಜೋರಾದಂತೆಲ್ಲಾ ನಿಧಾನ ನಿಧಾನವಾಗಿ ಅವರೆಲ್ಲರ ಅಸ್ಪಷ್ಟ ರೂಪವೂ ಸ್ಪಷ್ಟವಾಗತೊಡಗಿತು. ಅಟ್ಟಿಸಿಕೊಂಡು ಬರುತ್ತಿದ್ದ ಗುಂಪಿನ ಮತ್ತು ಹಂದಿಯ ಶಬ್ದ ನಮಗೆ ಸ್ಪಷ್ಟವಾಗಿ ಗೋಚರಿಸುವಷ್ಟು ಮತ್ತು ಕೇಳಿಸುವಷ್ಟು. ಜತೆಯಲ್ಲೇ ನಾಲ್ಕಾರು ನಾಯಿಗಳು ಕೂಡಾ, ಅದರಲ್ಲೊಂದು ನಮ್ಮದೇ ನಾಯಿ ಕೂರ. ಈಗ ನಮಗೆ ಅವರೆಲ್ಲರಿಗಿಂದ ಮುಂದೆ ಮುಂದೆ ಓಡಿ ಬರುತ್ತಿದ್ದ ಕಪ್ಪು ಬಣ್ಣದ ಸೂಕರ ಕಂಡಿತು. ಅದರ ಮುಖವೆಲ್ಲಾ ರಕ್ತ ಸಿಕ್ತವಾಗಿತ್ತು. ನೆನಪಿಗೆ ಬಂತು ನೀರ್ಮಕ್ಕಿಯಲ್ಲಿ ಕಬ್ಬಿನ ಗದ್ದೆಯಲ್ಲಿಟ್ಟಿದ್ದ ಗರ್ನಾಲು ಪಾಪ ಅದರ ತಿನ್ನುವ ಆಸೆಯನ್ನೇ ಒಡೆದು ಚಿಂದಿ ಮಾಡಿತ್ತು. ಆ ಕಾಡತೂಸು ತುಂಬಿದ ತಿಂಡಿಯನ್ನು ಜಗಿದರೆ… ಮತ್ತೇನಾದೀತು.
ಆಗಲೇ ಢಮ್ ಅಂತ ಮೊದಲ ಶಬ್ದ ಕೇಳಿಸಿತು. ಅದು ಹಂದಿಯ ಮೈಯ್ಯನ್ನು ಹೊಕ್ಕಿದ್ದರೂ ಪ್ರಾಯಶಃ ಹೆದರಿ ನಾಗಾಲೋಟದಲ್ಲಿ ಓಡಿ ಬರುತ್ತಿದ್ದ ಹಂದಿಯ ಮೈಯ್ಯ ಕಸುವು ಅದನ್ನು ನಿಲ್ಲಗೊಡಲಿಲ್ಲ. ಪ್ರಾಣದ ಮೇಲಿನ ಆಸೆ… ಜತೆಯಲ್ಲೇ ಇನ್ನೊಂದು ಗುಂಡಿನ ಮೊರೆತ. ಸ್ವಲ್ಪ ದೂರ ಹಾಗೇಯೇ ಅದೇ ನೇರದಲ್ಲಿ ಓಡಿದ ಹಂದಿ ದೊಪ್ಪನೆ ಕೆಳಗೆ ಬಿತ್ತು. ಹೊರಳಾಡುತ್ತಿದ್ದ ಅದು ಸ್ವಲ್ಪ ಹೊತ್ತಿನಲ್ಲೇ ನಿಶ್ಟೇಚಿತವಾಯ್ತು.
ಅದು ಪೂರ್ತಿಯಾಗಿ ಸತ್ತಿತೆಂದು ಖಚಿತವಾದ ಮೇಲೇಯೇ ರಾಮ ಮರದ ಮೇಲಿನಿಂದ ಕೆಳಗಿಳಿದ, ಆದರೂ ಅವನ ಕೈಯ್ಯ ಕೋವಿ ಸಿದ್ಧವಾಗಿಯೇ ಇತ್ತು ಮತ್ತೆ ಬೇಕಿದ್ದಲ್ಲಿ ಗುಂಡು ಹೊಡೆಯಲು. ಆತ ಒಳ್ಳೆಯ ಹೆಸರಾಂತ ಗುರಿಕಾರ.
wild pig hunting
ಮುಂದಿನ ಕ್ಷಣದಲ್ಲಿ ಅಲ್ಲೊಂದು ಜನ ಸಾಗರವೇ ನೆರೆಯಿತು. ಒಂದು ಅಗಲದ ಕೊಂಬೆಯನ್ನು ಕತ್ತರಿಸಿ ಹಂದಿಯನ್ನು ಅದರ ಮೇಲೆ ಇಟ್ಟು ಕಟ್ಟಿ ಎಲ್ಲರೂ ಎಳೆಯುತ್ತಾ ಕಂಬಳಗದ್ದೆಯ ಬಳಿಯ ವಿಶಾಲ ಆಲದ ಮರದ ಬಳಿ ಕೊಂಡು ಹೋದರು. ಎಲ್ಲರಿಗೂ ಸಮಪಾಲು ಹಂಚಲು.
ಅಲ್ಲಿಗೆ ಈಗ ಮಕ್ಕಳಿಗೆ ಹೋಗಲು ಸಾಧ್ಯವಿಲ್ಲ ಔಟ್ ಆಫ್ ಬಾಂಡ್…
ಮಾರನೆಯ ದಿನ ಶೀನ ಖುಷೀಯಲ್ಲಿ ಹೇಳಿದ್ದ, ನಮ್ಮ “ಕೋವಿ”ಯ ಪಾಲಿನ ಹಂದಿಯ ಮಾಂಸವನ್ನೂ ಅವನ ಮನೆಯವರೆಲ್ಲರೂ ಸೇರಿ ಚಪ್ಪರಿಸಿದ್ದರಂತೆ.

ಎಂತ ರುಚಿ ಗೊತ್ತಾ..?

ನಾನು ಸುಮ್ಮನೇ ನಕ್ಕೆ ಯಾಕೋ ಬೇಸರವೆನಿಸಿತ್ತು.


 ಚಿತ್ರಗಳು : ಸುರಹೊನ್ನೆ ಕೃಪೆ  www.surahonne.com

Thursday, April 30, 2015

ಮರೆವಿನ ನೆನಪು



ತೊಂಬತ್ತು ವರುಷದ ಹಳೆ ದಂಪತಿಗಳು ಒಬ್ಬ ವೈದ್ಯರಲ್ಲಿ ಬಂದರು ತಮ್ಮ ಮರೆಗುಳಿತನದ ಬಗ್ಗೆ ಪ್ರಸ್ತಾಪಿಸಿ.
ವೈದ್ಯರು ಅವರನ್ನು ಪರಿಶೀಲಿಸಿ ಏನಾದರು ಸಮಸ್ಯೆಗಳಿದ್ದರೆ ತಿಳಿಸಲಿ ಎಂದು.
ವೈದ್ಯರು ಅವರನ್ನು ಪರಿಶೀಲಿಸಿ ಅವರ ಆರೋಗ್ಯ ಸರಿಯಾಗಿಯೇ ಇದೆಯೆಂದು ಹೇಳುತ್ತಾ ಅವರಿಗೆ ವಿಷಯಗಳನ್ನು
ಒಂದು ಕಾಗದದಲ್ಲಿ ಬರೆದಿಟ್ಟುಕೊಳ್ಳಲು ಹೇಳುತ್ತ, ಅವರ ಮರೆವನ್ನು ಕಡಿಮೆ ಮಾಡಲು ಅದು ಸಹಕಾರಿಯಾದೀತೆಂದೂ ಹೇಳಿದರು.

ಆ ದಿನ ರಾತ್ರೆ ದಂಪತಿಗಳು ಟೀವಿ ನೋಡುತ್ತಿದ್ದರು. ಪತಿ ತನ್ನ ಸ್ಥಳದಿಂದೆದ್ದಾಗ
ಪತ್ನಿ ಕೇಳಿದಳು" ಎಲ್ಲಿಗೆ ಹೋಗುತ್ತಿದ್ದೀಯಾ?
ಪತಿ: "ಅಡುಗೆ ಮನೆಗೆ! ನನಗೊಂದು ತಟ್ಟೆ ಬ್ರೆಡ್ ಮತ್ತು ಜಾಮ್ ತರಲು! ನಿನಗೇನಾದರು ತರಬೇಕೇ?"
ಪತ್ನಿ: ನನಗೊಂದು ತಟ್ಟೆ ಮೊಸರು ತಂದು ಕೊಡುತ್ತೀಯಾ?
ಪತಿ: ಸರಿ ಪ್ರಿಯೆ
ಪತ್ನಿ: ಪ್ರಿಯಾ , ನೀನು ಇದನ್ನು ಒಂದು ಕಾಗದದ ಮೇಲೆ ಬರೆದಿಟ್ಟುಕೊಳ್ಳುವುದು ಒಳ್ಳೆಯದಲ್ಲವೇ?
ಪತಿ: ಏನೂ ಅಗತ್ಯವೇ ಇಲ್ಲ ಪ್ರಿಯೆ , ಇದನ್ನಂತೂ ನಾನು ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳುವೆ.
ಪತ್ನಿ: ಪ್ರಿಯಾ ಜತೆಗೆ ಸ್ವಲ್ಪ ಒಣ ಶುಂಠಿ ಹುಡಿಯನ್ನೂ, ಆದರೆ ಇದನ್ನಂತೂ ನೀನು ಬರೆದಿಟ್ಟುಕೋ, ನನಗಂತೂ ಚೆನ್ನಾಗಿ ಗೊತ್ತು, ನೀನು ಮರೆಯುವಿ.
ಪತಿ: ಏನಿಲ್ಲ ಪ್ರಿಯೆ, ನಿನಗೆ ಒಣ ಶುಂಠಿ ಹುಡಿಯನ್ನೂ, ಮತ್ತು ಒಂದು ತಟ್ಟೇ ಮೊಸರನ್ನೂ ನಾನು ತರಬೇಕು ಅಷ್ಟೇ ಅಲ್ಲವಾ? ಇದನ್ಯಾಕೆ ಬರೆದಿಟ್ಟುಕೊಳ್ಳಬೇಕು?
ಪತ್ನಿ: ಅದೆಲ್ಲಾ ಸರಿ, ಜತೆಗೆ ಚ್ಯವನಪ್ರಾಶವನ್ನೂ ತಾ, ಇದನ್ನಾದರೂ ನೀನು ಬರೆದಿಟ್ಟುಕೊಳ್ಳಲೇ ಬೇಕು ನೋಡು.
ಪತಿ ಅಸಹನೆಯಿಂದ ಕನಲಿದ, " ಇಷ್ಟು ವಸ್ತುಗಳನ್ನೂ ನೆನಪಿನಲ್ಲಿಡಲಾರೆ ಎಂದುಕೊಂಡೆಯಲ್ಲ, ನಾನೇನು ಅಷ್ಟೂ ಮರೆಗುಳಿಯಾ?" ಎಂದೆನ್ನುತ್ತಾ ಆತ ಅಡುಗೆ ಮನೆಗೆ ಹೋದ.

೨೦ ನಿಮಿಷದ ನಂತರ ಆತ ಅಡುಗೆ ಮನೆಯಿಂದ ಹೊರ ಬಂದು ಪತ್ನಿಗೆ ಒಂದು ತಟ್ಟೆಯಲ್ಲಿ ಕತ್ತರಿಸಿದ ಹಣ್ಣುಗಳನ್ನು ಕೊಟ್ಟ, ಮತ್ತು ತನಗಾಗಿ ಮಾಡಿಕೊಂಡು ತಂದ ಕಾಫಿ ಕುಡಿಯತೊಡಗಿದ.
ಆ ತಟ್ಟೆಯಲ್ಲಿನ ಹಣ್ಣುಗಳನ್ನು ನೋಡಿ ಆಕೆ ಸ್ವಲ್ಪಹೊತ್ತು ಅದನ್ನೇ ದುರುಗುಟ್ಟಿ ನೋಡುತ್ತಾ ಕೋಪದಿಂದ " ನಿನ್ನನ್ನು ಬರೆದಿಟ್ಟುಕೊಳ್ಳಲು ಹೇಳಿದರೆ ಬೇಡ ಎಂದೆಯಲ್ಲ. ನಾನು ಕೇಳಿದ್ದೇನು, ಈಗ ನೀನು ತಂದದ್ದೇನು?" ಎಂದಳು
ಪತಿ ಆಶ್ಚರ್ಯದಿಂದ ಅವಳತ್ತ ಪ್ರೀತಿಯಿಂದ ಕನಿಕರದಿಂದ ಹೇಳಿದ" ನೀನು ಇದನ್ನೇ ಕೇಳಿದ್ದು, ನೀನು ಮರೆತಿದ್ದೆ ಅಷ್ಟೇ"
ಪತ್ನಿ ಸಿಟ್ಟಿನಿಂದ ಹೇಳಿದಳು " ಮರೆತದ್ದು ನೀನು, ನಾನಲ್ಲ, ನನಗೆ ಈಗಲೂ ಸರಿಯಾಗಿ ನೆನಪಿದೆ, ನಾನು ಕೇಳಿದ್ದು ರೊಟ್ಟಿ ಮತ್ತು ಚಟ್ನಿ"




Monday, April 27, 2015

ತ್ಯಾಂಪನ ಕಾರ್ಡಿನ ಪಜೀತಿ


ತ್ಯಾಂಪ ಭಾರೀ ಖುಷಿಯಲ್ಲಿದ್ದ

ಅದಕ್ಕೆ ಕಾರಣವೂ ಇತ್ತೆನ್ನಿ.

ಅವನೆಣಿಸಿದ ಹಾಗೆಯೇ ಇವತ್ತು ಹೊಸ ಕ್ರೆಡಿಟ್ ಕಾರ್ಡ್ ಸಿಕ್ಕಿತ್ತು
ಫಳ ಫಳ ಹೊಳೆಯುವ ನೀಲಿ ಬಣ್ಣದ ಪ್ಲಾಸ್ಟಿಕ್ ಕಾರ್ಡ್ನಲ್ಲಿ ಅವನ ಹೆಸರು ಉಬ್ಬಿದ ಅಕ್ಷರದಲ್ಲಿ ಕೆತ್ತಲಾಗಿತ್ತು.
ಇನ್ನಂತೂ ಹಣದ ಅವಶ್ಯಕಥೆಯೇ ಇಲ್ಲಾ, ಎಷ್ಟು ಬೇಕಾದರು ಖರ್ಚು ಮಾಡಬಹುದು. ಬರಿ ಮೆಶೀನಿನಲ್ಲಿ ಉಜ್ಜಿದರಾಯ್ತು ಅಷ್ಟೇ!!
ಅದೇ ಖುಷಿಯಲ್ಲಿ ಕೈ ಎತ್ತಿ ಬೀಸಿಕೊಂಡು ಅದೇ .. ಜಿಮ್ಮ್ ನ ಹುಡುಗರ ಶೈಲಿಯಲ್ಲಿ ನಡೆಯುತ್ತಿದ್ದ.
ಇಡೀಪ್ರಪಂಚವೇ ತನ್ನ ಕೈಯಲ್ಲಿರುವ ಖುಷಿಯಲ್ಲಿ.
ದಾರಿಯಲ್ಲೊಂದು ಎಟಿಎಮ್ ಎದುರಾಯ್ತು.
ಹೊರಗೆ ಇಬ್ಬರು ನಿಂತಿದ್ದರು. ಅವನು ಅವರನ್ನು ಗಮನಿಸಲಿಲ್ಲ,
ಹೌದು ಯಾಕೆ ಗಮನಿಸಬೇಕು..??
ಒಳಗಡೆಯೂ ಯಾರೂ ಇರಲಿಲ್ಲ.
ಒಳಬಂದು ತಾನೇ ಬಾಗಿಲು ಹಾಕಿದ. ತಾನೇ ಮುಚ್ಚಿಕೊಳ್ಳಲು ಸಮಯ ಬೇಕಾಗುತ್ತದಲ್ಲ. ಯಾರು ಕಾಯ್ತಾರೆ ಬಿಡಿ.
ಕಾರ್ಡ್ ಸಿಕ್ಕಿಸಬೇಕಾದ ಜಾಗದಲ್ಲಿ ತನ್ನ ಕೈಯ್ಯಲ್ಲಿದ್ದ ಕಾರ್ಡ್ ತೂರಿಸಿದ.
ಆ ಮಶೀನ್ ತನ್ನ ಜನ್ಮದಲ್ಲೇ ಇಂತಹಾ ಕಾರ್ಡ್ ನೋಡಿಲ್ಲವೇನೋ ಎನ್ನುವಂತೆ ಒಳ ಸೆಳೆದುಕೊಂಡಿತು.
ಅದುವರೆವಿಗೂ ಏನೇನೋ ತೋರಗೊಡುತ್ತಿದ್ದ ಯಂತ್ರದ ಪರದೆ ಒಮ್ಮೆಲೇ ಬಣ್ನ ಕಳೆದುಕೊಂಡು ಹಸಿರಾಗಿ ಸ್ತಬ್ದವಾಯ್ತು
ಆಗ ಬೇಕಾದದ್ದೇ ಅಷ್ಟು ಸುಂದರವಾಗಿತ್ತಲ್ಲ ತನ್ನ ಕಾರ್ಡ್..
ತಾನು ಎನೆಲ್ಲಾ ಮಾಡಬೇಗಿತ್ತು ಅನ್ನುವುದನ್ನ ನಾಲ್ಕು ನಾಲ್ಕು ಬಾರಿ ಓದಿಕೊಂಡು ಬಂದಿದ್ದ.
ಆದರೆ ಈ ಖಾಲಿ ಹಸಿರು ಪರದೆ..??
ಕಾದ ಕಾದ.. ಅಕ್ಷರವು ಇಲ್ಲ ಅದರಪ್ಪನ ಗಂಟೂ....
ಸ್ವಲ್ಪ ಹೊಟ್ಟು ನಿಂತಿದ್ದ ಕಿಂಕರ್ತವ್ಯ ಮೂಢನಾಗಿ
ಸಿಕ್ಕಿದ ಗುಂಡಿಯೆಲ್ಲಾ ( ಬಟನ್) ಒತ್ತಿದ.
ಉಹ್ಹು ...ಇಲ್ಲ
ಜನ್ಮ ಜನ್ಮಾಂತರದಿಂದ ಮುನಿಸಿಕೊಂಡವರ ತರಹ ಸುಮ್ಮನೆ ಹಸಿರಾಗಿಯೇ ನಿಂತಿತ್ತು ಯಂತ್ರ.
ತ್ಯಾಂಪಿಯ ಮುನಿಸಿನಂತೆ..??? ಅಲ್ಲಲ್ಲ
ಗೋವಿಂದ..
ನಾನೇ ...ನನ್ನ ಕಾರ್ಡೇ ಬೇಕಾಯ್ತಾ ಮಾರಾಯಾ ಇದಕ್ಕೆ..
ಎಷ್ಟು ದಿನಗಳಿಂದ ಹಪಹಪಿಸಿ ಸಿಕ್ಕಿದ ಕಾರ್ಡಿದು... ಇದನ್ನೂ ನುಂಗಿ ಜೀರ್ಣ ಮಾಡಿಕೊಂಡು ಬಿಡ್ತಲ್ಲಾ ಈ ಯಂತ್ರ..???
ಆಗಲೇ ಒಳಬರುವಾಗ ಅವಗಣಿಸಿದ್ದ ಏನೋ ಬರೆದು ಅಂಟಿಸಿದ್ದ ಹಾಳೆಯ ನೆನಪಾಯ್ತು.
ಓಡಿಹೊರಬಂದು ಸುಮ್ಮನೆ ಓದಿದ
" ಈ ಯಂತ್ರ ಕೆಟ್ಟಿದೆ ದಯವಿಟ್ಟು ನಿಮ್ಮಕಾರ್ಡನ್ನು ಇಲ್ಲಿ ಉಪಯೋಗಿಸದಿರಿ"

ಪಾಪ ತ್ಯಾಂಪ

ನಿನ್ನಮ್ಮನಾಗಿ ನಾ ಮತ್ತೆ ಬರಲೇ




ನನ್ನ ಎದೆಯಾಳದಲಿ ಬಚ್ಚಿಟ್ಟ ಕನಸಿನಲೂ
ಕಂತು ಕಂತಿಗೂ ನಿನ್ನ ನೆನಪಿನೆಳಲೂ

ಎಲ್ಲನೋವನು ತನ್ನ ಮನದಲ್ಲೇ ಬಚ್ಚಿಟ್ಟು
ಹೊರಗೆ ಅರಳುವೆ ನೀನು ಪ್ರೀತಿ ಕೊಟ್ಟು

ಮಧುರ ನಿನ್ನಯ ಲಾಲಿ ನನ್ನ ಕಿವಿಗಳಿಗಿಂಪು
ಮತ್ತೆ ಬಿಸಿಯುಸಿರ ಆ ಪ್ರೀತಿ ಒನಪು

ಇನಿದನಿಯ ಜೋಗುಳದ ಅಕ್ಕರೆಯ ಕುಡಿನೋಟ
ಒಲವಿನಕ್ಕರೆಯ ಆ ತುತ್ತಿನೂಟ

ಬದುಕಿನೋಣಿಯ ತುಂಬ ಒಲುಮೆಯಮ್ರತ ಹರಿಸಿ
ನನ್ನ ಭಾಗ್ಯವ ಬರೆದೆ ಪ್ರೀತಿಯುಣಿಸಿ

ಮನೆಯ ಕಜ್ಜದ ಹೊರೆಯ ಹೊತ್ತೂ ಪ್ರೀತಿಯ ಹೊಸೆದು
ನಮ್ಮ ಬೆಳೆಸಿದೆ ನಿನ್ನ ನೆತ್ತರೆರೆದೂ

ಉಕ್ಕಿತೆನ್ನಯ ಅಕ್ಷಿ ಪಟಲದಾಚೆಯು ನಿತ್ಯ
ಇಳೆಯ ದೇವರು ನೀನೇ ಸತ್ಯ ನಿತ್ಯ

ಕಣ್ಣಾಲದಲ್ಲೆಲ್ಲ ಹರಿಯಿತೊಲುಮೆಯ ಜಲವು
ನಿನ್ನ ತ್ಯಾಗವ ನೆನೆಸಿ ಅಮ್ಮ ನಿಜವೂ

ನಿನ್ನ ಸೇವೆಯ ಋಣವ ನಾ ಹೇಗೆ ತೀರಿಸಲೇ
ನಿನ್ನಮ್ಮನಾಗಿ ನಾ ಮತ್ತೆ ಬರಲೇ

Saturday, April 25, 2015

ಚೈತ್ರದ ಒಲವು






ಚೈತ್ರದುಯ್ಯಾಲೆಯನು ಜೀಕಿ ಅರಸಿತು ಮನವು
ಚಿಗುರಿನೆಲೆಯೆಲೆಯಲ್ಲಿ ಪ್ರೇಮ ಲೀಲೆ

ಹಸಿರುಡುವ ಪ್ರಕೃತಿಯ ನೋಡಿ ದಣಿಯದು ಮನವು
ಪ್ರೇಮದಲರಿನ ಮತ್ತ ಕಂಪಿನಲ್ಲೆ


ಅಲ್ಲಿ ಮರಮರದಲ್ಲಿ ಹೂಗಳೆದೆಯೆಡೆಯಲ್ಲಿ
ಮತ್ತೆ ಬರೆಸೀತು ಆ ಪ್ರೇಮ ಕಾವ್ಯ

ಕೋಗಿಲೆಯ ಪಂಚಮವು ನಿಶೆಯನೇರಿಸುತಿರಲು
ಮಂದ ಅನಲವು ಹರಡಿ ಕಂಪು ಸೂಸೇ


ನೀರ ಜುಳುಜುಳು ರವವು ಜತೆಯ ರಾಗವ ಪಾಡೆ
ಭಾವದುಯ್ಯಾಲೆಯಲಿ ರಾಸಲೀಲೆ

ಕನಸ ಕನ್ಯೆಯ ಸನಿಹ ಮತ್ತು ಎರೆಯಿತು ನಿಶೆಯ
ನನ್ನ ಕನ್ಯೆಯ ಕೆನ್ನೆ ತಂಪು ಕಂಪು


ಹಸಿರು ಸೀರೆಯ ಒಡತಿ ಪ್ರೇಮ ಕಾವ್ಯದ ಕನ್ಯೆ
ಮನವು ಜಾರುವ ನೆಪವು ಬೇರೆ ಬೇಕೇ

ಪ್ರಕೃತಿ ಪುರುಷರ ಸ್ನೇಹ ಇಳೆಯ ನಿತ್ಯದ ನಿಯಮ

ಮೊದಲ ಚೈತ್ರದ ಒಲವಿಗೆಣೆಯು ಉಂಟೇ 

ಹೆಸರಲ್ಲೇನಿದೆ..?

ಹೆಸರಲ್ಲೇನಿದೆ..?

ಪ್ರಾಧ್ಯಾಪಕಿ ಜವಾನನನ್ನು ಕರೆದರು

ಪ್ರಾಧ್ಯಾಪಕಿ: ಏಯ್ ನಿನ್ನೇ....... ಏಯ್ ಇಲ್ಲಿ ಬಾ... 

ಜವಾನ: ಮೇಡಮ್ ನನ್ನ ಹೆಸರು ಏಯ್ ಅಂತ ಅಲ್ಲ, ನೀವು ನನ್ನ ಹೆಸರು ಹೇಳಿಯೇ ಕರೆಯ ಬಹುದು..

ಪ್ರಾಧ್ಯಾಪಕಿ: ಸರಿಯಪ್ಪಾ ಏನು ನಿನ್ನ ಹೆಸರು

ಜವಾನ: ನನ್ನ ಹೆಸರು ಪ್ರಾಣನಾಥ.

ಪ್ರಾಧ್ಯಾಪಕಿ: ಏನೂ.... ಅದು ಕರೆಯಕಾಗಲ್ಲ, ಬೇರೆ ಏನಾದರೂ ಹೇಳು

ಜವಾನ: ಸರಿ ನನ್ನ ಮನೆಯವರು ನನ್ನನ್ನು ಯಜಮಾನ್ರೇ ಅಂತ ಕರೇತಾರೆ..

ಪ್ರಾಧ್ಯಾಪಕಿ: ಇಲ್ಲ ಇದೂ ಸರಿ ಯಿಲ್ಲ ಬೇರೆ ಹೇಳು

ಜವಾನ: ಮತ್ತೆ ನನ್ನ ಓಣಿಯವರೆಲ್ಲಾ ಸಖ ಅಂತ ಕರೀತಾರೆ

ಪ್ರಾಧ್ಯಾಪಕಿ: ಇದೂ ಸರಿ ಯಿಲ್ಲ , ಮತ್ತೆ ಬೇರೆ ಹೆಸರೇನಾದರೂ... 

ಜವಾನ: ಚಿಕ್ಕವನಿರುವಾಗ ಇನಿಯ ಅಂತ ಕರೆಯುತ್ತಿದ್ದರು..

ಪ್ರಾಧ್ಯಾಪಕಿ: ಯಾರು

ಜವಾನ : ಪಕ್ಕದ ಮನೆಯವಳು..

ಪ್ರಾಧ್ಯಾಪಕಿ: ಹಾಗೆಲ್ಲಾ ಕರೆಯೋಕೆ ಆಗಲ್ಲಪ್ಪ...ಅಂದ ಹಾಗೆ ನಿನ್ನ ಸರ್ ನೇಮ್ ಏನು..?

ಜವಾನ: ಸ್ವಾಮಿ..

ಪ್ರಾಧ್ಯಾಪಕಿ ಸುಸ್ತು ಹೊಡೆದು ಕೆಳಗೆ ಬಿದ್ದರು....

Monday, April 20, 2015

ಜೀವನ ಸಾಗರ



ಇದಿರಿಗೆ
ಸಾಗರದ
ತುಂಬು ನೋಟ
ಏರಿಳಿವ ಅಲೆಗಳ ಮೋಹಕ ಆಟ
ಬಿಳಿನೊರೆಯ ಸಾಗಾಟ
ದಾಟಿದರೆ
ತೋರಿಕೆಗೆ ನೀಲ ಶಾಂತ,

ಆದರೆ
ಗರ್ಭವೋ ಪ್ರಚಂಡ ದಂಡು
ಅಣುವಿಂದ ಮಹತಿಗೆ ಕಾದಿಹವು
ಒಂದೊಂದನ್ನೇ ಇಡಿಡೀಯಾಗಿ
ನುಂಗಿ ನೊಣೆಯಲು
ಕರಗಿಸಿ ಅರಗಿಸಿಕೊಳ್ಳಲು
ತಿಮಿಂಗಿಲ, ಶಾರ್ಕ್,ಅಷ್ಟಪದಿ
ಒಂದೆರಡೇ ಹೆಸರಿಸಲು
ಲೆಕ್ಕವಿಲ್ಲದಷ್ಟು,

ಒಂದರಿಂದೊಂದು ಬಲ ಇವಕ್ಕೆ
ಇವನ್ನೆದುರಿಸಲು ಶಕ್ತಿ
ಇದೆಯಾದರೆ
ಹೆದರಿಸಿ ಓಡಿಸಲು ಯುಕ್ತಿ
ನಿನಗಿಲ್ಲಿ ಸ್ಥಾನ ಪಕ್ಕಾ
ಇಲ್ಲದಿರೆ ಈಗಲೇ
ಲೆಕ್ಕ ಚುಕ್ತಾ

ಕಲಿಯಬೇಕು ಇಲ್ಲೇ
ಇಂದೇ ಮುನ್ನುಗ್ಗಲು
ಇಂಥಹುಗಳ ಕೈ ಬಾಯಿಗೆ
ಸಿಲುಕದೇ ಪಾರಾಗಲು
ಬಾಳಲು
ಆಳದಡಿ ಸಿಗುವುದು
ಅಮೂಲ್ಯ ಸಂಪತ್ತು
ಹವಳ
ಮುತ್ತು

ಇರಿ ಆನಂದದೇ




ಅಯ್ಯೋ ಈ ತಾಪತ್ರಯಗಳ ಸಂತೆ
ಸಾಕಪ್ಪಾ ನಮಗೆ ಮಾತ್ರ ಅಂತೆ
ಎಂದೆಣಿಸೋ ಮೊದಲು ನೆನಪಿರಲಿ
ಗೋಚರ ನಮಗೆ ನಮ್ಮ ಕಷ್ಟ ಮಾತ್ರ
ಇವೆ, ಸಕಲರಿಗೂ ಕಷ್ಟ ಅವರವರದ್ದು

ಸಂತೋಷ ಎಲ್ಲಿದೆ

ನಾವಿಲ್ಲದ ದಿನಗಳಲ್ಲೇ -ಅಲ್ಲ
ನಾವಿರದ ಕಾರ್ಯಗಳಲ್ಲೇ - ಅಲ್ಲ
ಮತ್ತೆಲ್ಲಿ- ನಾವಿರುವಲ್ಲಿ ಮಾತ್ರ

ಪ್ರೀತಿಸೆ ಎಲ್ಲವನ್ನ

ನಮ್ಮ ಪರಿಸರವನ್ನ, ಕಾರ್ಯವನ್ನ
ನಮ್ಮವರನ್ನ,ನಮ್ಮನ್ನ
ಅಲ್ಲಿದೆ ನಮ್ಮೆಲ್ಲರ ಸಂತೋಷ

ನಿನ್ನೆಯೋ ಮುಗಿದ ಕಥೆ

ನಾಳೆಯ ನೋಡಿದವರ್ಯಾರು
ಇಂದು ಮಾತ್ರವೇ ನಮ್ಮದು
ಅದಕ್ಕೇ ಇದ್ದು ಬಿಡಿ ವಾಸ್ತವದಲ್ಲಿ
ಅದೇ ಆನಂದದಲ್ಲಿ

ಇಂದು ಮುಂದು, ಮತ್ತೆಂದೂ

ಇಂದೇ ಕಲಿಯಬೇಕಿದೆ ನಾವು
ಇದೇ ಜೀವಿಸೋ ಕಲೆ
ರಮಿಸಿ, ಅನುಭವಿಸೋ ಕಲೆ
ಇರಲು ಆನಂದದೇ

ಸಾವಿರ ದೀಪವ ಹಚ್ಚುವಾಸೆಯೂ




ಕಾಡಿನಾಚೆಯಾ ಊರ ಹೊರಗಿನಾ
ಆಸೆ ಹೊತ್ತ ಹಿರಿದಾದ ಕನಸಿನಾ
ಮರುಕು ಬಿದ್ದ ಹಳೆ ಗುಡಿಯ ಬದಿಗಿನಾ
ಪುಟ್ಟದಾದ ಒಂದು ಮಿಣುಕು ದೀಪ ನಾ

ಅರಿವಿದೆ ಮನಸ್ಸಿಗೆ ಸತ್ಯದತ್ತಲೂ
ಹರಡಿದೆ ಕತ್ತಲು ನನ್ನ ಸುತ್ತಲೂ
ಬೀಸುವ ಗಾಳಿಯು ಭರದೆ ಮುತ್ತಲೂ
ಸನಿಹದೆ ಬದುಕಿನ ಸಂಜೆಗತ್ತಲೂ

ಅಂತಃ ಶಕ್ತಿಯಾ ಬಳಸಿ ಉರಿಯುವ
ಉರಿದು ಉರಿದು ಜಗವೆಲ್ಲ ಬೆಳಗುವ
ಮನಸ್ಸಿನೊಳಗಿನಾ ಶ್ರೇಷ್ಟ ಶಕ್ತಿಯಾ
ಬಳಸಿ ಬೆಳೆಸಿ ಎಲ್ಲ ಬೆಳಗುವಾಸೆಯೂ

ಜಗವ ಬೆಳಗುವ ಬದುಕು ಮುಟ್ಟುವ
ನಲಿವಿನ ಮನೆಗಳ ಲೋಕ ಕಟ್ಟುವ
ಕನಸ ಬೆಸೆಯುವ ಮನಸ ತಟ್ಟುವ
ಸಾವಿರ ದೀಪವ ಹಚ್ಚುವಾಸೆಯೂ


Saturday, April 18, 2015

ಲಹರಿ




ಕಾದಿದ್ದೆ ನಿದ್ದೆಯಿಲ್ಲದ ಹಲವು ರಾತ್ರೆ
ಬೇಕಾದುದೆಲ್ಲವ ಜತೆಗಿಟ್ಟು
ಆದರೂ ಬರಲಿಲ್ಲ
ನೀನು

ಶಿವನೇರಿ ಏರಿದ್ದೆ, ಹತ್ತಿದ್ದೆ ನಂದಿ
ಕಳೆದಿದ್ದೆ ಹತ್ತು ದಿನ
ಆದರು ಸುಳಿವೇ ಇಲ್ಲ
ನಿನ್ನದು

ಬೀಸ ಬಯಲಲ್ಲೂ
ತುಂಬು ಮಡುವಲ್ಲೂ
ಹರಿವ ತೊರೆಯಲ್ಲು
ನಿಂತು ಕಾದೆ
ಪತ್ತೆಯೇ ಇಲ್ಲ
ನೀನು

ನಿಗಿ ನಿಗಿ ಕೆಂಡದ ಬಿರು ಬಿಸಿಲಲ್ಲಿ
ಇನ್ನೇನು ಬದಲಾಗೋ ಸಂಕೇತದ
ಆ ಕ್ಷಣ ಪ್ರತ್ಯಕ್ಷ
ನೀನು

image curtsy: Internet

ಮುತ್ತನ ಕಾರ್ ಪೂಲಿಂಗ್


ಮೊನ್ನೆ ಮೊನ್ನೆ ಬಂದಿದ್ದ ಸ್ವೀಟ್ ತಕೊಂಡು ಮುತ್ತ ನನ್ನ ಬಳಿ ಖುಷಿಯಲ್ಲಿ,
ಏಯ್ ನನಗೊಬ್ಬ ಕಾರ್ ಪೂಲರ್ ಸಿಕ್ಕಿದ ಕಣೋ..
ಖುಷಿಯಾಯ್ತು. ಯಾಕೆಂದರೆ ನನ್ನಲ್ಲಿ ಮನೆಯಿಂದ ದೂರದಲ್ಲಿರೊ ಕೆಲ್ಸದ ಬಗ್ಗೆ ,
ಅಷ್ಟು ದೂರ ಕಾರಲ್ಲೇ ಹೋಗಲಾಗದ ಬಗ್ಗೆ ಕೇಳಿದಾಗ ಕಾರ್ ಪೂಲ್ ಹುಡುಕಿಕೋ ಎಂದಿದ್ದೆ.
ನನ್ನ ಮಾತಿಗೆ ಸ್ವಲ್ಪ ಗೌರವ ಸಿಕ್ಕಿತಲ್ಲಾ ಅನ್ನೋ ಖುಷಿ ನಂಗೆ.
ಸರಿಯಪ್ಪಾ ಒಳ್ಳೆಯದಾಗಲಿ ಅಂದೆ. ಅಂದ ಹಾಗೆ ನಿನಗೆ ಪೂಲಿಗೆ ಸಿಕ್ಕಿದವರಾರು?
ಅದಾ ಒಬ್ಬರು ಅಲ್ಲಿಯೇ ಕೆಲ್ಸ ಮಾಡಿಕೊಂಡಿದ್ದಾರೆ ದಿನಾ ಇಲ್ಲಿಂದಲೇ ಹೋಗುವುದು.
ಮೊನ್ನೆ ಪುನಃ ಸಿಕ್ಕಿದ ಮುತ್ತ ಕೇಳಿದೆ

ಹೇಗೆ ನಡೀತಾ ಇದೆಯಪ್ಪಾ ನಿನ್ನ ಕಾರು ಪೂಲಿಂಗ್?
ಎಲ್ಲಿಯಾ, ಕಾರೇ ಇಲ್ಲ...ಎಂದ ಬೇಸರದಲ್ಲಿ, ಮುಚ್ಚಿದ ಬಿಸಿ ಡಬ್ಬದ ಮೇಲೆ ತಣ್ಣೀರು ಹಾಕಿದ ಹಾಗಿತ್ತು ಅವನ ಮುಖ.
ಏನಾಯ್ತಪ್ಪಾ..? ಕಾರು ಎಲ್ಲಿ,,, ಏನು ಆಕ್ಸಿಡೆಂಟ್ ಆಯ್ತಾ..?
ಇಲ್ಲ ಕಣೋ
ಮತ್ತೆ
ಕಾರು ಮೀಟರಿನವ ಕೊಂಡು ಹೋದ,
ಆದೇನು ಸ್ಪೀಡೋ ಮೀಟರ್ ರಿಪೆರಿಗಾ..?
ಅಲ್ಲಪ್ಪಾ. ಪೆಟ್ರೋಲ್ ಹಾಕಲಾರದೇ ಲೋನ್ ತೆಗೆದೆ
ಮತ್ತೆ
ಈಗ ಲೋನಿನ ದುಡ್ಡು ಬಡ್ಡಿ ಕಟ್ಟಲಾರದೇ ಹೋದುದರಿಂದ ನನಗೆ ದುಡ್ಡು ಸಾಲ ಕೊಟ್ಟವ ಕಾರೇ ಕೊಂಡು ಹೋದ ಜಬ್ಬರದಸ್ತೀ...
ಯಾಕೆ ನಿನ್ನ ಆ ಪೂಲಿನವ ಎಲ್ಲಿ ಹೋದ
ಪೂಲಿನವ,,,, ಅವನೊಬ್ಬ ದೊಡ್ಡ ಕುಡುಕ ಮಾರಾಯಾ........
ಒಂದು ವಾರ ಸರಿಯಾಗಿಯೇ ಇತ್ತು..
ನನ್ನ ವಾರದ ಪೂಲಿಂಗ್ ಮುಗಿಯಿತಾ, ಅವನದ್ದು ಶುರು ಆಗುತ್ತಲೇ...ನಾನು ಅವನ ಕಾರಲ್ಲಿ ಬರುವಾಗ ಕೂಡಾ ನನ್ನ ಹತ್ರನೇ ದುಡ್ಡು ಕಟ್ಟಲು ಹೇಳಿದ, ಪೆಟ್ರೋಲ್ ಬಂಕ್ ನಲ್ಲಿ,
ನಾನು ಹೋಗುವಾಗಲಂತೂ ನನ್ನದೇ ....
ಹೀಗೆ ದಿನಾ ದುಡ್ಡು ಕೊಡಲಾರದೇ......ಲೋನ್ ತೆಗೆದೆ, ಹೇಗಾದರೂ ಸಂಬಳ ಬಂದ ಕೂಡಲೇ ಕೊಡುತ್ತಾನೆ ಅಂದುಕೊಂಡು.
ಅವನಿಗೆ ಅವನ ಕಂಪೆನಿ ಕೊಡುತ್ತಿರಲಿಲ್ಲವಾ..?
ಕೊಡುತ್ತಿತ್ತು, ಆದರೆ ತಿಂಗಳು ಮುಗಿದ ಮೇಲೆ ಅಂತೆ,
ಹೇಗಾದ್ರೂ ಕೊಡುತ್ತಾನಲ್ಲ ಅಂತ ನಾನು ಸಾಲ ಮಾಡಿ ಕೊಟ್ಟಿದ್ದೆ. ತಿಂಗಳು ಮುಗಿದ ಮೇಲೆ ಗೊತ್ತಾದದ್ದು ತನಗೆ ಸಿಕ್ಕಿದ ನನ್ನ ದುಡ್ಡೂ ಆತ ಕುಡಿದೇ ಮುಗಿಸಿದ ಅಂತ.
ಈಗ ಎಲ್ಲಿದ್ದಾನೆ ಆತ..?
ಕುಡದ್ದು ಜಾಸ್ತಿ ಆಗಿ ಆಸ್ಪತ್ರೆಯಲ್ಲಿ......
ಹೀಗಂತ ಗೊತ್ತಿದ್ರೆ ನಾನು ಬಸ್ಸಲ್ಲೇ ಹೋಗಿ ಬರ್ತಾ ಇದ್ದೆ, ತಿಂಗಳ ಪಾಸ್ ತಕ್ಕೊಂಡು....
ಈಗ ಗತಿ ಗೋತ್ರ ಇಲ್ಲೆ ಮರಾಯಾ... ಎಲ್ಲ ನೀನೇ ಮಾಡಿದ್ದು
ಗೋಳೇ ಅಂತ ಅತ್ತ...
ಇಂತವರನ್ನ ಏನ್ರೀ ಮಾಡೋದು?

Cartoon Curtsy: Internet  

ಬೇಸಗೆಯ ಝಳಕ್ಕೆ ಮಾವಿನ ಜುಗಲ್ಬಂದಿ



 ಮಾವಿನ ರಸಾಯನ ಮತ್ತು ಸಾಸಿಮೆ


೧. ಮಾವಿನ ( ಕಾಟು) ಹಣ್ಣಿನ ಸಾಸಿಮೆ:-

೭-೮ ಕಾಟು ಮಾವಿನ ಹಣ್ಣು
ಒಂದು ತಟ್ಟೆ ತೆಂಗಿನ ಕಾಯಿ ತುರಿ( ಹಸಿ ತೆಂಗಿನ ಕಾಯಿ ಆದರೆ ಇನ್ನೂ ಒಳ್ಳೆಯದು)
ಅರ್ಧ ಚಹಾ ಚಮಚ ಸಾಸಿವೆ
೬-೮ ಒಣ ಮೆಣಸು ( ಬ್ಯಾಡಗಿ)
ರುಚಿಗೆ ತಕ್ಕಷ್ಟು ಉಪ್ಪು
ಬೆಲ್ಲ ( ಬೇಕಿದ್ದಲ್ಲಿ, ರುಚಿಗೆ ತಕ್ಕಷ್ಟು)

ತಯಾರಿಸೋ ವಿಧಾನ:-
ತೆಂಗಿನಕಾಯಿ ಸಾಸಿವೆ ಮೆಣಸು ( ಹುರಿಯುವದು ಬೇಡ) ಮಿಕ್ಸಿಯಲ್ಲಿ ನುಣ್ಣಗೆ ಅರೆಯಿರಿ. ಕಾಟು ಮಾವಿನ ಹಣ್ಣುಗಳ ಸಿಪ್ಪೆ ತೆಗೆದು ಹಿಸುಕಿ ಮಿಶ್ರಣಕ್ಕೆ ಸೇರಿಸಿ, ಗೊರಟೂ ಇರಲಿ. ಸಾಂಬಾರ್ ನಲ್ಲಿನ ಹಾಗೆ ಸ್ವಲ್ಪ ದಪ್ಪ ಇದ್ದರೆ ಚೆನ್ನು ಜಾಸ್ತಿ ನೀರಾಗಿಸೋದು ಬೇಡ.
ಕುಚ್ಚಲಕ್ಕಿ ಅನ್ನದ ಜತೆಗೆ ಇನ್ನೂ ಜಾಸ್ತಿ ರುಚಿ.




೨. ಮಾವಿನ ರಸಾಯನ :-

(ಹುಳಿಯಲ್ಲದ ಮಾವಿನ ಹಣ್ಣು ಒಳ್ಳೆಯದು)
ಮಾವಿನ ಹಣ್ಣುಗಳು ನಾಲ್ಕೈದು,
ಬೆಲ್ಲ ರುಚಿಗೆ ತಕ್ಕಷ್ಟು
ತೆಂಗಿನ ಕಾಯಿ ತುರಿ ಒಂದು ತಟ್ಟೆ
ಯಾಲಕ್ಕಿ ೪-೫.

ತಯಾರಿಸೋ ವಿಧಾನ:-
ಬಾಗನ ಪಲ್ಲಿ ಆಪೂಸ್ ಅಥವಾ ಬೇರೆ ಯಾವುದೇ ಸಿಹಿಯಾದ ಹಣ್ಣುಗಳು. ಅಥವಾ ಹುಳಿ ಸಿಹಿ ಮಿಕ್ಸ್ ಕೂಡಾ ಮಾಡ ಬಹುದು
ಯಾಲಕ್ಕಿ ಬೆಲ್ಲ ಕಾಯಿ ತುರಿ ಅರೆದ ಮಿಶ್ರಣಕ್ಕೆ ಮಾವಿನ ಹಣ್ಣಿನ ತಿರುಳು ಸೇರಿಸಿದರಾಯ್ತು. ( ಕೆಲವರು ಮಾವಿನ ಹಣ್ಣನ್ನು ಕತ್ತರಿಸುತ್ತಾರೆ ಚಿಕ್ಕದಾಗಿ, ಇನ್ನು ಕೆಲವು ಕಡೆ ಹಿಸುಕಿ ರಸಾಯನ ಮಾಡುತ್ತಾರೆ)

ರೆಸಿಪಿ ಕೃಪೆ: ಶ್ರೀಮತಿ ಶಾಂತಿ ಗೋಪೀನಾಥ್

ಸುರಕ್ಷಾ ಸಾಧನ.. ಪಾಸ್ ವರ್ಡ್!!


"ಕೇಳಿದ್ರಾ, ನಂಗೊಂದು ಉಪಾಯ ಸಿಕ್ಕೇ ಬಿಡ್ತು ರೀ...
ನಮ್ಮ ಮರಿ ತ್ಯಾಂಪನ್ನ ಕಂಪೂಟರ್ ಕಂಟ್ರೋಲ್ ಮಾಡೋದು ಹೇಗೆ ಅಂತ"
ಮನೆಗೆ ಬಂದವಳೇ ತ್ಯಾಂಪಿ ಹೇಳಿದಳು.
ಆ ದಿನ ತ್ಯಾಂಪಿಗೆ ತಳಮಳ ಜಾಸ್ತಿಯಾಗಿತ್ತು, ಅವಳ ಕಿಟ್ಟಿ ಪಾರ್ಟಿಯಲ್ಲಿ ಮಕ್ಕಳು ಹಾಳಾಗಲು ಕಾರಣ ಈ ಅಂತರ್ಜಾಲ ಅಂತ ಮಾತಾಡಿಕೊಂಡಿದ್ದು ಕೇಳಿ.
ಹಾಗಂತ ಅವಳೂ ಹಾಗೇ ಸುಮ್ಮನೇ ಕೇಳಿಕೊಂಡು ಮನೆಗೆ ಬರಲಿಲ್ಲ.
ಅದಕ್ಕೇನೇನು ಮಾಡ ಬೇಕು ಹೇಗೆ ಮಕ್ಕಳು ಈ ಅಂತರ್ಜಾಲದಿಂದ ಹಾಳಾಗೋದನ್ನು ತಡೆಯ ಬೇಕು ಅಂತೆಲ್ಲಾ ಸಹಾ, ಆ ವಿದ್ಯಮಾನವನ್ನು ಅರಿತೇ ಮನೆಗೆ ಬಂದಿದ್ದಳು.
ಅದಕ್ಕೆ ಸುಲಭ ಮಾರ್ಗವೆಂದರೆ ಒಂದು ಆಂಟಿ ಸುರಕ್ಷಾ ಸಾಧನವನ್ನ ಕಂಪ್ಯೂಟರಿನಲ್ಲಿ ಅಳವಡಿಸಿದರಾಯ್ತು, ಅದಕ್ಕೆ ಒಂದು ಪಾಸ್ ವರ್ಡ್ ಕೂಡಾ ಹಾಕಬೇಕು. ಆ ಪಾಸ್ ವರ್ಡ್ ಇಲ್ಲದೇ ಮಕ್ಕಳು ಯಾವ ಬ್ಯಾಡದ ಕ್ಷೇತ್ರಕ್ಕೂ ಹೋಗುವಂತೆಯೇ ಇಲ್ಲ. 

ಇದಲ್ಲವೇ ಸರ್ವ ಸುರಕ್ಷಾ ವಿಧಾನ,
ಬಿದಿರೇ ಇಲ್ಲದಿದ್ದರೆ ಕೊಳಲೆಲ್ಲಿಂದ......?
ಅಲ್ಲವೇ???
ಅಂತೂ ತ್ಯಾಂಪನನ್ನು ಒಪ್ಪಿಸಿಯೇ ಬಿಟ್ಟಳು ನೋಡಿ.
ದಿನಾ ದಿನಾ ಅರ್ಧ ರಾತ್ರೆಯ ವರೆಗೆ ಮರಿ ತ್ಯಾಂಪ ಕಂಪ್ಯೂಟರಿನಲ್ಲಿ ಕುಳಿತಿರುತ್ತಿದ್ದ, ತ್ಯಾಂಪಿಗೆ ನಿದ್ದೆ ಜಾಸ್ತಿ.
ತ್ಯಾಂಪನಿಗೋ ಒಂದೂ ಅರ್ಥ ಆಗುತ್ತಿರಲಿಲ್ಲ, ಅಂತರ್ಜಾಲ ಅಳವಡಿಸಿದ ಮೊದ ಮೊದಲೆಲ್ಲಾ ತ್ಯಾಂಪನೂ ಮರಿತ್ಯಾಂಪನೊಟ್ಟಿಗೆ ಕುಳಿತೇ ಇದ್ದ.
ಅದು ತ್ಯಾಂಪಿಯ ಸಲಹೆ ಅಪ್ಪ ಅಮ್ಮ ಅಂತ ಯಾರಾದರೊಬ್ಬರು ಜತೆಗಿದ್ದರೆ ಮಕ್ಕಳು ಬ್ಯಾಡದ ಸೈಟಿಗೆಲ್ಲಾ ಹೋಗಲ್ಲ. ಅಲ್ಲವೇ,
ರಾತ್ರೆ ಒಂಬತ್ತಕ್ಕೇ ನಿದ್ರೆ ಕೂರುವ ತ್ಯಾಂಪಿಗಂತೂ ಮರಿ ತ್ಯಾಂಪನೊಂದಿಗೆ ಏಗುವುದು ಸಾಧ್ಯವಾಗದ ಮಾತು , ಉಳಿದವರಾರು
ಬಡ ತ್ಯಾಂಪನೇ.
ಆತನಿಗೂ ನಿದ್ದೆ ಒಂಬತ್ತಕ್ಕೇ ಬಂದರೂ ತೂಕಡಿಸಿಕೊಂಡೇ ಮರಿಯ ಜತೆಯಲ್ಲಿ ಕುಳಿತಿರುತ್ತಿದ್ದ.
ಮಧ್ಯೆ ಮಧ್ಯೆ ಎಚ್ಚರವಾದಾಗಲೆಲ್ಲಾ... ಮರಿ ತ್ಯಾಂಪನನ್ನು ಗದರಿಸಿದರೂ ಗದರಿಸಿದ ತ್ಯಾಂಪ
ಆದರೇನು? ಒಂದೇ ಕ್ಷಣದಲ್ಲಿ -ಮಾಡುತ್ತಿದ್ದ/ ನೋಡುತ್ತಿದ್ದ - ಎಲ್ಲಾ ಕಾರ್ಯಕ್ರಮಗಳೂ ಮಕ್ಕಳ ಕಾರ್ಯಕ್ರಮಗಳೇ ಎಂದು ಪ್ರೂವ್ ಮಾಡಿ ತೋರಿಸುತ್ತಿದ್ದ ಮರಿ ತ್ಯಾಂಪ.
ಅವನ ವಾದದೆದುರು ತ್ಯಾಂಪಿಗೇ ಜಾಗವಿಲ್ಲ ಇನ್ನು ಬಡ ತ್ಯಾಂಪನ ಹೆಸರೆಲ್ಲಿಂದ..?
ಅಂತೂ ಇಂತೂ ಆ ಆತ್ತೆ ಸುರಕ್ಷಾ ಸಾಧನ ಅಲ್ಲಲ್ಲ ಆಂಟೀ ಸುರಕ್ಷೆ ಅಳವಡಿಸಿಕೊಂಡೇ ಬಿಟ್ಟರು.
ಅವತ್ತು ತ್ಯಾಂಪ ಕಂಪ್ಯೂಟರ್ ತೆರೆದ, ಪಾಸ್ ವರ್ಡ್ ಹಾಕ ಬೇಕಲ್ಲ.... ಏನು ಮಾಡಿದರೂ ಪಾಸ್ ವರ್ಡ್ ನೆನಪಿಗೇ ಬರಲೊಲ್ಲದು....
ಇನ್ನು...? ಕಂಪ್ಯುಟರ್ ತೆರೆಯಲೇ ಸಾಧ್ಯವಿಲ್ಲವಲ್ಲ....
ಆದರೂ ತ್ಯಾಂಪ ತ್ಯಾಂಪಿ ಖುಷಿಯಲ್ಲಿದ್ದಾರೆ..
ಯಾಕೆಂದರೆ ಇಂದು ಕಂಪ್ಯೂಟರ್ ತೆರೆಯಬೇಕಾದರೆ ಮರಿ ತ್ಯಾಂಪ ತ್ಯಾಂಪನಲ್ಲೋ ತ್ಯಾಂಪಿಯಲ್ಲೋ ಕೇಳಲೇ ಬೇಕಲ್ಲ ಆ ಖುಲ್ ಜಾ ಸಿಮ್ ಸಿಮ್ ಪದ...
ಮತ್ತೆ ಇನ್ನು ಮೂರು ನಾಲ್ಕು ದಿನ ಅವರಿಬ್ಬರೂ ಮರಿ ತ್ಯಾಂಪನಿಗೆ ಆ ಪಾಸ್ ವರ್ಡ್ ಮರೆತು ಹೋಗಿದೆ ಅಂತ ಹೇಳೋದು, ಆತ ಅತ್ತು ಕರೆದೂ ರಂಪ ಮಾಡಿದ ಮೇಲೆ ನೋಡಿದರಾಯ್ತು ಅಂತ ತೀರ್ಮಾನಿಸಿ ಠರಾವು ಹೊಡೆಸಿಕೊಂಡರು.
ಆ ದಿನ ಸಂಜೆ ಮರಿ ತ್ಯಾಂಪ ಶಾಲೆಯಿಂದ ಬಂದ, ಊಟ ಮುಗಿಸಿ ಎಂದಿನಂತೆ ಕಂಪ್ಯೂಟರ್ ತೆರೆದ
ಅದರಲ್ಲೇ ಮುಳುಗಿದ.
ಅರ್ಧ ಗಂಟೆ ಆಯ್ತು, ಮುಕ್ಕಾಲಾಯ್ತು ಎರಡು ಗಂಟೆ ಆಯ್ತು,
ತ್ಯಾಂಪ ತ್ಯಾಂಪಿ ಇಬ್ಬರೂ ಕಾದದ್ದೇ ಬಂತು.
ಮರಿ ತ್ಯಾಂಪ ಕರೆಯಲೇ ಇಲ್ಲ ಇವರಿಬ್ಬರನ್ನ...
ಕೊನೆಗೆ ಬೇಸತ್ತ ಗಂಡ ಹೆಂಡತಿ ಇಬ್ಬರೂ ಮರಿ ತ್ಯಾಂಪನ ರೂಮಿಗೇ ಹೋದರು.
ಆಶ್ಚರ್ಯ ಪರಮಾಶ್ಚರ್ಯ ಮರಿತ್ಯಾಂಪ ಆರಾಮವಾಗಿ ತನ್ನ ಅಂತರ್ಜಾಲದ ಆಟ ಆಡಿಕೊಂಡೇ ಇದ್ದಾನೆ...
ಹಾಗಾದರೆ ... ಆ ಪಾಸ್ ವರ್ಡ್...?
ಸ್ವಲ್ಪ ತಡೆದು ಕೇಳಿದರೆ....
ಇಲ್ಲವಲ್ಲಾ...
ಕಂಪ್ಯೂಟರ್ ತನಗೇ ಕೇಳಲೇ ಇಲ್ಲ ಪಾಸ್ ವರ್ಡ್
ಮತ್ತೆ .... ಅರೇ.... ಯಾಕೆ ಯಾಕೆ ಹಾಗಾಯ್ತು..? ತ್ಯಾಂಪ ತ್ಯಾಂಪಿ ಇಬ್ಬರೂ ಬೆರಗಾದರು....
ಏನು ಕೇಳಿದ ಮರಿ ತ್ಯಾಂಪ...
ತ್ಯಾಂಪ ತ್ಯಾಂಪಿ ಎಲ್ಲ ವಿವರಿಸಿದರು. ಒಂದು ಸುರಕ್ಷಾ ಸಾಧನ ಅಳವಡಿಸಿದ್ದೆವು. ಅಂತರ್ಜಾಲದ ಸುರಕ್ಷೆಗಾಗಿ.. ಅಂತ.
ಮರಿ ತ್ಯಾಂಪ ಹೇಳಿತು. ಅತ ಅಳವಡಿಸಿದ್ದೇನೋ ಹೌದು ಅದು ನಿಮ್ಮಿಬ್ಬರ ಖಾತೆಯಲ್ಲಿ ..
ಯಾಕೆ ಹಾಗಾಯ್ತು..?
ಆಗ ಮರಿ ತ್ಯಾಂಪನೆಂದ..
ಪಪ್ಪಾ ಮಮ್ಮೀ ನನ್ನ ಖಾತೆಯ ಸುರಕ್ಷೆಗಾಗಿ ಆಗಲೇ ಪಾಸ್ ವರ್ಡ್ ಹಾಕಿ ಯಾಗಿದೆ, ಅದನ್ನ ಯಾರೂ ಓಪನ್ ಮಾಡೋ ಹಾಂಗೇ ಇಲ್ಲ.
.......................................
ಕಥೆ ಹೈಲ್ ಆಯ್ತಲ್ಲಾ....

photo : Internet

Friday, April 17, 2015

ರಾತ್ರಿ ಪಯಣವೆಂಬ ಮಾಯಾಲೋಕದಲ್ಲಿ


ನನಗೆ ಅಚ್ಚರಿ ತರುವ ಅನೇಕ ವಿಷಯಗಳಲ್ಲಿ ಧೂಮ್ರ ಶಕಟದಲ್ಲಿನ ನಿಶಾಚರ (ರಾತ್ರೆ ಬಸ್ಸಿನ ) ಪಯಣವೂ ಒಂದು. ಇದರಲ್ಲೇನಿದೆ ಮಹಾ ಅಂತ ನೀವು ಹುಬ್ಬೇರಿಸಿದಿರಾದರೆ ಈ ಬರಹ ಪೂರ್ತಿಯಾಗಿ ಓದಿ  ತಿಳಿಸಿ. ಅಂದರೆ ಬರೇ ಲೆಕ್ಕಾಚಾರದ ಸರಾಸರಿಗಾಗಿ  ೩೦ ಅಂಕಣಗಳಲ್ಲಿ ಗಂಟೆಗೆ ೫  ಬಸ್ಸು  ಅಂತ ಗಣನೆಗೆ ತೆಗೆದುಕೊಂಡರೂ ರಾತ್ರಿಯಲ್ಲಿ ೧೫೦೦ ಬಸ್ಸುಗಳು ಅಂದರೆ ಸರಾಸರಿ ಒಂದು ಬಸ್ಸಿನಲ್ಲಿ ೪೦ ಜನ ಅಂದುಕೊಂಡರೂ ೬೦ ಸಾವಿರ ಜನ ರಾತ್ರೆ ಸಂಚರಿಸುವರು ಈ ಬಸ್ಸುಗಳಲ್ಲಿ. ನಾನು ತುಂಬಾನೇ ಸಾಧಾರಣವಾಗಿ ಈ ಲೆಕ್ಕಹಾಕಿದ್ದೇನೆ. ಇದರ ತಪ್ಪು ಸರಿಯ ವಿಮರ್ಶೆಯ ಗೋಜಲಿನಲ್ಲಿ ನಿಮ್ಮನ್ನು  ಸಿಕ್ಕಿಸುವದು ನನ್ನ ಉದ್ದೇಶವಲ್ಲ. ಅದು ಸಾಧುವೂ ಅಲ್ಲ.

ಎಲ್ಲೆಲ್ಲಿಂದ ಎಲ್ಲೆಲ್ಲಿಯವರೆಗು ಅತ್ತಿಂದಿತ್ತ ಇತ್ತಿಂದತ್ತ ಸಂಚರಿಸುತ್ತಿರುವ ಈ ನಿಶಾಚರ ಧೂಮ್ರ ಶಕಟಗಳಲ್ಲಿ ನಿದ್ದೆಯಮಲಲ್ಲಿ ಮುಳುಗೇಳುತ್ತಲೇ ಉದಯಕ್ಕೆ ಕರಾರುವಾಕ್ಕಾಗಿ ಅವರವರ ಗಮ್ಯ ಸೇರಿಸುವ ಉದ್ದಿಶ್ಯದ ಗಹನ ಸಹಜ ಕ್ರಿಯೆಯ ಪಾಲುದಾರರಾದ ಸಂಚಾಲಕ ಹಾಗೂ ನಿರ್ವಾಹಕರೇ ನನ್ನ ಮೊದಲ ಅಚ್ಚರಿ. ನಾವೆಲ್ಲಾ ನಿದ್ದೆಯ ಮಹಾ ( ಕೆಲವು ಮಹಾನುಭಾವರ ಗೊರಕೆ ಪೊರಕೆಯ ಹೊರತಾಗಿಯೂ) ಅಮಲಲ್ಲಿ ತೇಲಾಡುತ್ತಿರುವಾಗ, ಅಲ್ಲಲ್ಲಿ ಕೆಲವು ಅಪವಾದಗಳಿದ್ದರೂ ಕೂಡಾ.  ಇವರಿಬ್ಬರೂ ಎಚ್ಚರವಿದ್ದು ನಮ್ಮನ್ನು ನಮ್ಮ ನಮ್ಮ ಗಮ್ಯಕ್ಕೆ ಅನೂಚಾನವಾಗಿ ತಲುಪಿಸಿ ಬಿಡುವರು. ನಾವು ನಮ್ಮದೇ ಮಯಕದಲ್ಲಿ ಬಸ್ಸು ಹತ್ತಿ ನಮ್ಮ ನಮ್ಮ ಅಧಿಕೃತ ಆಸನಗಳಲ್ಲಿ ಆಸನಾರೂಢರಾಗಿ ಬಸ್ಸು ಹೊರಡುವವರೆಗೆ ನಮ್ಮದೇ ಊಹಾ ಸಾಮ್ರಾಜ್ಯದಲ್ಲಿದ್ದು ಕಣ್ಣು ಮುಚ್ಚಿದರೆ, ಪುನಃ ಕಣ್ಣು ಬಿಟ್ಟಾಗ ಬೆಳಗಾಗಿ ನಮ್ಮ ಗಮ್ಯವನ್ನು ತಲುಪಿಯೇ ಬಿಟ್ಟಿರುತ್ತೇವೆ.


ನನಗೆ ಈ ನಿಶಾ ಮಾರ್ಗದ ಮಧ್ಯೆಯಲ್ಲಿ ಪ್ರಕೃತಿಯ ಕರೆಗೆ ಹೋಗುವ ಅಭ್ಯಾಸವುಳ್ಳ ಹಲವರಂತೆ ನನಗೂ ಇದೆ. ಸೀದಾ ಬಸ್ಸಿಳಿದು ಯಾವುದಾದರೂ ಪರದೆ / ಅಡ್ಡ ಇದೆಯಾ ಅಂತ ಹುಡುಕಿ ಭಾರ ಇಳಿಸಿದರೆ ಆಯ್ತು. ಆ ನಿಶೆಯಮಲಲ್ಲಿ ಯಾರದ್ದೋ ಬಾಗಿಲು ಹಾಕಿದ್ದ ಮನೆಯ, ಅಂಗಡಿಯ ಗೋಡೆಯ ಅಥವಾ ಬಾಗಿಲ ಪಕ್ಕ ಹೀಗೆ ಎಲ್ಲೆಂದರಲ್ಲಿ ನಿಂತು ಜಿಪ್ ತೆಗೆಯುವ ಮಹಾನುಭಾವರನ್ನೂ ಕಂಡಿದ್ದೇನೆ. ಪಾಪ ಬೆಳಗೆದ್ದು ಅವರೆಲ್ಲಾ ಆ ಶಗಡಿಗೆ ಎಷ್ಟು ಬಯ್ಕೊಂಡರೋ ಏನೋ. ಕೆಲವೊಮ್ಮೆ ನಾಯಿಗಳೆದ್ದು ಗಲಾಟೆ ಮಾಡಿ ಅವುಗಳ ಮಾಲೀಕರನ್ನೆಬ್ಬಿಸಿದಾಗ ಅರ್ಧದಲ್ಲೆ ಈ ಮಹಾನುಭಾವರು ಬೇರೆಡೆಗೆ ಓಡುವುದೂ ಉಂಟು...ರಾತ್ರೆ ನಿದ್ದೆ ಮತ್ತಿನ  ಪ್ರಯಾಣದ ಈ ಕಾರ್ಯ ವೈಖರಿಯೇ ಅಂತಹದ್ದು ಬಿಡಿ. ಗಂಡಸು ಮಕ್ಕಳದ್ದು ಈ ಪರಿಯಾದರೆ ಮಹಿಳೆಯರಿಗೆ ಅದರಲ್ಲೂ ಹಿರಿಯ ಮಹಿಳೆಯರಿಗೆ ಯಮ ಯಾತನೆ. ನಮ್ಮ ಹಾಗೆ ಎಲ್ಲೆಂದರಲ್ಲಿ ಹೊರ ಹೋಗುವಂತಿಲ್ಲ. ಇದನ್ನೂ ನನ್ನ ಮನೆಯ ಗೃಹಲಕ್ಷ್ಮಿಯವರು ಒಮ್ಮೊಮ್ಮೆ ಗಂಡಸರ ಈ ಸೌಕರ್ಯವನ್ನು ಸಂಕಲನಕ್ಕೂ ಒಮ್ಮೊಮ್ಮೆ ವ್ಯವಕಲನಕ್ಕೂ ಉಪಯೋಗಿಸುದುಂಟು. ಹೀಗಾಗಿ  ನಮ್ಮ ಸಂಸಾರ ಸಮೇತದ ಪಯಣಗಳಲ್ಲೆಲ್ಲಾ ನಾನೇ ಕಂಡಕ್ಟರ್ ಮತ್ತು ವಾಹನ ಚಾಲಕರಿಗೆ ರಿಕ್ವೆಶ್ಟ್ ಮಾಡಿ ಹೋಟೆಲ್ ನಲ್ಲಿ ನಿಲ್ಲಿಸಿದ್ದೂ ಉಂಟು. ಹೋಟೆಲ್ಲಿನ ಜವಾಬ್ದಾರಿಯ ಮತ್ತೊಂದು ಕಥೆ ಸರಕಾರೀ ವಾಹನಗಳಿಗೆ ಅವರವದ್ದೇ ಆದ ಅಡ್ಡಾ ಇದೆ. ಮೂಲಭೂತ ಸೌಕರ್ಯವೇ ಇಲ್ಲದ ಕೆಲವಾದರೆ ಪಯಣಿಗರನ್ನು ಸಿಕ್ಕಾಪಟ್ಟೇ ವಸೂಲಿ ಮಾಡುವವರು ಇನ್ನು ಕೆಲವರು ಆದರೂ ನಮ್ಮ ಅವಶ್ಯ ಕಥೆ ಪೂರೈಸೀತಲ್ಲ ಎಂದು ಸಂತೋಷ ಪಟ್ಟುಕೊಳ್ಳುವವರು ಎಲ್ಲರೂ.


ಹಲಕೆಲವೊಮ್ಮೆ ರಾತ್ರೆ ಹೀಗೆ ಸಂಚರಿಸುವಾಗ ನನಗೆ ಪ್ರಕೃತಿ ಕರೆಯಿಂದಾಗಿಯೋ ಸಹಚಾಲರ ಮರುಗುಗೊರಗುವಿನ ಪ್ರಕಟನೆಯಿಂದಾಗಿಯೋ ಎಚ್ಚ್ರಗೊಂಡಾಗ ಅರೆ ನಿದ್ದೆ ಅರೆ ಎಚ್ಚ್ರದ ಅಯೋ ಮಯ ಸ್ಥಿತಿಯಲ್ಲೇ ಆ ಕತ್ತಲೆಯ ರಾತ್ರೆಯ ಬಸ್ಸಿನ ಹೆಡ್ ಲೈಟ್ಗಳ ಬೆಳಕಿನಲ್ಲಿ ಸುತ್ತಲ ಪರಿಸರವೇ ಅದೆಷ್ಟೋ ಅರಾಜಕತೆ ಸೃಷ್ಟಿಸ ಬಲ್ಲುದು. ಕೆಲವೊಮ್ಮೆಯಂತೂ ನಾನು ಬಸ್ಸಿನಲ್ಲಿರುವೆನೋ ಅಥವಾ ಯಾವುದೋ ಮಾಂತ್ರಿಕ ವಾಹನದಲ್ಲಿ ಆಕಾಶಯಾನದಲ್ಲಿರುವೆನೋ ಎಂಬ ಭ್ರಮೆಯೂ. ಕೆಲವೊಮ್ಮೆ ರಾಮಾಯಣದ ಮಯೂರ ವಿಮಾನದಲ್ಲಿ ಕಾಡಿನ ದೊಡ್ಡ ದೊಡ್ಡ ವೃಕ್ಷಗಳನಡುವೆ ಇನ್ನೇನು ದಾರಿಯಲ್ಲಿ ರಾಕ್ಷಸರಂತೆ ನಿಂತು ನಮ್ಮ ದಾರಿಯಡ್ದಗಟ್ಟಿದವರಂತೆ, ಅಥವಾ ಇನ್ನೇನು ನಮ್ಮ ಕಥೆಯೇ ಮುಗಿಯಿತು ಅನ್ನುವ ಭ್ರಮೆಯೂ, ಅಥವಾ ಆಕಾಶದಲ್ಲಿ ತೇಲುತ್ತಾ ಮೋಡಗಳ ಮಧ್ಯೆ ತೂರಿಕೊಂಡು   ಮುಂದೋಡುತ್ತಿರುವ ಪುಷ್ಪಕ ವಿಮಾನವೋ  ಎಂಬ ಭ್ರಮೆಯೂ. ಒಮ್ಮೊಮ್ಮೆ ಕುಂಬಾರ ಹ್ಯಾರಿಯ ಹಾರುವ ಪೊರಕೆಯಂತೆಯೂ ಕಂಡುದುಂಟು. ನೀವೇನೋ ನಾನು ಕಥೆ ಪುಸ್ತಕ ಓದಿದ್ದು ಜಾಸ್ತಿಯಾಯ್ತೋ ಅಥವಾ ಸೀನನೆಂದ ಹಾಗೆ ಮಾವಿನ ಕಾಯಿಯ ತಂಬುಳಿಯ ಮಹಿಮೆ ಅಂದರೂ ನಾನು ಏನೂ ಅಡ್ಡ ಹೇಳುವುದಿಲ್ಲ ಬಿಡಿ.

ಈ ನಿಶಾ ಪಯಣದ  ಪಜೀತಿಗಳನ್ನೂ ನಿಮ್ಮ ಮುಂದಿಡಬೇಕೆನ್ನಿಸಿತು.  
ಒಮ್ಮೆ ನಾನು ಸಂಸಾರ ಸಮೇತನಾಗಿ ಊರಿಗೆ ಹೋಗುತ್ತಿದ್ದೆ. ರಸ್ತೆ ಮಧ್ಯೆ ನಡುರಾತ್ರಿಯಲ್ಲಿ ಒಂದು ಕಡೆ ಪ್ರಕೃತಿಯ ಕರೆಗೆಂತ ಬಸ್ಸು ನಿಲ್ಲಿಸಿದ್ದರಿಂದ ಇಳಿದೆ. ಯಾವುದೊ ನಿಯತ ಕಾಲಿಕೆ ಕಂಡಿತು ಪಕ್ಕದ ಅಂಗಡಿಯಲ್ಲಿ. ಅದನ್ನು ತಕ್ಕೊಂಡು ಪಕ್ಕದ ಹೋಟೆಲ್ಲಿಗೆ ನುಗ್ಗಿದೆ. ಕಂಡಕ್ಟರ್ ಡ್ರೈವರ್ ಕಾಣಿಸುವ ಹಾಗೆ ನಾನು ಕುಳಿತು ನನ್ನ ಕಾಫಿ ಹೀರುತ್ತಿದ್ದೆ. ನನ್ನ ಹಳೇ ಸ್ನೇಹಿತರೊಬ್ಬರು ಸಿಕ್ಕಿ ಹಿಂದಿನ ನೆನಪನ್ನು ಜ್ಞಾಪಿಸಿಕೊಂಡೆವು. ನನ್ನ ದೃಷ್ಟಿಯಿಂದ ಕಿಂಚಿತ್ತೂ ನಾನು ನಮ್ಮ ನಿರ್ವಾಹಕ, ಚಾಲಕರನ್ನು ಅತ್ತಿತ್ತ ಅಲುಗಾಡಗೊಟ್ಟಿರಲಿಲ್ಲ. ಅದೇಕೋ ನಮ್ಮ ನೆನಪೆಲ್ಲಾ ತಾಜಾ ಆಗಿ ಮುಗಿದಾಗ ಅವರೇ ಕೇಳಿದ್ದರು ಎಲ್ಲಿಗೆ ಹೊರಟಿರಿ ಅಂತ. ಆಗಲೇ ನೆನಪಾಗಿ ಇದಿರಿಗೆ ನೋಡುತ್ತೇನೆ ನಾನು ದೄಷ್ಟಿಯನ್ನೆಟ್ಟು ಇಟ್ಟವರು  ಅಲ್ಲಿಯೇ ಇದ್ದರೂ ಯಾವ ಮಾಯಕದಲ್ಲೋ ನಾನು ಬಂದ ಬಸ್ಸು ಮಾತ್ರ ಮಂಗ ಮಾಯವಾಗಿಬಿಟ್ಟಿತ್ತು. ನನ್ನ ಹತ್ರ ಅಂದಿನ ಟಿಕೆಟೂ ಇಲ್ಲ, ಊರಿಗೆ ಹೋಗಲು ಹಣವೂ. ಅವೆಲ್ಲ ಪೂರಾ ಕ್ಯಾಷಿಯರ್ ಆದ ನನ್ನ ಗೃಹ ಮಂತ್ರಿಯವರ ಹತ್ರವೇ ಉಳಿದು ಬಿಟ್ಟಿತ್ತು. ಇನ್ನೇನು ಮಾಡುವುದು ನನ್ನ ಸ್ನೇಹಿತರು ನನಗೂ ನಿನ್ನ ಹಾಗೇ ಆದರೆ ಕಷ್ಟ ಮಾರಾಯಾ ಅಂತ ಅವರ ಬಸ್ಸು ಹತ್ತಿಯೇ ಬಿಟ್ಟರು. ನನ್ನ ಕಥೆ..? ಅಂತೂ ರಸ್ತೆಯ ಪಕ್ಕ ಬಂದು ನಿಂತೆ, ನನ್ನ ದೇವರು ನನ್ನ ಕೈ ಬಿಟ್ಟಿರಲಿಲ್ಲ, ಯಾವನೋ ಪುಣ್ಯಾತ್ಮ ಕಾರಿನಲ್ಲಿ ಬರುತ್ತಿದ್ದವ ನಿಲ್ಲಿಸಿ ನನ್ನ ಅಹವಾಲು ಕೇಳಿ ನನ್ನನ್ನು ಕೂರಿಸಿಕೊಂಡು ಕನಸ್ಸಿನಲ್ಲಿನ ಹಾಗೇ ಮುಂದಿನ ಊರಿನಲ್ಲೇ ಆ ಬಸ್ಸನ್ನು ಅಡ್ಡಗಟ್ಟಿ ನಿಲ್ಲಿಸಿದ, ನನ್ನ ಮಗನೂ ಶ್ರೀಮತಿಯವರ ಅಳುಮುಖ ಬಸ್ಸಿನಲ್ಲಿ ಕೂಗಾಡುತ್ತಿದ್ದವರ ಗಲಾಟೆ ಎಲ್ಲವೂ ನನ್ನ ನೋಡಿದ ಕೂಡಲೇ ಮಂಗ ಮಾಯವಾಯ್ತು. ಅದು ನನ್ನ ಮಗನ ಗಲಾಟೆಯಿಂದಾಗಿ ಅವರ ನಿದ್ರೆ ಗೆ ತೊಂದರೆಯಾದುದರಿಂದ ಕೂಡಾ ಇರಬಹುದು.

ಇನ್ನೊಮ್ಮೆ ಹೀಗೇ ಚಾಲಕ ಮಾತ್ರ ವಿರುವ ಬಸ್ಸಿನಲ್ಲಿ ಮಹಾಶಯರೊಬ್ಬರು ಬೆಳಿಗ್ಗೆ ಬಸ್ಸಿನಿಂದ ಇಳಿದಾಗಲೇ ಗೊತ್ತಾಗಿದ್ದುದು  ತಾನು ಹತ್ತಿದಲ್ಲಿಗೇ ವಾಪಾಸ್ಸೂ ಬಂದಿರುವೆ ಅಂತ, ನನ್ನ ಅಣ್ಣನ ಮಗನ ಉಪನಯನಕ್ಕೆಂತ ಹೊರಟ ನಾವಂತೂ ಮಧ್ಯೆ ಮಧ್ಯೆತೊಂದರೆಯಾಗಿ , ತಡವಾಗಿ ಎಲ್ಲರ ಕೊನೆಯ ಪಂಕ್ತಿಯ ಊಟವೂ ಮುಗಿದು ಕಲ್ಯಾಣ ಮಂಟಪದವರು ಬಾಗಿಲು ಹಾಕುವ ಸಮಯಕ್ಕೆ ಹೋಗಿ ತಲುಪಿದ್ದೆವು.

ಇದಕ್ಕಿಂತಲೂ ಮಜವಾಗಿರುವ ಇನ್ನೊಂದು ಘಟನೆ.  ರಜೆ ಮುಗಿಸಿ ಮಂಗಳೂರಿನ ಬಸ್ ನಿಲ್ದಾಣದಿಂದ ಎಂದಿನಂತೆ ನಾವು ಮೂವರೂ ಬೆಂಗಳೂರಿನ ಬಸ್ ಆ ರಾತ್ರೆ ಹತ್ತಿದೆವು. ೧೫,೧೬,೧೭ ಟಿಕೆಟ್ ನೋಡಿ ಅದರಲ್ಲಿ ಗೆರೆಯೆಳೆದ ಮೇಡಮ್ ಕಂಡಕ್ಟರ್ ನಮ್ಮ ನಮ್ಮ ಜಾಗದಲ್ಲಿ ಕುಳ್ಳೀರಿಸಿದಳು. ಸ್ವಲ್ಪವೇ ಸಮಯದಲ್ಲಿ ನಮ್ಮ ಧೂಮ್ರ ಶಕಟ ಕಂಕನಾಡಿಯಲ್ಲಿ ನಿಂತಿತು. ಅಲ್ಲಿಂದ ನಮ್ಮ ಹಾಗೇ ಮೂವರ ಸಂಸಾರವೊಂದು ಬಸ್ ಹತ್ತಿತು. ಈಗ ಬಂತು ನೋಡಿ ತಕರಾರು. ಅವರದ್ದೂ ಅದೆ ೧೫, ೧೬, ೧೭ ನಂಬ್ರದ ಟಿಕೆಟು. ಈಗ ಮಾಡುವುದೇನನ್ನು?. ಕಂಡಕ್ಟರಮ್ಮ ಮತ್ತು  ನಾನು, ಹೀಗಾಗಲು ಸಾಧ್ಯವೇ ಇಲ್ಲವಲ್ಲ ಅಂದರೂ, ಈ ಅವಾಂತರಕ್ಕೇನು ಮಾಡೋಣ. ಇನ್ನೊಮ್ಮೆ ಅವರ ಟಿಕೇಟುಗಳನ್ನು ಪರಿಶೀಲಿಸಿದ್ದಾಯ್ತು, ನೂರು ಪ್ರತಿಶತ ಅವರ ಟಿಕೇಟುಗಳು ಸರಿಯಾಗಿಯೇ ಇವೆ, ಉಳಿದದ್ದು ನಮ್ಮ ಟಿಕೇಟು..?   ಈಗ ನೋಡಿದರೆ ಅದು ಅವತ್ತಿನದ್ದಲ್ಲದೇ ಮಾರನೆಯ ರಾತ್ರಿಯ ಟಿಕೇಟ್ ಆಗಿ ಹೋಗ ಬೇಕೇ ಶಿವ ಶಿವಾ..? ಅಂದರೆ ನಾವು ನಾಳೆಯ ಸರೀ ರಾತ್ರೆಯ ಬಸ್ಸಿನ ಬದಲು ಇವತ್ತೇ ಹತ್ತಿ ಕುಳಿತಿದ್ದೆವು. ಸರ್ದಾರ್ಜಿ ಆಗುವದೆಂದರೆ ಹೀಗೆಯೇ.. ಅಲ್ಲವೇ? ಕಂಡಕ್ಟರಮ್ಮ ನನಗೆ ಇಳಿಯಲು ಹೇಳಿತು, ಆದರೆ ನಮ್ಮ ಮುಂದಿನ ಆಸನಗಳು ಖಾಲಿ ಇದ್ದುದನ್ನು ನೋಡಿ ನಾನು ಬೆಂಗಳೂರಿನ ಟಿಕೇಟುಗಳನ್ನು ತೆಗೆದುಕೊಂಡು ಕೆಂಪೇಗೌಡ ನಿಲ್ದಾಣದಲ್ಲಿ ನನ್ನ ಮೊದಲ ಮೂರೂ ಟಿಕೇಟುಗಳನ್ನು ರದ್ದು ಮಾಡಿಸಿದ್ದೆ ಮಾರನೆಯ ಬೆಳಿಗ್ಗೆ.
ಅಂತೂ ಅಡಿಗೆ ಬಿದ್ದರೂ...!

ಈಗ  ಪ್ರತಿ ಪ್ರಯಾಣದಲ್ಲಿಯೂ ಸ್ವಲ್ಪ ಹಣ ಇಟ್ಟುಕೊಳ್ಳ ಬೇಕೆಂತಲೂ ಪಯಣದ ಟಿಕೇಟುಗಳನ್ನು ಸರಿಯಾಗಿ ಪರೀಕ್ಷಿಸಿದ ನಂತರವೇ ಹೊರಡುವದೆಂತಲೂ ಸುಗ್ರೀವಾಜ್ಞೆ ಹೊರಡಿಸಿಕೊಂಡಿದ್ದೇನೆ.




ಬಂದ್- ಹೀಗೂ ಒಂದು ಮುಷ್ಕರ



ಜಪಾನ್ ನಲ್ಲೊಂದು ಚಪ್ಪಲಿ ಅಥವಾ ಶೂ ಮಾಡುವ ಪ್ಯಾಕ್ಟರಿಯೊಂದಿತ್ತು.
ಅಲ್ಲಿನ ಕೆಲಸಗಾರರು ಒಮ್ಮೆ ಬೇಡಿಕೆಯೊಂದು ಮುಂದಿಟ್ಟರು.

ಆದರೆ ಆ ಕಂಪೆನಿಯ ಮುಖ್ಯಸ್ಥರು ಒಪ್ಪಿಗೆ ನೀಡಲಿಲ್ಲ.

ಎಲ್ಲಾ ಕೆಲಸಗಾರರೂ ಸೇರಿ ಮುಷ್ಕರ ಹೂಡಲು ನಿರ್ಧರಿಸಿ ಕಂಪೆನಿಗೆ ಮುಂದಾಗಿಯೇ ತಿಳಿಸಿದರು.

ಮ್ಯಾನೇಜ್ಮೆಂಟ್ ಚಕಾರ ಎತ್ತಲಿಲ್ಲ.

ಮುಷ್ಕರದ ದಿನ ಬಂತು.

ಆದಿನ ಎಂದಿನಂತೆ ಕೆಲಸಗಾರರೆಲ್ಲರೂ ಸಮಯಕ್ಕೆ ಮುಂಚೆಯೇ ಕಂಪೆನಿಯ ಪ್ರಾಂಗಣದಲ್ಲಿ ಹಾಜರಿದ್ದರು.

ಸಮಯಕ್ಕೆ ಸರಿಯಾಗಿಯೇ ಎಂದಿನಂತೆ ತಮ್ಮ ಕೆಲಸ ಆರಂಭ ಮಾಡಿದರು.

ಅವರ ಈ ಮುಷ್ಕರ ನಾಲ್ಕು ದಿನದ ವರೆಗೆ ಮುಂದುವರಿಯಿತು.

ಆದರೆ ಐದನೇ ದಿನ ಹೌಹಾರಿದ ಕಂಪೆನಿಯ ಅಧಿಕಾರಿಗಳಿಗೆ ಅವರ ಬೇಡಿಕೆ ಈಡೇರಿಸಲೇ ಬೇಕಾಯ್ತು .

ಕಾರಣ ಗೊತ್ತೇ..?

ಕಂಪೆನಿಯ ಕೆಲಸಗಾರರು ಮುಷ್ಖರ ನಡೆಸಿದ ಅಷ್ಟೂ ದಿನವೂ ಒಂದೇ ಕಾಲಿನ ಶೂ ತಯಾರಿಸುತ್ತಿದ್ದರು.
ನಾಲ್ಕನೆಯ ದಿನಕ್ಕೆ ಎಂಟು ಸಾವಿರ ಶೂ ಅದೂ ಎಡಗಾಲಿನದ್ದೇ...
ಒಂದೇ ಕಾಲಿನ ಶೂ ಎಷ್ಟು ತಯಾರಾದರೇನು..?

ನೋಡಿ ಗೆಳೆಯರೇ..?

ಇದಲ್ಲವಾ..?

ನಿಜವಾದ ಮುಷ್ಕರ ಎಂದರೆ..?

ಹೀಗೆ ಉತ್ಪಾದನೆಯಲ್ಲಿ ಅಥವಾ ವ್ಯಾಪಾರ ವಹಿವಾಟಿನಲ್ಲಿ ನಮಗೆ ನಷ್ಟ ಮಾಡಿಕೊಳ್ಳದೇ ಮುಷ್ಕರ ನಡೆಸಲು ಯೋಚಿಸಿದರೆ
ಈ ಮುಷ್ಕರದಿಂದ ಇಡೀ ರಾಷ್ಟ್ರಕ್ಕಾಗುವ ಹಾನಿ ತಪ್ಪಿಸಬಹುದಲ್ಲವೇ..?

Thursday, April 16, 2015

ಸತ್ತರೆ ಸಾಯಲಿ ಬಿಡಿ ನಮ್ಮ


ರೈತ ಮತ್ತು ಯೋಧ ನಮ್ಮ ಜೀವನದ ಪ್ರಾಮುಖ್ಯ ಬ್ರಹಸ್ಪತಿಗಳು.
ಒಬ್ಬ ಅನ್ನದಾತ ಇನ್ನೊಬ್ಬ ನಮ್ಮನ್ನು ಕಾಯುವವ.
ಇವರಿಬ್ಬರೂ ಸಂತಸದಿಂದರೆ ನಾವೂ ಸಂತಸದಿಂದಿದ್ದೇವು. ನಾವು ತಿನ್ನುವ ಅನ್ನ ಇವರೀರ್ವರ ಋಣದಲ್ಲಿದೆ.
ಆ ಋಣವನ್ನು ತೀರಿಸುವ ಅವಕಾಶವೆಂದರೆ ಇವರಿಬ್ಬರನ್ನು ಸಂತಸದಿಂದಿರುವಂತೆ ಮಾಡುವುದು ಅವರ ಕನಿಷ್ಟ ಅವಶ್ಯಕಥೆ ಪೂರೈಸುವ ಮೂಲಕ.
ಆದರೆ ನಾವು ಹಾಗೆ ಮಾಡುತ್ತಿದ್ದೇವೆಯೇ..?
ನಮ್ಮ ರಾಜಕೀಯ ಮುತ್ಸದ್ದಿಗಳು ಮತ್ತು ವ್ಯಾಪಾರೀ ದುರಂಧರರು ಮತ್ತು ಇವರ ಬಾಲಬಡುಕರನ್ನು ಸಾಕುವುದರಲ್ಲಿಯೇ ನಮ್ಮೆಲ್ಲಾ ಬೆವರು ಆವಿಯಾಗುತ್ತಲಿದೆ.
ಅಲ್ಪ ಸ್ವಲ್ಪ ಉಳಿದ ಸಮಯ ನಮ್ಮ ಸ್ವಾರ್ಥಕ್ಕೆ...
ಪ್ರತಿಕ್ಷಣ ಅವರೀರ್ವರ ಕಗ್ಗೊಲೆಯಾಗುತ್ತಲಿದೆ...    
ಅವರನ್ನು ಉಳಿಸಲು ಸಮಯ ಮನಸ್ಸು ಛಾತಿ ನಮ್ಮಲ್ಲಿದೆಯೇ..?
ಸಾವಿನ ಕ್ಷಣಗಳು

ರೈತನ
ಈ ಕ್ಷಣದ ಹಸಿವಿನ ಜತೆ
ಗ್ರೀಷ್ಮದ ಕರಿ ನೆರಳು
ಸ್ವಾರ್ಥ ಸಂಸಾರದ
ಈ ನನ್ನ ಬದುಕಿನಲ್ಲಿ
ಕಸುವಿಲ್ಲದ ಕೈಗಳಿಗೆ ಸಿಗುವುದು
ತನ್ನವರ ಆಸರೆಯಿಲ್ಲದ
ವಿಷಾದದ ಮರಳ ಸೊಉಧ
ಕದಡುತ್ತಿರುವ ಜಾಗತೀಕರಣದ ಜಗದಲ್ಲಿ
ಬಾಚಿಕೊಂಡ ಶೋಷಣೆಯ ಕರಾಳ ಕೈಗಳು,
ಕಲುಷಿತ ಬೀಜದ,ಸಾಲಸೋಲದ
ನೆಪದಲ್ಲಿ ನೆಲ,ಜಲ
ಮಣ್ಣು, ಕಲ್ಲು, ಮರ, ಲೂಟಿ
ಬೆಟ್ಟದಂತಿರುವ ಕಷ್ಟಗಳೆಡೆಯಲ್ಲೇ
ದಿಕ್ಕೆಟ್ಟ ಏಕಾಂಗಿಯ
ಸ್ಥಬ್ದವಾದ ಗತಿ

ಸಾಕೆನಿಸಿತು ನನಗೆ
ಈ ಸೈನೀಕ ಜೀವನದ

ಸಾವು ಬದುಕಿನ ಜೂಜು
ವಾಸ್ತವಿಕತೆಯ ಇದಿರು ನಾಳಿನ
ಕನಸುಗಳು ಅರ್ಥವಿಹೀನ
ಬಾವುಕ ಆತ್ಮ ಸಮರ್ಪಣೆ
ಸಂಸಾರ,ದೇಶ ಪ್ರೇಮಗಳೆಲ್ಲ
ಜೀವನದ ಅರ್ಥಗಳಾಗಿಯೂ
ಜತೆಯಲ್ಲೇ ವ್ಯರ್ಥ ಸಾಯುತ್ತಿವೆ
ಗತಿ ಪ್ರಾಪ್ತಿಗೆ ಕಾಯುತಿರುವ
ಸಾವಿರಾರು ದಿಕ್ಕೆಟ್ಟ, ರಕ್ತ ಸಿಕ್ತ
ಅರೆ ಬರೆ ದೇಹಗಳು
ನಿದ್ದೆಯೂ ಸಮೀಪಿಸಲು ಹೆದರುತಿಹ
ಸುತ್ತಲಿನ ನಗ್ನಾತಿನಗ್ನ ಮಲೆಗಳು
ಹೆಪ್ಪುಗಟ್ಟಿದ ಬಿಳಿ ಮಂಜು
ಗತಿ ಶೀಲ ಎಲರು

ಜೀವನ ಕ್ಷಣಿಕವಾಗುತ್ತಿದೆ
ಎಲ್ಲವೂ ಕ್ಷಣದಲ್ಲೇ ಸ್ಥಬ್ದವಾಗಲು
ಇನ್ನೂ ಉಳಿದು ಮಾಡುವದೇನನ್ನು
ಸತ್ತರೆ ಸಾಯಲಿ ಬಿಡಿ ನನ್ನ
ಮತ್ತೆ ಹುಟ್ಟಿ ನಿಮ್ಮ ಋಣ ತೀರಿಸಲು