Friday, April 17, 2015

ರಾತ್ರಿ ಪಯಣವೆಂಬ ಮಾಯಾಲೋಕದಲ್ಲಿ


ನನಗೆ ಅಚ್ಚರಿ ತರುವ ಅನೇಕ ವಿಷಯಗಳಲ್ಲಿ ಧೂಮ್ರ ಶಕಟದಲ್ಲಿನ ನಿಶಾಚರ (ರಾತ್ರೆ ಬಸ್ಸಿನ ) ಪಯಣವೂ ಒಂದು. ಇದರಲ್ಲೇನಿದೆ ಮಹಾ ಅಂತ ನೀವು ಹುಬ್ಬೇರಿಸಿದಿರಾದರೆ ಈ ಬರಹ ಪೂರ್ತಿಯಾಗಿ ಓದಿ  ತಿಳಿಸಿ. ಅಂದರೆ ಬರೇ ಲೆಕ್ಕಾಚಾರದ ಸರಾಸರಿಗಾಗಿ  ೩೦ ಅಂಕಣಗಳಲ್ಲಿ ಗಂಟೆಗೆ ೫  ಬಸ್ಸು  ಅಂತ ಗಣನೆಗೆ ತೆಗೆದುಕೊಂಡರೂ ರಾತ್ರಿಯಲ್ಲಿ ೧೫೦೦ ಬಸ್ಸುಗಳು ಅಂದರೆ ಸರಾಸರಿ ಒಂದು ಬಸ್ಸಿನಲ್ಲಿ ೪೦ ಜನ ಅಂದುಕೊಂಡರೂ ೬೦ ಸಾವಿರ ಜನ ರಾತ್ರೆ ಸಂಚರಿಸುವರು ಈ ಬಸ್ಸುಗಳಲ್ಲಿ. ನಾನು ತುಂಬಾನೇ ಸಾಧಾರಣವಾಗಿ ಈ ಲೆಕ್ಕಹಾಕಿದ್ದೇನೆ. ಇದರ ತಪ್ಪು ಸರಿಯ ವಿಮರ್ಶೆಯ ಗೋಜಲಿನಲ್ಲಿ ನಿಮ್ಮನ್ನು  ಸಿಕ್ಕಿಸುವದು ನನ್ನ ಉದ್ದೇಶವಲ್ಲ. ಅದು ಸಾಧುವೂ ಅಲ್ಲ.

ಎಲ್ಲೆಲ್ಲಿಂದ ಎಲ್ಲೆಲ್ಲಿಯವರೆಗು ಅತ್ತಿಂದಿತ್ತ ಇತ್ತಿಂದತ್ತ ಸಂಚರಿಸುತ್ತಿರುವ ಈ ನಿಶಾಚರ ಧೂಮ್ರ ಶಕಟಗಳಲ್ಲಿ ನಿದ್ದೆಯಮಲಲ್ಲಿ ಮುಳುಗೇಳುತ್ತಲೇ ಉದಯಕ್ಕೆ ಕರಾರುವಾಕ್ಕಾಗಿ ಅವರವರ ಗಮ್ಯ ಸೇರಿಸುವ ಉದ್ದಿಶ್ಯದ ಗಹನ ಸಹಜ ಕ್ರಿಯೆಯ ಪಾಲುದಾರರಾದ ಸಂಚಾಲಕ ಹಾಗೂ ನಿರ್ವಾಹಕರೇ ನನ್ನ ಮೊದಲ ಅಚ್ಚರಿ. ನಾವೆಲ್ಲಾ ನಿದ್ದೆಯ ಮಹಾ ( ಕೆಲವು ಮಹಾನುಭಾವರ ಗೊರಕೆ ಪೊರಕೆಯ ಹೊರತಾಗಿಯೂ) ಅಮಲಲ್ಲಿ ತೇಲಾಡುತ್ತಿರುವಾಗ, ಅಲ್ಲಲ್ಲಿ ಕೆಲವು ಅಪವಾದಗಳಿದ್ದರೂ ಕೂಡಾ.  ಇವರಿಬ್ಬರೂ ಎಚ್ಚರವಿದ್ದು ನಮ್ಮನ್ನು ನಮ್ಮ ನಮ್ಮ ಗಮ್ಯಕ್ಕೆ ಅನೂಚಾನವಾಗಿ ತಲುಪಿಸಿ ಬಿಡುವರು. ನಾವು ನಮ್ಮದೇ ಮಯಕದಲ್ಲಿ ಬಸ್ಸು ಹತ್ತಿ ನಮ್ಮ ನಮ್ಮ ಅಧಿಕೃತ ಆಸನಗಳಲ್ಲಿ ಆಸನಾರೂಢರಾಗಿ ಬಸ್ಸು ಹೊರಡುವವರೆಗೆ ನಮ್ಮದೇ ಊಹಾ ಸಾಮ್ರಾಜ್ಯದಲ್ಲಿದ್ದು ಕಣ್ಣು ಮುಚ್ಚಿದರೆ, ಪುನಃ ಕಣ್ಣು ಬಿಟ್ಟಾಗ ಬೆಳಗಾಗಿ ನಮ್ಮ ಗಮ್ಯವನ್ನು ತಲುಪಿಯೇ ಬಿಟ್ಟಿರುತ್ತೇವೆ.


ನನಗೆ ಈ ನಿಶಾ ಮಾರ್ಗದ ಮಧ್ಯೆಯಲ್ಲಿ ಪ್ರಕೃತಿಯ ಕರೆಗೆ ಹೋಗುವ ಅಭ್ಯಾಸವುಳ್ಳ ಹಲವರಂತೆ ನನಗೂ ಇದೆ. ಸೀದಾ ಬಸ್ಸಿಳಿದು ಯಾವುದಾದರೂ ಪರದೆ / ಅಡ್ಡ ಇದೆಯಾ ಅಂತ ಹುಡುಕಿ ಭಾರ ಇಳಿಸಿದರೆ ಆಯ್ತು. ಆ ನಿಶೆಯಮಲಲ್ಲಿ ಯಾರದ್ದೋ ಬಾಗಿಲು ಹಾಕಿದ್ದ ಮನೆಯ, ಅಂಗಡಿಯ ಗೋಡೆಯ ಅಥವಾ ಬಾಗಿಲ ಪಕ್ಕ ಹೀಗೆ ಎಲ್ಲೆಂದರಲ್ಲಿ ನಿಂತು ಜಿಪ್ ತೆಗೆಯುವ ಮಹಾನುಭಾವರನ್ನೂ ಕಂಡಿದ್ದೇನೆ. ಪಾಪ ಬೆಳಗೆದ್ದು ಅವರೆಲ್ಲಾ ಆ ಶಗಡಿಗೆ ಎಷ್ಟು ಬಯ್ಕೊಂಡರೋ ಏನೋ. ಕೆಲವೊಮ್ಮೆ ನಾಯಿಗಳೆದ್ದು ಗಲಾಟೆ ಮಾಡಿ ಅವುಗಳ ಮಾಲೀಕರನ್ನೆಬ್ಬಿಸಿದಾಗ ಅರ್ಧದಲ್ಲೆ ಈ ಮಹಾನುಭಾವರು ಬೇರೆಡೆಗೆ ಓಡುವುದೂ ಉಂಟು...ರಾತ್ರೆ ನಿದ್ದೆ ಮತ್ತಿನ  ಪ್ರಯಾಣದ ಈ ಕಾರ್ಯ ವೈಖರಿಯೇ ಅಂತಹದ್ದು ಬಿಡಿ. ಗಂಡಸು ಮಕ್ಕಳದ್ದು ಈ ಪರಿಯಾದರೆ ಮಹಿಳೆಯರಿಗೆ ಅದರಲ್ಲೂ ಹಿರಿಯ ಮಹಿಳೆಯರಿಗೆ ಯಮ ಯಾತನೆ. ನಮ್ಮ ಹಾಗೆ ಎಲ್ಲೆಂದರಲ್ಲಿ ಹೊರ ಹೋಗುವಂತಿಲ್ಲ. ಇದನ್ನೂ ನನ್ನ ಮನೆಯ ಗೃಹಲಕ್ಷ್ಮಿಯವರು ಒಮ್ಮೊಮ್ಮೆ ಗಂಡಸರ ಈ ಸೌಕರ್ಯವನ್ನು ಸಂಕಲನಕ್ಕೂ ಒಮ್ಮೊಮ್ಮೆ ವ್ಯವಕಲನಕ್ಕೂ ಉಪಯೋಗಿಸುದುಂಟು. ಹೀಗಾಗಿ  ನಮ್ಮ ಸಂಸಾರ ಸಮೇತದ ಪಯಣಗಳಲ್ಲೆಲ್ಲಾ ನಾನೇ ಕಂಡಕ್ಟರ್ ಮತ್ತು ವಾಹನ ಚಾಲಕರಿಗೆ ರಿಕ್ವೆಶ್ಟ್ ಮಾಡಿ ಹೋಟೆಲ್ ನಲ್ಲಿ ನಿಲ್ಲಿಸಿದ್ದೂ ಉಂಟು. ಹೋಟೆಲ್ಲಿನ ಜವಾಬ್ದಾರಿಯ ಮತ್ತೊಂದು ಕಥೆ ಸರಕಾರೀ ವಾಹನಗಳಿಗೆ ಅವರವದ್ದೇ ಆದ ಅಡ್ಡಾ ಇದೆ. ಮೂಲಭೂತ ಸೌಕರ್ಯವೇ ಇಲ್ಲದ ಕೆಲವಾದರೆ ಪಯಣಿಗರನ್ನು ಸಿಕ್ಕಾಪಟ್ಟೇ ವಸೂಲಿ ಮಾಡುವವರು ಇನ್ನು ಕೆಲವರು ಆದರೂ ನಮ್ಮ ಅವಶ್ಯ ಕಥೆ ಪೂರೈಸೀತಲ್ಲ ಎಂದು ಸಂತೋಷ ಪಟ್ಟುಕೊಳ್ಳುವವರು ಎಲ್ಲರೂ.


ಹಲಕೆಲವೊಮ್ಮೆ ರಾತ್ರೆ ಹೀಗೆ ಸಂಚರಿಸುವಾಗ ನನಗೆ ಪ್ರಕೃತಿ ಕರೆಯಿಂದಾಗಿಯೋ ಸಹಚಾಲರ ಮರುಗುಗೊರಗುವಿನ ಪ್ರಕಟನೆಯಿಂದಾಗಿಯೋ ಎಚ್ಚ್ರಗೊಂಡಾಗ ಅರೆ ನಿದ್ದೆ ಅರೆ ಎಚ್ಚ್ರದ ಅಯೋ ಮಯ ಸ್ಥಿತಿಯಲ್ಲೇ ಆ ಕತ್ತಲೆಯ ರಾತ್ರೆಯ ಬಸ್ಸಿನ ಹೆಡ್ ಲೈಟ್ಗಳ ಬೆಳಕಿನಲ್ಲಿ ಸುತ್ತಲ ಪರಿಸರವೇ ಅದೆಷ್ಟೋ ಅರಾಜಕತೆ ಸೃಷ್ಟಿಸ ಬಲ್ಲುದು. ಕೆಲವೊಮ್ಮೆಯಂತೂ ನಾನು ಬಸ್ಸಿನಲ್ಲಿರುವೆನೋ ಅಥವಾ ಯಾವುದೋ ಮಾಂತ್ರಿಕ ವಾಹನದಲ್ಲಿ ಆಕಾಶಯಾನದಲ್ಲಿರುವೆನೋ ಎಂಬ ಭ್ರಮೆಯೂ. ಕೆಲವೊಮ್ಮೆ ರಾಮಾಯಣದ ಮಯೂರ ವಿಮಾನದಲ್ಲಿ ಕಾಡಿನ ದೊಡ್ಡ ದೊಡ್ಡ ವೃಕ್ಷಗಳನಡುವೆ ಇನ್ನೇನು ದಾರಿಯಲ್ಲಿ ರಾಕ್ಷಸರಂತೆ ನಿಂತು ನಮ್ಮ ದಾರಿಯಡ್ದಗಟ್ಟಿದವರಂತೆ, ಅಥವಾ ಇನ್ನೇನು ನಮ್ಮ ಕಥೆಯೇ ಮುಗಿಯಿತು ಅನ್ನುವ ಭ್ರಮೆಯೂ, ಅಥವಾ ಆಕಾಶದಲ್ಲಿ ತೇಲುತ್ತಾ ಮೋಡಗಳ ಮಧ್ಯೆ ತೂರಿಕೊಂಡು   ಮುಂದೋಡುತ್ತಿರುವ ಪುಷ್ಪಕ ವಿಮಾನವೋ  ಎಂಬ ಭ್ರಮೆಯೂ. ಒಮ್ಮೊಮ್ಮೆ ಕುಂಬಾರ ಹ್ಯಾರಿಯ ಹಾರುವ ಪೊರಕೆಯಂತೆಯೂ ಕಂಡುದುಂಟು. ನೀವೇನೋ ನಾನು ಕಥೆ ಪುಸ್ತಕ ಓದಿದ್ದು ಜಾಸ್ತಿಯಾಯ್ತೋ ಅಥವಾ ಸೀನನೆಂದ ಹಾಗೆ ಮಾವಿನ ಕಾಯಿಯ ತಂಬುಳಿಯ ಮಹಿಮೆ ಅಂದರೂ ನಾನು ಏನೂ ಅಡ್ಡ ಹೇಳುವುದಿಲ್ಲ ಬಿಡಿ.

ಈ ನಿಶಾ ಪಯಣದ  ಪಜೀತಿಗಳನ್ನೂ ನಿಮ್ಮ ಮುಂದಿಡಬೇಕೆನ್ನಿಸಿತು.  
ಒಮ್ಮೆ ನಾನು ಸಂಸಾರ ಸಮೇತನಾಗಿ ಊರಿಗೆ ಹೋಗುತ್ತಿದ್ದೆ. ರಸ್ತೆ ಮಧ್ಯೆ ನಡುರಾತ್ರಿಯಲ್ಲಿ ಒಂದು ಕಡೆ ಪ್ರಕೃತಿಯ ಕರೆಗೆಂತ ಬಸ್ಸು ನಿಲ್ಲಿಸಿದ್ದರಿಂದ ಇಳಿದೆ. ಯಾವುದೊ ನಿಯತ ಕಾಲಿಕೆ ಕಂಡಿತು ಪಕ್ಕದ ಅಂಗಡಿಯಲ್ಲಿ. ಅದನ್ನು ತಕ್ಕೊಂಡು ಪಕ್ಕದ ಹೋಟೆಲ್ಲಿಗೆ ನುಗ್ಗಿದೆ. ಕಂಡಕ್ಟರ್ ಡ್ರೈವರ್ ಕಾಣಿಸುವ ಹಾಗೆ ನಾನು ಕುಳಿತು ನನ್ನ ಕಾಫಿ ಹೀರುತ್ತಿದ್ದೆ. ನನ್ನ ಹಳೇ ಸ್ನೇಹಿತರೊಬ್ಬರು ಸಿಕ್ಕಿ ಹಿಂದಿನ ನೆನಪನ್ನು ಜ್ಞಾಪಿಸಿಕೊಂಡೆವು. ನನ್ನ ದೃಷ್ಟಿಯಿಂದ ಕಿಂಚಿತ್ತೂ ನಾನು ನಮ್ಮ ನಿರ್ವಾಹಕ, ಚಾಲಕರನ್ನು ಅತ್ತಿತ್ತ ಅಲುಗಾಡಗೊಟ್ಟಿರಲಿಲ್ಲ. ಅದೇಕೋ ನಮ್ಮ ನೆನಪೆಲ್ಲಾ ತಾಜಾ ಆಗಿ ಮುಗಿದಾಗ ಅವರೇ ಕೇಳಿದ್ದರು ಎಲ್ಲಿಗೆ ಹೊರಟಿರಿ ಅಂತ. ಆಗಲೇ ನೆನಪಾಗಿ ಇದಿರಿಗೆ ನೋಡುತ್ತೇನೆ ನಾನು ದೄಷ್ಟಿಯನ್ನೆಟ್ಟು ಇಟ್ಟವರು  ಅಲ್ಲಿಯೇ ಇದ್ದರೂ ಯಾವ ಮಾಯಕದಲ್ಲೋ ನಾನು ಬಂದ ಬಸ್ಸು ಮಾತ್ರ ಮಂಗ ಮಾಯವಾಗಿಬಿಟ್ಟಿತ್ತು. ನನ್ನ ಹತ್ರ ಅಂದಿನ ಟಿಕೆಟೂ ಇಲ್ಲ, ಊರಿಗೆ ಹೋಗಲು ಹಣವೂ. ಅವೆಲ್ಲ ಪೂರಾ ಕ್ಯಾಷಿಯರ್ ಆದ ನನ್ನ ಗೃಹ ಮಂತ್ರಿಯವರ ಹತ್ರವೇ ಉಳಿದು ಬಿಟ್ಟಿತ್ತು. ಇನ್ನೇನು ಮಾಡುವುದು ನನ್ನ ಸ್ನೇಹಿತರು ನನಗೂ ನಿನ್ನ ಹಾಗೇ ಆದರೆ ಕಷ್ಟ ಮಾರಾಯಾ ಅಂತ ಅವರ ಬಸ್ಸು ಹತ್ತಿಯೇ ಬಿಟ್ಟರು. ನನ್ನ ಕಥೆ..? ಅಂತೂ ರಸ್ತೆಯ ಪಕ್ಕ ಬಂದು ನಿಂತೆ, ನನ್ನ ದೇವರು ನನ್ನ ಕೈ ಬಿಟ್ಟಿರಲಿಲ್ಲ, ಯಾವನೋ ಪುಣ್ಯಾತ್ಮ ಕಾರಿನಲ್ಲಿ ಬರುತ್ತಿದ್ದವ ನಿಲ್ಲಿಸಿ ನನ್ನ ಅಹವಾಲು ಕೇಳಿ ನನ್ನನ್ನು ಕೂರಿಸಿಕೊಂಡು ಕನಸ್ಸಿನಲ್ಲಿನ ಹಾಗೇ ಮುಂದಿನ ಊರಿನಲ್ಲೇ ಆ ಬಸ್ಸನ್ನು ಅಡ್ಡಗಟ್ಟಿ ನಿಲ್ಲಿಸಿದ, ನನ್ನ ಮಗನೂ ಶ್ರೀಮತಿಯವರ ಅಳುಮುಖ ಬಸ್ಸಿನಲ್ಲಿ ಕೂಗಾಡುತ್ತಿದ್ದವರ ಗಲಾಟೆ ಎಲ್ಲವೂ ನನ್ನ ನೋಡಿದ ಕೂಡಲೇ ಮಂಗ ಮಾಯವಾಯ್ತು. ಅದು ನನ್ನ ಮಗನ ಗಲಾಟೆಯಿಂದಾಗಿ ಅವರ ನಿದ್ರೆ ಗೆ ತೊಂದರೆಯಾದುದರಿಂದ ಕೂಡಾ ಇರಬಹುದು.

ಇನ್ನೊಮ್ಮೆ ಹೀಗೇ ಚಾಲಕ ಮಾತ್ರ ವಿರುವ ಬಸ್ಸಿನಲ್ಲಿ ಮಹಾಶಯರೊಬ್ಬರು ಬೆಳಿಗ್ಗೆ ಬಸ್ಸಿನಿಂದ ಇಳಿದಾಗಲೇ ಗೊತ್ತಾಗಿದ್ದುದು  ತಾನು ಹತ್ತಿದಲ್ಲಿಗೇ ವಾಪಾಸ್ಸೂ ಬಂದಿರುವೆ ಅಂತ, ನನ್ನ ಅಣ್ಣನ ಮಗನ ಉಪನಯನಕ್ಕೆಂತ ಹೊರಟ ನಾವಂತೂ ಮಧ್ಯೆ ಮಧ್ಯೆತೊಂದರೆಯಾಗಿ , ತಡವಾಗಿ ಎಲ್ಲರ ಕೊನೆಯ ಪಂಕ್ತಿಯ ಊಟವೂ ಮುಗಿದು ಕಲ್ಯಾಣ ಮಂಟಪದವರು ಬಾಗಿಲು ಹಾಕುವ ಸಮಯಕ್ಕೆ ಹೋಗಿ ತಲುಪಿದ್ದೆವು.

ಇದಕ್ಕಿಂತಲೂ ಮಜವಾಗಿರುವ ಇನ್ನೊಂದು ಘಟನೆ.  ರಜೆ ಮುಗಿಸಿ ಮಂಗಳೂರಿನ ಬಸ್ ನಿಲ್ದಾಣದಿಂದ ಎಂದಿನಂತೆ ನಾವು ಮೂವರೂ ಬೆಂಗಳೂರಿನ ಬಸ್ ಆ ರಾತ್ರೆ ಹತ್ತಿದೆವು. ೧೫,೧೬,೧೭ ಟಿಕೆಟ್ ನೋಡಿ ಅದರಲ್ಲಿ ಗೆರೆಯೆಳೆದ ಮೇಡಮ್ ಕಂಡಕ್ಟರ್ ನಮ್ಮ ನಮ್ಮ ಜಾಗದಲ್ಲಿ ಕುಳ್ಳೀರಿಸಿದಳು. ಸ್ವಲ್ಪವೇ ಸಮಯದಲ್ಲಿ ನಮ್ಮ ಧೂಮ್ರ ಶಕಟ ಕಂಕನಾಡಿಯಲ್ಲಿ ನಿಂತಿತು. ಅಲ್ಲಿಂದ ನಮ್ಮ ಹಾಗೇ ಮೂವರ ಸಂಸಾರವೊಂದು ಬಸ್ ಹತ್ತಿತು. ಈಗ ಬಂತು ನೋಡಿ ತಕರಾರು. ಅವರದ್ದೂ ಅದೆ ೧೫, ೧೬, ೧೭ ನಂಬ್ರದ ಟಿಕೆಟು. ಈಗ ಮಾಡುವುದೇನನ್ನು?. ಕಂಡಕ್ಟರಮ್ಮ ಮತ್ತು  ನಾನು, ಹೀಗಾಗಲು ಸಾಧ್ಯವೇ ಇಲ್ಲವಲ್ಲ ಅಂದರೂ, ಈ ಅವಾಂತರಕ್ಕೇನು ಮಾಡೋಣ. ಇನ್ನೊಮ್ಮೆ ಅವರ ಟಿಕೇಟುಗಳನ್ನು ಪರಿಶೀಲಿಸಿದ್ದಾಯ್ತು, ನೂರು ಪ್ರತಿಶತ ಅವರ ಟಿಕೇಟುಗಳು ಸರಿಯಾಗಿಯೇ ಇವೆ, ಉಳಿದದ್ದು ನಮ್ಮ ಟಿಕೇಟು..?   ಈಗ ನೋಡಿದರೆ ಅದು ಅವತ್ತಿನದ್ದಲ್ಲದೇ ಮಾರನೆಯ ರಾತ್ರಿಯ ಟಿಕೇಟ್ ಆಗಿ ಹೋಗ ಬೇಕೇ ಶಿವ ಶಿವಾ..? ಅಂದರೆ ನಾವು ನಾಳೆಯ ಸರೀ ರಾತ್ರೆಯ ಬಸ್ಸಿನ ಬದಲು ಇವತ್ತೇ ಹತ್ತಿ ಕುಳಿತಿದ್ದೆವು. ಸರ್ದಾರ್ಜಿ ಆಗುವದೆಂದರೆ ಹೀಗೆಯೇ.. ಅಲ್ಲವೇ? ಕಂಡಕ್ಟರಮ್ಮ ನನಗೆ ಇಳಿಯಲು ಹೇಳಿತು, ಆದರೆ ನಮ್ಮ ಮುಂದಿನ ಆಸನಗಳು ಖಾಲಿ ಇದ್ದುದನ್ನು ನೋಡಿ ನಾನು ಬೆಂಗಳೂರಿನ ಟಿಕೇಟುಗಳನ್ನು ತೆಗೆದುಕೊಂಡು ಕೆಂಪೇಗೌಡ ನಿಲ್ದಾಣದಲ್ಲಿ ನನ್ನ ಮೊದಲ ಮೂರೂ ಟಿಕೇಟುಗಳನ್ನು ರದ್ದು ಮಾಡಿಸಿದ್ದೆ ಮಾರನೆಯ ಬೆಳಿಗ್ಗೆ.
ಅಂತೂ ಅಡಿಗೆ ಬಿದ್ದರೂ...!

ಈಗ  ಪ್ರತಿ ಪ್ರಯಾಣದಲ್ಲಿಯೂ ಸ್ವಲ್ಪ ಹಣ ಇಟ್ಟುಕೊಳ್ಳ ಬೇಕೆಂತಲೂ ಪಯಣದ ಟಿಕೇಟುಗಳನ್ನು ಸರಿಯಾಗಿ ಪರೀಕ್ಷಿಸಿದ ನಂತರವೇ ಹೊರಡುವದೆಂತಲೂ ಸುಗ್ರೀವಾಜ್ಞೆ ಹೊರಡಿಸಿಕೊಂಡಿದ್ದೇನೆ.




2 comments:

  1. ನನಗೂ ಇದು ಕಿವಿ ಮಾತು.

    ReplyDelete
  2. ಅಲ್ವಾ ಮತ್ತೆ

    ಇನ್ನಂತೂ ವಯಸ್ಸು ಜಾಸ್ತಿಯಾದ ಮೇಲೆಲ್ಲಾ ಎಲ್ಲಾ ಭಾಗಗಳೂ beyond economical repair (BER) ಆಗಿರುತ್ತವೆ.
    ಧನ್ಯ

    ReplyDelete