Wednesday, April 15, 2015

ಚಾಗದ ಭೋಗದ ಅಕ್ಕರದ ಗೇಯದ ಗೊಟ್ಟಿಯ ಅಲಂಪಿನ ಇಂಪುಗಳ್ಗೆ ಆಗರಂ ಆದ ಮಾನಿಸರೆ ಮಾನಿಸರ್"



ಜೀವನದ ಮೌಲ್ಯಗಳಿಗಾಗಿ ಬದುಕುವ ದೊಡ್ಡವರ ಕಥೆಗಳು

ಮೂರು ಹೃದಯ ಸ್ಪರ್ಶಿ ಘಟನೆಗಳು

ಒಂದು:


ಪಿ ಕಾಳಿಂಗರಾಯರು ಕನ್ನಡದ ಮೇರು ಗಾಯಕರು.ಹಳ್ಳಿ ಹಳ್ಳಿಗಳಲ್ಲಿ ಕನ್ನಡ ಗೀತೆಗಳನ್ನು ಹಾಡಿ ನಾಡಿನ ಅಭಿಮಾನ ಬೆಳೆಸಿದವರು.
ಒಮ್ಮೆ ಪಿ ಕಾಳಿಂಗರಾಯರನ್ನು ಅರಸೀಕೆರೆ ಹತ್ತಿರದ ಹಳ್ಳಿಯೊಂದಕ್ಕೆ ಕಾರ್ಯಕ್ರಮ ನೀಡಲು ಆಹ್ವಾನಿಸಲಾಗಿತ್ತು. ಅದಕ್ಕಾಗಿ ಮುಂಗಡ ಸಹಾ ನೀಡಲಾಗಿತ್ತು.ಆವತ್ತು ಕಾಳಿಂಗರಾಯರಿಗೆ ಬೆಂಗಳೂರಿನಲ್ಲಿನ ಕಾರ್ಯಕ್ರಮ ಮುಗಿಯಲು ಕೊಂಚ ತಡವಾಯ್ತು. ದಾರಿಯಲ್ಲಿ ಕಾರು ಹಾಳಾಯಿತು.ಆಗೆಲ್ಲಾ ಈಗಿನಂತೆ ಮೊಬಯಿಲ್ ಸೌಕರ್ಯವಿರಲಿಲ್ಲ, ಸಂಗಡಿಗರು ವಿಳಂಬವಾಗುತ್ತದೆ ಹಿಂತಿರುಗೋಣ ಎಂದರೂ ರಾಯರದು ಒಂದೇ ಹಠ, ಮುಂಗಡ ಪಡೆದಾಗಿದೆ, ಕಾರ್ಯಕ್ರಮಕ್ಕೆ ಹೋಗಲೇ ಬೇಕು. ಸಂಜೆ ೬ ಗಂಟೆಗೆ ಆರಂಭವಾಗಬೇಕಾಗಿದ್ದ ಸ್ಥಳಕ್ಕೆ ತಲುಪಿದಾಗ ಮಧ್ಯರಾತ್ರಿ ದಾಟಿತ್ತು. ಅಲ್ಲಿ ಪ್ರೇಕ್ಷಕರಿರಲಿ, ಸಂಘಟಕರೂ ಇರಲಿಲ್ಲ.ಎಲ್ಲರೂ ಕಾದು ಕಾದು  ಸಾಕಾಗಿ ಮನೆಗೆ ಹಿಂತಿರುಗಿದ್ದರು. ಸಂಗಡಿಗರು ಪೆಚ್ಚಾಗಿ ಖಾಲಿ ವೇದಿಕೆ ನೋಡುತ್ತಿರುವಂತೆಯೇ ರಾಯರು ವೇದಿಕೆ   " ಏರಿಸಿ.. ಹಾರಿಸಿ ಕನ್ನಡ ಬಾವುಟ" ಎಂದು ಗೀತೆ ಆರಂಭಿಸಿಯೇ ಬಿಟ್ಟರು. ಮುಂಗಡ ಪಡೆದ ಮೇಲೆ ಹಾಡಲೇ ಬೇಕು ಎಂಬುದು ಅವರ ದೃಢವಾದ ನಂಬಿಕೆ. ಆಗಲೇ ಜರಗಿತು ಪವಾಡ, ರಾಯರ ಕಂಚಿನ ಕಂಠ ಕೇಳಿ ಮೊದಲ ಗೀತೆ ಮುಗಿಯುವುದರೊಳಗೆ ಹತ್ತಿರದ  ಮನೆಯವರು ಕೇಳಲು ಬಂದು ಕುಳಿತರು. ಸುದ್ದಿ ಹಬ್ಬಿ ಊರ ಜನಗಳು ಬರಲಾರಂಭಿಸಿದರು. ಸಂಘಟಕರು ವಿಷಯ ತಿಳಿದು ಓಡೋಡಿ ಬರುವಷ್ಟರಲ್ಲಾಗಲೇ ಅರ್ಧ ಸಭಾಂಗಣ ಭರ್ತಿಯಾಗಿತ್ತು. ಅವತ್ತು ರಾಯರು ಆವೇಶ ಬಂದವರಂತೆ ಸೂರ್ಯ ಮೂಡುವವರೆಗೂ ಕನ್ನಡ ಹಾಡುತ್ತಲೇ ಹೋದರು. ಅಷ್ಟು ಹೊತ್ತಿಗೆ ಸಭಾಂಗಣ ತುಂಬಿ ತುಳುಕುತ್ತಿತ್ತು. ರಾಯರು ನಂಬಿದ ಮೌಲ್ಯಗಳು ಗೆದ್ದಿದ್ದವು. ಅವರು ಅಕ್ಷರಶಃ ಕನ್ನಡ ಬಾವುಟ ಎತ್ತಿ ಹಿಡಿದಿದ್ದರು.
ಎರಡು:
ಜಿ ಪಿ ರಾಜರತ್ನಂ ಕನ್ನಡದ ಹಿರಿಯ ಬರಹಗಾರರು, ಪರಿಚಾರಕರು . ಅವರು ತಮ್ಮ  ಇಳಿವಯಸ್ಸಿನಲ್ಲಿ ಮಲ್ಲೇಶ್ವರಂ ನಲ್ಲಿನ ಗಾಂಧಿ ಸಾಹಿತ್ಯ ಸಂಘದಲ್ಲಿ ಮಕ್ಕಳನ್ನು ಕೂಡಿಸಿಕೊಂಡು ಕಥೆಗಳನ್ನು ಹೇಳುತ್ತಿದ್ದರು. ಒಮ್ಮೆ ಆ ಬಡಾವಣೆಯಲ್ಲಿ ಪ್ರೌಢಶಾಲಾ      ವಿದ್ಯಾರ್ಥಿಯೊಬ್ಬನಿಗೆ ಶಾಲೆಯಲ್ಲಿ "ನೃಪತುಂಗ"ನ ಕುರಿತು ಪ್ರಬಂಧ ಬರೆಯಲು ಹೇಳಿದರು. ಅವನ ಮನೆಯವರು ಹೆಚ್ಚು ಓದಿದವರಲ್ಲ.ಅವನಿಗೆ ಹೇಗೆ ಮಾರ್ಗದರ್ಶನ ಮಾಡಬೇಕು ತಿಳಿಯದೇ ಹೋದರು. ಪರಿಚಿತರಿಂದ ಜಿ ಪಿ ರಾಜರತ್ನಂ ಗಾಂಧಿ ಸಾಹಿತ್ಯ  ಸಂಘದಲ್ಲಿ ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಾರೆ ಎಂದು ಮಾತ್ರ ತಿಳಿದಿದ್ದರು.ಅವರೆಷ್ಟು ದೊಡ್ಡ ಬರಹಗಾರರು ಎಂಬುದೂ ಗೊತ್ತಿರಲಿಲ್ಲ.
ಅವರ ಮಾತಿನಂತೆ ವಿದ್ಯಾರ್ಥಿ ಗಾಂಧಿ ಸಾಹಿತ್ಯ ಸಂಘಕ್ಕೆ ಸಂಜೆ ಆರು ಗಂಟೆಗೆ ಬಂದ. ಅವತ್ತು ರಾಜರತ್ನಂ ಕಾರ್ಯಕ್ರಮವೊಂದರಲ್ಲಿ  ಭಾಗಿಯಾಗಿದ್ದರು.ಹಾಗಾಗಿ ತಡವಾಗಿ ಬಂದರು. ರಾತ್ರಿ ಎಂಟರವರೆಗೂ ಕಾದು ಆ ಹುಡುಗ ಮನೆಗೆ ಹೋದ.ವಿಷಯ ತಿಳಿದ ರಾಜರತ್ನಂ ಆ ಹುಡುಗನ  ಮನೆ ಎಲ್ಲಿ ಎಂದು ಕೇಳಿದರು. ಗಾಂಧಿ ಸಾಹಿತ್ಯ ಸಂಘದವರಿಗೆ ಅವನ ಹೆಸರು ಮಾತ್ರ ಗೊತ್ತಿತ್ತು. ಅದನ್ನೇ ಆಧಾರವಾಗಿ ಹಿಡಿದ ರಾಜರತ್ನಂ ಅವರು ತಮ್ಮ ಆ ಇಳಿವಯಸ್ಸಿನಲ್ಲೂ ಒಂದು ಗಂಟೆ ಹುಡುಕಾಡಿ ಆ ಹುಡುಗನ ಮನೆ ಪತ್ತೆ ಮಾಡಿ ಅವನಿಗೆ ಪ್ರಬಂಧ ಬರೆಯಲು ಮಾರ್ಗದರ್ಶನ ನೀಡಿದರು.
ಮೂರು

೨೦೧೦ರಲ್ಲಿ ಶತಮಾನೋತ್ಸವ ಆಚರಿಸಿದ  
ಬಿ ಆರ್ ಪಂತಲು ಅವರ ಪದ್ಮಿನಿ ಪಿಕ್ಚರ್ಸ್ ನಲ್ಲಿ ಪ್ರತಿ ತಿಂಗಳೂ ೭ ನೇ ತಾರೀಖು ಯಾವ  ಕಾರಣಕ್ಕೂ ಸಂಬಳ ನೀಡುವುದನ್ನು ತಪ್ಪಿಸುತ್ತಿರಲಿಲ್ಲ, ಸಾಲ ಮಾಡಿಯಾದರೂ ಅವರು ಅದನ್ನು ನಡೆಸಿಕೊಂಡು ಬರುತ್ತಿದ್ದರು, ಏಳನೆಯ ತಾರೀಖು ಆರ್ಥಿಕ ಮುಗ್ಗಟ್ಟಿನಿಂದ ಸಂಬಳ ನೀಡಲಾಗಲಿಲ್ಲವೆಂದುಪಂತಲು ಅವರಿಗೆ ಎಂಟನೆಯ ತಾರೀಖು ತಿಳಿಯಿತು, ಅದು ಅವರ ಮೇಲೆ ಎಂತಹ ಪರಿಣಾಮ ಬೀರಿತು ಎಂದರೆ ತೀವ್ರ ಹೃದಯಾಘಾತದಿಂದ ಅವರು ನಿಧನರಾದರು.

No comments:

Post a Comment