Monday, April 13, 2015

ನಿಯಮಿತ



೧ ಆದಿ

ಮೃಗಾಲಯದ ಒಂದು ದೊಡ್ಡ ಮರ
ಅದರ ಕೆಳಗೆ ಸುಂದರ ಸಂಸಾರ
ಕೋಳಿ ಮತ್ತು ಮರಿಗಳು ನಾಲ್ಕು
ಚಿಲಿಪಿಲಿಗುಟ್ಟುತ್ತಿವೆ ಹಸಿವೆಯಲಿ
ಬೋನಿನವ ಇವಕ್ಕೆ ಕಾಳು ಹಾಕೋದೇ ಮರೆತಂತಿದ್ದ
ತಾಯಿ ತಾನೂ ಹಸಿದಿದೆ
ಮಕ್ಕಳಿಗೆಲ್ಲಿ ಕೊಟ್ಟೀತು ಪಾಪ

೨ ಮಧ್ಯ

ಹಸಿವೆಯ ತೀವೃತೆಯಿಂದಕಂಗೆಟ್ಟ
ಮರಿಯೊಂದು ಬಿದ್ದೇ ಬಿಟ್ಟಿತು ನೆಲಕ್ಕೆ
ಅದನ್ನೇ ಕಾಳೆಂದುಕೊಂಡು ಕುಕ್ಕಿದವು ಉಳಿದವು
ಅದರ ರಕ್ತ ಮಾಂಸವನ್ನೇ ಮತ್ತೆ ಮತ್ತೆ!
ತಾಯಿ ಪಾಪ ಏನು ಮಾಡೀತು ಸ್ವಲ್ಪ ಹೊತ್ತಿನಲ್ಲೇ
ಅದೂ ಮಕ್ಕಳ ಜತೆಗೇ ಸೇರಿತು

೩ ಅಂತ್ಯ

ಅದೇ ಮರದ ಮೇಲೆ ಮಲಗಿದೆ ಆ ಹೆಬ್ಬಾವು
ಉದ್ದಕ್ಕೆ ನೆಲದವರೆಗಿದೆ ಸತ್ತಿಲ್ಲ,
ಅದು ಇರೋದೇ ಹಾಗೆ ನಿಧಾನ ನಿಶ್ಚಲ
ಎಲ್ಲವಕ್ಕೂ ಅಂತ್ಯ ಬರೆದ ಬ್ರಹ್ಮ
ಈ ಕಥೆಗೂ ಬರೆದಿದ್ದ
ಆ ನಿಶ್ಚಲ ಮಹೋರಗ
ನಿದ್ದೆಯಿಂದ ಎದ್ದಿತು ಪಾಪ ಅದಕ್ಕೂ
ಹಸಿವಾಗಿತ್ತುಆದರೆ ಈ ಸಾರಿ ಮಾತ್ರ
ಆತ ಮರೆತಂತಿರಲಿಲ್ಲ

೪ ನೇಪಥ್ಯ

ಆ ಬೊನಿನಾಚೆಯ ಜೀವನ
ಇದಕ್ಕಿಂತ ಸ್ವಲ್ಪ ದೊಡ್ಡ ಮಟ್ಟು
ಪ್ರತಿ ದಿನ ಪ್ರತಿ ಕ್ಷಣ ನಾನಾ ಕಾರಣದೆ
ಮಾನಸಿಕವಾಗಿ ದೈಹಿಕವಾಗಿ
ತಮ್ಮವರನ್ನೇ ಕೊಲ್ಲುವರು ಕೆಲವರು
ಎಲ್ಲವ ನುಂಗಿ ಇರಿಕೆ ಹಾಕಿ ನೊಣೆವರು
ನಿಯಮಿತವಾಗಿ ಹಲವರು



1 comment:

  1. ನುಂಗಿ ಇರಿಕೆ ಹಾಕಿ ನೊಣೆವರು ಗೆಲ್ಲುವರು, ನನ್ನಂತಹ ಹೇಳ ಹೆಸರಿಲದ ಕೋಳಿ ಪಿಳ್ಳೆಯ ಕಾಪಾಡುವರಾರು?

    ReplyDelete