Thursday, April 2, 2015

ಓ ಬಾಲ್ಯವೇ ನೀನೆಷ್ಟು ಚೆನ್ನು ೨



೨.   ಸಾವಿನ ಬಾಗಿಲು

ನನಗೊಮ್ಮೆ ಅತಿ ಅನಾರೋಗ್ಯದಿಂದಾಗಿ ಐವತ್ತು ಕೇಜಿ ಭಾರದ ಈ ದೇಹ ಮೂವತ್ತಾಯ್ತು. ಯಾವ ಆಹಾರವೂ ಸೇರದೇ ತಿಂದದ್ದೆಲ್ಲಾ ವಾಂತಿಯಾಗಿ ದೇಹವು ಮತ್ತಷ್ಟು ದುರ್ಬಲವಾಗುತ್ತಾ ಹೋಯ್ತು. ನಡೆಯಲೂ ಸಾಧ್ಯಗದೇ ಸಿದ್ದಾಪುರದ ಸರಕಾರೀ ವೈದ್ಯರು ಕೈಚೆಲ್ಲಿ ತಂದೆಯವರಿಗೆ ದೊಡ್ಡ ಆಸ್ಪತ್ರೆಗೆ ಸೇರಿಸಲು ಹೇಳಿದರು. ಅಂತೆಯೇ ನನ್ನನ್ನು ಕುಂದಾಪುರರದ ಸರ್ಕಾರೀ ಆಸ್ಪತ್ರೆಗೆ ಸೇರಿಸಲಾಯ್ತು. ನೀರಿನ ಸೇವನೆಯ ವ್ಯತ್ಯಾಸದಿಂದಾಗಿ ಟೈಫಾಯಿಡ್, ಲಿವರ್, ಎಲ್ಲಾ ಖಾಯಿಲೆಗಳೂ ಒಟ್ಟಿಗೇ ಬಂದಿದ್ದವು ಅಂತ ಸರ್ಕಾರೀ ಡಾಕ್ಟರು ಹೇಳಿದರು. ಒಂದು ವಾರ ಅಸ್ಪತ್ರೆಯ ಬೆಡ್ ನಲ್ಲಿಯೇ ಮಲಗಿದ್ದೆ. ಏಳಲೂ ಆಗದಷ್ಟು ನಿತ್ರಾಣ. ಸರಕಾರೀ ಆಸ್ಪತ್ರೆ ನಮ್ಮ ಮನೆಯಿಂದ ಮನೆಯಿಂದ ಸುಮಾರು 28 ಕಿ ಮಿ ದೂರದಲ್ಲಿದ್ದರಿಂದ ದಿನಾ ಸರದಿಯಂತೆ ಅಮ್ಮ ಅಪ್ಪ ಅಣ್ಣ ಎಲ್ಲರೂ ಊಟ ತಿಂಡಿ ಮನೆಯಿಂದ ಆಸ್ಪತ್ರೆಗೆ ತರುತ್ತಲಿದ್ದು ರಾತ್ರೆ ನನ್ನ ಜತೆಯಿದ್ದು ದಿನದಲ್ಲಿ ಬದಲಾಗುತ್ತಿದ್ದರು.

ಆಗೆಲ್ಲಾ ಸರಕಾರೀ ಆಸ್ಪತ್ರೆಯೇ ಎಲ್ಲಾ ಸ್ಥರದವರಿಗೂ. ಪ್ರೈವೇಟ್ ಆಸ್ಪತ್ರೆ ಈಗಿನ ಹಾಗೆ ಇದ್ದಿರಲಿಲ್ಲ. ಅಲ್ಲಿನ ವೈದ್ಯರೂ ಅಷ್ಟೇ ಉಪಚಾರ ಔಶಧಿ ಎಲ್ಲವನ್ನೂ ಸರಿಯಾಗಿಯೇ ಕೊಡುತ್ತಿದ್ದರು, ಔಷದಿಯಿಂದಾಗಿ ನಾನು ಚೇತರಿಸಿಕೊಳ್ಳುತ್ತಿದ್ದೆನಷ್ಟೆ. ಆದಿನ ನನ್ನನ್ನು ನೋಡಲು ಚಿಕ್ಕಪ್ಪ ಬಂದಿದ್ದರು. ನಾನು ಶೌಚಾಲಯಕ್ಕೆ ಹೋಗಬೇಕಾಗಿತ್ತು. ಒಂದು ಕಡೆ ಅಪ್ಪ ಇನ್ನೊಂದು ಕಡೆ ಚಿಕ್ಕಪ್ಪ ನನ್ನನು ಕೈ ಹಿಡಿದು ನಡೆಸಿಕೊಂಡು ಮೂತ್ರಾಲಯಕ್ಕೆ ಕರೆತಂದರು, ನಾನು ಇಬ್ಬರಿಗೂ ಸಹಜವಾಗಿ ನೀವು ಇನ್ನೂ ಒಳಗೆ ಬರಬೇಕಾಗಿಲ್ಲವೆಂತಲೂ ನಾನೇ ಹೋಗಬಲ್ಲೆನೆಂತಲೂ ಹೇಳಿದೆ, ಒಲ್ಲದ ಮನಸಿನಿಂದ ಅವರು ಹಿಂದೆ ಉಳಿದರು. ನಾನು ಎರಡು ಹೆಜ್ಜೆ ನಡೆದಿದ್ದೆ ಅಷ್ಟೆ, ಮುಂದಿನ ಯಾವ ವಿಷಯವೂ ನನಗೆ ನೆನಪಿಲ್ಲ,

ಅಪ್ಪ ಚಿಕ್ಕಪ್ಪ ನಾನು ಸುಮಾರು ಹೊತ್ತಾದರೂ ಬರಲಿಲ್ಲವಾದುದರಿಂದ ಮೂತ್ರಾಲಯದ ಒಳ ಹೊಕ್ಕುನೋಡಿದಾಗ ನಾನು ಅಲ್ಲಿಯೇ ಬಿದ್ದು ಹೋಗಿದ್ದೆನಂತೆ ಪುನಃ ಅವರಿಬ್ಬರೂ ನನ್ನನ್ನು ವಾರ್ಡ್ ಗೆ ಹೊತ್ತು ತಂದರು. ಮತ್ತೆ ವೈದ್ಯರಿಂದ ಸುಶ್ರೂಶೆ ಮಾಡಿಸಿದರು ಮತ್ತು ತುಂಬಾ ಹೊತ್ತಿನ ನಂತರ ನಾನು ಎಚ್ಚರಾದೆನಂತೆ. ಆಗ ನನ್ನ ಅನುಭವ ಹೀಗಿತ್ತು : ತಿಳಿ ನೀಲ ಆಕಾಶದಲ್ಲಿ ಹಗುರವಾಗಿ ಹತ್ತಿಯಂತೆ ಹಾರುತ್ತಿದ್ದೆ, ನೋವು ನಲಿವಿನ, ಸುಖ ದುಖಃ ದ ಪರಿವಿರದೇ,ಯಾವುದೋ ಒಂದು ಗುರಿಯತ್ತ ನಿಶ್ಚಿತ ಪಯಣ ಅದಾಗಿತ್ತು. ಅಂದರೆ ಸಂಭಂದಗಳ ಗೋಜಿಲ್ಲದ ಇತಿಮಿತಿಯ ಅರಿವಿಲ್ಲದ ಸುಖಕರ ಪ್ರಯಾಣ ಅದಾಗಿತ್ತು, ಹಾಗೆ ಹಾರುತ್ತಿರ ಬೇಕಾದರೆ ಯಾರೋ ನನ್ನ ಹೆಸರು ಹಿಡಿದು ಗೋಪೂ ಅಂತ ಕರೆದ ಹಾಗೆ ಆಗಿ ಕಣ್ತೆರೆದಾಗ ಆಸ್ಪತ್ರೆಯ ಬೆಡ್ ಮೇಲಿದ್ದೆ, ಸುತ್ತಲೂ ಅಪ್ಪಯ್ಯ ಅಮ್ಮ ಚಿಕ್ಕಪ್ಪ ಎಲ್ಲರೂ ಅಳುತ್ತಲ್ಲಿದ್ದರು. ಅಮ್ಮ ಭಾವಾತಿರೇಕದಿಂದ ಸಂಭ್ರಮ ಪಟ್ಟಳು. ನಾನು ಸತ್ತೇ ಹೋದೆನೆಂದು ತಿಳಿದುಕೊಂಡಿದ್ದರಂತೆ. ಅಪ್ಪ (ಅವರದ್ದೇ ಆದ ರೀತಿಯಲ್ಲಿ-ಅಧ್ಯಾತ್ಮ ) ನಾನು ಸಾವಿನಬಾಗಿಲು ತಟ್ಟಿ ಬಂದನೆಂದು ಹೇಳುತ್ತಿದ್ದರು.




೩.    ಲೇಯ್ ಯಾವನೋ ಅವ್ನು

ನನ್ನ ಅಂಕಲ್ ಒಬ್ಬರು ಅವರು ಚಿಕ್ಕವರಾಗಿರುವಾಗಿನ ಕಥೆಯಿದು..

ಹಳ್ಳಿಗಳಲ್ಲಿ ರೈತರು ಸಾಮಾನ್ಯವಾಗಿ ಬಯಲು(ಹೊಲ) ಗದ್ದೆಗಳಲ್ಲಿ ಬೆಳೆಗಳನ್ನು(ಕಬ್ಬು,  ಭತ್ತ, ರಾಗಿ, ತರಕಾರಿ ಮುಂತಾದ) ಕಾಡು ಪ್ರಾಣಿಗಳಿಂದ ಕಾಪಾಡಲು ತಾತ್ಕಾಲಿಕವಾಗಿ  ಕಟ್ಟಲ್ಪಟ್ಟ ಶೆಡ್ಡುಗಳನ್ನು ಉಪಯೋಗಿಸುತ್ತಿದ್ದರು.

ನೆಲದಿಂದ ಎಂಟು ಹತ್ತು ಅಡಿ  ಎತ್ತರವಾಗಿ ಕಟ್ಟಿದ ಶೆಡ್, ಒಣ ಹುಲ್ಲಿನ ಮಾಡು ಹೊಂದಿದ್ದು, ಕಂಬದ ಮೇಲೆ ಕಟ್ಟಿದ ಚಿಕ್ಕ ತಡಿಕೆಯ ಮನೆಯ ಹಾಗೇ ಇರುತ್ತಿತ್ತು.
ರಾತ್ರೆ ಅಲ್ಲಿ ಮಲಗಲು ಬಂದವರು, ಬೆಳಗಾಗುವ ವರೆಗೆ ಮೂರ್ನಾಲ್ಕು ಬಾರಿ, ಹಳೆ ಡಬ್ಬದ ಮೇಲೆ ಎರಡು ಕೋಲಿನಿಂದ ಬಲವಾಗಿ ಬಡಿಯುತ್ತಾ, ಗಟ್ಟಿಯಾಗಿ ಬಾಯಿಗೆ ಬಂದ ಪದ ಹೇಳಿ ಹೋ ಹೋ ಅಂತ ಕೂಗುತ್ತಿದ್ದರು,
ಇದರ ಮುಖ್ಯ ಉದ್ದೇಶ ಕಾಡುಪ್ರಾಣಿಗಳೇನಾದರೂ ಬಂದಿದ್ದರೆ, ಆ ಗಲಾಟೆಯಿಂದಾಗಿ ಹೆದರಿ ಓಡಿಹೋಗಲಿ ಎಂಬುದು.
 ಅವರ ಗೆಳೆಯರೊಬ್ಬರಿಗೆ ಹೀಗೇ ದಿನಾ ಹಳ್ಳಿಮನೆಯಲ್ಲಿ ಮಲಗಿ ಬಂದು ಮಾಡಿ ಅದೇ ಅಭ್ಯಾಸವಾಗಿ ಹೋಗಿತ್ತಂತೆ.
ಹೀಗಿರುವಾಗ ಅವರ ಮದುವೆಯಾಯ್ತು.
ಮದುವೆಯಾಗಿ ಅವರ ಹೆಂಡತಿಯ ಮನೆಗೆ ಹೋಗಿದ್ದರಂತೆ,
ರಾತ್ರೆ ಅಭ್ಯಾಸ ಬಲದಿಂದ ಕೈಯಲ್ಲೇ ಬೆಡ್ ನ ಹಲಗೆಯನ್ನು ಬಡಿಯುತ್ತಾ "ಎಂಕಾ, ಶೀನಾ ಎಲ್ಲರೂ ಅಚೆಯಿಂದ ಈಚೆಯಿಂದ ಬನ್ನಿ ಬನ್ನಿ ಹೋ! ಹೋ!!" ಅಂತ ಕೂಗಿಕೊಂಡರಂತೆ.
ಅರ್ಧ ರಾತ್ರಿಯ ನೀರವತೆಯಲ್ಲಿ ಅದೂ ಎಲ್ಲರೂ ನಿದ್ರೆಯ ಮತ್ತಿನಲ್ಲಿರುವಾಗ ಈ ರೀತಿಯ ಕೂಗು ಕೇಳಿಸಿದರೆ ಯಾರಾದರೂ ಏನು ಎಣಿಸಿಯಾರು?.
ಪಕ್ಕದ ರೂಮಿನಲ್ಲೇ ಮಲಗಿದ್ದ ಅವರ ಮಾವ ರಾತ್ರೆಯ ಇವರ ಗಲಾಟೆಗೆ ಎದ್ದು "ಲೇಯ್ ಯಾವನೋ ಅವ್ನು ? ಹಾಕಿ ಅವ್ನ ತಲೆ ಮೇಲೆ ನಾಲ್ಕು ಪೆಟ್ಟು" ಅಂತ ಜೋರಾಗಿ ಗರ್ಜಿಸಿದರಂತೆ.
ಇವರಿಗೆ ತಾನು ಇರುವುದು ಹಳ್ಳಿಮನೆಯಲ್ಲಲ್ಲ, ಮಾವನ ಮನೆಯಲ್ಲಿ ಎನ್ನುವುದು ಅರಿವಾಗಿ.....ತುಂಬಾನೇ ನಾಚಿಕೆಯಲ್ಲಿ ತಲೆತಗ್ಗಿಸಿಕೊಂಡರು.
ಈ ಪ್ರಸಂಗವನ್ನು ಈಗಲೂ ನೆನಪಿಸಿಕೊಂಡು ನಗುತ್ತಿರುತ್ತೇವೆ.

ಚಿತ್ರ ಕೃಪೆ :ಸಲಿತ ರಾಡ್ರಿಗಸ್- ನಮ್ ನಗರ

1 comment:

  1. 2. ಒಮ್ಮ ಸಾವಿನ ಬಾಗಿಲನು ತಟ್ಟಿ ಬಂದವರು ಶತಾಯುಷಿಗಳಂತೆ!

    3. ಹ್ಹಹ್ಹ ಅಭ್ಯಾಸಬಲ!

    ReplyDelete