Thursday, April 9, 2015

ಅಂಚೆ ಕಚೇರಿಯಲ್ಲಿ ಬಾಂಬ್

ಸೈನಿಕನ ದಿನಚರಿ

ನಾನಾಗ ಲೇಹ್ ನಲ್ಲಿದ್ದೆ ಕಾರ್ಗಿಲ್ ಯುದ್ದದ ಸಮಯ.
ಅದು ನಮ್ಮ ಅಂಚೆ ಕಚೇರಿಯಿಂದ ನಿಮಗೆ ಗೊತ್ತಿರಬಹುದು ಮಿಲಿಟರಿಯಲ್ಲಿ ನಿಗದಿತ ಸ್ಥಳ ಗಳಲ್ಲಿ ಅಂದರೆ ಗೌಪನೀಯ ಜಾಗಗಳಲ್ಲಿ ಇರೋ ಅಂಚೆ ಕಚೇರಿ ಮತ್ತು ಅದರ ವ್ಯವಹಾರಗಳೆಲ್ಲವೂ ಗೌಪ್ಯವಾಗಿಯೇ ಇರುತ್ತದೆ.
ಮಿಲಿಟರಿಯ ಕಾರ್ಯಗಳೆಲ್ಲವೂ ಈ ಎರಡು ಗತಿ ವಿಧಿಯ ಸ್ಥರದಲ್ಲಿಯೇ ಆಗುತ್ತಿರುತ್ತವೆ. ಫೀಲ್ಡ್ ಮತ್ತು ಪೀಸ್
ಶಾಂತ ಸಾಧಾರಣ ವ್ಯವಹಾರೀ ಸ್ಥಳಗಳನ್ನು ಪೀಸ್ ಅಂತಲೂ ಯುದ್ಧ ಅಥವಾ ಯಾವುದೇ ಗಡಿ ಪ್ರದೇಶಗಳಲ್ಲಿನ ಸ್ಥಳಗಳನ್ನು ಫೀಲ್ಡ್ ಅನ್ನಬಹುದು ಸಾಧಾರಣ ವಿಂಗಡಣೆಯಾಗಿ. ಅಲ್ಲಿನ ಕಷ್ಟಕರ ಸ್ಥರಗಳಿಗನುಸಾರವಾಗಿ ಫೀಲ್ಡ್ ನಲ್ಲಿ ಎರಡು ವರ್ಷ ಮತ್ತು ಪೀಸ್ ನಲ್ಲಿ ಮೂರು ವರ್ಶ ಸಾಧಾರಣವಾಗಿ ನಮ್ಮ ಕಾರ್ಯಕಾರೀ ಅವಧಿ ಇರುತ್ತದೆ. ಇಷ್ಟು ವಿವರಣೆ ಈಗ ಸಾಕು.

ಅದರಂತೆ ನಾವಿದ್ದುದು ಫೀಲ್ಡ್ ಆದುದರಿಂದ ಇಲ್ಲಿಯ ಅಂಚೆ ಕಚೇರಿ ಫೀಲ್ಡ್ ಪೋಸ್ಟ್ ಆಫೀಸ್.
ಒಂದು ದಿನ ಬೆಳಿಗ್ಗೆ ಆರುವರೆಗೇ ಒಂದು ಕರೆ.
ನಮ್ಮ ಅಂಚೆ ಚೀಲ ದಲ್ಲಿ ಬಾಂಬಿದೆ. ಬೇಗ ಬನ್ನಿ ಸಾರ್ ಅಂತ.
ಹತ್ತಿರದಲ್ಲೆಲ್ಲೂ ಬಾಂಬ್ವರ್ ಯುನಿಟ್ ಇಲ್ಲದ ಕಾರಣ ಇಂಜಿನೀಯರ್ಸ್ ಆದ ನಮಗೆ ಬಂದಿತ್ತು ಆ ಫೋನ್.
ಆಗ ಡ್ಯೂಟಿಯಲ್ಲಿದ್ದುದು ನಾನು ಇನ್ನಿಬ್ಬರು ಹೊಸ ಆಫೀಸರ್ಸ್.
ಅದನ್ನು ಕೇಳಿದ ಕೂಡಲೇ ಎಲ್ಲರೂ ಅಲರ್ಟ್ ಆದರು. ಆಗ ಬೇಕಾದದ್ದೇ.
ನಮ್ಮ ಎರಡನೇ ಆಫೀಸರ್ ಇವರಿಬ್ಬರಿಗೂ ಹೋಗಿ ಅದನ್ನು ಡಿಫ್ಯೂಸ್ ಮಾಡಿ ಬನ್ನಿ ಎಂದರು,
ನಾನೂ ಪಕ್ಕದಲ್ಲೇ ಇದ್ದೆ,
ಕುತೂಹಲಿಯಾಗಿ ನಾನೂ ಬರ್ತೇನೆ ಎಂದೆ ಒಲ್ಲದ ಮನಸ್ಸಿನಿಂದ ನನ್ನನ್ನೂ ಕರೆದೊಯ್ದರು ಆ ಫೀಲ್ಡ್ ಪೋಸ್ಟ್ ಆಫೀಸ್ ಗೆ.
ನಡೆದದ್ದಿಷ್ಟು. ರಾತ್ರೆ ಪಾಳಿಯಯವನು ನೋಡ ನೋಡುತ್ತಿರುವಂತೆ ತಾನೇ ಒಂದು ಅಂಚೆ ಚೀಲ ಹೊರಳಿ ಶಬ್ದ ಮಾಡುತ್ತ ಒಮ್ಮೆ ನಡುಗಿತು ಮತ್ತು ಅಲಾರಾಮ್ ಶುರುವಾಯ್ತು.
ಅದಕ್ಕೇ ಹೆದರಿ ಆತ ನಮ್ಮ ಯುನಿಟ್ ಗೆ ಫೋನ್ ಮಾಡಿದ್ದ.
ಸರಿ ಯಾವ ಬಾಂಬ್ ಆದರೆ ಏನು ಮಾಡ ಬೇಕು ಅನ್ನುವುದನ್ನು ಹೊಸದಾಗಿ ಮನೆ ಲೆಕ್ಕಾ ಮಾಡಿಕೊಂಡು ಬಂದ ಆ ಇಬ್ಬರೂ ಆಫೀಸರ್ಸ್ ತಮ್ಮ ಅಳತೆ ಪಟ್ಟಿಯಿಂದ ಆ ಕೋಣೆ ಮತ್ತು ಅಲ್ಲಿನ (ಚರ ಮತ್ತು ಸ್ಥಿರ) ಎಲ್ಲಾ ವಸ್ತುಗಳ ದೂರವನ್ನೆಲ್ಲಾ ಅಳೆದರು
ಯಾರೂ ಒಳ ಬಾರದಂತೆ ಜಾಗೃತೆಯ ಸುರಕ್ಷಾ ಪಟ್ಟಿ ಕಟ್ಟಿ ಆ ಸ್ಥಳವನ್ನು ಬಾಹ್ಯ ಸಂಪರ್ಕದಿಂದ ತೆರವು ಗೊಳಿಸಲಾಯ್ತು.
ನಿಧಾನವಾಗಿ ಪರಿಶೀಲಿಸುತ್ತಾ ಅಂಚೆ ಚೀಲವನ್ನು ತೆರೆದರು. ಅದರಿಂದ ಈ ಶಬ್ದ ಬಂತು ಎಂದೆನಿಸಿದ ಪಾರ್ಸೆಲ್ ಇರೋ ಚೀಲವನ್ನು ನಿಧಾನವಾಗಿ ಈ ಕಡೆ ಇಟ್ಟರು ತೆರವು ಗೊಳಿಸಿದ ಸ್ಥಾನದಲ್ಲಿ.
ಆ ಪಾರ್ಸೆಲ್ ನ ಯಿಂದ ಮತ್ತು ಗೆ ಅನ್ನು ನೋಡಿದ ನನಗೆ ಸಂಶಯ ಬಂತು.
ನಾನು ಅಂಚೆ ಮಾಸ್ತರರ ನ್ನು ಕೇಳಿದೆ ನಿಮ್ಮ ಪಾರ್ಸೆಲ್ ನ ಎರಡೂ ಬದಿ ಸರಿಯಾದ ವಿಳಾಸ ವೇ ಇದೆಯಲ್ಲ ನೀವು ಅವರನ್ನು ಕೇಳಿ ಖಚಿತ ಪಡಿಸಿಕೊಂಡಿರುವಿರಾ?
ಆತನೆಂದ ಹೆದರಿಕೆಯಿಂದಲೇ ಇಲ್ಲ ಇಲ್ಲ.
ನನಗೆ ಇದು ನಿಸ್ಸಂಶಯವಾಗಿಯೂ ಫೇಕ್ ಅಂತೆಯೇ ಅನಿಸಿತ್ತು ಅದಕ್ಕೆ ಕಾರಣ ಹಿಂದೆ ನಮ್ಮ ಮನೆಯಲ್ಲೇ ನಡೆದ ಒಂದು ಪ್ರಕರಣ ಪ್ರಸ್ತುತವಾದುದರಿಂದ ಇಲ್ಲಿ ತಿಳಿಸುತ್ತಿದ್ದೇನೆ :
ನಾವಾಗ ಒರಿಸ್ಸಾದಲ್ಲಿದ್ದೆವು. ನನ್ನ ಮಗ ೩ ವರ್ಷದ ಅನುದೀಪ್ ಗೆ ಜುಲೈ ೨೧ ರಂದು ಹುಟ್ಟು ಹಬ್ಬ.
ನಮ್ಮ ಮನೆಯಲ್ಲಿಯೇ ಆತ ಮೊದಲಿನವನಾಗಿದ್ದರಿಂದ ಸಹಜವಾಗಿಯೇ ಎಲ್ಲರ ಕೊಂಡಾಟದ ಕೂಸು.
ಬೆಂಗಳೂರಿನಿಂದ ನಾವು ಅವನ ಜನ್ಮದಿನದ ಶುಭಾಶಯದ ಗಿಫ್ಟ್ ನ್ನು ಎದುರು ನೋಡುತ್ತಿದ್ದೆವು.
ಕಾರು ಅಂದರೆ ಅನೂಗೆ ಜೀವ ಅದಕ್ಕೇ ಬೆಂಗಳೂರಿನಲ್ಲಿದ್ದ ನನ್ನ ಅಣ್ಣ ತಮ್ಮಂದಿರಿಬ್ಬರೂ ಸೇರಿ ಒಂದು ಸುಂದರ ಕೆಂಪು ರಿಮೋಟ್ ಕಂಟ್ರೋಲ್ ಕಾರ ಕೊಂಡು ತಂದು ಪಾರ್ಸೆಲ್ ಮಾಡಿದ್ದೆವೆಂದು ಅಣ್ಣ ಕರೆ ಮಾಡಿ ನನಗೆ ತಿಳಿಸಿದ್ದ .
ಆದರೆ ಅನೂನ ಗಿಫ್ಟ್ ಬರಲೇ ಇಲ್ಲ. ಕಾರಣ ಸ್ವಾರಸ್ಯಕರ. ಅದನ್ನು ತಿಳಿಯಲು ನಾವು ಬೆಂಗಳೂರಿಗೆ ಎರಡು ದಿನ ಹಿಂದಕ್ಕೆ ಹೋಗಬೇಕು.
ದಿನಾಂಕ ೧೮ ಕ್ಕೆ ನನ್ನ ಅಣ್ಣ ಮತ್ತು ನನ್ನ ತಮ್ಮ ಒಟ್ಟುಸೇರಿ ಹೊಸಾ ಕೆಂಪು ರಿಮೋಟ್ ಕಂಟ್ರೋಲ್ ಕಾರನ್ನು ತಂದು ಅದನ್ನು ಚೆನ್ನಾಗಿ ಪಾರ್ಸೆಲ್ ಮಾಡಿ ಅಂಚೆಯಲ್ಲಿ ಕಳುಹಿಸಿಕೊಟ್ಟರು.
ಅದರ ಮಾರನೆಯ ದಿನ ಸಂಜೆ ಅಂದರೆ ೧೯ ಕ್ಕೆ ಮನೆಗೆ ಒಬ್ಬ ಪೋಲೀಸ್ ಹಾಜರ್.
ಬನ್ನಿ ಪೋಲೀಸ್ ಶ್ಟೇಶನಿಗೆ ಅಂದ. ಯಾಕೆ ಏನಾಯ್ತು?
ಕೇಳಿದ ಅಣ್ಣ.
ಅಷ್ಟರಲ್ಲಿ ತಮ್ಮನೂ ಬಂದಿದ್ದ ಆತ ಅಂಚೆ ಇಲಾಖೆಯವನೇ.
ಇಬ್ಬರು ಜೀವಮಾನದಲ್ಲೇ ಪೋಲೀಸ್ ಸ್ಟೇಶನ್ ಗೆ ಹೋದವರೇ ಅಲ್ಲ,
ಅಂತೂ ಹೊರಟು ನೋಡಿದರೆ.........!!!! ಇವರು ಕಳುಹಿಸಿದ ಪಾರ್ಸೆಲ್ ಅಲ್ಲೇ ಇತ್ತು.
ಈ ಪಾರ್ಸೆಲ್ ನಿಮ್ಮದಾ ಕೇಳಿದ ಪೋಲೀಸ್ ಹೌದು ಎಂದ ಅಣ್ಣ ಅದರಲ್ಲಿ ಏನಿದೆ ?
ಯಾರಿಗೆ ಕಳುಹಿಸುತ್ತಿದ್ದೀರಿ? ..ಪೋಲೀಸ್ ಅಣ್ಣ ಹೇಳಿದ ಮಿಲಿಟರಿಯ ನನ್ನ ತಮ್ಮನ ಮಗನ ಜನ್ಮದಿನಕ್ಕೆ ಅದೊಂದು ರಿಮೋಟ್ ಕಂಟ್ರೋಲ್ ಕಾರು .
ನೀವೇ ಅದನ್ನ ಬಿಡಿಸಿ ತೋರಿಸಿ ಎಂದ ಪೋಲೀಸ್ ನವ. ಅಣ್ಣನೇ ಹೋಗಿ ಪಾರ್ಸೆಲ್ ಬಿಡಿಸಿ ತೋರಿಸಿದ. ಆಗಲೇ ಅವರೆಲ್ಲರಿಗೂ ನಂಬಿಕೆ ಬಂದದ್ದು.
ನಡೆದದ್ದಿಷ್ಟು.
ಅಣ್ಣ ಬ್ಯಾಟರಿಯನ್ನೂ ಕಾರಿನಲ್ಲಿಟ್ಟೇ ಪಾರ್ಸೆಲ್ ಮಾಡಿದ್ದ. ಅಂಚೆ ಚೀಲದಲ್ಲಿನ ಬೇರೆ ಪಾರ್ಸೆಲ್ಗಳ ಮಧ್ಯೆ ಅದು ಹೇಗೋ ಕಾರ ನ ಸ್ವಿಚ್ ಆನ್ ಆಗಿದೆ.
ಮತ್ತು ಅದು ಚಲಿಸ ತೊಡಗಿದೆ.
ಈ ಶಬ್ದ ಮತ್ತು ಅಲುಗಾಡುವಿಕೆಯಿಂದಾಗಿ ಹೆದರಿದ ಅಂಚೆಯವರು ಬಾಂಬ್ ಇರಬಹುದೆಂದು ಗ್ರಹಿಸಿ ಪೋಲೀಸರಿಗೆ ದೂರಿತ್ತರು.
ಬಾಂಬ್ ವಿಚಕ್ಷಣ ದಳ ಬಂದು ಅದನ್ನು ಪರಿಶೀಲಿಸುತ್ತಿದ್ದರು, ಆಗಲೇ ಅಣ್ಣನಿಗೆ ಕರೆ ಬಂದದ್ದು.
ಅಂತು ಅದು ಹೇಗೋ ಮಿಲಿಟರಿಯವರು ಅಂತ ಗೊತ್ತಾದ ಮೇಲೆ ಈ ಪ್ರಕರಣ ಸುಖಾಂತ ಕಂಡಿತು.
ಅದೂ ಅದರ ಬ್ಯಾಟರಿತೆಗೆದು ಹೊರಗಿಟ್ಟು ಪಾರ್ಸೆಲ್ ಮಾಡಿ ಕಳುಹಿಸಿಕೊಟ್ಟ ಮೇಲೆಯೇ.
ಈಗಲೂ ಅದನ್ನು ನೆನೆಸಿಕೊಂಡು ನಾವೆಲ್ಲಾ ಹೈರಾಣಾಗುತ್ತಿದ್ದೇವೆ,
ನಮ್ಮ ಗೊತ್ತಿಲ್ಲದೇ ಆದ ತಪ್ಪಿನಿಂದಾಗಿ ಅಂಚೆ ಮತ್ತು ಪೋಲೀಸ್ ದಳದ ಮಾನಸಿಕ ತೊಂದರೆಗೆ ನಾವೇ ಕಾರಣರಾದೆವು ಅಂತ.
ಅಂತೂ ಅಲ್ಲಿಯೂ ನಾನು ಇದನ್ನ ಹೇಳಿದೆ ,
ಆದರೆ ಹೇಳಿಕೇಳಿ ಇದು ಮಿಲಿಟರಿ ಏರಿಯಾ. ಇಲ್ಲಿ ನನ್ನ ಮಾತು ಅಪ್ರಸ್ತುತ
ಯಾಕೆಂದರೆ ಯಾರೂ ರಿಸ್ಕ್ ತೆಗೆದು ಕೊಳ್ಳಲಾರರು.ಅಂತೂ ನಮ್ಮ ಹೊಸ ಆಫೀಸರ್ ಹೇಳಿದ ಹಾಗೆಯೇ ಸಂಶಯ ಪಟ್ಟ ಪಾರ್ಸೆಲ್ ಮೇಲ್ಭಾಗವನ್ನು ಬ್ಲಾಸ್ಟ್ ಮಾಡಿ ತೆಗೆಸಲಾಯ್ತು.
ಎಲ್ಲರನ್ನೂ ದೂರ ಕಳುಹಿಸಿ ಆ ಜಾಗವನ್ನು ಸೀಲ್ ಮಾಡಿಸಿಯಾದ ಮೇಲೆ.
ಕೊನೆಗೆ ಕಂಡದ್ದೇನು...?

ಒಂದು ಅಲಾರಾಮ್ ಗಡಿಯಾರ ಮತ್ತೊಂದು ರಿಮೋಟ್ ಕಂಟ್ರೋಲ್ ಕಾರು.   

# # # 
ಚಿತ್ರ ಕೃಪೆ: ಅಂತರ್ಜಾಲ

1 comment:

  1. ಸದ್ಯ ಸುಖಾಂತ್ಯವಾಯಿತಲ್ಲ. ಅವಘಡ ಸಂಭವಿಸಲಿಲ್ಲವಲ್ಲ ಅದೇ ನೆಮ್ಮದಿ ಕೊಟ್ಟಿತು.

    ಮುಂದಿನ ಬಾರಿ ನಾವು ಇಂತಹ ಸಾಮಗ್ರಿಗಳನ್ನು ಪಾರ್ಸಲ್ ಕಳಿಸುವಾಗ, ಬ್ಯಾಟರಿ ಬೇರೆ ಇಟ್ಟು ಕಟ್ಟು ಕಟ್ಟುವಂತಹ ಪಾಠವೂ ಲಭಿಸಿತು.

    ReplyDelete