Tuesday, April 7, 2015

ನೀ ಖಂಡಿತಾ ಬಂದೇ ಬರುವಿ ಎಂದು ನಂಗೆ ಗೊತ್ತಿತ್ತು.....



ಸಿಪಾಯಿಯೊಬ್ಬ ಗಾಯಗಳಾಗಿ ರಣಭೂಮಿಯಲ್ಲಿ ಬಿದ್ದ ಸ್ನೇಹಿತನನ್ನು ಕಂಡು ಬರಲು ತನ್ನ ಕ್ಯಾಪ್ಟನ್ ನಲ್ಲಿ ಕೇಳಿಕೊಳ್ಳುತ್ತಾನೆ.

"ಈಗ ನೀನು ಅಲ್ಲಿಗೆ ಹೋಗಿ ಏನೂ ಪ್ರಯೋಜನವಾಗಲಾರದು." ಅವನ ಕ್ಯಾಪ್ಟನ್ ಹೇಳಿದ . "ಅವನು ಈಗಾಗಲೇ ಹುತಾತ್ಮನಾಗಿರಬಹುದು."

ಆದರೆ ಸಿಪಾಯಿ ಸಿಪಾಯಿಯೇ. ತನ್ನ ಗುರಿಯಿಂದ ಎಂದೂ ವಿಚಲಿತನಾಗಲಾರ, ಅವನ ತರಭೇತಿಯೇ ಅಂತಹದ್ದು.

ಆತನ ಅವಿರತ ಒತ್ತಡಕ್ಕೆ ಕೊನೆಗೂ ಆತನ ಸೀನಿಯರ್ ಮಣಿದು ಒಪ್ಪಿಗೆ ಕೊಟ್ಟ.

ಈತ ಹೋಗಿ ಕೊನೆಗೂ ಕಷ್ಟಪಟ್ಟು ತನ್ನ ಸ್ನೇಹಿತನ ದೇಹವನ್ನು ತಂದೇ ಬಿಟ್ಟ.

ಸ್ನೇಹಿತನ ಮೃತದೇಹವನ್ನು ನೋಡಿದ ಕ್ಯಾಪ್ಟನ್ ಹೇಳಿದ.
" ನಾನು ಹೇಳಿರಲಿಲ್ಲವೇ ಏನೂ ಉಪಯೋಗವಿಲ್ಲವೆಂದು. ನೋಡಿದೆಯಾ ಅದೇ ಆಯ್ತು. ಆತ ಆಗಲೇ ಸತ್ತು ಹೋಗಿದ್ದಾನೆ."

ಸಿಪಾಯಿ ಹೇಳಿದ

"ಇಲ್ಲ ಸರ್, ನಾನು ಹೋಗಿದ್ದು ತುಂಬಾನೇ ಪ್ರಯೋಜನಕ್ಕೆ ಬಂತು. ನಾನು ಅಲ್ಲಿಗೆ ಹೋದಾಗ ಆತನ ದೇಹದಲ್ಲಿನ್ನೂ ಕುಟುಕು ಜೀವವಿತ್ತು. ಆತ ನನಗಾಗಿಯೇ ಕಾದಿದ್ದವನಂತೆ ತನ್ನ ಕೊನೇ ಮಾತುಗಳನ್ನು ನನಗೆ ತಿಳಿಸಿದ್ದ. ಕೆಲವೇ ಮಾತುಗಳಾದರೂ ನಾನು ಅಲ್ಲಿಗೆ ಹೋಗಿರದಿದ್ದರೆ ಜೀವನವಿಡೀ ನನ್ನ ಸ್ನೇಹಿತನಿಗಾಗಿ ಕೊರಗುತ್ತಿರಬೇಕಿತ್ತು."

ಕ್ಯಾಪ್ಟನ್ ಅತ್ಯಂತ ಕುತೂಹಲದಿಂದ ಕೇಳಿದ " ಹೌದೇನು, ಹಾಗಾದರೆ ಅವನ ಕೊನೇ ಮಾತುಗಳು ಯಾವುವು..?"

ತನ್ನ ಕಂಬನಿಯೊರೆಸಿಕೊಳ್ಳುತ್ತಾ ಸಿಪಾಯಿ ಗದ್ಗದ ಕಂಠದಿಂದ ನುಡಿದ..

"ನಂಗೆ ಖಂಡಿತಾ ಗೊತ್ತಿತ್ತು ನೀನು ಬಂದೇ ಬರುವಿ ಎಂದು"

ಸ್ನೇಹವೆಂದರೆ ಇದು..

# # 
ಚಿತ್ರ ಕೃಪೆ: ಅಂತರ್ಜಾಲ

1 comment:

  1. ಅವನೇ ಅಸಲೀ ಸ್ನೇಹಿತ... ಅಸಲೀ ಸಿಪಾಯೀ...

    ReplyDelete