Friday, April 10, 2015

ಬ್ರೈನ್ ವಾಶ್ ಅಂಕ ೩ ಡೇಂಜರ್ ಜೋನ್


ಆ  ರಾತ್ರೆ ತುಂಬಾನೇ ಸಮಯದ ವರೆಗೆ ನನಗೆ ನಿದ್ದೆ ಬರಲಿಲ್ಲ.
ನಾನು ಯಾಕೆ ಹೀಗೆ ಬಂದು ಎಲ್ಲೆಲ್ಲಿಯೋ ಇರಬೇಕಿತ್ತು ಅರ್ಥವಾಗಲೇ ಇಲ್ಲ.
ನನ್ನ ಈ  ಟಾಸ್ಕ್ ಎಂತಹದ್ದು..?
ಮೊದಲು ಟಾಸ್ಕ್ ಏನೂ ಅಂತ ಗೊತ್ತು ಮಾಡಿಕೊಳ್ಳಬೇಕು ನಂತರ ಅದನ್ನು ಮಾಡ ಬೇಕು.
ಇಂತಹ ಟಾಸ್ಕ್ ಜನ್ಮದಲ್ಲಿ, ಈ ಪ್ರಪಂಚದಲ್ಲಿ ಯಾರಿಗೂ ಸಿಕ್ಕಿರಲಿಕ್ಕಿಲ್ಲ.
ಯಾವುದೇ ಗುರಿಯಾದರೂ ಗುರಿ ನಮಗೆ ತಿಳಿದಿರಬೇಕು. 
ನಂತರ ಗುರಿಯನ್ನು ತಲುಪೋ ದಾರಿ. ದಾರಿಯೂ ಯೋಜನಾ ಬದ್ದವಾಗಿ ಇರಬೇಕು. ಇದರಲ್ಲಿ ಕ್ಲಪ್ತತೆಯೂ ಮುಖ್ಯ.
ನನ್ನ ಕೇಸಿನಲ್ಲಿ ನನಗೆ ಮೇಲಿನ ಮೂರೂ ಅಸ್ಪಷ್ಟ .  
ಎಲ್ಲವೂ ಗೋಜಲೇ.  
ನನಗೆ ಗೊತ್ತೇ ಇಲ್ಲದ ಟಾಸ್ಕನ್ನು  ಹೇಗೆ ಪೂರೈಸಿಯೇನು..?
ಈ ಸಿಕ್ಕಿನಿಂದ ಹೊರ ಬರೋ ದಾರಿಯೇ ಕಾಣಿಸುತ್ತಿಲ್ಲ.
ನಾವು ಕಳೆದುಕೊಂಡಿದ್ದನ್ನು ಕಳೆದಲ್ಲಿಯೇ ಹುಡುಕಬೇಕಂತೆ. ಎಲ್ಲಿ ನಾವು ಕೆಳಗಿಳಿಯುತ್ತಿದ್ದೇವೆಯೋ ಅಲ್ಲಿಯೇ ಮೇಲೇರಲೂ ಸಹಾ ಅವಕಾಶವಿದೆ.
ಈ ವಾಕ್ಯ ನೆನಪಿಗೆ ಬರುತ್ತಲೇ ನನಗೆ ಒಂದು ಮಿಂಚು ಸಂಚಾರವಾದಂತಾಯ್ತು  ದೇಹದಲ್ಲೆಲ್ಲಾ....
ಮತ್ತೊಂದು ವಿಷಯ  ಆ ಸಮ ವಸ್ತ್ರಧಾರಿ ಯುದ್ಧ ಖೈದಿಗಳನ್ನಿಡೋ ನನ್ನನ್ನು ಕೋಣೆಯಲ್ಲಿಡು ಎಂದನೇ ವಿನಃ ನಾನು ಯುದ್ಧ ಕೈದಿ ಅನ್ನಲಿಲ್ಲ, 
ಈ ಅನಿಸಿಕೆಗೆ  ಮುಖ್ಯ ಕಾರಣ  ನನ್ನ ಸೆಲ್ ನ ಬೀಗ ಹಾಕದೇ ಇದ್ದದ್ದು...
ಅಂದರೆ ಹೊರಗಡೆ ಅಡ್ಡಾಡ ಬಾರದು ಅಂತ ಯಾರೂ ಹೇಳಲೂ ಇಲ್ಲ, 
ಕೇಳಿದರೆ ನಾನು ಹೊಸಬ ನಾದುದರಿಂದ ನನಗೆ ಇಲ್ಲಿನ ನಿಯಮ ಕಾಯಿದೆ ಗೊತ್ತಿಲ್ಲ ಅಂದರಾಯ್ತು.
ಅಲ್ಲದೇ ಇತಿಮಿತಿ ಅರಿತ ಹಾಗೂ ಆಯ್ತಲ್ಲ.
ಈ ಯೋಚನೆ ಬರುತ್ತಲೇ ಎದ್ದೆ.. 
ಎರಡೆ ನಿಮಿಷದಲ್ಲಿ ಕಾರಿಡಾರ್ ನಲ್ಲಿದ್ದೆ..
ಪ್ರತಿಯೊಂದೂ ರೂಮನ್ನು ಪರಿಶೀಲಿಸ ತೊಡಗಿದೆ.
ಮಿಲಿಟರಿಯಲ್ಲಿ ರಾತ್ರೆ ಹಗಲಿಗೆ ಜಾಸ್ತಿ ವ್ಯತ್ಯಾಸವಿಲ್ಲ ಕರ್ತವ್ಯ- ಡ್ಯೂಟಿ- ದಕ್ಷತೆಯಲ್ಲಿ.
ಯಾರಾದರೊಬ್ಬರು ಈ ಸಮರಾತ್ರಿಯಲ್ಲೂ ಕರ್ತವ್ಯದಲ್ಲಿರಲೇ ಬೇಕಲ್ಲ..
ಹೇಗಾದರೂ ಅವನನ್ನು ಹಿಡಿದು ಪಳಗಿಸಿಕೊಂಡರೆ ನನ್ನ ಕೆಲಸ ಅರ್ಧ ಆದಂತೆಯೇ..
ನಾನು ಎಣಿಸಿದಂತೆಯೇ  ಆಯ್ತು. ಕೊನೆಯ ರೂಮಿನಲ್ಲಿ ಬೆಳಕಿದೆ.
ಕಂಪ್ಯೂಟರ್ ಮುಂದೆ ಒಬ್ಬ ಹವಲ್ದಾರ್ ಕುಳಿತಿದ್ದಾನೆ ಎರಡೂ ಕೈ ತಲೆ ಮೇಲೆ ಹೊತ್ತು..
ಅವನು ಎಷ್ಟು ಅನ್ಯ ಮನಸ್ಕನಾಗಿದ್ದನೆಂದರೆ ನಾನು ಅವನನ್ನು ದಾಟಿ ಹೋದದ್ದೂ ಆತ ಕಾಣಲಿಲ್ಲ.
ನಿಧಾನವಾಗಿ ಕಾರಿಡಾರ್ ದಾಟಿ ಹೊರ ಬಂದೆ.
ಅನತಿ ದೂರದಲ್ಲಿ ಹೊರ ಹೋಗುವ ದ್ವಾರ ಇದೆ. ಅದೊಂದು ಸೆಂಟ್ರಿ ಗೇಟ್. ಅಲ್ಲಿ ಮೂವರು ಇದ್ದಾರೆ ಸನ್ನದ್ಧರಾಗಿ
ಅವರ ಬಳಿ ತುಂಬಿದ ಬಂದೂಕಿದೆ.. ಎರಡು ಇನ್ಸಾಸ್ ಒಂದು ಕಾರ್ಬನ್ ..ಗನ್.. ಸ್ವದೇಶೀ - ನಮ್ಮಲ್ಲೇ ತಯಾರಾದ ಗನ್ ಅದು. ಮೊದಲು ಸೆಂಟ್ರಿಗಳ ಕೈಯ್ಯಲ್ಲಿ ಸಾಮಾನ್ಯ ೩೦೩ ಬಂದೂಕು ಇರುತ್ತಿತ್ತು. ಅದರ ಹೊಡೆತ ಜಾಸ್ತಿ. ಅಂದರೆ ಬಂದೂಕು ಉಪಯೋಗಿಸುವವನಿಗೆ ಜಾಸ್ತಿ ಹೊಡೆತ ಬೀಳುತ್ತಿತ್ತು. ಆದರೆ ಇದರಲ್ಲಿ ಹಾಗಲ್ಲ.
ಈ ಕಡೆ ತಿರುಗಿದೆ
ಒಂದು ಶಕ್ತಿಮಾನ್ ಟ್ರಕ್, ಎರಡು ಜೋಂಗಾ, ಒಂದು ಜೀಪ್ 
ಜೀಪ್ನಲ್ಲಿ ಬೀಗದ ಕೈ ಗಾಡಿಯಲ್ಲಿದೆ 
ಅದಕ್ಕೆಂದೇ ಒಂದು ಗಾಡಿ ಯಾವಾಗಲೂ ರೆಡಿ ಯಾಗಿರುತ್ತದೆ. ಸನ್ನದ್ಧವಾಗಿ,
ನಾನೀಗ ಹೊರಗಡೆ ಹೋಗೋ ಹಾಗಿಲ್ಲ.... ಅಲ್ಲದೇ ರಾತ್ರೆ ಹೊರಗಡೆ ಹೋಗಬೇಕಾದರೂ ಹೊರಗಿಂದ ಬರಬೇಕಾದರೂ ಐಡೆಂಟಿಟಿ ಅತ್ಯಗತ್ಯ.
ಅದರ ಜತೆ  ಆದಿನದ ಪಾಸ್ ವರ್ಡ್ ಗೊತ್ತಿರಬೇಕು..
ಪಾಸ್ ವರ್ಡ್..!!!
ಅರೆರೆ.... 
ನನಗೇ ಅಶ್ಚರ್ಯವಾಯ್ತು ಇದೆಲ್ಲಾ ನನಗೆ ಹೇಗೆ ತಿಳಿಯುತ್ತಲಿದೆ!!!
ಮಿಲಿಟರಿಯ ವಿಷಯಗಳೆಲ್ಲಾ ಇಷ್ಟು ಕರಾರುವಾಕ್ಕಾಗಿ ಹೇಳಬೇಕಾದರೆ?!
ನಾನು ಓದಿದ್ದು ಜಾಸ್ತಿಯಾಯ್ತಾ..?
ಇಲ್ಲ ಇದೆಲ್ಲಾ ಯೋಚಿಸಲು ಸಮಯವಿಲ್ಲ ನನಗೆ......
ಹೇಗೆ ಹೋಗಿದ್ದನೋ ಹಾಗೇ ವಾಪಾಸ್ಸು ಬಂದೆ.
ನನಗೆ ಮೊದಲು ಸಿಗುವ ರೂಮಿನಲ್ಲಿ ಹೇಗೆ ಇದ್ದನೋ ಹಾಗೆಯೇ ಇದ್ದಾನೆ..
ಹಲ್ಲೋ ಮೇಜರ್ ?
ಹಾಗೆನ್ನುತ್ತಲೇ ಕುಳಿತಿದ್ದ ಹವಲ್ದಾರ್ ಗಡಬಡಿಸಿ ಎದ್ದು ನಿಂತ ಆತನ ಕೈ ಸೆಲ್ಯೂಟ್ ಹೊಡೆಯಿತು ನನ್ನ ನೋಡುವ ಮೊದಲೇ..ಬಾಯಲ್ಲಿ ಸರ್ ಎನ್ನುವ ಶಬ್ದ.
ಆತ ಮೇಜರ್ ಅಲ್ಲ, ಆದರೆ ಮಿಲಿಟರಿಯಲ್ಲಿ ಕೆಳಗಿನ ಸಿಪಾಯಿಯನ್ನೂ ಗೌರವದಿಂದಲೇ ಕರೆದು ರೂಢಿ...
ಇವೆಲ್ಲಾ ಎರಡೇ ಕ್ಷಣಗಳ ಅವಧಿಯಲ್ಲಿ..
ಸರ್ ಸರ್ ಆತನ ದನಿಯಲ್ಲೂ ಕಣ್ಣಲ್ಲೂ ಖಚಿತತೆಯಿತ್ತು ವಿಚಲಿತತೆಯಲ್ಲ.
ಹೇಳಿ ಏನಾದ್ರೂ ಸಮಸ್ಯೆ..
ಆತನ  ಕೈ ಮತ್ತು ಕಣ್ಣು ಕಂಫ್ಯೂಟರ್ ಮೊನಿಟರ್ ನತ್ತ...
ನೋಡಿದೆ
ಪುಣ್ಯಾತ್ಮ ಯಾವುದೋ ತಪ್ಪು ಬಟನ್  ಒತ್ತಿ ಆತನ ಫೈಲ್ ಕಳೆದುಕೊಂಡಿದ್ದ..
ಆ ಕಂಫ್ಯೂಟರ್ ಮಹಾ ಸಾಗರದಲ್ಲಿ. 
ಮೇಜರ್ ನಾನು ಸಹಾಯ ಮಾಡಲೇ..?
ಬರೇ ಐದು ನಿಮಿಷ ಅಷ್ಟೆ.
ಆತನ ಎಲ್ಲಾ ಫೈಲುಗಳನ್ನೂ ದೊರಕಿಸಿ ಕೊಟ್ಟೆ.
ಆತನ ಮುಖದಲ್ಲಾದ ಸಂತೋಷ ..ಹೇಳತೀರದು...
ಈ ಜನ್ಮ ಮಾತ್ರವಲ್ಲ ಏಳೇಳು ಜನ್ಮದಲ್ಲೂ ಮರೆಯಲಾರ ಪಾಪ...
ಸರ್ ನಿಮಗೆ ಏನು ಬೇಕಾದ್ರೂ ಕೇಳಿ ಸಾರ್, ನಾನು ನಿಮ್ಮ ಜತೆ ಇದ್ದೇನೆ ಸರ್..ನೀವು ನನಗೆ ಮಾಡಿದ ಉಪಕಾರ ಯಾವತ್ತೂ ಮರೆಯಲಾರೆ ಸರ್. ಎಷ್ಟೇ ಕಷ್ಟ ಆದರೂ ನಿಮ್ಮ ಕೆಲಸ ನಾನು ಮಾಡಿಕೊಡ್ತೇನೆ ಸರ್..ನೀವು ನನ್ನ ಕೆಲಸ ಉಳಿಸಿದಿರಿ ಸರ್.. 
ಸರಿಯಪ್ಪಾ ನಿನ್ನ ಹೆಸರೇನು..?
ಅಖ್ತರ್ ಸರ್
ಸರಿ ಅಖ್ತರ್, ನನಗೆ ದಿನಾ ಪಾಸ್ ವರ್ಡ್ ವ್ಯವಸ್ಥೆ ಆಗಬೇಕಲ್ಲ..
ಸರಿ ಸರ್..
ಇನ್ನೇನು ಬೇಕು..?
ಆ ಸಂತೋಖ್ ಸಿಂಗ್ ನ ಡಿಟೈಲ್ಸ್ ಬೇಕು.. ಆ ಟ್ಯಾಂಕರ್ ಡಿಟೈಲ್ಸ್ ಕೂಡಾ..
ಸರಿ ಸರ್  ಖಂಡಿತಾ..
ನಾಳೆನೇ ನೀವು ಕೇಳಿದ ಎಲ್ಲಾ ವಿವರ ಕೊಡ್ತೇನೆ ಮತ್ತು ದೈನಂದಿನ ಪಾಸ್ ವರ್ಡ್ ನೀವು ಇಲ್ಲಿರುವ ವರೆಗೆ ನಿಮಗೆ ಸಿಗುವ ಹಾಗೆ ಮಾಡ್ತೇನೆ ಸರ್.
ಖುಷಿಯಲ್ಲೆದ್ದೆ. ಆತ ಪುನಃ ಸೆಲ್ಯೂಟ್ ಹೊಡೆದ...
ನನ್ನ ಸೆಲ್ ಗೆ ಬಂದು ನಿಶ್ಚಿಂತೆಯಿಂದ ಮಲಗಿದೆ..

ಮತ್ತೆ ನೆನಪಾಯ್ತು... ಆ ಕುಮಾರ್ ಎಂಬ ಹೆಸರಿನ ಐಡೆಂಟಿಟಿ ಕೇಳಬೇಕಿತ್ತು. ಇನ್ನೂ ಯಾವ ವಿವರ ಕೇಳಿದ್ರೂ ಹೇಳುತ್ತಿದ್ದ. 
ಎದ್ದು ಪುನಃ ಆ ರೂಮಿಗೆ ಬಂದೆ...
ಇಣಿಕಿದವನಿಗೆ ಎದೆ ದಸಕ್ ಅಂತು...
........ ಆಗಲೇ ಅಖ್ತರ್ ಡ್ಯೂಟಿ ಬದಲಾಗಿತ್ತು....!!!!

ಅಲ್ಲದೇ.....ಬಾಗಿಲಿನ ಸರೀ ಇದಿರಿನಲ್ಲಿ ಗೋಡೆಯ ಮೇಲೆ...
 ಸಿಸಿ ಟಿವಿ ಕ್ಯಾಮರಾ ಕೂಡಾ ಇದೆ... !!!!
ಮಿಲಿಟರಿಯಲ್ಲಿ ಕೆಲವು ಸ್ತರಗಳ ವರೆಗೆ ಎಲ್ಲವೂ ಟ್ರಾನ್ಸ್ಪರೆಂಟ್!!!
ನಮ್ಮ ಮಾತು ಕಥೆ ಎಲ್ಲಾ ರಹಸ್ಯವಾಗಿ ರೆಕಾರ್ಡ್ ಆಗುತ್ತೆ ಕೂಡಾ..
ಒಂದು ಅಪಾಯಕಾರೀ ವಿಷ ವರ್ತುಲಕ್ಕೆ ನಿಧಾನವಾಗಿ ಪ್ರವೇಶಿಸಿದ್ದೇನೆ ಅಂತ ಗೊತ್ತಾದದ್ದು ಮಾರನೆಯ ದಿನವೇ...!!
ಅಷ್ಟರಲ್ಲಿ ಕಾಲವೇ ಮಿಂಚಿತ್ತು...
# #  (..... Contd)
...... ಅಂಕ ೪ ರಲ್ಲಿ .. ಮತ್ತೊಂದು ಹತ್ಯೆ

1 comment:

  1. ಶುರುವಿಂದಲೂ ಹಂತ ಹಂತವಾಗಿ ಸಿಕ್ಕಿಸುತ್ತಲೇ ಬಂದಿದ್ದಾರೆ!
    ಅಖ್ತರ್ ಸಹ ಷಡ್ಯಂತ್ರದ ಭಾಗವಾಗಿ ಕಲಾವಿದನೇನೋ?

    ReplyDelete