ನಿನ್ನೆಯದು ಇಂದಿನಂತಲ್ಲ..ವಿಶೇಷ ಎಂದರೆ ನಿನ್ನೆಯ ದಿನ ನಮಗೆ ತಿಳಿದಿರುತ್ತದೆ ಇಂದಿನದು ಮತ್ತು ನಾಳೆಯದು ತಿಳಿದಿರುವುದಿಲ್ಲ.
ಆದರೆ ಅದನ್ನೇ ಇನ್ನೊಂದು ವಿಧಾನದಲ್ಲಿ ಹೇಳುವೆ ಎಂದರೆ ನಿನ್ನೆ ಯಲ್ಲಿ ಏನೂ ಬದಲಾವಣೆ ಇನ್ನು ನಾವು ಮಾಡಲಾಗುವುದೇ ಇಲ್ಲ.
ಆದರೆ ಇಂದು ನಾಳೆ ನಮ್ಮ ಕೈಯ್ಯಲ್ಲೇ ಇದೆ,
ಇಂದಿನದ್ದನ್ನು ನಮಗೆ ಬೇಕಾದ ಹಾಗೆ ಬದಲಿಸಿದರೆ ನಾಳೆ ನಮ್ಮ ಕೈಗೆ ಸಿಗಬಹುದು ನಾವೆಣಿಸಿದ ದಾರಿಯಲ್ಲಿ...
ನಿನ್ನೆ ರಾತ್ರೆಯ ಕರೆವಾಣಿ ನನ್ನನ್ನು ವಿಚಿತ್ರ ಮನಸ್ಥಿತಿಯಲ್ಲಿ ದೂಡಿದ್ದಂತೂ ನಿಜ. ನನ್ನ ಉತ್ತರವನ್ನೂ ನಿರೀಕ್ಷಿಸದೇ ಸಂಪರ್ಕ ಕಡಿದಿತ್ತು.
ಈ ವಿಷಯವನ್ನು ನನ್ನ ತಲೆಗೆ ಹಾಕಲು ಮಾತ್ರ ಇದನ್ನು ಉಪಯೋಗಿಸಿಕೊಂಡರೋ ಅಥವಾ ಆ ಕುಮಾರ್ ಎನ್ನುವವನಿಗೆ ಕೊಟ್ಟ ಟಾಸ್ಕ್ ಪೂರ್ತಿಯಾಗಲಿಲ್ಲ ಎಂಬ ಅಸಹನೆಯೇನೋ ಅರ್ಥವಾಗಲಿಲ್ಲ.
ಬೆಳಿಗ್ಗೆ ಎದ್ದವನೇ ನಾನು ಮಾಡಿದ ಮೊದಲ ಕೆಲಸ ಅಂದರೆ ಆ ಪಂಜಾಬೀ ಚಾಲಕನನ್ನು ಹುಡುಕಲು ಹೊರಟಿದ್ದು.
ನನ್ನ ಐಡೆಂಟಿಟಿಯ ಬಗ್ಗೆ ಸ್ವಲ್ಪವಾದರೂ ಸುಳುಹು ಆತ ಕೊಡ ಬಲ್ಲನೇನೋ ಅನ್ನಿಸಿತ್ತು ಆ ಕ್ಷಣಕ್ಕೆ.
ಅವನೆಲ್ಲಿದ್ದಾನೆ ಅಂಬುದು ಹೇಗೆ ಗೊತ್ತಾಗುತ್ತದೆ,,? ಗಡಿಬಿಡಿಯಲ್ಲಿ ಅವನ ಹೆಸರು ಕೇಳುವುದೂ ಮರೆತಿದ್ದೆ.
ಅಲ್ಲ ನಾನೆಂತ ವನು, ಒಂದೂವರೆ ಎರಡು ದಿನಗಳ ಸಹ ಪ್ರಯಾಣದಲ್ಲಿ ನಾನು ಅವನ ಹೆಸರು,,,,ಇದು ಬಿಡಿ
ಅರೆರೇ ಅವನೂ ನನ್ನ ಹೆಸರೂ ಕೇಳಿಕೊಳ್ಳಲೇ ಇಲ್ಲ...
ಇದೊಂದು ವಿಚಿತ್ರವೇ ಅನ್ನಿಸಿತು.
ಅಲ್ಲ ಅಲ್ಲ..... ತಡಿರೀ ನೆನಪಿಗೆ ಬರ್ತಾ ಇದೆ..
ನಾವು ಈ ಆಫೀಸ್ ಹೊಕ್ಕಾಗಲೇ ಆತನ ಹೆಸರು ಕೇಳಿದ್ದ ಸಮವಸ್ತ್ರ ಧಾರಿ...
ಆತನ ಹೆಸರು ಹೌದು ಸಂತೋಖ್ ಸಿಂಘ್
ಅರೆ ಸರಿಯಾಗಿಯೇ ನೆನಪಿಗೆ ಬಂತಲ್ಲಾ...
ಅಂದರೆ ನನ್ನ ಮನಸ್ಸೂ ಬಿಟ್ಟು ಬಿಟ್ಟು ತನಗೆ ಬೇಕಾದದ್ದನ್ನೇ ಆರಿಸಿ ನನಗೆ ಕೊಡ್ತಾ ಇದೆಯಲ್ಲಾ..?
ಇದೂ ಒಂದು ಅಚ್ಚರಿ ಯ ವಿಷಯವೇ...
ಹೌದೂ ನನ್ನ ಹೆಸರು ಅವರು ಯಾಕೆ ಕೇಳ್ಲಿಲ್ಲ...?
ಇದು ವಿಶೇಷ....
ಅಂದರೆ ನನ್ನ ಪರಿಚಯ ಅವರಿಗೆ ಇದೆ, ನನ್ನ ಬಗ್ಗೆ ಎಲ್ಲಾ ವಿಷಯ ಗೊತ್ತಿದ್ದವರು ಮಾತ್ರ ಹೀಗೆ ಹೆಸರೂ ಕೇಳದೇ ಇರುತ್ತಾರೆ...
ಅಂದರೆ ಇದರ ಇನ್ನೊಂದು ಅರ್ಥ ನಾನು ಯಾಕೆ ಇಲ್ಲಿಗೆ ಬಂದಿದ್ದೇನೆ ಅಂತಾನೂ ಅವರಿಗೂ ತಿಳಿದೇ ಇದೆ.
ಒಂದು ಮಿಂಚು ಇನ್ನೊಮ್ಮೆ ತಲೆಯಲ್ಲಿ .
ಅಂದರೆ ನನ್ನ ಸ್ವಾತಂತ್ರ್ಯ ಅವರಿಗೆ ಬೇಕಾದ ಹಾದಿಯಲ್ಲಿ ಮಾತ್ರ ನನಗಿದೆ..!!
ಇದರ ನಿಜವಾದ ಅರ್ಥ ಅವರೇ ನನ್ನನ್ನು ಕಂಟ್ರೊಲ್ ಮಾಡ್ತಾ ಇದ್ದಾರೆ...
ಅದೂ ಅವರಿಗೆ ಬೇಕಾದ ಹಾಗೆ...
ಕೂಡಲೇ ಕಾರ್ಯಗತನಾದೆ ಮುಂದಿನ ಹೆಜ್ಜೆಗೆ
ಉದ್ದಾನುದ್ದ ಹರಡಿಕೊಂಡ ಈ ಕಾರಿಡಾರ್ ನ ತಗಲಿಕೊಂಡೆ ಆತನ ಸೆಲ್ಲೂ ಇದ್ದಿರಬಹುದಲ್ಲಾ..?
## ## ##
ರಾತ್ರೆಯ ಸುಮಾರು ಒಂದು ಗಂಟೆ.
ರಾತ್ರೆಯ ಆ ನೀರವತೆಯನ್ನು ಭೇಧಿಸುತ್ತ ಬಂದ ಕರೆಗಂಟೆ ನನ್ನನ್ನು ಪುನಃ ಎಚ್ಚರಿಸಿತು.
ನಿನ್ನೆಯ ನನ್ನ ಅನುಭವ ಸ್ವಲ್ಪ ಧೈರ್ಯ ಇಂದಿಗೆ ಹೆಚ್ಚಿಸಿತ್ತು.
ಎಂದಿನಂತೆ ರಿಸೀವರ್ ಎತ್ತಿದೆ, ಈ ಬಾರಿ ಅಳುಕಲಿಲ್ಲ.
ಎಂದಿನಂತೆ ಖಚಿತ ಇನ್ ಸ್ಟ್ರಕ್ಷನ್
"ಹೊರಗೆ ಜೋಂಗಾ ನಿಂತಿದೆ ಕೂಡಲೇ ಹೊರಟು ಬಿಡು.........
ಮುಂದೆ ನಾನು ಏನೇನು ಮಾಡಬೇಕೆಂಬ ವಿವರ ಆ ಕಡೆಯಿಂದ ಬರುತ್ತಿದ್ದರೆ ನಾನು ಶಿರಸಾ ವಹಿಸಿ ಕೇಳುತ್ತಾ ನಿಂತಿದ್ದೆ.
ಆ ಕಡೆಯಿಂದ ಮಾತು ಮುಗಿದ ಸಂಕೇತ ಬರುತ್ತಲೇ ನಾನೂ ಹೊರ ಹೊರಡಲು ಸಿದ್ಧನಾದೆ.
ಗೇಟಲ್ಲಿ ಚಾಲಕ ಗಾಡಿಯೊಡನೆ ಸಿದ್ಧವಾಗಿ ನನ್ನ ಕಾಯುತ್ತಲಿದ್ದ .
ಈ ಬಾರಿ ನನಗೆ ಅಷ್ಟೇನೂ ಮುಜುಗರವಾಗಲಿಲ್ಲ.
ನಮ್ಮ ಜೋಂಗಾ ಮುಖ್ಯ ರಸ್ತೆಗೆ ಬರುತ್ತಲೇ ನಾನು ವಾಹನ ಚಲಾವಣೆ ಮಾಡುವ ಇಂಗಿತ ತೋರಿಸಿದೆ.
ಒಲ್ಲದ ಮನಸ್ಸಿನಿಂದ ನನಗೆ ಒಪ್ಪಿಗೆ ಕೊಟ್ಟ ಚಾಲಕ ತಾನು ಹಿಂದೆ ಕುಳಿತುಕೊಳ್ಳಲು ಕೆಳಗಿಳಿದ.
ಇದೇ ಅವಕಾಶವನ್ನು ಉಪಯೋಗಿಸಿಕೊಂಡ ನಾನು ಆತನು ಹಿಂದಿನ ಬಾಗಿಲು ತೆಗೆಯುವುದರೊಳಗಾಗಿ ಜೋಂಗಾವನ್ನು ದೌಡಾಯಿಸಿದೆ.
ರಿಯರ್ ಮಿರರ್ ನಲ್ಲಿ ಆತ ನನ್ನ ಗಾಡಿಯ ಹಿಂದೆಯೇ ಓಡಿ ಬರುವುದು ಕಾಣಿಸುತ್ತಿತ್ತು.
ನನ್ನ ಜೋಂಗದ ಗಾಳಿಯಲ್ಲಿ ತೇಲುವಂತೆ ಮಾಡಲು ನಾನು ಜೋರಾಗಿ ಎಕ್ಸಿಲೇಟರ್ ಒತ್ತಿದೆ.
ನೋಡ ನೋಡುತ್ತಿರುವಂತೆ ಆತ ನನ್ನ ದೃಷ್ಟಿಯಿಂದ ಮರೆಯಾಗಿದ್ದ.
ಸ್ವತಂತ್ರ ಹಕ್ಕಿಯಂತೆ ನಾನು ಜೋಂಗ ಚಲಾಯಿಸುತ್ತಿದ್ದೆ.
ಮುಖ್ಯ ರಸ್ತೆಯ ಪಕ್ಕದ ಸಾಲು ದೀಪಗಳು ಮರಗಳ ಮತ್ತು ರಾತ್ರೆಯ ಸನ್ನಿವೇಶದ ಗಂಭೀರತೆಯನ್ನು ಹೆಚ್ಚಿಸುತ್ತಿದ್ದವು. ಆ ಕತ್ತಲ ರಾತ್ರಿಯಲ್ಲಿನ ರಸ್ತೆಯ ಮೇಲಿನ ಮರಗಿಡಗಳು ಮತ್ತು ರಸ್ತೆ ದೀಪಗಳು ನೆರಳು ಬೆಳಕಿನ ಬರೆದಿಟ್ಟ ಚಿತ್ರ ವಿಚಿತ್ರ ವಿನ್ಯಾಸದ ಹಿಂದೋಡುವಿಕೆಯು ನನ್ನ ಬದುಕಿನ ಈಗ ನಡೆಯುವ ಈ ವಿದ್ಯಮಾನಗಳಿಗೂ ಏನಾದರೂ ಕನೆಕ್ಷನ್ ಎಂದರೆ ಈ ರಸ್ತೆ ಅನ್ನಿಸಿತೇಕೋ..
ದೂರದಲ್ಲೊಂದು ತಿರುವು ಕಾಣುತ್ತಿತ್ತು.
ಎಡ ಪಕ್ಕದಲ್ಲೊಂದು ಆಸ್ಪತ್ರೆ. ಕಲ್ಲಪ್ಪ ಹಾಸ್ಪಿಟಲ್
ಒಬ್ಬ ಡಾಕ್ಟರ್ ತನ್ನ ಡ್ಯೂಟಿ ಮುಗಿಸಿಯೇನೋ ಎಂಬಂತೆ ಖುಷಿಯಲ್ಲಿ ಮುಖ್ಯ ದ್ವಾರದ ಹೊರ ಬರುವುದು ಕಾಣುತ್ತಿತ್ತು.
ರಾತ್ರೆ ಪಾಳಿಯ ಸೆಕ್ಯುರಿಟಿ ಅವನಿಗೆ ಸೆಲ್ಯೂಟ್ ಕೊಟ್ಟ. ಪರಿಚಯದವರೇನೋ ಎನ್ನಿಸಿತ್ತು,
ಈ ಜಮ್ಮುವಿನಂತಾ ಸಿಟಿಯಲ್ಲಿ ನನ್ನ ಪರಿಚಯದವರು ಹೇಗಿದ್ದಾರು ಅನ್ನೋ ಸಂಶಯದಲ್ಲಿ..
ಆತನನ್ನು ಸರಿಯಾಗಿ ನೋಡಲು ಒಂದು ಕ್ಷಣ ಎಡಗಡೆ ದೃಷ್ಟಿ ಹಾಯಿಸಿದೆ.
ಆಗಬೇಕಾದುದನ್ನು ಯಾರು ತಡೆಯುತ್ತಾರೆ..?
ವೇಗದಿಂದಿದ್ದ ನನ್ನ ಜೋಂಗ ಮುಂದೆ ನಿಂತಿದ್ದ ಕಪ್ಪು ಮಾರುತಿ ಓಮ್ನಿಯನ್ನು ಬಲವಾಗೇ ಗುದ್ದುವುದನ್ನು ಎಷ್ಟೇ ಪ್ರಯತ್ನ ಪಟ್ಟರೂ ಶತಾಯ ಗತಾಯ ನನ್ನಿಂದ ತಪ್ಪಿಸಲಾಗಲೇ ಇಲ್ಲ.
ಅಷ್ಟೇ ಆಗಿದ್ದರೆ ತೊಂದರೆ ಇರುತ್ತಿರಲಿಲ್ಲ.
ಆದರೆ ಅದರ ಬಾನಟ್ ತೆರೆದು ಏನೋ ಕೆಲಸ ಮಾಡುತ್ತಿರುವವನ ಕೈಗಳ ಮೇಲೆ ಇಂಜಿನ್ ಬಾನಟ್ ಜೋರಾಗಿ ಬಿದ್ದು ಬಿಟ್ಟಿತ್ತು.
ಆತ ಸಿಕ್ಕಾಪಟ್ಟೆ ಕಿರುಚುತ್ತಿದ್ದ.
ಪ್ರಾಯಶಃ ಈ ಜನ್ಮದಲ್ಲಿ ಇನ್ನಾತ ಅಂಗವಿಕಲನಾಗೇ ಇರಬೇಕೇನೋ....
ಆತನ ರಕ್ತ ಸಿಕ್ತ ಕೈ ನನ್ನಿಂದ ಎಣಿಸಿಕೊಳ್ಳಲೂ ಸಾಧ್ಯವಾಗದೇ...
ಆಗಲೇ ಗೊತ್ತಾದದ್ದು ಆ ಗಾಡಿಯ ಕೆಳಗೂ ಒಬ್ಬ ನಿದ್ದ ..... ಅವನಿಗೇನಾಗಿರಬಹುದೆಂಬುದು ನನ್ನ ಊಹೆಗೂ ನಿಲುಕದು.
ಇವೆಲ್ಲಾ ಎಷ್ಟು ಬೇಗ ಘಟಿಸಿದವೆಂದರೆ ನನಗೆ ಯೋಚನೆ ಮಾಡುವಷ್ಟೂ ಸಮಯವಿರಲಿಲ್ಲ..
ಕಿಂಕರ್ತವ್ಯ ಮೂಢನಾಗಿ ಗಾಡಿಯನ್ನು ಮುಂದಕ್ಕೆ ಓಡಿಸಿಯೇ ಬಿಟ್ಟೆ ಸೆಕ್ಯುರಿಟಿ ಇಂತಹ ಗಡಿಬಿಡಿಯಲ್ಲೂ ನನ್ನ ಗಾಡಿಯ ಫೋಟೋ ತೆಗೆದುಕೊಳ್ಳುವುದನ್ನು ಕನ್ನಡಿಯಲ್ಲಿ ಗಮನಿಸಿದೆ.
ನನ್ನ ಎದೆ ಮಾತ್ರ ಇನ್ನೂ ಹೊಡೆದುಕೊಳ್ಳಲೇ ಇತ್ತು.
..................
ಎಚ್ಚರಾದಾಗಲೂ ನಾನು ಅದೇ ಟ್ರಾನ್ಸ್ ನಲ್ಲಿದ್ದೆ.
ಎದೆ ಇನ್ನೂ ಹೊಡೆದುಕೊಳ್ಳುತ್ತಲಿತ್ತು
ಎಂತಹಾ ಭೀಕರ ಕನಸು....
ಅಥವಾ ನಿಜವಾಗಿಯೂ... ಈ ಅಪಘಾತ ನನ್ನಿಂದ ಆಗಿತ್ತಾ...?
## ## ##
ಮುಂದುವರಿಯುವುದು...
ಅಂಕ ೫... ಜೈಲಿನತ್ತ...?
ನನಗೂ ಮೊದಲಿಂದಲೂ 'ಅವರೇ ನನ್ನನ್ನು ಕಂಟ್ರೊಲ್ ಮಾಡ್ತಾ ಇದ್ದಾರೆ' ಎಂಬ ಮಾತು ಇಂಚಿಂಚಿಗೂ ಸಿಕ್ಕಿತು.
ReplyDeleteಈ ಅಪಘಾತವಂತೂ ಕನಸಲ್ಲ! ಬಹುಶಃ ಹೆಜ್ಜೆ ಹೆಜ್ಜೆಗೂ ತನ್ನನ್ನು ತಾನೇ ಸಿಕ್ಕಿಸಿಕೊಳ್ಳುತ್ತಿದ್ದಾನೆಯೇ ಕಥಾನಾಯಕ!