Monday, April 27, 2015

ನಿನ್ನಮ್ಮನಾಗಿ ನಾ ಮತ್ತೆ ಬರಲೇ




ನನ್ನ ಎದೆಯಾಳದಲಿ ಬಚ್ಚಿಟ್ಟ ಕನಸಿನಲೂ
ಕಂತು ಕಂತಿಗೂ ನಿನ್ನ ನೆನಪಿನೆಳಲೂ

ಎಲ್ಲನೋವನು ತನ್ನ ಮನದಲ್ಲೇ ಬಚ್ಚಿಟ್ಟು
ಹೊರಗೆ ಅರಳುವೆ ನೀನು ಪ್ರೀತಿ ಕೊಟ್ಟು

ಮಧುರ ನಿನ್ನಯ ಲಾಲಿ ನನ್ನ ಕಿವಿಗಳಿಗಿಂಪು
ಮತ್ತೆ ಬಿಸಿಯುಸಿರ ಆ ಪ್ರೀತಿ ಒನಪು

ಇನಿದನಿಯ ಜೋಗುಳದ ಅಕ್ಕರೆಯ ಕುಡಿನೋಟ
ಒಲವಿನಕ್ಕರೆಯ ಆ ತುತ್ತಿನೂಟ

ಬದುಕಿನೋಣಿಯ ತುಂಬ ಒಲುಮೆಯಮ್ರತ ಹರಿಸಿ
ನನ್ನ ಭಾಗ್ಯವ ಬರೆದೆ ಪ್ರೀತಿಯುಣಿಸಿ

ಮನೆಯ ಕಜ್ಜದ ಹೊರೆಯ ಹೊತ್ತೂ ಪ್ರೀತಿಯ ಹೊಸೆದು
ನಮ್ಮ ಬೆಳೆಸಿದೆ ನಿನ್ನ ನೆತ್ತರೆರೆದೂ

ಉಕ್ಕಿತೆನ್ನಯ ಅಕ್ಷಿ ಪಟಲದಾಚೆಯು ನಿತ್ಯ
ಇಳೆಯ ದೇವರು ನೀನೇ ಸತ್ಯ ನಿತ್ಯ

ಕಣ್ಣಾಲದಲ್ಲೆಲ್ಲ ಹರಿಯಿತೊಲುಮೆಯ ಜಲವು
ನಿನ್ನ ತ್ಯಾಗವ ನೆನೆಸಿ ಅಮ್ಮ ನಿಜವೂ

ನಿನ್ನ ಸೇವೆಯ ಋಣವ ನಾ ಹೇಗೆ ತೀರಿಸಲೇ
ನಿನ್ನಮ್ಮನಾಗಿ ನಾ ಮತ್ತೆ ಬರಲೇ

No comments:

Post a Comment