Thursday, April 9, 2015

ಬ್ರೈನ್ ವಾಶ್ ಅಂಕ ೨ ಸಂಶಯ

ಅಂಕ ೨ ಸಂಶಯ

ಆ ರಾತ್ರೆ ನಾನು ಮತ್ತು ಗಾಡಿಯ ಚಾಲಕ ಪಂಜಾಬಿ ನನ್ನ ಜತೆಯಲ್ಲಿರಬಹುದೇನೋ ಅಂದ್ಕೊಂಡಿದ್ದೆ.
ಆದರೆ ಹಾಗಾಗಲೇ ಇಲ್ಲ. ಅವನನ್ನು ಯಾವ ಸೆಲ್ ನಲ್ಲಿಟ್ಟರೋ ಗೊತ್ತಾಗಲಿಲ್ಲ.
ಒಬ್ಬನೇ ಇದ್ದುದಕ್ಕೋ ಏನೋ ನನಗೆ ಆ ರಾತ್ರೆ ನಿದ್ದೆ ಬಂದಿರಲಿಲ್ಲ.
ಮತ್ತೆ ನಗು ಬಂತು ನನ್ನ ಯೋಚನೆಗೇ...
ಒಬ್ಬನೇ ಅಂದರೇನು? ನನಗೆ ಇನ್ನು ಕುಟುಂಬ..?
ಹೌದಲ್ಲಾ ಇದರ ಬಗ್ಗೆ ನಿಮಗೆ ನಾನು ಏನೂ ಹೇಳಲೇ ಇಲ್ಲ..
ಒಳ್ಳೆಯದೇ ಆಯ್ತು ...
ನಾನು ಸತ್ತರೆ ನನ್ನ ಬಗ್ಗೆ ನೀವೂ ಏನೂ ಅಂದ್ಕೊಳ್ಳೋಲ್ಲ....
ಅಲ್ಲವೇ ನಾನೇನು ನಿಮ್ಮ ಕುಟುಂಬದ ಸದಸ್ಯನೇ..?

ಹೌದು ೩-೪ ದಿನಗಳ ಹಿಂದಿನ ವಿಷಯ ನಿಮಗೆ ನಾನು ಹೇಳಲೇ ಇಲ್ಲ ಅಲ್ಲವೇ
ನಿಜ ಹೇಳಬೇಕೆಂದರೆ ನನಗೂ ಸಂಶಯ ಬರ್ತಾ ಇದೆ.
ನನ್ನ ಮಾನಸಿಕ ಶಕ್ತಿಯ ಬಗ್ಗೆ..
ಯಾಕೆ ಗೊತ್ತಾ ನಿಜವಾಗಿಯೂ ಹಿಂದಿನ ವಿಷಯ ನಿಮಗೆ ಹೇಳಬೇಕಾದರೆ ನನಗೆ ನೆನಪಿರಬೇಕಲ್ಲಾ..?
ನನಗೆ ವಾಸ್ತವವಾಗಿ ನೆನಪಿನಲ್ಲಿಲ್ಲ.
ನಾನು ಚಂದೀಗರ್ ನಿಂದ ಈ ಪಂಜಾಬೀ ಚಾಲಕನ ಜತೆಗೆ ಬಂದೆ.. ನಿಮಗೂ ತಿಳಿದಿದೆಯಲ್ಲಾ..?
ಆದರೆ ಚಂದೀಗರ್ ಹೇಗೆ ಬಂದೆ..?
ಎಲ್ಲಿಂದ... ಬಸ್ ನಲ್ಲಿಯೇ ರೈಲಿನಲ್ಲಿ ಯಾ ವಿಮಾನದಲ್ಲಿ..?
ಗೊ..ತ್ತಿ...ಲ್ಲ..!!!

ಮತ್ತೊಂದು ವಿಷಯ...
ನಿನ್ನೆ ನಾನು ಮತ್ತು ಆ ಪಂಜಾಬೀ ಚಾಲಕ ಈ ಮಿಲಿಟರಿಯವರ ಆಫೀಸಿಗೆ ಬಂದೆವಲ್ಲ...
ರಾತ್ರೆ ನನಗೆ ಕನಸು ಬಿತ್ತು ಎಂದಿದ್ದೆನಲ್ಲಾ...
ಅದು ನಿಜವಾಗಿಯೂ ಕನಸೇ..?
ಅಥವಾ...
ಬೆಚ್ಚಿ ಬೀಳುವ ಹಾಗಾಯ್ತು...
ದೇವರೇ ...
ಅಥವಾ ನಾನೇ ಅವರನ್ನು..?
ಹಾಗಾಗದಿರಲಿ ದೇವರೇ..
ಇಲ್ಲ ಇಲ್ಲ
ನಾನು ಅಷ್ಟು ಕ್ರೂರನಾಗಲು ಸಾಧ್ಯವೇ ಇಲ್ಲ...
ಈಗಂತೂ ನನ್ನ ಕೈ ಅನಾಯಾಸವಾಗಿ ನನ್ನ ಪ್ಯಾಂಟಿನ ಜೇಬಿನತ್ತ ಹೋಯ್ತು...
ಅಲ್ಲಿ ಅಲ್ಲಿ ಏನೋ ಇದೆ!!!
ಏನದು??
ಹೊರ ತೆಗೆದು ನೋಡಿದೆ...
ಆ...ಯು...ಧ!!!!
ಅದೊಂದು ಕತ್ತಿ
ವೈದ್ಯರು ಸರ್ಜರಿ ಮಾಡುವಾಗ ಉಪಯೋಗಿಸುತ್ತಾರಲ್ಲ... ಅಂತಹ ಕತ್ತಿ...
ಇದು ನನ್ನ ಕಿಸೆಯಲ್ಲಿ ಹೇಗೆ ಬಂತು..?
ಅಯೋಮಯ
ಏನೋ ನಡೆಯುತ್ತಿದೆ ಇಲ್ಲಿ...
ಕುಮಾರ್ ಜಾಗೃತೆ!!!
ನನ್ನ ಬುದ್ದಿಯ ಮೇಲೆ ನನಗೇ ಸಂಶಯ ಇನ್ನೊಮ್ಮೆ..
ನನ್ನ ಹೆಸರು ಕುಮಾರ್ ಎಂದೇ..?
ಅರೇ ಸಂಶಯ ಯಾಕೆ..?
ಕುಮಾರ್ ನನ್ನ ಹೆಸರಾದರೆ ಅದು ನನಗೆ ಈಗಲೇ ಯಾಕೆ ನೆನಪಾಗಬೇಕು..?
ಅಲ್ಲಲ್ಲ...
ಇಲ್ಲಿಯವರೆಗೆ ನಾನು ನನ್ನ ಹೆಸರನ್ನು ನಿಮಗೆ ತಿಳಿಸಲೇ ಇಲ್ಲವಲ್ಲ..?
ನಿಮಗೆ ಯಾಕೆ ಸಂಶಯ ಬರಬೇಕು..?
ಇಲ್ಲಿಯವರೆಗೆ ನಿಮಗೆ ನನ್ನ ಹೆಸರು ಹೇಳದೇ ತಪ್ಪು ಮಾಡಿದೆ ಅನ್ನಿಸುತ್ತಿದೆ...
ಇಲ್ಲಿಯವರೆಗೆ ನಡೆದದ್ದೆಲ್ಲಾ ಇವರ ಯೋಜನೆಯೇ ಇರಬಹುದೇ..?
ನನ್ನ ಪ್ರತಿಯೊಂದೂ ಚಲನವಲನ ಇವರೆಣಿಸಿದ ಹಾಗೇ ನಡೆಯುತ್ತಿರಬಹುದೇ..?
ಹಾಗಾದರೆ....???
ಇವರ ಮುಂದಿನ ಹೆಜ್ಜೆ ನನಗೆ ಗೊತ್ತಾಗಬೇಕಾದುದು ಅನಿವಾರ್ಯ, ಮತ್ತು ಅತ್ಯವಶ್ಯ!!
ನಾನು ಅವರಿಗಿಂತ ಒಂದು ಹೆಜ್ಜೆ ಮುಂದೆ ಯೋಚಿಸಿ...
ಪಿಚ್ಚೆನಿಸಿತು
ಅದು ಅಷ್ಟು ಸುಲಭವೇ..?
ಅವರೆಷ್ಟು ಜನರಿದ್ದಾರೆಂಬುದೇ ನನಗೆ ತಿಳೀಯದು...
ಆದರೆ ನಾನು ಒಬ್ಬನೇ..!?!

ಹಿಂದೆ ಅತೀ ಹಿಂದೆ ಯುದ್ಧ ಹಗಲಲ್ಲಿ ಮಾತ್ರವಿತ್ತು. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ..
ಆದರೆ ಈಗ ಅದರ ತದ್ವಿರುದ್ದ.
ಈಗಿನ ಯುದ್ಧ ಕತ್ತಲಿನಲ್ಲಿ ಮಾತ್ರ
ಅಂದರೆ ನನ್ನ ಮುಂದಿನ ಹೆಜ್ಜೆಯೂ ಕತ್ತಲಿನಲ್ಲೇ ಆಗಬೇಕು...ಅವರು ಆಗಲೇ ನಿಶ್ಚಿಂತರಿರುತ್ತಾರೆ. ತಮ್ಮ ಶಕ್ತಿ ಮತ್ತು ಯುಕ್ತಿ ಯೋಜನೆಯ ಬಗ್ಗೆ.
ಆಗಲೇ ಮಿಂಚೊಂದು ಮಿಂಚಿತು ನನ್ನ ಮಸ್ತಿಷ್ಕದಲ್ಲಿ
ನನಗೆ ಎಲ್ಲವೂ ನಾನೇ..
ನೋ ಆರ್ಡರ್ ನೋ ಅಸಿಸ್ಟೆನ್ಸಿ...
ಏನೋ ಸದ್ದು...
ಅದು ದೂರವಾಣಿಯದ್ದು
ಕುಳಿತಲ್ಲಿಂದ ಎದ್ದೆ.
ನನ್ನ ಸೆಲ್ ನ ಬಾಗಿಲು ಚಿಲಕ ಹಾಕಿರಲಿಲ್ಲ.
ಹೊರಬಿದ್ದೆ..
ಖಾಲಿ ಕಾರಿಡಾರ್ ನ ತುತ್ತ ತುದಿಯಲ್ಲಿದೆ ಆ ಫೋನು.
ಸಪ್ಪಳವಾಗದಂತೆ ಸಾಗುತ್ತಾ ತಲುಪಿದೆ.
ಒಂದು ಕ್ಷಣ ನಿಧಾನಿಸಿದೆ...
ನಾನು ಮಾಡುತಿರುವುದು ತಪ್ಪೋ ಸರಿಯೋ....
ಇನ್ನೊಂದು ಅಚ್ಚರಿಯ ತೆರೆ ಸರಿಯುತ್ತದೋ ಅನ್ನಿಸಿತು ಯಾಕೋ...
ಒಂದೇ ಕ್ಷಣ ಯೋಚನೆಯನ್ನೂ ನಿಲ್ಲಿಸಿ ರಿಸೀವರ್ ಎತ್ತಿದೆ...
"ಕುಮಾರ್ ಇನ್ನೂ ಕೆಲ್ಸ ಶುರು ಮಾಡಿಲ್ಲಾ...???"
 ಆ ಕಡೆಯ ದನಿಯಲ್ಲಿ ಗದರುವಿಕೆಯಿತ್ತು. ಆದರೆ ...
ಅರೇ ಕುಮಾರ್ ಅನ್ನೋದು ನನ್ನ ಹೆಸರಲ್ಲವೇ..
ಹಾಗಾದರೆ ಈ ಗದರುವಿಕೆ ನನಗೇ..?
ಅಲ್ಲಲ್ಲ    .....ಅಥವಾ..? 
ಈ ಆಫೀಸಿನಲ್ಲಿ ಕುಮಾರ್ ಎಂಬುವವನು ಇದ್ದಾನಾ..?
ತಲೆ ಧಿಮ್ಮೆಂತು!!

ಡಬಲ್ ಐಡೆಂಟಿಟಿ..?
( ಮುಂದುವರಿಯುವುದು)



2 comments:

  1. ಈ ಭಾಗದಲ್ಲಿ ಹೀಗಿರಬಹುದು ಎಂದು ನಾನು ಎಣಿಸಿದ್ದೆಲ್ಲ ಉಲ್ಟಾ ಹೊಡೆದಿದೆ.
    ಕುಮಾರ್ (!) ಜೇಬಲಿ ಆ ಆಯುಧ!
    ಬೀಗವನ್ನು ಹಾಕದ ಸೆಲ್, ಕರೆಯ ಗದರುವಿಕೆ!
    ಡಬಲ್ ಐಡೆಂಟಿಟಿ!

    ಬರೀ ಗೊಜಲು ಗೊಜಲು.
    ನಿಮ್ಮ ಕುತೂಹಲಕಾರಿ ಶೈಲಿಯಲ್ಲೇ ನಮ್ಮನ್ನರ್ಧ ಕೊಂದುಬಿಡುತ್ತೀರ.

    ಬೇಗ ಬರಲಿ ಮೂರನೆಯ ಭಾಗ.

    ReplyDelete
  2. ಬದರಿಯವರೇ ನಿಮ್ಮ ಪ್ರೋತ್ಸಾಹದಾಯಕ ಮೆಚ್ಚುಗೆಯೇ ನನ್ನನ್ನು ಮತ್ತೆ ಮತ್ತೆ ಬರೆಸೀತು
    ಧನ್ಯವಾದಗಳು

    ReplyDelete