Tuesday, March 31, 2015

ಓ ಬಾಲ್ಯವೇ ನೀನೆಷ್ಟು ಚೆನ್ನು

1 ನಂಬುಗೆ

ನಾನು ಸಣ್ಣವನಿದ್ದಾಗ ನನ್ನ ತಂದೆಯವರು ಅವರ ಅಣ್ಣ  ತಮ್ಮಂದಿರೊಡನೆ ಹಳ್ಳಿಯಲ್ಲಿ ವಾಸಿಸುತ್ತಿದ್ದರು. ಈಗ ಎಣಿಸಿದರೆ ಆಗಿನ ಹಳ್ಳಿಯ ಅವಿಭಕ್ತ ಜೀವನ ನಮಗೆಲ್ಲ ತುಂಬಾ ಮಜಾ ತರುವಂತಹದಿದ್ದಿತ್ತು. ಹಳ್ಳಿಯ ಆರೋಗ್ಯಮಯ ವಾತಾವರಣ ಮೈಬಗ್ಗಿಸಿ  ದುಡಿಯಲು ಎಲ್ಲರನ್ನೂ ಪ್ರೆರೇಪಿಸಿ, ಅರೋಗ್ಯಮಯ ದೇಹ, ಕೌಟುಂಬಿಕ ಪರಿಸರ ಉಂಟು  ಮಾಡುತ್ತಿತ್ತು. ಆದರೆ ಆಗ ಎಲ್ಲರೂ ಉತ್ತಮರೇ ಎಂದೋ ಅಥವಾ ಎಲ್ಲ ಕಡೆ ನ್ಯಾಯಯುತ ಜೀವನವೇ  ನಡೆಯುತ್ತಿತ್ತು ಅಂತಲ್ಲ. ಅಂದರೆ ಕುಟುಂಬದ ಹಿರಿಯರಿಂದಾಗಿ ಎಲ್ಲರೂ ಹೊಂದಿಕೊಂಡು  ಹೋಗುವುದು ಅನಿವಾರ್ಯವಾಗಿತ್ತು ಅನ್ನಿಸುತ್ತೆ. ಆಗೆಲ್ಲ ಮಕ್ಕಳು ಹಿರಿಯರು ಒಬ್ಬರನ್ನೊಬ್ಬರು ಹೊಂದಿಕೊಂಡು, ಅರಿತುಕೊಂಡು, ಸಹಬಾಳ್ವೆ, ಸಹಜೀವನ,ಎನ್ನುವ  ಮಾತುಗಳೆಲ್ಲಾ ಒಂದರ್ಥದಲ್ಲಿ ಸರಿಯಾಗಿಯೇ ಹೊಂದುತ್ತಿದ್ದವು ಹಳ್ಳಿಯ  ಜೀವನಕ್ಕೆ.ಒಂದೊಮ್ಮೆ ಪರಸ್ಪರ ಏನಾದರೂ ವೈಮನಸ್ಸು ಉಂಟಾಗಿದ್ದರೂ ಹೊರಗಡೆ ತೋರಿಸಿಕೊಳ್ಳುವಂತಹ ಜಾಯಮಾನ ಇರುವುದಿಲ್ಲವಿತ್ತು.ಹಾಸ್ಯ ಎಲ್ಲದರಲ್ಲಿಯೂ ಹಾಸು ಹೊಕ್ಕಾಗಿರುತ್ತಿತ್ತು. ನಾನಂತೂ ಹಳ್ಳಿಯ ಜೀವನ ತುಂಬಾನೇ ಅನುಭವಿಸಿದ್ದೆ. ಕೆಲವೊಂದು ಪ್ರಸಂಗಗಳು ಈಗಲೂ ನೆನಪಿಸಿಕೊಂಡರೆ ನಗುವಿನ ಅಲೆಯೆದ್ದು ನಾನು ಅದರಲ್ಲೇ ಮುಳುಗಿ  ಬಿಡುತ್ತೇನೆ.
ಚಿಕ್ಕವನಿರುವಾಗ ಕೆಲವೊಮ್ಮೆ ದನ ಕರುಗಳನ್ನು ಮೇಯಿಸಲು ಹೋಗಬೇಕಾಗುತ್ತಿತ್ತು. ಅದೂ  ಸ್ಕೂಲಿಂದ ಬಂದ ಮೇಲೆ, ಅಥವಾ ಹಲಕೆಲವೊಮ್ಮೆ ರಜಾ ದಿನಗಳಲ್ಲಿ, ಕೆಲವೊಮ್ಮೆ ಹೀಗೇ  ಜಾಲಿಯಾಗಿ ಓರಗೆಯ ಗೆಳೆಯರೊಡನೆ,ಕೆಲವೊಮ್ಮೆ ಮನೆಯವರೆಲ್ಲಾ ಗದ್ದೆಯ ಕೆಲಸಕ್ಕೆ ಹೋದಾಗ.  ಘಟನೆ ನಡೆದಾಗ ನಾನು ಚಿಕ್ಕವ, ನನ್ನ ದೊಡ್ಡ ಅಕ್ಕನೊಡನೆ ದನ ಮೇಯಿಸಲು ಹೋದಾಗ ಒಂದು ತುಡುಗು ದನ ತಪ್ಪಿಸಿಕೊಂಡು ಬಿಟ್ಟಿತು. ಅದರ ಕುತ್ತಿಗೆಯಲ್ಲಿ ಕಟ್ಟಿದ  ಗಂಟೆಯೆಲ್ಲಿಯಾದರೂ ಕೇಳಿಸುತ್ತದೆಯೋ ಅಂತ ನೋಡುವ ಸಲುವಾಗಿ ನಾನು, ಅಕ್ಕ ಮತ್ತು ಅವಳ  ಹತ್ತಿರವಿರುವ ದನಗಳನ್ನೆಲ್ಲಾ ಬಿಟ್ಟು, ಹಾಡಿಯ ಕಡೆ ಬಂದೆ. ಆಗಲೇ ಸಂಜೆ ಇಳಿದು ರಾತ್ರೆಯು ಹಣಿಕಿಕುತ್ತಿತ್ತು. ನಾನು ದನದ ಹೆಸರು ( ಸುಕುಮಾರಿ) ಹಿಡಿದು ಕೂಗುತ್ತಾ ಹುಡುಕುತ್ತಿರುವ
ಹೊತ್ತಿಗೇ ಚಿಕ್ಕದಾಗಿ ಮಳೆ ಕೂಡಾ ಹನಿಯಲು ಪ್ರಾರಂಬಿಸಿತು. ಹನಿ ಹನಿಯುವ  ಮಳೆ,ಆವರಿಸುತ್ತಿರುವ ಸಂಜೆಗತ್ತಲು, ದನವನ್ನ ಹೇಗಾದರೂ ಮಾಡಿ ಕಂಡು ಹಿಡಿಯುವೆನೆಂಬ  ಛಲ,ಎಲ್ಲವೂ ಸೇರಿ ನನ್ನ ಹಾಡಿಯ(ಸಣ್ಣ ಕಾಡು) ಕಡೆಗೆ ಹೋಗಲು ಪ್ರೆರೇಪಿಸಿದುವು.   ದನವೇನೋ ಸಿಕ್ಕಿತು , ಅದು ಇನ್ನೂ ಮುಂದೆ ಮುಂದೆ ನಡೆಯುತ್ತಿತ್ತು, ಹೀಗೆ ನಾನೂ ದನವೂ  ಕಾಡಿನ ಮಧ್ಯೆ ಬಂದೆವು, ಆಗಲೇ ಹನಿಯುತ್ತಿದ್ದ ಮಳೆಯೂ ಜೋರಾಯಿತು, ನಾನು ದನವನ್ನು  ಹಿಂಬಾಲಿಸುತ್ತ ಹಿಂಬಾಲಿಸುತ್ತ ಯಾವ ಕಡೆತಿರುಗಿದೆ, ನಮ್ಮ ಮನೆಯು ಯಾವ ಕಡೆಗೆ ಇದೆ  ಎಂಬುದನ್ನು ಕ್ಷಣ ಮರೆತು ಬಿಟ್ಟೆ ಮಬ್ಬು ಗತ್ತಲಿನಲ್ಲಿ ಕಾಡಿನ ಮಧ್ಯೆ ದಾರಿ ತಪ್ಪಿ
ಗಾಬರಿಯಾದೆ. ಇನ್ನೇನು ಮಾಡಲಿ ಮನೆಗೆ ಹೇಗೆ ತಲುಪಿಯೇನು? ಎನ್ನುವ ಚಿಂತೆಯಿಂದ  ಮತ್ತಷ್ಟು ಹೆದರಿ ಅಳತೊಡಗಿದೆ.  ಕತ್ತಲು, ಗುಡ್ಡಗಾಡು, ಮಳೆ ಎಲ್ಲದರ ನಡುವೆ ದಾರಿ  ಕೂಡಾ ಮರೆತು ಒಂದು ವಿಛ್ಚಿನ್ನ ಪರಿಸ್ಥಿತಿ ಎದುರಾಯಿತು. ಅದೆಲ್ಲದರ ಮಧ್ಯೆಯೂ ಅಮ್ಮ  ಯಾವಾಗಲೂ ಹೇಳುತ್ತಿದ್ದ ಸಂಕಟ ಬಂದಾಗ ರಾಮನ ಹೆಸರು ಹೇಳಬೇಕು ಎನ್ನುತ್ತಿದ್ದುದು ನೆನಪಾಗಿ   ಹೆದರಿಕೆ ಮತ್ತು ಅಳುವಿನ ಮಧ್ಯೆಯೂ ರಾಮ ರಾಮ ಎಂದು ಕೂಗತೊಡಗಿದೆ. ಮನೆ ಬಲಗಡೆ ಇರಬಹುದು  ಎಂತ ಬಲಗಡೆ ಸ್ವಲ್ಪ ದೂರ ಹೋಗುವುದು, ನಂಬಿಗೆ ಬರದೇ ಮತ್ತೆ ಹಿಂದೆ ತಿರುಗಿ ಸ್ವಲ್ಪ  ದೂರ ಎಡಗಡೆ ನಡೆಯುವುದು, ವುಗಳ ನಡುವೆ ರಾಮ ರಾಮ ಮತ್ತು ಅಳು ಅವ್ಯಾಹತವಾಗಿ ನಡೆಯುತ್ತಿದ್ದವು.  ದಿನದ ಮಟ್ಟಿಗೆ ಹೇಳುವುದಾದರೆ ಕತ್ತಲು, ಮಳೆ, ಕಾಡಿನ ದಾರಿಯಲ್ಲಿ 'ರಾಮ' ನೇ ಬಂದ.  ಆತ ಪಕ್ಕದೂರಿನವ, ನಮ್ಮ ಅಜ್ಜ ಎಲ್ಲರಿಗೂ ಬೇಕಾದವರಾದ್ದರಿಂದ ಮಕ್ಕಳೆಲ್ಲರ ಪರಿಚಯ  ಎಲ್ಲರಿಗೂ ಇರುತ್ತಿತ್ತು. ಆತ ಹತ್ತಿರದಿಂದ ನನ್ನ ನೋಡಿದ ಕೂಡಲೇ ಗುರುತುಹಿಡಿದ.
ನನ್ನನ್ನು ತನ್ನ ಹೆಗಲ ಮೇಲೆ ಕುಳ್ಳಿರಿಸಿಕೊಂಡು ತನ್ನ ಮನೆಯ ದಾರಿ ಬಿಟ್ಟು ನಮ್ಮ ಮನೆಯ  ದಾರಿ ಹಿಡಿದ. ನಾನು ಮನೆಗೆ ತಲುಪಿದಾಗಲೇ ಅಪ್ಪ ಅಮ್ಮ ಎಲ್ಲರ ಜೀವದಲ್ಲಿ ಜೀವ  ಬಂತು, ನನ್ನ ಬಿಕ್ಕುವಿಕೆ ಮುಗಿಯುವಾಗ ತಂದೆಯವರ ಬಿಸಿ ಮಗ್ಗುಲಲ್ಲಿ ಬಿಸಿಬಿಸಿ  ಊಟದೊಂದಿಗೆ ನನ್ನ ಅನುಭವ ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೆ. ಅವಶ್ಯಕಥೆಗೆ  ಸರಿಯಾಗಿ ರಾಮ ರಾಮನನ್ನೇ ಕಳುಹಿಸಿಕೊಟ್ಟದ್ದು ಕಾಕತಾಳೀಯ ವಿಷಯವಾದರೂ ಈಗಲೂ ವಿಷಯ    ಚಿಂತನೆಗೆ ಒಂದು ಗ್ರಾಸವಾದುದು ಸುಳ್ಳಲ್ಲ
1 comment:

  1. ಅಪರಾತ್ರಯಲಿ ಬಂದ ಆಪದ್ಭಾಂದವ ರಾಮ, ನನಗೆ ಮಾಸ್ತಿಯವರ ಕಥೆಯೊಂದರ ನೆನಪು ತರಸಿತು. ಅದು ಬಿಳಿಗಿರಿ ರಂಗನ ಬೆಟ್ಟದಲ್ಲಿ ನಡೆಯುವ ಕಥೆ.

    ReplyDelete