Saturday, March 28, 2015

ಹೇಳು ಮುಂದಿನ ಸರದಿ ನನ್ನದಲ್ಲ


ಮತ್ತೆ ಜವನಾರ್ಭಟವು ಪಕ್ಕದಲ್ಲೇ
ಶವವಾದ ನವ ಯುವಕ ರಾತ್ರಿಯಲ್ಲೇ
ಸತಿ ಸುತರ  ಮತ್ತಿತರರ ಮಾಡಿ ಅನಾಥರ
ಥಟ್ಟನೇ ಇಲ್ಲವಾದ ನಡು ಬೀದಿಯಲ್ಲೇ
ಹಿರಿಯುತ್ತ ಬಲಿಯುತ್ತ ಮೈ ಮನವ ಸುತ್ತುತ್ತ
ಸುತ್ತಿ ಕಾಡಿದೆ ನೋವು ಎದೆಯಾಳದಲ್ಲೆಲ್ಲ 
 ಹೇಳು ಮುಂದಿನ ಸರದಿ ನನ್ನದಿಲ್ಲ

ಬಲಿಯುತ್ತದಾತಂಕ  ಮನವನ್ನು  ತುಂಬುತ್ತ
ಏಕಾಂತದೊಸರಲ್ಲಿ ಮಾಡುತ್ತ ಕಸರತ್ತು
ಇಬ್ಬಗೆಯ ನೋವಿನ ಮಸಲತ್ತು ಕಾಡುತ್ತ
ಸೋತಿಹವು ಕೈಕಾಲು , ಮನವಿಲ್ಲ ಸ್ಪಷ್ಟ
ಬಲಿತಿಹುದು ಕಿವಿ ದೂರ,  ದೃಷ್ಟಿ ಅಸ್ಪಷ್ಟ 
ಗ್ರೀಷ್ಮನಾ ಹರವಿನ್ನೂ ಮುಗಿದಿಲ್ಲ ಕಳೆದಿಲ್ಲ 
ಹೇಳು ಮುಂದಿನ ಸರದಿ ನನ್ನದಲ್ಲ

ಮುಗಿದಿಲ್ಲ ಆಸೆ ಆಕಾಂಕ್ಷೆ ಮೋಹಾವೇಶ
ಮೊಮ್ಮಗಳ ಮದುವೆ, ಸುತನ ಗೃಹ ಪ್ರವೇಶ
ಮಿತ್ರನಾ ಶಷ್ಟಬ್ದ್ಯ ಕಾದಿಹುದು, ಉಳಿದಿಹುದು
ಮತ್ತಿನ್ನೂ  ಮರಿಮಗನ ಅನ್ನ ಪ್ರಾಶ
ಮತ್ತೆ  ಬ್ರಂದಾವನದ ಭೇಟಿಯೇ ಮಾಡಿಲ್ಲ 
ಕಾಶಿ ತಿರುಪತಿ  ಮಥುರೆ ಬದುಕಲ್ಲೇ ನೋಡಿಲ್ಲ, 
ಹೇಳು ಮುಂದಿನ ಸರದಿ ನನ್ನದಿಲ್ಲ

ಗುರು ಹಿರಿಯಾದಿ ಹಳೇ ಮಿತ್ರರಾ ಭೇಟಿ
ಬಹುದೋ ಬಾರದೋ ಮತ್ತೆ ಕಾಲವಿದು ಮೀಂಟಿ
ನಮ್ಮದಾಗದು ನಾಳೆ ಬ್ಯಾಂಕಿನಾ ಇಡುಗಂಟು
ಬೆಳಕಿನಲ್ಲಿನ ನೆರಳೇ ಇಂದಿನಾ ನಂಟು
ಜವನ ಕೊಡುಗೆಯ  ಕ್ಷಣದೆ ಜೀವನವು ಉಂಟು

ನಾಳೆಯಾ ಹುಮ್ಮಸ್ಸು ಬೋನಸ್ಸು, ಮತ್ತೆಲ್ಲ
ಹೇಳು ಮುಂದಿನ ಸರದಿ ನನ್ನದೆಲ್ಲಾ

2 comments:

  1. ಯಾರು ಹಿತವರು ನಿನಗೆ ಎನ್ನುತ್ತಾ ಪುರಂದರ ದಾಸರು ಹೊರಗೆ ಹಾಕುವರು ಎಂದು ಎಚ್ಚರಿಸಿದ್ದಾರೆ!
    ಬದುಕಿನಷ್ಟೂ ದಿನ ಅಭಿನವ ದಶಕಂಠರಂತೆ ಒಂದೇ ಮೆದುಳೊಳಗೆ ಶತ ಬುದ್ದಿ ಪ್ರದರ್ಶಿಸುವ ಮನುಜಾಧಮರನೂ ದೇಹವೆಂದೇ ಗುರುತಿಸಿ ಬರಿ ನೆಲದೆ ಮೇಲೆ ಮಲಗಿಸಬೇಕದು ಕಡೆಗೆ.

    ಯಾರಿಗೆ ಗೊತ್ತು, ಈ ಉಸಿರಾಟದ ಸಮಸ್ಯೆ ಮತ್ತು ನಿರಂತರ ಧೂಮಯಜ್ಞದಿಂದ ನನ್ನ ನಂಬರು ನಾಳೆಯೇ ಬರಬಹುದೇನೋ?

    ನನ್ನಂತ ಶಾಪಗ್ರಸ್ತನಿಗೆ,
    'ಹೇಳು ಮುಂದಿನ ಸರದಿ ನನ್ನದಿಲ್ಲ'
    ಎನ್ನುವ ನೈತಿಕ ಬಲವೂ ಇಲ್ಲ!

    ReplyDelete
  2. Badarinath Palavalli ವರೇ ನಿಮ್ಮ ಮೆಚ್ಚುಗೆಗೆ ಧನ್ಯ

    ಹುಟ್ಟು ಸಾವು ಎರಡನ್ನು ಇನ್ನೂ ತನ್ನೊಳಗೇ ಇಟ್ಟುಕೊಂಡಿಹನಾತ
    ನಿಮ್ಮ ಈ ಸಾಹಿತ್ಯ ಸೇವೆ ಎಂಬೋ ಕೈಂಕರ್ಯವೇ ಮಹತ್ವದ್ದು
    ಆದರೂ ಮನುಷ್ಯ ತನ್ನ ಸ್ವಾರ್ಥ ಮತ್ತು ಮಹದಾಸೆ ಎಂಬೋ
    ವಿಷಗಳಿಂದಲೇ ಹಾಳಾಗ್ತಾನೆ ಎಂಬುದು ಸರ್ವ ವಿಧಿತ.

    ReplyDelete