Friday, March 13, 2015

ಇದುವೇ ಜೀವನ... ೨ ನೈಸ್ ರಸ್ತೆಯಲ್ಲೊಂದು ಅಪಘಾತ



ನೈಸ್ ರಸ್ತೆಯಲ್ಲೊಂದು ಅಪಘಾತ





ತಡೀರಿ ತಡೀರಿ
ಪ್ರಭು ಪಕ್ಕದಲ್ಲಿಂದ ಕೂಗಿ ಹೇಳಿದರು.
ನೋಡಿ ಇವರ ದೆಸೆಯಿಂದ... ನಮಗೆ ಸಮಸ್ಯೆ ಎಂದೆ ನಾನು.
ನಾವು ಬನ್ನೇರ್ ಘಟ್ಟದ ಮುಖ್ಯ ರಸ್ತೆಯಿಂದ ನೈಸ್ ರಸ್ತೆಗೆ ತಿರುಗೋ ದಾರಿಯಲ್ಲಿ, ನಮ್ಮ ಮುಂದಿನ ಒಬ್ಬ ಕಾರು ಸವಾರ ಅಚಾನಕ್ ಗಾಡಿ ನಿಲ್ಲಿಸಿದ್ದರಿಂದ
ನಮ್ಮ ವೇಗವನ್ನು ಕುಂಠಿತ ಗೊಳಿಸಲು ಬ್ರೇಕ್ ಹಾಕಲೇ ಬೇಕಾಗಿತ್ತು..
ವೇಗವಾಗಿ ಬರುತ್ತಿದ್ದ ನಮ್ಮ ವ್ಯಾಗನಾರ್ ಮುಂದಿನವರ ಕಾರನ್ನು ಮುಟ್ಟಿತೋ ಇಲ್ಲವೋ ಎಂಬಂತೆ ಒಮ್ಮೆ ಸ್ಪರ್ಷಿಸಿ ಸುಮ್ಮನಾಗಿತ್ತು.
ಮುಂದಿನವ ತನ್ನ ಗಾಡಿಯನ್ನು ಅಲ್ಲೇ ನಿಲ್ಲಿಸಿ ಬಾಗಿಲು ತೆರೆದು ಹಿಂದಕ್ಕೆ ಬಂದ.
ಏ ಭಾಯ್ ಸರಿಯಾಗಿ ಬಿಡಲಾಗದವರು ಯಾಕೆ ರಸ್ತೆಗೆ ಬರುತ್ತೀರಾ. ಹಿಂದೆ ಹಿಂದೆ ಸರಿಯಿರಿ.?
ಆತನ ಪಕ್ಕದಲ್ಲಿನ ಮಹಿಳೆಯ ಉಪಸ್ಥಿತಿ ಆತನನ್ನು ನನ ಕಡೆ ಛೂ ಬಿಡಲು ಪ್ರಚೋದಿಸಿತ್ತು.
ನಾನು ಗಡಿಬಿಡಿಯಲ್ಲಿ ಹಿಂದಕ್ಕೆ ಹಾಕೋ ಗೇರು ಹಾಕದೇ ಇದ್ದುದರಿಂದ, ನನ್ನ ವಾಹನ ಪುನಃ ಮುಂದಕ್ಕೆ ಚಲಿಸಿ, ಮತ್ತೊಮ್ಮೆ ಆತನ ಬಿಳೀ ಹೊಂಡವನ್ನು ಪುನಃ ಮುತ್ತಿಟ್ಟಿತು..
ಆತನ ಸಿಟ್ಟು ಮತ್ತಷ್ಟು ಏರಿತು.
ಈಗ ನಾನೂ ಪ್ರಭುಗಳೂ ಗಾಡಿಯಿಂದ ಕೆಳಗಿಳಿಯದೇ ನಿರ್ವಾಹವೇ ಇರಲಿಲ್ಲ.
ನಾನು ಏನಾದರೂ ಹೇಳಲೇ ಬೇಕಾದ ಒತ್ತಡದಲ್ಲಿ ನೀವು ಸಡನ್ನಾಗಿ ನಿಲ್ಲಿಸಿದ್ದರಿಂದ ಆದ ತೊಂದರೆ ಇದು ಎಂದೆ.
ಅರೆ ಇದಿರು ಬರುತ್ತಿರೋ ವಾಹನ ನೋಡೋದು ಬೇಡವೇ..? ಆತ ಜಗಳಾಡಲೇ ಬಂದಂತಿತ್ತು.
ತಡೀರಿ ನನ್ನ ಗಾಡಿ ಎಷ್ಟು ಹಾಳಾಗಿದೆ ಅಂತ ನೋಡಿ ಮತ್ತೆ ಮಾತಾಡ್ತೇನೆ ಎಂದ ತಿರಸ್ಕಾರದಿಂದ.
ಆತ ಅವನ ಹೆಂಡತಿ ತಮ್ಮ ಗಾಡಿಯ ಬಳಿ ತೆರಳಿ ಜಾಗರೂಕತೆಯಿಂದ ಪರೀಶೀಲಿಸಿದರು.
ಅವರ ಬಿಳಿ ಕಾರಿಗೆ ಒಂದು ಗೆರೆ ಸಹಾ ಬಂದಿರಲಿಲ್ಲ, ನನ್ನ ವ್ಯಾಗನಾರ್ ಅಷ್ಟು ನಿಖರವಾಗಿ ಅವರ ಕಾರನ್ನು ಬಡಿದಿತ್ತು.
ಇನ್ನೇನೂ ಹೇಳಲು ಆಗದೇ ತೋಡಾ ಠೀಕ್ಸೇ ಗಾಡಿ ಚಲಾವೋ ಭಯ್ಯಾ...
ಎನ್ನುತ್ತಾ ಆತ ಹೊರಟು ಹೋದ.
.........
ನಿಧಾನವಾಗಿ ಬಲಗಡೆ ತಿರುಗಿಸಿದೆ ನೈಸ್ ರಸ್ತೆ ಕಡೆ.
ಟೋಲ್ ನಲ್ಲಿ ದಿನಾ ನನ್ನನ್ನು ನೋಡುತ್ತಿರೋ ಹುಡುಗ ನನ್ನ ಗುರುತಿನ ಪತ್ರ ನೋಡಿ ಹೋಗಲು ಬಿಟ್ಟ.
ನನ್ನ ಗಾಡಿ ಪಕ್ಕಕ್ಕೆ ತಿರುಗುತ್ತಿರುವಾಗಲೇ ಪಕ್ಕ ಟೋಲ್ ದ್ವಾರದಿಂದ ಇನ್ನೊಂದು ಚಪ್ಪಟೆ ಹಳೇ ಮೋಡೆಲ್ ಕಪ್ಪು ಬಣ್ಣದ ಕಾರು ಪಕ್ಕಕ್ಕೇ ಸರಿದು ಬಂತು ಅದಕ್ಕೆ ಜಾಗ ಬಿಟ್ಟೆ.
ಮುಂದೆ ನೈಸ್ ರೋಡಿಗೆ ಸೇರುವಲ್ಲಿ ಎಡಕ್ಕೆ ತಿರುಗಬೇಕು.
ಅದು ಮುಖ್ಯರಸ್ತೆ ಆದುದರಿಂಡ ಎಡೆ ಬಿಡದೇ ವಾಹನ ಸಂಚರಿಸುತ್ತಿರುತ್ತವೆ.
ಈಗಷ್ಟೇ ಆದ ಅನುಭವ ಬೇರೆ, ನಾನು ನಿಧಾನವಾಗಿ ಆದಷ್ಟೂ ಎಡಗಡೆ ಇಟ್ಟುಕೊಂಡು ನನ್ನ ಗಾಡಿ ಮೂವ್ ಮಾಡಿದೆ.
ನಡೆಯಬೇಕಾದುದ್ದನ್ನು ಯಾರು ತಡೆಯುವರು..?
ಆಗಲೇ ಇನ್ನೊಂದು ಅವಗಡ ಸಂಭವಿಸಿಯೇ ಬಿಟ್ಟಿತು.
ಎಡಗಡೆಯಿಂದ ಹೆಸರಿಲ್ಲದ ಹಳೇ ಮಾಡೆಲ್ ಬರ್ತಾ ಇತ್ತು ಅಂದಿದ್ದೆನಲ್ಲ ಆತನೂ ನನ್ನ ಎಡಗಡೆಯಿಂದಲೇ ಎಡಕ್ಕೆ ತಿರುಗಿಸುತ್ತಿದ್ದವನು ಯಾಕೋ ಆತನ ವೇಗ ಕಡಿಮೆಯಾಯ್ತೋ ಅಥವಾ ನನ್ನ ವೇಗ ಜಾಸ್ತಿಯಾಯ್ತೋ ಗೊತ್ತಾಗಲಿಲ್ಲ
ಆತನ ಇದಿರಿನ ಮಡ್ ಗಾರ್ಡ್ ಗೆ ನನ್ನ ಮುಂದಿನ ಚಕ್ರ ಸಿಕ್ಕಿಕೊಂಡು ಅದು ಮಧ್ಯಕ್ಕೆ ಮುರಿದೇ ಬಿಟ್ಟಿತು.
ನೋಡ ನೋಡುತ್ತಿದ್ದಂತೆ ನಡೆದ ಈ ಘಟನೆಗೆ ನಾನೇ ಮೂಕನಾದೆ.
ಇನ್ನೂ ಪಕ್ಕಕ್ಕೆ ಕೊಂಡು ಹೋಗಲೋ ಅಥವಾ ಅಲ್ಲೇ ನಿಲ್ಲಿಸಲೋ ಅಂತ ಆಲೋಚನೆಯಲ್ಲಿರುವಾಗಲೇ ಹಿಂದಿನ ವಾಹನ ಚಲಾಯಿಸುತ್ತಿರೋ ಹುಡುಗ ತನ್ನ ಕಾರಿನಿಂದಿಳಿದು ಬಂದು ತೆರೆದ ಕಿಟಿಕಿಯಿಂದ ನನ್ನ ಕಾರಿನ ಕೀ ತೆಗೆದೆಳೆದುಕೊಂಡ.
ಅನಿವಾರ್ಯವಾಗಿ ನಾನು ಕೆಳಕ್ಕಿಳಿಯಲೇ ಬೇಕಾಗಿತ್ತು.
ಹೋ ಅಂದರೆ ಕಡಿಮೆ ಪಕ್ಷ ಐದಾರು ಸಾವಿರ ಲಾಸು...
ಆಗಲೇ ನಾನು ಗಮನಿಸಿದ್ದು ಕಾರಿನಲ್ಲಿ ದೊಡ್ಡ ದೊಡ್ಡ ಎರಡು ನಾಯಿಗಳೂ ಒಂದು ಚಿಕ್ಕ ನಾಯಿಯೂ ಇದ್ದು ಅವುಗಳನ್ನು ಹಿಡಿದಿದ್ದ ಸರಪಳಿಗಳ ಕೊನೆ ಒಂದು ಹೆಂಗಸಿನ ಕೈಯ್ಯಲ್ಲಿತ್ತು.
ಆತ ವಾಟ್ ಮೆನ್ ಹೌ ಆರ್ ಯು ಡ್ರೈವಿಂಗ್ ಯೌರ್ ವೆಹಿಕಲ್..? ಅಂದ
ಅದಕ್ಕೆನಾನು ಉತ್ತರಿಸೋ ಗೋಜಿಗೇ ಹೊಗಲಿಲ್ಲ, ಆದರೆ ಪ್ರಭುಗಳು ಕನ್ನಡ ಕನ್ನಡಲ್ಲಿ ಹೇಳು ಎಂದರು..
ಆಗಲೇ ರಸ್ತೆಯ ಪಕ್ಕದಲ್ಲಿ ದ್ವಿಚಕ್ರಿಗಳೂ ತಮ್ಮ ತಮ್ಮ ಗಾಡಿ ನಿಲ್ಲಿಸಿ ನಮ್ಮತ್ತ ಬರತೊಡಗಿದರು. ಒಬ್ಬನಂತೂ ಕೀ ತೆಗೆದದ್ದು ತಪ್ಪು, ಅವರ ಗಾಡಿ ರಸ್ತೆಯ ಮಧ್ಯದಲ್ಲಿದೆ ಹಿಂದಕ್ಕೆ ಕೊಡಿ ಅನ್ನತೊಡಗಿದ. ಅಲ್ಲದೇ ಎಡಗಡೆಯಿಂದ ಬರೋ ಗಾಡಿ ಯಾಕೆ ಮುಂದಕ್ಕೆ ಹೋಯ್ತು..? ಕಪ್ಪು ಗಾಡಿಯವನದ್ದೇ ತಪ್ಪು ಬಿಡಿ.., ಎನ್ನುತ್ತಿದ್ದ ಇನ್ನೊಬ್ಬ.
ಈಗ ಈತ ನನ್ನ ಕಡೆ ತಿರುಗಿ ಕನ್ನಡದಲ್ಲೇ ಎಂದ..
ಹ್ಯಾಗಯ್ಯಾ ನೀನು ಗಾಡಿ ಚಲಾಯಿಸೋದು ನಾನು ನಿನ್ನನು ಅಲ್ಲಿಂದಲೇ ಗಮನಿಸಿದ್ದೆ... ನನ್ನ ಗಾಡಿಯ ಮಡ್ ಗಾರ್ಡ್ ತುಂಡು ಮಾಡಿದಿಯಲ್ಲಾ, ಅದೂ ಈ ಮಾಡೆಲ್ ಅವಯವ ಸಿಗೋದೂ ಇಲ್ಲ . ಜಗಳಕ್ಕೇ ನಿಂತ
ನಾನು ಈ ಘಟನೆ ಮತ್ತು ಜಗಳಕ್ಕೆ ಇತಿಶ್ತ್ರೀ ಮಾಡಲೋಸುಗ ಇದನ್ನು ಬದಲಿಸಲು ಎಷ್ಟು ಎಷ್ಟಾಗುತ್ತೆ ಹೇಳಿ ಎಂದು ಬಿಟ್ಟೆ. ಆತ ತಡೀರಿ ನನ್ನ ಗಾಡಿಯ ಸರ್ವಿಸ್ ನವನ ಬಳಿ ವಿಚಾರಿಸುತ್ತೇನೆ ಎಂದುಕೊಂಡು ತನ್ನ ಜಂಗಮವಾಣಿ ಹೊರ ತೆಗೆದ.
ಆಗಲೇ ಪಕ್ಕದಲ್ಲಿನ ಒಬ್ಬ ಸವಾರ ನೀವು ಹತ್ತಿರದಲ್ಲೇ ಪೋಲೀಸ್ ಸ್ಟೇಶನ್ ಇದೆ ಕರೆಯಿರಿ ಎಂದ.
ಈಗ ಅವನ ಗಾಡಿಯಲ್ಲಿದ್ದ ಮಹಿಳೆ ಹೊರಕ್ಕಿಳಿಯಿತು ಅವಳ ಜತೆ ಗಡವ ನಾಯಿಗಳೂ ಮತ್ತು ಅವುಗಳ ಬೊಗಳಾಟ ಬೇರೆ.
ನನ್ನ ಬಳಿ ಜಗಳಾಡಲು ಬಂದ ಮಹಿಳೆಗೆ
ನಾನು ಹೆಂಗಸರೊಂದಿಗೆ ಮಾತನಾಡಲ್ಲ ನೀವು ಸುಮ್ಮನಿರಿ ದಯವಿಟ್ಟು ಎಂದೆ.
ಯಾಕೆ ಮಾಡೊದೆಲ್ಲಾ ಮಾಡಿ ಈಗ... ಇನ್ನೇನೋ ಹೆಂಗಸು ಹೇಳುವುದರಲ್ಲಿತ್ತು ಆದರೆ
ಪ್ರಭು ಅವಳನ್ನು ತಡೆದರು.
ಏಯ್ ಇವರನ್ನು ಯಾರೆಂದುಕೊಂಡೆ..ಇವರು ಮಿಲಿಟರಿಯಲ್ಲಿ ದೊಡ್ಡ ಅಧಿಕಾರಿಗಳು, ದೇಶಕ್ಕಾಗಿ ನಮಗಾಗಿ ದುಡಿದವರಿಗೆ ಹೀಗಾ ನೀನು ಗೌರವ ಕೊಡುವುದು..?
ಆದರೇನು ಇದೆಲ್ಲಾ ಅವರಿಗೆ ದೊಡ್ಡ ವಿಷಯವೇ ಅಲ್ಲ, ಸಹಜವೂ ಹಾಳಾದದ್ದು ಅವರ ಗಾಡಿಯಲ್ಲವಾ..?
ಅವರಿಬ್ಬರೂ ತಮ್ಮದೇ ಸ್ತರದಲ್ಲಿದ್ದರು.
ಮಿಲಿಟರಿಯ ಅಧಿಕಾರಿ ಹೀಗಾ ಇರೋದು, ಅಂತಾದರೆ ಮಿಲಿಟರಿಯನ್ನು ಆ ದೇವರೇ ಕಾಪಾಡಬೇಕು ಒಂದು ವಾಹನ ಚಲಾಯಿಸಲೂ ಬಾರದ ಅಸಡ್ಡೆ ಮನುಷ್ಯ,
ಆತನ ಮತ್ತು ಆಕೆಯ ಮಾತುಗಳು ಇನ್ನೂ ಕೆಳಸ್ತರಕ್ಕಿಳಿಯುತ್ತಿದ್ದವು. ಆ ನಾಯಿಗಳ ಕೋರಸ್ ಬೇರೆ..
ಈಗ ನನಗೂ ಈ ಘಟನೆಯಿಂದಾಗಿ ಒಂದು ರೀತಿಯ ಖಿನ್ನತೆ ಆವರಿಸಿದಂತೆನ್ನಿಸಿ ವಾತಾವರಣವೇ ವಿಚಿತ್ರವಾಗಿ ಕಾವೇರಿದಂತೆ ಅನ್ನಿಸಿತು..
ಆದರೆ ಆ ಸ್ಥಿತಿಯಲ್ಲೇ ಯಾಕೋ ಪೋಲೀಸ್ ಕರೆದೇ ಬಿಡೋಣ, ಅವರೇ ಬಂದು ಈ ಸಮಸ್ಯೆಯನ್ನು ಪರಿಹರಿಸಲಿ ಅನ್ನಿಸಿ ಅದನ್ನೇ ಹೇಳಿಯೇ ಬಿಟ್ಟೆ.
ಸರಿ ಬಿಡಿ, ಈಗ ಪೋಲೀಸರೇ ಬರಲಿ ಎಂದೆ.
ಆದರೆ ಪೋಲೀಸರನ್ನು ಕರೆಯಲು ಯತ್ನಿಸಲೂ ಇಲ್ಲ.
ಆದರೆ ಈ ಪರಿಸ್ಥಿತಿಗೆ ಯಾಕೋ ಆತ ಹೊಂದಿಕೊಳ್ಳಲಿಲ್ಲ ಅನ್ನಿಸ್ತು.
ಮತ್ತು ಆತನ ಮಾತಿನ ಧಾಟಿಯೇ ಬದಲಾಯ್ತು ಪೋಲೀಸರ ಹೆಸರು ಕೇಳಿ.
ಮತ್ತುಪ್ರಭುಗಳತ್ತ ತಿರುಗಿ ಹೇಳಿದ...
ಸರಿ ನನ್ನದೇ ತಪ್ಪು ಬಿಡಿ, ನಿಮ್ಮಂತಹ ದೊಡ್ಡವರೊಡನೆ ಮಾತನಾಡಲು ನಿಂತದ್ದು.
ಎರಡೂ ಕೈ ಮುಗಿಯುತ್ತಾ ವ್ಯಂಗ್ಯವೋ ಎಂಬಂತೆ ಆತ ಕೀ ಕೊಡಲು ಹತ್ತಿರ ಬಂದ.
ನಾನು ಇನ್ನೇನು ಕೀ ತೆಗೆದುಕೊಳ್ಳಬೇಕು ಅಷ್ಟರಲ್ಲಿ....
ಈಗ ಪ್ರಭುಗಳು ಜೋರಾದರು.
ನಿಲ್ಲಿ ರಾಯರೇ ಎನ್ನುತ್ತಾ ಅವನತ್ತ ತಿರುಗಿ..
ಯಾಕೆ? ಇವರು ಯಾಕೆ ಈಗ ಕೀ ತಗೊಳ್ಳಬೇಕು, ಎಲ್ಲಿಂದ ತೆಗೆದೆಯೋ ಅಲ್ಲಿಯೇ ಸಿಕ್ಕಿಸು
ಎಂದರು ಅಧಿಕಾರಯುತ ವಾಣಿಯಲ್ಲಿ.
ಎಂತಹಾ ಅಶ್ಚರ್ಯ ನೋಡಿ ಆತ ಕಮಕ್ ಕಿಮಕ್ ಎನ್ನದೇ, ಆ ಹೆಂಗಸು ಏನೋ ಹೇಳುತ್ತಿದ್ದುದನ್ನೂ ಸಹಾ ಕೇಳದೇ ನಮ್ಮ ಗಾಡಿಯಲ್ಲಿ ಕೀ ಸಿಕ್ಕಿಸಿದವನೇ..
ತನ್ನ ಮೂರು ನಾಯಿಗಳನ್ನೂ ಆ ಮಹಿಳೆಯನ್ನೂ ಕರೆದುಕೊಂಡು ತನ್ನ ಕಾರನ್ನು ಸ್ಟಾರ್ಟ್ ಮಾಡಿ ಹೊರಟೇ ಹೋದ...
...
ದೊಡ್ಡ ಘಟನೆ ಸುಖಾಂತ್ಯವಾದುದನ್ನು ಕಂಡು ನನ್ನ ತಲೆಯ ಭಾರ ಇಳಿದಂತೆ ಹಗುರಾದೆ..
ಅದೇಕೆ ಪೋಲೀಸರ ಹೆಸರು ಕೇಳುತ್ತಲೇ ದುರ್ದಾನ ತೆಗೆದುಕೊಂಡ ಹಾಗೆ ಕದನದಿಂದ ಓಡಿನಾತ ? ಕೇಳಿದೆ ಪ್ರಭುಗಳನ್ನ.
ನಗುತ್ತಾ ಅವರೆಂದರು
ರಾಯರೇ ಇದು ಬೆಂಗಳೂರು ಯಾರಿಗೆ ಗೊತ್ತು ಪೋಲೀಸರು ಬಂದರೆಂದರೆ ಅವರ ಏನೇನು ಹುಳುಕು ಹೊರ ಬರುತ್ತಿತ್ತೋ ?
ಆ ನಷ್ಟವೇ ಈ ಅಪಘಾತದ ನಷ್ಟಕ್ಕಿಂತಲೂ ಜಾಸ್ತಿಯಾಗುತ್ತಿತ್ತೋ ಏನೋ...
ನಾನೂ ನಗುತ್ತಾ ಸುಮ್ಮನಾದೆ..
##




ಸೂಚನೆ: ಇಲ್ಲಿ ಹಾಕಿದ ಚಿತ್ರ ಅಂತರ್ಜಾಲದಿಂದ ಭಟ್ಟಿ ಇಳಿಸಿದ್ದು. ಘಟನೆಗೂ ಚಿತ್ರಕ್ಕೂ ಸಂಬಂಧವಿಲ್ಲ




2 comments:

  1. ಬಾಯಿ ಇದೆ ಅಂತ ಜಗಳಕ್ಕೆ ನಿಂತು, ಅದರಿಂದ ಬೇಳೆ ಬೇಯಿಸಿಕೊಳ್ಳುವ ಮಂದಿ ಬಹಳ ಜನ.
    ನಾಯಿ ಕಾರು! ಒಳಗಿನ ಹುಳುಕುಗಳೇನೋ ಎಂಬ ಪ್ರಭುರವರ ಮಾತು ವಾಸ್ತವ ಸಾರ್.

    ReplyDelete
  2. ಹೌದು ನಿಜ ಬದರಿ ಸಾರ್..
    ನನಗಂತೂ ಯಾವುದಾದರೂ ಹಳ್ಳಿಗೇ ಹೋಗಿ ಸೆಟ್ಲ್ ಆಗಿ ಬಿಡೋಣ ಅನ್ನಿಸುತ್ತೆ ಯಾವಾಗಲೂ...
    ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete