Tuesday, March 31, 2015

ಓ ಬಾಲ್ಯವೇ ನೀನೆಷ್ಟು ಚೆನ್ನು

1 ನಂಬುಗೆ

ನಾನು ಸಣ್ಣವನಿದ್ದಾಗ ನನ್ನ ತಂದೆಯವರು ಅವರ ಅಣ್ಣ  ತಮ್ಮಂದಿರೊಡನೆ ಹಳ್ಳಿಯಲ್ಲಿ ವಾಸಿಸುತ್ತಿದ್ದರು. ಈಗ ಎಣಿಸಿದರೆ ಆಗಿನ ಹಳ್ಳಿಯ ಅವಿಭಕ್ತ ಜೀವನ ನಮಗೆಲ್ಲ ತುಂಬಾ ಮಜಾ ತರುವಂತಹದಿದ್ದಿತ್ತು. ಹಳ್ಳಿಯ ಆರೋಗ್ಯಮಯ ವಾತಾವರಣ ಮೈಬಗ್ಗಿಸಿ  ದುಡಿಯಲು ಎಲ್ಲರನ್ನೂ ಪ್ರೆರೇಪಿಸಿ, ಅರೋಗ್ಯಮಯ ದೇಹ, ಕೌಟುಂಬಿಕ ಪರಿಸರ ಉಂಟು  ಮಾಡುತ್ತಿತ್ತು. ಆದರೆ ಆಗ ಎಲ್ಲರೂ ಉತ್ತಮರೇ ಎಂದೋ ಅಥವಾ ಎಲ್ಲ ಕಡೆ ನ್ಯಾಯಯುತ ಜೀವನವೇ  ನಡೆಯುತ್ತಿತ್ತು ಅಂತಲ್ಲ. ಅಂದರೆ ಕುಟುಂಬದ ಹಿರಿಯರಿಂದಾಗಿ ಎಲ್ಲರೂ ಹೊಂದಿಕೊಂಡು  ಹೋಗುವುದು ಅನಿವಾರ್ಯವಾಗಿತ್ತು ಅನ್ನಿಸುತ್ತೆ. ಆಗೆಲ್ಲ ಮಕ್ಕಳು ಹಿರಿಯರು ಒಬ್ಬರನ್ನೊಬ್ಬರು ಹೊಂದಿಕೊಂಡು, ಅರಿತುಕೊಂಡು, ಸಹಬಾಳ್ವೆ, ಸಹಜೀವನ,ಎನ್ನುವ  ಮಾತುಗಳೆಲ್ಲಾ ಒಂದರ್ಥದಲ್ಲಿ ಸರಿಯಾಗಿಯೇ ಹೊಂದುತ್ತಿದ್ದವು ಹಳ್ಳಿಯ  ಜೀವನಕ್ಕೆ.ಒಂದೊಮ್ಮೆ ಪರಸ್ಪರ ಏನಾದರೂ ವೈಮನಸ್ಸು ಉಂಟಾಗಿದ್ದರೂ ಹೊರಗಡೆ ತೋರಿಸಿಕೊಳ್ಳುವಂತಹ ಜಾಯಮಾನ ಇರುವುದಿಲ್ಲವಿತ್ತು.ಹಾಸ್ಯ ಎಲ್ಲದರಲ್ಲಿಯೂ ಹಾಸು ಹೊಕ್ಕಾಗಿರುತ್ತಿತ್ತು. ನಾನಂತೂ ಹಳ್ಳಿಯ ಜೀವನ ತುಂಬಾನೇ ಅನುಭವಿಸಿದ್ದೆ. ಕೆಲವೊಂದು ಪ್ರಸಂಗಗಳು ಈಗಲೂ ನೆನಪಿಸಿಕೊಂಡರೆ ನಗುವಿನ ಅಲೆಯೆದ್ದು ನಾನು ಅದರಲ್ಲೇ ಮುಳುಗಿ  ಬಿಡುತ್ತೇನೆ.




ಚಿಕ್ಕವನಿರುವಾಗ ಕೆಲವೊಮ್ಮೆ ದನ ಕರುಗಳನ್ನು ಮೇಯಿಸಲು ಹೋಗಬೇಕಾಗುತ್ತಿತ್ತು. ಅದೂ  ಸ್ಕೂಲಿಂದ ಬಂದ ಮೇಲೆ, ಅಥವಾ ಹಲಕೆಲವೊಮ್ಮೆ ರಜಾ ದಿನಗಳಲ್ಲಿ, ಕೆಲವೊಮ್ಮೆ ಹೀಗೇ  ಜಾಲಿಯಾಗಿ ಓರಗೆಯ ಗೆಳೆಯರೊಡನೆ,ಕೆಲವೊಮ್ಮೆ ಮನೆಯವರೆಲ್ಲಾ ಗದ್ದೆಯ ಕೆಲಸಕ್ಕೆ ಹೋದಾಗ.  ಘಟನೆ ನಡೆದಾಗ ನಾನು ಚಿಕ್ಕವ, ನನ್ನ ದೊಡ್ಡ ಅಕ್ಕನೊಡನೆ ದನ ಮೇಯಿಸಲು ಹೋದಾಗ ಒಂದು ತುಡುಗು ದನ ತಪ್ಪಿಸಿಕೊಂಡು ಬಿಟ್ಟಿತು. ಅದರ ಕುತ್ತಿಗೆಯಲ್ಲಿ ಕಟ್ಟಿದ  ಗಂಟೆಯೆಲ್ಲಿಯಾದರೂ ಕೇಳಿಸುತ್ತದೆಯೋ ಅಂತ ನೋಡುವ ಸಲುವಾಗಿ ನಾನು, ಅಕ್ಕ ಮತ್ತು ಅವಳ  ಹತ್ತಿರವಿರುವ ದನಗಳನ್ನೆಲ್ಲಾ ಬಿಟ್ಟು, ಹಾಡಿಯ ಕಡೆ ಬಂದೆ. ಆಗಲೇ ಸಂಜೆ ಇಳಿದು ರಾತ್ರೆಯು ಹಣಿಕಿಕುತ್ತಿತ್ತು. ನಾನು ದನದ ಹೆಸರು ( ಸುಕುಮಾರಿ) ಹಿಡಿದು ಕೂಗುತ್ತಾ ಹುಡುಕುತ್ತಿರುವ
ಹೊತ್ತಿಗೇ ಚಿಕ್ಕದಾಗಿ ಮಳೆ ಕೂಡಾ ಹನಿಯಲು ಪ್ರಾರಂಬಿಸಿತು. ಹನಿ ಹನಿಯುವ  ಮಳೆ,ಆವರಿಸುತ್ತಿರುವ ಸಂಜೆಗತ್ತಲು, ದನವನ್ನ ಹೇಗಾದರೂ ಮಾಡಿ ಕಂಡು ಹಿಡಿಯುವೆನೆಂಬ  ಛಲ,ಎಲ್ಲವೂ ಸೇರಿ ನನ್ನ ಹಾಡಿಯ(ಸಣ್ಣ ಕಾಡು) ಕಡೆಗೆ ಹೋಗಲು ಪ್ರೆರೇಪಿಸಿದುವು.   ದನವೇನೋ ಸಿಕ್ಕಿತು , ಅದು ಇನ್ನೂ ಮುಂದೆ ಮುಂದೆ ನಡೆಯುತ್ತಿತ್ತು, ಹೀಗೆ ನಾನೂ ದನವೂ  ಕಾಡಿನ ಮಧ್ಯೆ ಬಂದೆವು, ಆಗಲೇ ಹನಿಯುತ್ತಿದ್ದ ಮಳೆಯೂ ಜೋರಾಯಿತು, ನಾನು ದನವನ್ನು  ಹಿಂಬಾಲಿಸುತ್ತ ಹಿಂಬಾಲಿಸುತ್ತ ಯಾವ ಕಡೆತಿರುಗಿದೆ, ನಮ್ಮ ಮನೆಯು ಯಾವ ಕಡೆಗೆ ಇದೆ  ಎಂಬುದನ್ನು ಕ್ಷಣ ಮರೆತು ಬಿಟ್ಟೆ ಮಬ್ಬು ಗತ್ತಲಿನಲ್ಲಿ ಕಾಡಿನ ಮಧ್ಯೆ ದಾರಿ ತಪ್ಪಿ
ಗಾಬರಿಯಾದೆ. ಇನ್ನೇನು ಮಾಡಲಿ ಮನೆಗೆ ಹೇಗೆ ತಲುಪಿಯೇನು? ಎನ್ನುವ ಚಿಂತೆಯಿಂದ  ಮತ್ತಷ್ಟು ಹೆದರಿ ಅಳತೊಡಗಿದೆ.  ಕತ್ತಲು, ಗುಡ್ಡಗಾಡು, ಮಳೆ ಎಲ್ಲದರ ನಡುವೆ ದಾರಿ  ಕೂಡಾ ಮರೆತು ಒಂದು ವಿಛ್ಚಿನ್ನ ಪರಿಸ್ಥಿತಿ ಎದುರಾಯಿತು. ಅದೆಲ್ಲದರ ಮಧ್ಯೆಯೂ ಅಮ್ಮ  ಯಾವಾಗಲೂ ಹೇಳುತ್ತಿದ್ದ ಸಂಕಟ ಬಂದಾಗ ರಾಮನ ಹೆಸರು ಹೇಳಬೇಕು ಎನ್ನುತ್ತಿದ್ದುದು ನೆನಪಾಗಿ   ಹೆದರಿಕೆ ಮತ್ತು ಅಳುವಿನ ಮಧ್ಯೆಯೂ ರಾಮ ರಾಮ ಎಂದು ಕೂಗತೊಡಗಿದೆ. ಮನೆ ಬಲಗಡೆ ಇರಬಹುದು  ಎಂತ ಬಲಗಡೆ ಸ್ವಲ್ಪ ದೂರ ಹೋಗುವುದು, ನಂಬಿಗೆ ಬರದೇ ಮತ್ತೆ ಹಿಂದೆ ತಿರುಗಿ ಸ್ವಲ್ಪ  ದೂರ ಎಡಗಡೆ ನಡೆಯುವುದು, ವುಗಳ ನಡುವೆ ರಾಮ ರಾಮ ಮತ್ತು ಅಳು ಅವ್ಯಾಹತವಾಗಿ ನಡೆಯುತ್ತಿದ್ದವು.  ದಿನದ ಮಟ್ಟಿಗೆ ಹೇಳುವುದಾದರೆ ಕತ್ತಲು, ಮಳೆ, ಕಾಡಿನ ದಾರಿಯಲ್ಲಿ 'ರಾಮ' ನೇ ಬಂದ.  ಆತ ಪಕ್ಕದೂರಿನವ, ನಮ್ಮ ಅಜ್ಜ ಎಲ್ಲರಿಗೂ ಬೇಕಾದವರಾದ್ದರಿಂದ ಮಕ್ಕಳೆಲ್ಲರ ಪರಿಚಯ  ಎಲ್ಲರಿಗೂ ಇರುತ್ತಿತ್ತು. ಆತ ಹತ್ತಿರದಿಂದ ನನ್ನ ನೋಡಿದ ಕೂಡಲೇ ಗುರುತುಹಿಡಿದ.
ನನ್ನನ್ನು ತನ್ನ ಹೆಗಲ ಮೇಲೆ ಕುಳ್ಳಿರಿಸಿಕೊಂಡು ತನ್ನ ಮನೆಯ ದಾರಿ ಬಿಟ್ಟು ನಮ್ಮ ಮನೆಯ  ದಾರಿ ಹಿಡಿದ. ನಾನು ಮನೆಗೆ ತಲುಪಿದಾಗಲೇ ಅಪ್ಪ ಅಮ್ಮ ಎಲ್ಲರ ಜೀವದಲ್ಲಿ ಜೀವ  ಬಂತು, ನನ್ನ ಬಿಕ್ಕುವಿಕೆ ಮುಗಿಯುವಾಗ ತಂದೆಯವರ ಬಿಸಿ ಮಗ್ಗುಲಲ್ಲಿ ಬಿಸಿಬಿಸಿ  ಊಟದೊಂದಿಗೆ ನನ್ನ ಅನುಭವ ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೆ. ಅವಶ್ಯಕಥೆಗೆ  ಸರಿಯಾಗಿ ರಾಮ ರಾಮನನ್ನೇ ಕಳುಹಿಸಿಕೊಟ್ಟದ್ದು ಕಾಕತಾಳೀಯ ವಿಷಯವಾದರೂ ಈಗಲೂ ವಿಷಯ    ಚಿಂತನೆಗೆ ಒಂದು ಗ್ರಾಸವಾದುದು ಸುಳ್ಳಲ್ಲ








Monday, March 30, 2015

ಬೆಳಕಿನೆಡೆ


ನಿಮ್ಮ ಗಳಿಕೆಯ ಅತ್ಯಂತ ದುಬಾರಿ ವಸ್ತು   ಸಮಯ
ಸಾವಿನ ದೇವ ಅವನ ಬಳಿ ತನ್ನೊಡನೆ ಕರೆಯಲು ಬಂದಾಗ ಕುಬೇರನಿನ್ನೂ ಹೊರಡಲು ತಯಾರಾಗಿರಲಿಲ್ಲ.
ಅವನೆಂದ “ನಾನಿನ್ನೂ ಇಲ್ಲಿಂದ ತೆರಳಲು ಮನಸ್ಸನ್ನು ತಯಾರಿ ಮಾಡಿಕೊಂಡಿಲ್ಲ, ನಾನು ನಿನ್ನ ಜತೆ ಬರುವುದು ಸ್ವಲ್ಪ ತಡವಾದರೆ ಏನಾದರೂ ತೊಂದರೆ ಇದೆಯೇ..?

ದೇವನೆಂದ ” ಕ್ಷಮಿಸು ಬಾಳಾ, ನಿನ್ನ ಸಮಯ ಮುಗಿಯಿತು ನೀನು ನನ್ನ ಜತೆ ಹೊರಡಲೇ ಬೇಕೀಗ.”
ಕುಬೇರನೆಂದ ” ನೀನು ಯಾರ ಜತೆ ಮಾತನಾಡುತ್ತಿದ್ದೀಯಾ ಅಂತ ಗೊತ್ತು ತಾನೇ.?, ನಾನು ಕುಬೇರ, ಪ್ರಪಂಚದಲ್ಲೇ ಅತ್ಯಂತ ಧನಿಕರ ಸಾಲಿನಲ್ಲಿ ನಿಂತವ.”
ಆಗ ದೇವ ಹೇಳಿದ ” ನನ್ನ ಗುರಿ ನೀನು ಮಾತ್ರ, ಈಗಲೇ ನನ್ನ ಜತೆ ಹೊರಡು”
ಕುಬೇರನೆಂದ ” ನಾನು ಒಂದು ವೇಳೆ ನನ್ನ ಹತ್ರ ವಿರುವ ಐಶ್ವರ್ಯ ದ ಹತ್ತು ಪ್ರತಿಶತ (ಅದೇ ಲಕ್ಷ ಕೋಟಿಗಿಂತ ಜಾಸ್ತಿ ಬರುತ್ತೆ,_) ಕೊಟ್ಟರೆ ಒಂದು ವರ್ಷ ನನಗೆ ರಿಯಾಯಿತಿ ಕೊಡಬಲ್ಲೆಯಾ..?
ದೇವನೆಂದ “ಕುಬೇರಾ ನೀನು ನನ್ನ ಎಚ್ಚರಿಕೆಯನ್ನು ಗಮನದಲ್ಲಿ ಇಟ್ಟುಕೊಂಡಿಲ್ಲ ಅಂತ ಕಾಣುತ್ತೆ, ಇದು ಹೊರಡುವ ಸಮಯ ನಿನಗೆ”
ಇನ್ನೂ ಸ್ವಲ್ಪ ಹೊತ್ತು ಕುಬೇರ ರಿಯಾಯಿತಿ ಪಡೆಯಲು ತನ್ನೆಲ್ಲಾ ಅಮಿಷಗಳನ್ನೊಡ್ಡುತ್ತಾ ಕೊನೆಗೆಂದ

” ದೇವಾ, ನಾನು ನನ್ನೆಲ್ಲಾ ಆಸ್ತಿ ಐಶ್ವರ್ಯಗಳನ್ನು ನಿನಗೆ ಕೊಟ್ತರೆ ನನ್ನ ಹೆಂಡತಿ ಮಕ್ಕಳೊಂದಿಗೆ ಮಾತನಾಡಲು ಐದು ನಿಮಿಷ.. ಬರೇ ಐದು ನಿಮಿಷ ದಯಪಾಲಿಸುತ್ತೀಯಾ..? ನಾನು ಅವರನ್ನು ಕರೆದು ನಾನವರನ್ನು ಪ್ರೀತಿಸುತ್ತೇನೆ ಅಂತ ಹೇಳುತ್ತೇನೆ ಅಷ್ಟೆ. ಇಷ್ಟರವರೆಗೆ ನನಗೆ ಅವರಲ್ಲಿ ಈ ಮಾತನ್ನು ಹೇಳಲು ಸಮಯವೇ ಸಿಕ್ಕಿರಲಿಲ್ಲ, ನೀನು ಅಪ್ಪಣೆಯಿತ್ತರೆ ನಾನು ಅವರನ್ನು ಎಷ್ಟು ಪ್ರೀತಿಸುತ್ತೇನೆ ಅಂತ ಅವರಿಗೆ ಮನದಟ್ಟು ಮಾಡುತ್ತೇನೆ, ಮತ್ತು ನಾನು ಅತ್ಯಂತ ಜಾಸ್ತಿ ನೋಯಿಸಿದ ಇಬ್ಬರನ್ನು ಕಂಡು ಕ್ಷಮೆ ಯಾಚಿಸ ಬೇಕು.
ಬರೇ ಈ ಎರಡು ಕೆಲಸ ಮಾಡಲು ನನಗೆ ಐದು ನಿಮಿಷ ನೀನು ಕೊಡಲೇ ಬೇಕು.
ಅಚ್ಚರಿಯಿಂದ ಸಾವಿನ ದೇವ ಕೇಳಿದ ” ಕುಬೇರ ನೀನು ಈ ನಿನ್ನ ಹತ್ರವಿರೋ ಆಸ್ತಿ ಸಂಪಾದಿಸಲು ಎಷ್ಟು ಸಮಯ ತೆಗೆದುಕೊಂಡೆ?
ಹೆಮ್ಮೆಯಿಂದ ಕುಬೇರನೆಂದ “ನಾಲವತ್ತು ವರುಷಗಳು… ನನ್ನ ಜೀವಮಾನದ ಅತ್ಯಂತ ದುರ್ಲಭ ನಲ್ವತ್ತು ವರ್ಷದ ಗಳಿಕೆ ಯಿದು ಗೊತ್ತೇ , ಈಗ ಅದನ್ನೇ ನಾನು ನಿನಗೆ ಕೊಡುತ್ತಿರುವುದು ಅದೂ ಬರೇ ಐದು ನಿಮಿಷಕ್ಕಾಗಿ, ಇಡೀ ಜೀವಮಾನದಲ್ಲಿ ಇನ್ನು ನೀನು ಕೆಲಸ ಮಾಡಿ ಗಳಿಸುವ ಅಗತ್ಯವಿಲ್ಲ”
ಸಾವಿನ ದೇವತೆ ತನ್ನ ತಲೆಯಲುಗಿಸಿದ ” ನನಗೆ ನಿಮ್ಮ ಈ ಮಾನವ ಮನಸ್ಸಿನ ಅಂತರಾಳ ಅರ್ಥವಾಗುತ್ತಿಲ್ಲ, ನಿನ್ನ ಜೀವನದ ನಾಲವತ್ತು ವರುಷಗಳ ಗಳಿಕೆಯನ್ನೂ ನೀನು ಹೀಗೆ ಕೆಲವೇ ನಿಮಿಷಗಳಿಗಾಗಿ ಖರ್ಚು ಮಾಡಲು ಸಿದ್ಧವಿರುವವ ನಿನ್ನ ಮೊದಲಿನ ಸಮಯವನ್ನು ಇದಕ್ಕಾಗಿ ಯಾಕೆ ವಿನಿಯೋಗಿಸಲಿಲ್ಲ..? ನಿನ್ನ ಕಾಲವನ್ನು ಹೇಗೆ ಕಳೆದೆ..? ನಿಜವಾಗಿಯೂ ನಿನ್ನ ಅವಶ್ಯಕತೆಗಳಿಗನುಸಾರವಾಗಿ ಆಧ್ಯತೆಗಳನ್ನು ಯಾಕೆ ನಿರ್ಧರಿಸಿರಲಿಲ್ಲ? ನಿನ್ನ ಭಾಧ್ಯತೆಗಳನ್ನು ಅಧ್ಯತೆಗಳನುಸಾರವಾಗಿ ಈ ಮೊದಲು ಯಾಕೆ ಕೆಲಸ ಮಾಡಲಿಲ್ಲ..?”
ಆಗಲೇ ಬೆಳಕು ಆರಿ ಎಲ್ಲ ಕಡೆ ಕತ್ತಲು ಹರಡಿತು.

ಕುಬೇರನ ನೂರು ಲಕ್ಷ ಕೋಟಿ ಗಳಿಕೆಯೂ ಅವನಿಗೆ ಕೊನೆ ಗಳಿಗೆಯಲ್ಲಿ ಬೇಕಾದ ಐದು ನಿಮಿಷಗಳನ್ನು ದಯಪಾಲಿಸಲಾಗಲಿಲ್ಲ…

Sunday, March 29, 2015

ಸುಭಿಕ್ಷ


ಸುಭಿಕ್ಷ



ಹಳೆ ಗ್ರಾಮದ ಬೀದಿಯ ಗಲ್ಲಿಯ ಯಾವುದೋ ಓಣಿ
ಯಲ್ಲಿ ಅಲೆಯುತ್ತಿರುವ ತ್ಯಾಂಪನಿಗೆ ಕಂಡಿತೊಂದು 
ಹಳೆ ಸಾಮಾನಿನ ಅಂಗಡಿ 
ಹಳೆ ಸಾಮಾನಿನ ಫ್ಯಾನಾಗಿರೋ ಆಟ ನುಗ್ಗೆ ಬಿಟ್ಟ 
ಒಳಗೆ, ತರಹಾವರಿ ಹಳೆ ಹಿತ್ತಾಳೆ ಕಂಚು ತಾಮ್ರದ 
ಸಾಮಾನುಗಳು ಚಿಕ್ಕವು ದೊಡ್ಡವು ಬೊಂಬೆ 
ಕತ್ತರಿ  ಗೋಲ ಗ್ಲೋಬು ಆರತಿ ಚೆಂಬು 
ಮೂರ್ತಿ ಲೋಟ ಪಿಂಗಾಣಿ ಗಾಜು 
ಮಧ್ಯೆ ಕಂಡಿತು ಅರ್ಧ ಹಿತ್ತಾಳೆ ಕಂಚು 
ತಾಮ್ರದ ಲೇಪನದ ನಿಜ ಜೀವಂತ 
ವಾಗಿರೋ ಭ್ರಮೆ ತರಿಸೋ ಒಂದು ಇಲಿ
ಯ  ವಿಗ್ರಹ ಕಂಡು  ಖುಷಿಯಾದ 
ಅದೇ ಖುಶಿಯಲ್ಲಿ ಕೇಳೇ ಬಿಟ್ಟ 
ಎಷ್ಟು ಇದರ ಬೆಲೆ 
ಅದಕ್ಕೆ ಮುನ್ನೂರು   ಮಾತ್ರ 
ಆದರೆ ಅದರ ಹಿಂದಿನ 
ಇತಿಹಾಸಕ್ಕೆ ಮೂರು ಸಾವಿರ 
ಎಂದ ಅಂಗಡಿಯಾತ 
ಇತಿಹಾಸ ಯಾರಿಗೆ ಬೇಕು ಇಲ್ಲಿ 
ತಕೋ ಇನ್ನುರಾ ಐವತ್ತು ಚೌಕಾಶಿಯಲ್ಲಿ 
ಇಲಿ ಸಿಕ್ಕಿದ ಖುಷಿಯಲ್ಲಿ ಹೊರಟೆ ಬಿಟ್ಟ 
ಕಯ್ಯಲ್ಲಿ ಹಿಡಿದು ಬಂಟ 
ಸಂಜೆಯ ಮಬ್ಬು  ಬೆಳಕಲ್ಲಿ 
ಇಲಿ ನೋಡಿ ಖುಷಿಯಲ್ಲಿ 
ಸವರಿದ ಅದರ ಬೆನ್ನು 
ಯಾಕೋ ವಿಚಿತ್ರವೆನಿಸಿತು
ಜಿವಂತವೆ  ಈ ಇಲಿ 
ಅಥವಾ ತನ್ನ ಭ್ರಮೆಯೇ  ಇಲ್ಲ
ಪಕ್ಕದಲ್ಲೆಲ್ಲೋ ಚೀಕ್ ಚೀಕ್ ಅಲ್ಲ
ದನಿ ಇಲಿಯದೇ ಸಂಶಯವೇ ಇಲ್ಲ 
ಒಂದು ಎರಡಾಗಿ ನಾಲ್ಕಾಗಿ ನಾನೂರಾಗಿ 
ತನ್ನಕಡೆಯೇ ಓಡಿ ಬರುತ್ತಿರುವ ಇಲಿಗಳು 
ಸಣ್ಣಿಲಿ ದೊಡ್ಡಿಲಿ ಮೂಗಿಲಿ ಬಿಳೀಲಿ
ಕೆಮ್ಪಿಲಿ ಕಪ್ಪಿಲಿ  ತ್ಯಾಂಪ  ಹೆದರಿದ
ಹಿಂದೆ ಇಲಿಗಳು ದಂಡು 
ಓಡಿದ ಓಡಿ ಓಡಿ ಓಡಿ ಓಡಿ ದಣಿದ
ಪಕ್ಕದ ಕಣಿವೆಯಲ್ಲಿ ಬಿಸಾಡಿದ 
ಅಂತ; 
ಪುನಃ ಬಂದುದ ನೋಡಿದ ಅಂಗಡಿಯವ 
ನಕ್ಕು ನುಡಿದ ತ್ಯಾಂಪನಿಗೆ 
ಮೊದಲೇ ಗೊತ್ತಿತ್ತು ನಮಗೆ 
ಅದರ ಇತಿಹಾಸ ಕೇಳ  ಬಂದಿರಾ 
ಮೂರು ಸಾವಿರ ತಂದಿರಾ?  
ತ್ಯಾಂಪ ಕೇಳಿದ ಆಸಕ್ತಿಯಿಂದ 
ನಮ್ಮ ರಾಜಕಾರಣಿಗಳ ಹಾಗಿನ 
 ಮೂರ್ತಿಗಳು ನಿಮ್ಮಲ್ಲಿ ಇವೆಯಾ 

ತ್ಯಾಂಪ್ನ್ ಕಥಿ ಹೈಲ್ ಆಯ್ತೇ


ಅಲ್ಲಾ ಸಾರ್ ಇದಕ್ಕೆ ಅರ್ಥ ಇದೆಯಾ ಹೇಳಿ

ಕಳೆದ ತಿಂಗಳಲ್ಲೇ ಇವರು ೫-೬ ಸಾರಿ ಕನ್ನಡಕ ಬದಲಾಯಿಸಿದವರು .
ಯಾಕೆ ಅವನ ಕಣ್ಣು ಅಷ್ಟು ಬೇಗ ಹಾಳಾಯ್ತಾ..?
ಅಲ್ಲ ಇವರೇ ಅವರು ಕನ್ನಡಕ ಕಳೆದು ಕೊಳ್ತಾರೆ ಅಂತ...
ಅದು ಹ್ಯಾಗೆ..?

ಅಲ್ಲ ನೋಡಿ ಮುಖ ತೊಳೆಯಲು ಬೇಸನ್ ಹತ್ರ ಹೋಗೋದು ಅಲ್ಲಿ ಕೆಳಗೆ ಬೀಳ್ಸಿ ಒಡೆದು ಹಾಕುವುದು, ಅಥವಾ ಹೊರಗಡೆ ಆಫೀಸಲ್ಲಿ,
ಅಂಗಡಿಯಲ್ಲಿ , ಅಲ್ಲಿ ಇಲ್ಲಿ ,ಎಲ್ಲೆಂದರಲ್ಲಿ ಕಳೆದುಕೊಂಡು ಬಿಡುವುದು.
ಅಥವಾ ಬಿಟ್ಟು ಬರುವುದು. ಇದೇ ಕಥೆ ದಿನಾ....ಇಷ್ಟೇ ಆದ್ರೆ ತೊಂದರೆಯಿಲ್ಲ
ಅಲ್ಲ ನಮ್ಮ ಮನೆ ಅಂತ ಪಕ್ಕದ ಮನೆಗೆ ಹೋದರೆ ? ......ಅದು ಹೇಸಿಗೆ ಅಲ್ದಾ..?

ಹಾಗೂ ಮಾಡ್ತಾನಾ ಆ ಕಳ್ಳ ಕೊರಮ..? 

ಒಮ್ಮೊಮ್ಮೆ ಮಾತ್ರ ಅದು ಹೋಗಲಿ ಬಿಡಿ ಮಾರ್ರೆ
....ಅಲ್ಲಾ ಹೀಗೆ ದಿನಾ ಕಳೆದುಕೊಂಡರೆ
ನಮಗೆ ಹೊಸತು ತೆಗೆದು ಪೂರೈಸುತ್ತದಾ..?
ಕನ್ನಡಕದ ಅಂಗಡಿ ಇಟ್ಕಂಡ್ರೆ ಆದೀತು. ಹೀಗಾದರೆ ಹೇಗೆ......... ನೀವೇ ಹೇಳಿ..?

ಅಲ್ಲ ನಿಮ್ಮ ತಂದೆಯವರದ್ದೂ ಒಂದು ಅಂಗಡಿ ಇದೆಯಂತಲ್ಲಾ

ಅದೇ ನನ್ನ ತಂದೆಯವರು........... ಅದಕ್ಕೆ.......... ಅದೇನೋ ಇದೆಯಲ್ಲಾ ಕಣ್ಣೊಳಗೆ ಇಡುವಂತಹದ್ದು... ........ಎಂತ ಅದೂ......... ಕರ್ಮ......... ಅದರ.......... ಹೆಸರೂ.......... ನೆನಪಿಗೆ ಬರ್ತಾ ಇಲ್ಲ, ..........ಅದೆಂತದ್ದೋ ಕಾಂಟೆ ಸೆಕ್ಸ್ ಲೆನ್ಸ್ 

ಅಲ್ಲಲ್ಲ....... ಅದು ಕಾಂಟೆಕ್ಸ್ ಲೆನ್ಸ್

ಅದೇ ತಂದ್ ಕೊಟ್ಟರು .....ಆದ್ರೆ ರಾತ್ರೆಗೆ ಅವರ ಕೈ ಕಟ್ಟಿ ಹಾಕಬೇಕಲ್ಲ

ಯಾ...ಯಾಕೆ ಕೈ ಯಾಕೆ ಕಟ್ಟಿ ಹಾಕಬೇಕು..?

ಅಲ್ಲ ರಾತ್ರೆ ಅವರು ಅದೆಂತದ್ದೋ ಕರ್ಮ ಅದ್ರ ಹೆಸ್ರೂ ನೆನಪಿಗೆ ಬರ್ತಿಲ್ಲೆ ಎಂತ ಹೇಳಿದ್ದು ನೀವು

ಅದೇ ಕಾಂಟೆಕ್ಸ್ ಲೆನ್ಸ್

ಹೌದ್ ರಾತ್ರೆಗೆ ಅದೇ ತೆಗೆದಿರಿಸ್ತಾರಲ್ಲ ನೀರಲ್ಲಿ,
ನಂತರ ಇವ್ರು ತನ್ನ ಕಣ್ಣನ್ನ ಕೈ ಬೆರಳಲ್ಲಿ ತುರಿಸಿಕೊಳ್ಳುತ್ತಾರೆ,
ಅದೂ ಹೇಗೆ ಅಂದರೆ...ರಾತ್ರೆ ಎಲ್ಲಾ ತುರಿಸೀ ತುರಿಸೀ....
ಬೆಳಿಗ್ಗೆ ನೀವು ಅವರನ್ನ ನೋಡಿದ್ರೆ ಅವರ ಗುರ್ತವೇ ಇಗಲಿಕ್ಕಿಲ್ಲ ನಿಮಗೆ ಗೊತ್ತುಂಟಾ...... ಅವರ ಮುಖವೇ ಇಲ್ಲ,
ಮರಾಯರೇ......... ಬರೇ........ ಕಣ್ಣು.......... ಮಾತ್ರ ಕಾಣುವುದು.........ಮತ್ತೆ ಏನೂ ಇಲ್ಲ. .........ನೀವ್ ಕಂಡ್ರೆ ಫಟ ತೆಗೆದಿರಿಸುತ್ತೀರಿ ಖಂಡಿತಾ

ಯಾಕೆ ಅಷ್ಟು ಚೆನ್ನಾಗಿ ಕಾಣ್ತಾನಾ ಅವನು..?

ಚೆಂದ ಗಿಂದ ಅಲ್ಲ ಮರಾಯ್ರೇ....... ನೀವು ಮನೆ ಕಟ್ಟಿಸ್ತಾ ಇದ್ದೀರಲ್ಲ........
ಅಲ್ಲಿ ಇಡಲು......... ದೃಷ್ಟಿ ಬೊಂಬೆ ಗಾಗಿ!!!!!!!!!!!!

ಮತ್ತೇನು ಮಾಡಿದ್ರೀ 

ಈಗ ಒಂದು ಉಪಾಯ ಮಾಡಿದ್ದೆ ನೋಡಿ

ಏ ಏನು ಮಾಡಿದ್ರೀ..?

ಅದೇ ಆ ಕನ್ನಡಕಕ್ಕೆ ಒಂದು ನೂಲು ಕಟ್ಟಿ ಅದನ್ನ ಕುತ್ತಿಗೆಯ ಹಿಂದಿನಿಂದ ಭದ್ರವಾಗಿ ಕಟ್ಟಿದ್ದೆ,.......... ಸರದ ಹಾಗೆ.
ಈಗ ತೊಂದರೆ ಇಲ್ಲ. ಒಂದೇ, ಕನ್ನಡಕ ಅವರ ಕಣ್ಣಲ್ಲಿ( ಅಂದರೆ ಮುಖದಲ್ಲಿ) ಅಥವಾ ಕುತ್ತಿಗೆಯಲ್ಲೇ ಇರತ್ತೆ,........... ಒಳ್ಳೆಯ ಉಪಾಯ ಅಲ್ದಾ ನಂದು

ಹೌದೌದು.

ಆದರೆ ರಾತ್ರೆಗೆ ಮಾತ್ರ ತೆಗೆದಿಡುತ್ತಾರೆ...

ರಾತ್ರೆಗೆ... ಅದು ಯಾಕೆ..???

................................................
ತಪ್ಪು ಮಾಡಿದವರ ಹಾಗೆ ನಾಚಿಕೊಂಡಳು.

ಬೇ... ಬೇಡ ಬಿಡಿ ಗೊತ್ತಾಯ್ತು.!!!

Saturday, March 28, 2015

ಹೇಳು ಮುಂದಿನ ಸರದಿ ನನ್ನದಲ್ಲ


ಮತ್ತೆ ಜವನಾರ್ಭಟವು ಪಕ್ಕದಲ್ಲೇ
ಶವವಾದ ನವ ಯುವಕ ರಾತ್ರಿಯಲ್ಲೇ
ಸತಿ ಸುತರ  ಮತ್ತಿತರರ ಮಾಡಿ ಅನಾಥರ
ಥಟ್ಟನೇ ಇಲ್ಲವಾದ ನಡು ಬೀದಿಯಲ್ಲೇ
ಹಿರಿಯುತ್ತ ಬಲಿಯುತ್ತ ಮೈ ಮನವ ಸುತ್ತುತ್ತ
ಸುತ್ತಿ ಕಾಡಿದೆ ನೋವು ಎದೆಯಾಳದಲ್ಲೆಲ್ಲ 
 ಹೇಳು ಮುಂದಿನ ಸರದಿ ನನ್ನದಿಲ್ಲ

ಬಲಿಯುತ್ತದಾತಂಕ  ಮನವನ್ನು  ತುಂಬುತ್ತ
ಏಕಾಂತದೊಸರಲ್ಲಿ ಮಾಡುತ್ತ ಕಸರತ್ತು
ಇಬ್ಬಗೆಯ ನೋವಿನ ಮಸಲತ್ತು ಕಾಡುತ್ತ
ಸೋತಿಹವು ಕೈಕಾಲು , ಮನವಿಲ್ಲ ಸ್ಪಷ್ಟ
ಬಲಿತಿಹುದು ಕಿವಿ ದೂರ,  ದೃಷ್ಟಿ ಅಸ್ಪಷ್ಟ 
ಗ್ರೀಷ್ಮನಾ ಹರವಿನ್ನೂ ಮುಗಿದಿಲ್ಲ ಕಳೆದಿಲ್ಲ 
ಹೇಳು ಮುಂದಿನ ಸರದಿ ನನ್ನದಲ್ಲ

ಮುಗಿದಿಲ್ಲ ಆಸೆ ಆಕಾಂಕ್ಷೆ ಮೋಹಾವೇಶ
ಮೊಮ್ಮಗಳ ಮದುವೆ, ಸುತನ ಗೃಹ ಪ್ರವೇಶ
ಮಿತ್ರನಾ ಶಷ್ಟಬ್ದ್ಯ ಕಾದಿಹುದು, ಉಳಿದಿಹುದು
ಮತ್ತಿನ್ನೂ  ಮರಿಮಗನ ಅನ್ನ ಪ್ರಾಶ
ಮತ್ತೆ  ಬ್ರಂದಾವನದ ಭೇಟಿಯೇ ಮಾಡಿಲ್ಲ 
ಕಾಶಿ ತಿರುಪತಿ  ಮಥುರೆ ಬದುಕಲ್ಲೇ ನೋಡಿಲ್ಲ, 
ಹೇಳು ಮುಂದಿನ ಸರದಿ ನನ್ನದಿಲ್ಲ

ಗುರು ಹಿರಿಯಾದಿ ಹಳೇ ಮಿತ್ರರಾ ಭೇಟಿ
ಬಹುದೋ ಬಾರದೋ ಮತ್ತೆ ಕಾಲವಿದು ಮೀಂಟಿ
ನಮ್ಮದಾಗದು ನಾಳೆ ಬ್ಯಾಂಕಿನಾ ಇಡುಗಂಟು
ಬೆಳಕಿನಲ್ಲಿನ ನೆರಳೇ ಇಂದಿನಾ ನಂಟು
ಜವನ ಕೊಡುಗೆಯ  ಕ್ಷಣದೆ ಜೀವನವು ಉಂಟು

ನಾಳೆಯಾ ಹುಮ್ಮಸ್ಸು ಬೋನಸ್ಸು, ಮತ್ತೆಲ್ಲ
ಹೇಳು ಮುಂದಿನ ಸರದಿ ನನ್ನದೆಲ್ಲಾ

ಮತ್ತೊಮ್ಮೆ ಬಾ ಗೆಳೆಯ

ಲೂಯಿ ಮಹಾಶಯ


                          ಆ ದಿನ ಎಂದಿನಂತೆ ನನ್ನವಳು ಮತ್ತು ನಾನು ದೆಹಲಿಯ ಯುನಿವರ್ಸಿಟಿಯ ಇದಿರಿನ ರಸ್ತೆಯಲ್ಲಿ ಬೆಳಗಿನ ವಿಹಾರಕ್ಕಾಗಿ ಹೋಗುತ್ತಿರುವಾಗ ಅಕಾಸ್ಮಾತ್ತಾಗಿ ಒಬ್ಬ ಶ್ವಾನ ಮಹಾಶಯ ನಮ್ಮಜತೆ ಸೇರಿಕೊಂಡ.  ನಿಜವಾಗಿಯೂ ಹೇಳಬೇಕೆಂದರೆ ಆತ ನನ್ನವಳನ್ನೇ ಹೆಚ್ಚು ಹಚ್ಚಿಕೊಂಡ ಹಾಗೇ ಕಂಡು ಬಂತು. ಆದರೆ ಅವಳಿಗೆ ಶ್ವಾನ ಜಾತಿಯವರಲ್ಲೇ ಅಷ್ಟು ಕನಿಕರವೋ ಅಥವಾ ಅಕ್ಕರೆಯೋ ಇರಲೇ ಇಲ್ಲ. ಈತ ಅದ್ಯಾಕೋ ನಮ್ಮಿಬ್ಬರನ್ನೂ ನೋಡಿದ ಕೂಡಲೇ ಯಾರನ್ನು ಸರಿಯಾಗಿ ಆದರಿಸಿದರೆ ಒಳ್ಳೆಯದು ಅಂತ ಕಂಡು ಕೊಂಡ ಅಂತ ಕಾಣುತ್ತದೆ. ಇರಲಿ, ನೋಡಲು ಜಾತಿಯವನಾಗಿಯೂ, ಸರಿ ಸುಮಾರು ಪೇಟೆಯ ಪರಿಸರಕ್ಕೆ ಹೊಂದಿಕೊಂಡವನಾಗಿಯೂ ಕಂಡುಬಂದ. ಯಾಕೆಂದರೆ ಆ ನಾಲ್ಕು ಓಣಿಯ (ನಾಲ್ಕು ಲೇನ್ ನ) ಅಂಥಾ ದೊಡ್ಡ ವರ್ತುಲ ರಸ್ತೆಯನ್ನೂ ಆತ ನಮ್ಮ ಜತೆಯಲ್ಲಿಯೇ ನಾವು ನಿಂತಲ್ಲಿ ನಿಂತು ನಾವು ವೇಗವಾಗಿ ಹೆಜ್ಜೆ ಹಾಕಿದಲ್ಲಿ ತಾನೂ ಓಡಿ ತನ್ನ ಬುದ್ದಿವಂತಿಕೆಯನ್ನು ಪ್ರದರ್ಶಿಸಿದ. ದಿನಾಲೂ ನಾವು ಗಮನಿಸಿದಂತೆ ಹಲಕೆಲವರು ಅಲ್ಲಿ ತಮ್ಮ ತಮ್ಮ ಶ್ವಾನರಾಯರನ್ನೂ ಕರೆದು ಕೊಂಡು ಬರುತ್ತಿದ್ದರು,ಆಗೆಲ್ಲಾ ಯಾರು ಯಾರನ್ನು ಕರೆ ತಂದರು ಅನ್ನುವುದು ಸರಿಯಾಗಿ ಗೊತ್ತಾಗುವುದು ಕಷ್ಟ ಸಾಧ್ಯ.ಆದರೆ ಇವತ್ತು ಅವರೆಲ್ಲಾ ನಮ್ಮನ್ನೂ ಅವರ ಜತೆ ಸೇರಿಸಿಕೊಂಡ ಹಾಗೆ ಕಂಡು ಬಂತು. ನಾವು ನಮ್ಮ ವಿಹಾರವನ್ನು ಮುಗಿಸಿ ನಮ್ಮ ಕಾಲನಿಯ ಮುಖ್ಯ ಗೇಟಿನವರೆಗೆ ಬರುವಷ್ಟರಲ್ಲಿ ಅವನ ಎಷ್ಟೋ ಅಪರಿಚಿತ ಬಂಧುಗಳನ್ನೂ ಅವರ ಕಾಕ ಅಲ್ಲಲ್ಲ ಶ್ವಾನ ದೃಷ್ಟಿಗಳನ್ನೂ ತಪ್ಪಿಸಲೂ ಅನೇಕಾನೇಕ ಉಪಾಯಗಳನ್ನೂ, ಬುದ್ದಿಯನ್ನೂ, ಖರ್ಚು ಮಾಡಬೇಕಾಗಿ ಬಂತು. ಮುಖ್ಯ ಗೇಟಿನ ಕಾವಲಿನವ ನಮ್ಮಿಬ್ಬರನ್ನೂ ಒಂದು ಜಾತಿ ಶ್ವಾನ ಮಹಾಶಯನನ್ನೂ ನೋಡಿ ಗಲಿಬಿಲಿಗೊಂಡು ಅವನನ್ನು ನಮ್ಮಿಂದ ಬೇರೆ ಮಾಡಿಸಲೋಸುಗ ಕೈಯಲ್ಲಿದ್ದ ದೊಣ್ಣೆಯಿಂದ ಅಟ್ಟಿಸಲು ನೋಡಿದ, ನನಗೆ ಆಗ ಅದ್ಯಾವ್ ಮಂಕು ಕವಿದಿತ್ತೋ ಕಾಣೆ ನನ್ನವಳ ಕಣ್ಣ ನೋಟವನ್ನು ತಪ್ಪಾಗಿ ಅರ್ಥೈಸಿಕೊಂಡು, ಆತನನ್ನು ತಡೆದೆ. ಈತ ನಿರಾಯಾಸವಾಗಿ ನಮ್ಮ ಜತೆಯೇ ಬಂದು ಲಿಫ಼್ಟ್ ನೊಳಕ್ಕೆ ತೂರಿಕೊಂಡ.


                         ಈ ಬೆಳಗಿನ ವಿಹಾರ ಇದೆಯಲ್ಲಾ, ಅದು ನಮ್ಮ ಎಷ್ಟೋ ದೊಡ್ಡ ದೊಡ್ಡ ಸಮಸ್ಯೆಗಳನ್ನು ಪರಿಷ್ಕಾರ ಮಾಡಿದೆ. ಬೆಳೆದ ಮತ್ತು ಬೆಳೆಯುತ್ತಿರುವ ಮಕ್ಕಳ ಇದಿರಲ್ಲಿ ಮಾತಾಡಲಾಗದ,ಪರಿಷ್ಕರಿಸಲಾಗದ ಎಷ್ಟೋ ವಿಷಯಯಗಳನ್ನು ನಾವು ಅಲ್ಲಿಯೇ ಅಂದರೆ ನಮ್ಮ ವಿಹಾರದಲ್ಲಿಯೇ ಪರಿಹರಿಸಿ, ನಿರ್ಧಾರಗಳನ್ನೂ ತೆಗೆದುಕೊಂಡದ್ದಿದೆ.ಪರ ಊರಿನಲ್ಲಿ ನಮ್ಮಭಾಷೆಯಾಡುವಾಗಿನ ಗಮ್ಮತ್ತೇ ಬೇರೆ. ಹಲಕೆಲವೊಮ್ಮೆ ನಾವು ನಮ್ಮ ಪಕ್ಕದಲ್ಲಿಯೆ ಹೋಗುತ್ತಿರುವ ಬೊಕ್ಕ ತಲೆಯ ಮಹಾಶಯರ, ಅಥವಾ ಅವರ ಪಕ್ಕದಲ್ಲಿಯೇ ವಯ್ಯಾರದಿಂದ ನಡೆಯುತ್ತಿರುವ ಲಲನಾಮಣಿಗಳ!!(ಅರೆರೆ ನೀವೇನೇನೋ ಊಹಿಸಬೇಡಿ! ನಿಜವಾಗಿಯೂ ಅದಲ್ಲ, ನಾನು ಪಕ್ಕಾ ಸಸ್ಯಾಹಾರಿ.) ಉಡುಪುಗಳ ಬಗ್ಗೆಯೂ ಮಾತನಾಡುತ್ತಾ ಹೋಗುತ್ತಿರುತ್ತೇವೆ, ಮತ್ತು ಅವರ ಇದಿರಲ್ಲೇ ಅವರ ಬಗೆಗೇ ಏನು ಹೇಳಿದರೂ ಗೊತ್ತಾಗುವುದಿಲ್ಲವಲ್ಲ. ಒಂದೊಮ್ಮೆ ಗೊತ್ತಾದರೂ ಸಹ ಕನ್ನಡದವರಾದರೆ ಒಂದೇ ಊರಿನವರು ಸಿಕ್ಕ ಖುಷಿಯಲ್ಲಿ ಅವರಾಗಲೇ ಮರೆತು ಬಿಟ್ಟಿರುತ್ತಾರೆ.  ಇಲ್ಲಿ ಒಂದು ಉದಾಹರಣೆ ನೀಡಲೇ ಬೇಕಾಗುತ್ತದೆ.ಹೀಗೇ ನಾವು ಹೋಗುತ್ತಿರುವಾಗ ಒಮ್ಮೆ ದಿನಾ ನೋಡುತ್ತಿರುವ ಮುದುಕರೊಬ್ಬರು ಕೇಳಿಯೇ ಬಿಟ್ಟಿದ್ದರು, "ಏನಮ್ಮಾ ನೀವೂ ಮತ್ತು ಇವರೂ ಒಂದೇ ಆಫೀಸಿನವರಾ ಅಂತ" ಅಂದರೆ ಇದರ ಅರ್ಥ ಇಬ್ಬರೂ ಒಂದೇ ಆಫೀಸಿನವರಾದರೆ ಮಾತ್ರ ಒಟ್ಟಿಗೆ ಹೋಗಬೇಕು.ಅಲ್ಲದೇ ಬೇರೆ ಯಾರೂ ಹೀಗೆ ಒಟ್ಟಿಗೇ ನಡೆಯುವುದು ದೆಹಲಿಯ ಜಾಯಮಾನಕ್ಕೆ ವಗ್ಗದು.
                         ಮಕ್ಕಳಿಬ್ಬರೂ ಈ ಹೊಸ ಸದಸ್ಯನನ್ನು ಯಾವ ಪರಿ ಹೊಂದಿಕೊಂಡರೆಂದರೆ ದೊಡ್ಡವ ಅನು "ಪಪ್ಪಾ ಈತ ಜರ್ಮನ್ ಪೊಮೆರಿಯನ್ ಇರಬಹುದು ಅದಕ್ಕೇ ಈತನ ಗಾತ್ರ ದೊಡ್ಡದೇ ಇದೆ ಈತನ ಹೆಸರು ಯಾವುದಿರಬಹುದು ಅಂತ ಯೋಚಿಸಿದರೆ, ಸಣ್ಣವ ರಾಗು ಶ್ಯಾಂಪು ತೆಗೆದುಕೊಂಡು ಬಂದು ನನಗೆ ಕೊಟ್ಟು "ಪಪ್ಪಾ ನೋಡಿ ಎಷ್ಟೋ ದಿನಗಳಿಂದ ಈತ ಸ್ನಾನಾನೇ ಮಾಡಿಲ್ಲ ಅಂತ ಕಾಣ್ಸತ್ತೆ ತಗೋಳ್ಳಿ ಮಾಡ್ಸಿ" ಅಂದ. ಈತನೋ ತನ್ನದೇ ಮನೆ ಎಂಬಂತೆ ಠೀವಿಯಿಂದ ಆಗಲೇ ಮನೆಯೆಲ್ಲವನ್ನೂ ಸರ್ವೇ ಮಾಡಿ ತನ್ನ ಪರಿಮಳದಿಂದ ಇಡೀ ಮನೆಯನ್ನೇ ಧನ್ಯವಾಗಿಸಿದ. ನನ್ನವಳು ನನ್ನ ಕಡೆಗೂಮ್ಮೆ ಪ್ರಶ್ನಾತೀತನೋಟವನ್ನೆಸೆದಳು. ಅಂದರೆ ಇದೆಲ್ಲವೂ ನನ್ನ ಕಾರಣದಿಂದ ಅಂತ, ಸ್ಸರಿ ಇನ್ನು ಯಾವ ಯಾವ ತಾಪತ್ರಯಗಳು ನನ್ನನ್ನು ಆವರಿಸಿಯಾವೋ ಅಂತ ಹೆದರಿದೆ, ಬಂದದ್ದೆಲ್ಲಾ ಬರಲಿ ಅಂತ ಗಟ್ಟಿ ಮನಸ್ಸು ಮಾಡಿ ಈತನನ್ನು ಸ್ನಾನಗೃಹಕ್ಕೆ ಕರೆದೊಯ್ದೆ. ದೆಹಲಿಯ ಚಳಿಗೆ ಮನೆಯಲ್ಲಿ ಬಿಸಿನೀರು ಖಾಯಮ್, ಈತ ಹದ ಬೆಚ್ಚನೆಯನೀರಿಗೆ ಖುಶಿಯಿಂದ ಮೈಯೊಡ್ಡಿ ನಿಂತ. ಚಿತ್ರ ವಿಚಿತ್ರ ಬಣ್ಣಗಳು ಈತನ ಮೈ ತೊಳೆದ ನೀರಲ್ಲಿ ಕರಗಿ ಬೀಳುತ್ತಾ ಇಡೀ ಸ್ನಾನಗೃಹವೇ ಯಾವುದೋ ಹೊಸ ಭಯಂಕರವಾದ ಕಂಪಿನಿಂದ ತುಂಬಿಕೊಂಡಿತು. ಈತನೋ ನಾಲ್ಕೈದು ಬಕೆಟ್ ಬಿಸಿನೀರು ಖಾಲಿಸಿ ಬಾಗಿಲ ಕಡೆಗೊಮ್ಮೆ ನನ್ನ ಕಡೆಗೊಮ್ಮೆ ನೋಡುತ್ತಾ ತನ್ನ  ಸ್ನಾನ ಮುಗಿದದ್ದನ್ನು ತೋರ್ಪಡಿಸಿದ.ನಾನು ಹಳೆಯದೊಂದು ಟರ್ಕೀ ಟವೆಲ್ ನಿಂದ ಅರ್ಧ ಒರೆಸುವುದರಷ್ಟರಲ್ಲೇ, ಈತ ಹೊರಗಡೆ ಓಡಿ ಅವಳು ಸಿಂಗರಿಸಿಟ್ಟ ಬೆಡ್ ಮೇಲೆ ಹತ್ತಿ ತನ್ನ ಮೈಯನ್ನು ಜೋರಾಗಿ ಕೊಡವಿದ. ಸಾವಿರ ಸಾವಿರ ಸಣ್ಣ ಸಣ್ಣ ನೀರ ಹನಿಗಳು ನಮ್ಮ ಸಿಂಗಾರಮಯ ಬೆಡ್ ರೂಮಿನ ಪ್ರತಿಯೊಂದೂ ವಸ್ತುಗಳ ಮೇಲೆ ಅಲಂಕರಿಸಿಕೊಂಡವು.ಈ ಹೊಸದಾದ ವಿಚಿತ್ರ ಸನ್ನಿವೇಷವನ್ನು ಅರಗಿಸಿಕೊಳ್ಳಲಾರದೇ ಏನೂ ಮಾಡಲು ತೋಚದೇ ಶು ಶು ಎಂದೆ. ಈತನೋ ನಾನೇನೋ ಮುದ್ದು ಮಾಡಲು ಕರೆದೆ ಎಂತ ನನ್ನ ಬಳಿಯಿಳಿದು ಮೈಯೊಡ್ಡಿ ನಿಂತ. ನನಗೆ ಬೇರೆ ಏನೂ ಮಾಡಲೂ ತೋಚದೇ ಆತನಿಗೆ ತಿನ್ನಲು ದೋಸೆಯ ತುಂಡುಗಳನ್ನು ಹಾಲಿನೊಟ್ಟಿಗೆ ಹಾಕಿ ಹೊರಗಿನ ಲಿಫ಼್ಟನ  ಇದಿರಿನ ವಿಶಾಲಜಾಗದಲ್ಲಿ ಇಟ್ಟು, ಬೆಳಗಿನ ನಿತ್ಯ ವಿಧಿಗಳನ್ನು ಪೂರೈಸಲು ಒಳಗೆ ಬಂದೆ.

                          ಇಷ್ಟರಲ್ಲಿ ಅನು ಓಡಿ ಬಂದು ಪಪ್ಪಾ ಇವನ ಹೆಸರು ಏನಿಡೋಣ ಅಂತ ನಾವು ಆಗಲೇ ಊಹಿಸಿಯಾಯ್ತು ಎಂದ. ಏನಿಟ್ಟಿದ್ದೀರಪ್ಪಾ ಎಂದೆ.ಯಾವ ಹೆಸರು ಕರೆದರೂ ಈತ ಮಾತನಾಡಲಿಲ್ಲ, ಆದರೆ ನಾನು ಇವನಿಗೆ ಲೂಯಿ ಅಂತ ಕರೆದಾಗ ಆತನ ಒಂದು ಕಿವಿ ನನ್ನ ಕಡೆ ತಿರುಗಿತು. ಅದಕ್ಕೆ ಅದೇ ಹೆಸರಿಂದ ಕರೆಯೋಣ ಎಂದ.ಪ್ರಾಯಶಃ ಅಂತಹದ್ದೇ ಏನೋ ಹೆಸರಿಟ್ಟಿರಬಹುದು ಇವನ ಮೊದಲಿನ ಯಜಮಾನ ಅಲ್ಲ್ವಾ ಅಂತ ಹೇಳುವಾಗಲೇ ಶ್ರೀಮತಿ ನಾಳೆ ಇದರ ಓನರ್ ಬಂದು ನಮ್ಮ ನಾಯಿ ನೀವು ಕದ್ದಿದ್ದೀರ ಎಂದರೆ ಏನ್ರೀ ಮಾಡ್ತೀರಾ ನೀವು ಎಂದಳು. ಈ ವಿಷಯವನ್ನು  ಕೂಡ ಅಲ್ಲಗಳೆಯುವಂತಿಲ್ಲವಲ್ಲ.ನೋಡೋಣ ಬಿಡು ಹೇಳೀಕೇಳಿ ಜಾತಿ ನಾಯಿ, ಇಲ್ಲಿ ಅದಕ್ಕೆ ಒಳ್ಳೇಯದಾದರೆ ಇಲ್ಲೇ ಇರುತ್ತೆ ಇಲ್ಲವಾದರೆ ಮೊದಲಿನ ಜಾಗಕ್ಕೆ ಓಡಿ ಹೋಗಬಹುದುಬಿಡು ಸಮಾಧಾನಿಸಿದೆ.ಆ ಕಾಲ ಬೇಗಬರಲಪ್ಪಾ,ಎಂದಳು ಶ್ರೀಮತಿ.  

                            ಆದಿನದಿಂದ ನಮ್ಮ ಮನೆಯಲ್ಲಿ ಒಂದು ಹೊಸ ಸದಸ್ಯ ಸೇರ್ಪಡೆಯಾದ. ಈತನಂತೂ ಮನೆಯನ್ನು ಎಷ್ಟು ಚೆನ್ನಾಗಿ ಮೂರೇ ದಿನಗಳಲ್ಲಿ ಹೊಂದಿಕೊಂಡ ಎಂದರೆ ಮನೆಯ ಖರ್ಚು ಕೂಡಾಕಾಲು ಅಂಶ ಜಾಸ್ತಿಯೇ ಅಯಿತು. ನಾಲ್ಕನೆಯ ದಿನದಿಂದ ಆತ ಮನೆಯ ಉಸ್ತುವಾರಿಯ ಜವಾಬ್ದಾರಿ ಕೂಡಾ ತಾನೇ ತೆಗೆದುಕೊಂಡ. ಈ ಅಚ್ಚರಿಯ ವಿಷಯ ನಮ್ಮ ಗಮನಕ್ಕೆ ಬಂದುದು ವಿಚಿತ್ರ ಪ್ರಸಂಗದಿಂದ.ಪ್ರತಿ ಬುಧವಾರ ಸಂಜೆ ನಾವಿಬ್ಬರೂ ಸಂತೆಗೆ ಹೋಗುತ್ತೇವೆ. ನಾವಿದ್ದ ಕೊಲೊನಿಯ ಹೊರಭಾಗದಲ್ಲಿ ಸಂತೆ ಏರ್ಪಡುತ್ತದೆ, ಎಲ್ಲಾ ಸಂತೆಗಳಂತೆಯೇ ಅಲ್ಲಿಯೂ ನಮಗೆ ಬೇಕಾದ ಬೇಡವಾದ ವಸ್ತುಗಳ ಭಾರೀ ಭಂಢಾರವೇ ಬಿದ್ದಿರುತ್ತದೆ.ನಮಗೆ ಬೇಕಾದ ಫ಼್ರೆಷ್ ತರಕಾರಿಗಳು ಬರುತ್ತವಾದ್ದರಿಂದ ವಾರಕ್ಕೆ ಬೇಕಾದ ತರಕಾರಿಗಳನ್ನು ಅಲ್ಲಿಂದಲೇ ತಂದು ಇಟ್ಟುಕೊಳ್ಳುವುದು ನಮಗೆ ರೂಢಿಯಾಗಿತ್ತು.ಲೂಯಿಯನ್ನು ಮೊದಲ ದಿನ ಕಟ್ಟಿ ಹಾಕಿದ್ದೆವು ಯಾಕೆಂದರೆ ಈತ ಸೀದಾ ಮನೆಯ ಇದಿರಿನ ವಿಶಾಲ ಜಾಗದಲ್ಲಿ ಅಡುತ್ತಿರುವ ಎಲ್ಲಾ ಮಕ್ಕಳಲ್ಲಿ ಒಂದು ರೀತಿಯ ಭಯದ ವಾತಾವರಣವನ್ನೇ ಸೃಷ್ಟಿಸಿದ್ದ, ಆತನೇನೋ ಮಕ್ಕಳೊಡನೆ ಆಡಲು ಹೋಗುತ್ತಿದ್ದನಾದ್ರೂ ಈತನ( ನಾಯಿ ಭಾಷೆ) ಆ ಹಿಂದಿಯ ಮಕ್ಕಳಿಗೆಲ್ಲಿ ಅರ್ಥವಾಗಬೇಕು, ಅವು ಈತನ ಅಬ್ಬರ ನೋಡಿ ಕೀಈಈಈಈಈಈ ಅಂತ ಚೀರಿ ಓಡಿದರೆ ಈತನಿಗೆ ಅದೇನೋ ಭಾರೀ ಮಜವಾಗಿ ಅಲ್ಲಿದ್ದ ಎಲ್ಲಾ ಚಿಣ್ಣರನ್ನೂ ಓಡಿಸತೊಡಗಿದ, ಈಚೀರಾಟ ನೋಡಿ ನನ್ನ ಇಬ್ಬರೂ ಮಕ್ಕಳು ಅವನನ್ನು ಎಳತಂದು ಲಿಫ಼್ಟನ ಹತ್ತಿರ ಕಟ್ಟಿ ಹಾಕಿದರು.ಅದು ಮತ್ತೊಂದು ರಾದ್ದಾಂತಕ್ಕೆ ದಾರಿ ಮಾಡಿತು. ನಮ್ಮದು ಐದು ಅಂತಸ್ತಿನ ಮನೆಯೆಂದು ಹೇಳಿದೆನಷ್ಟೆ ನಮ್ಮಪಕ್ಕದ ಬಿಲ್ಡಿಂಗ್ ಕೂಡ ನಮ್ಮ ಬಿಲ್ಡಿಂಗಗೆ ತಾಗಿಕೊಂಡೇ ಇದ್ದುದರಿಂದ ನಮ್ಮ ಲಿಫ಼್ಟ್ನಲ್ಲಿ ಬಂದು ಕೆಲವರು ಮೇಲೆ ಹತ್ತಿ ಆಚೆ ಬಿಲ್ಡಿಂಗಗೆ ಹೋಗುತ್ತಿದ್ದರು. ಲೂಯಿ ಬಂದ ಮೇಲೆ ಆಚೆ ಹೋಗುವವರು , ಕೆಲಸ ಇಲ್ಲದೇ ಅಲ್ಲಿ ಇಲ್ಲಿ ಅಲೆಯುವವರು, ಹೀಗೆ ಇವರೆಲ್ಲರ ಸಂಖ್ಯೆ ಒಮ್ಮೆಲೇ ಕಡಿಮೆಯಾಯಿತು.ಒಮ್ಮೆಯಂತೂ ಲಿಫ಼್ಟ್ ಕೆಟ್ಟು ಹೋಗಿತ್ತು ಅದರ ರಿಪೇರಿಗೆ ಬಂದ ಮೆಕೇನಿಕ್ ಕೂಡಾ ಲೂಯಿಯ ಅಬ್ಬರ ನೋಡಿ ಹೆದರಿ ಹಾಗೆಯೇ ಓಡಿಹೋಗಿದ್ದ. ನಾನೇ ಅವನನ್ನು ಪುಸಲಾಯಿಸಿ ಕರೆತಂದು ರಿಪೇರಿ ಮಾಡಿಸಿದ್ದೆ.  ತಡೆಯಿರಿ, ನಾವು ಸಂತೆಗೆ ಹೋದ ಕಥೆ ಏನಾಯ್ತು ಅಂದಿರಾ ? ಅಲ್ಲಿಗೇ ಬರ್ತಾ ಇದ್ದೇನೆ, ಬಿಡಿ ನಾವು ಸಂತೆಯಿಂದ ಬಂದ ಮೇಲೆ ಹಾಗೆ ಏನೂ ವಿಶೇಷ ಘಟಿಸಲಿಲ್ಲ. ಸುಮಾರು ಒಂಬತ್ತು ಘಂಟೆಗೆ ನನ ಮೊಬೈಲ್ ಗುಣುಗುಣಿಸಿತು. ಎತ್ತಿದರೆ ನಮ್ಮ ಕಾಲೊನಿಯ ಪಕ್ಕದಲ್ಲೇ ಸಿಂಗಲ್ ಆಗಿ ವಾಸಿಸುತ್ತಿರುವ ನನ್ನ ಸ್ನೇಹಿತ ಕುಲಕರ್ಣಿಯವರದು. ಕೆಂಡಾಮಂಡಲವಾಗಿದ್ದಾರೆ, ಪ್ರಾಣಿ. ಏನಾಯ್ತು ಎಂದರೆ, ನಾವು ಸಂತೆಗೆ ಹೋಗಿದ್ದಾಗ ಇವರು ನಮ್ಮ ಮನೆಗೆ ಬಂದಿದ್ದಾರೆ. ಲಿಫ಼್ಟ್ ಕೆಟ್ಟು ಹೋಗಿರೋದರಿಂದ ಕಷ್ಟಪಟ್ಟು ಮೆಟ್ಟಲೇರಿ ಬಂದಿದ್ದಾರೆ. ಈತನ ವಿಷಯ ಅವರಿಗೆ ಗೊತ್ತಿಲ್ಲ, ಅವರ ವಿಷಯ ಈತನಿಗೆ ಗೊತ್ತಿಲ್ಲ, ಈಮೂರು ದಿನಗಳಲ್ಲಿ ಲೂಯಿ ಮನೆಗೆ ಬರುವ ಎಲ್ಲರನ್ನೂ ಬಹು ಚೆನ್ನಾಗಿ ಪರಿಶೀಲಿಸಿ ನೆನಪಿನಲ್ಲಿಟ್ಟಿದ್ದಾನೆ. ನಾವು ಹೊರಗೆ ಹೋದ ಕೂಡಲೇ ಈತ ನಮ್ಮ ಮನೆಯ ಕೆಳಗಿನ ಮೂರನೆಯ  ಮನೆಯಲ್ಲಿದ್ದು ಕಾಯುತ್ತಿದ್ದಾನೆ.ಕುಲಕರ್ಣಿಯವರು ನಡೆದು ಬರುವಾಗ ಈತ, ತಾನು ಈ ಮನೆಗೆ  ಬಂದ ಮೇಲೆ,ಇದುವರೆವಿಗೂ ಬರದೇ ಇದ್ದ ಕುಲಕರ್ಣಿಯವರನ್ನು ನೋಡಿ ಈ ಅಪರಿಚಿತ ವ್ಯಕ್ತಿಯ ಮೇಲೆ ಈತನಿಗೆ ಸಂಶಯಬಂದು ಅವರನ್ನೇ ಹಿಂಬಾಲಿಸಿ ಬಂದಿದ್ದಾನೆ.ಅವರು ಮನೆಯ ಕರೆಘಂಟೆ ಒತ್ತುವ ತನಕ ಸುಮ್ಮನಿದ್ದ ಈತ ಒಮ್ಮೆಗೇ ಅವರ ಕಾಲಿನ ಮೀನ ಕಂಡಕ್ಕೆ ಬಾಯಿ ಹಾಕಿದ್ದಾನೆ. ಇಷ್ಟು ಹೇಳುವಾಗ ಅವರ ಕೋಪ ಪುನಃ ತಾರಕಕ್ಕೇರಿತು. " ಅಲ್ಲಾರೀ ನಿಮ್ಮ ಮನೆ ನಾಯಿ, ಮನೆ ಹಾಳಾಗ, ನಿಮಗೇನು ಬುದ್ದಿ ಇದೆಯೇನ್ರೀ, ಇಷ್ಟು ದೊಡ್ಡ ನಾಯಿ ಯಾರಾದ್ರೂ ಸಾಕ್ತಾರಾ? ನಾಯಿ ತಂದ ವಿಷಯ ನನಗೆ ಹೇಳಲು ನಿಮಗೇನು ನಾಯಿ ಕಡಿದಿತ್ತಾ? ನಿಮ್ಮ ಅಜ್ಜಿಗೆ, ನಿಮಗೆ, ಎಲ್ಲರಿಗೂ ಒಟ್ಟಿಗೇ ಆ ನಾಯಿ ಕಡೀಲಿ," ಅವರು ಈ ಪಾಟಿ ಬಯ್ಯುವಾಗ (ಫ಼ೋನಿನಲ್ಲಿ) ನನಗೆ ನಗೆ ಉಕ್ಕುಕ್ಕಿ ಬಂತು.ಜೋರಾಗಿ ನಗುವ ಹಾಗೆಯೂ ಇಲ್ಲ, ಅವರಿಗೆ ಗೊತ್ತಾದರೆ ನನ್ನ, ನನ್ನವರ ಏಳೇಳು ಜನ್ಮ ಜಾಲಾಡಿಯಾರು, ಅನ್ನಿಸಿತು. ಅಲ್ಲ ಇದಕ್ಕೆ ಯಾರನ್ನು ದೂರಿ ಏನು ಪ್ರಯೋಜನ, ಅವರು ಬರುವ ಮೊದಲು ನನಗೆ ಈಗ ಮಾಡಿದ ಹಾಗೆ ಫ಼ೋನ್ ಮಾಡಿದ್ದರೆ?. ಲೂಯಿಯನ್ನ ನೋಡಿದರೆ ಅದು ಬಾಲ ಅಲ್ಲಾಡಿಸುತ್ತಾ ತಾನು ಮಾಡಿದ್ದರ ಬಗ್ಗೆ ನನ್ನಿಂದ ಪ್ರಶಂಸೆ ನಿರೀಕ್ಷಿಸುತ್ತಿದೆ ಅನ್ನಿಸಿತು.ಇದರ ಬಗ್ಗೆ ನಾನು ಅವರನ್ನು ಸಾರಿ ಕೇಳಿದೆ. 

                      ಲೂಯಿಯನ್ನು ತಿರುಗಾಡಿಸಲು ನಾನೇ ಕರೆದೊಯ್ಯಬೇಕಾಗಿತ್ತು, ಎರಡು ಮೂರು ಬಾರಿ ನಾನು ಕರೆದೊಯ್ಯಲು ಮಕ್ಕಳಲ್ಲಿ ಹೇಳಿದಾಗ ಎನೇನೋಸಬೂಬು ಹೇಳಿ ತಪ್ಪಿಸಿಕೊಂಡವವು. ತಿರುಗಾಡಲು ಕರೆದೊಯ್ಯದಿದ್ದರೆ ಅದೂ ನಮ್ಮ ಕುತ್ತಿಗೆಗೇ ಬರುತ್ತದೆ. ಒಂದೇ ವಾರದಲ್ಲಿ ಲೂಯಿಯ ಎಲ್ಲ ಸಂಜ್ಞಾ ಭಾಷೆಗಳನ್ನೂ ನಾವೆಲ್ಲರೂ ಕಲಿತುಕೊಂಡೆವು.ಮುಂಗಾಲಿನಲ್ಲಿ ಗೋಡೆ ಕೆರೆದರೆ ಅದಕ್ಕೆ ಟಾಯ್ಲೆಟ್ ಬಂತು ಎಂದರ್ಥ.ಅದು ಗೆಜ್ಜೆ ಶಬ್ದ ಮಾಡುತ್ತಾ ಮೇಲೆ ಹಾರಿದರೆ ಅದಕ್ಕೆ ಬೋರಾಗಿದೆ, ಹೊರಗಡೆ ತಿರುಗಾಡಬೇಕು ಎಂತರ್ಥ,ಹಾರಿ ಹಾರಿ ಮುಖ ಮುತ್ತಿಕ್ಕಲು ಬಂತೆಂದರೆ ಅದಕ್ಕೆ ತುಂಬಾ ಖುಶಿಯಾಯಿತೆಂದರ್ಥ, ತಾರಕದಲ್ಲಿ ಗಲಾಟೆ ಮಾಡಿದರೆ ಅದಕ್ಕೆ ಹಸಿವೆ ಆಗಿದೆ ಅಂತಲೇ.ನಾವು ವಾಕಿಂಗ್ ಹೋಗುವ ಸಮಯದಲ್ಲಿ ಅದು ಯಾವಾಗಲೂ ನಮ್ಮೊಡನಿರುತ್ತಿತ್ತು,ನಮ್ಮ ಜತೆ ಅದು ತುಂಬಾನೇ ಚೆನ್ನಾಗಿ ಹೊಂದಿಕೊಂಡಿತು, ನಮ್ಮ ಜತೆ ಈಗ ಬೇಕಾಬಿಟ್ಟಿ ಯಾರೂ ಮಾತನಾಡಲು ನಿಲ್ಲುತ್ತಿರಲಿಲ್ಲ ಲೂಯಿಯಿಂದಾಗಿ, ಯಾಕೆಂದರೆ ನಮಗಾಗದವರು(ಇದಿರಿಗಲ್ಲ, ಮಾನಸಿಕವಾಗಿ ತಲೆಬಿಸಿ ಮಾಡುವ ಜನರು) ಯಾರನ್ನೂ ಅದು ಹತ್ತಿರಬಿಡುತ್ತಲೇ ಇರಲಿಲ್ಲ, ಅದಕ್ಕೆ ಹೇಗೆ ಗೊತ್ತಾಗುತ್ತದೋ ಆ ದೇವರೇ ಬಲ್ಲ.

                     ಇನ್ನೊಂದು ಮುಖ್ಯವಾದ ವಿಷಯವೆಂದರೆ ಲೂಯಿಯ ಆರೋಗ್ಯದ ಬಗ್ಗೆ ಕಾಳಜಿಗಾಗಿ ಅವನನ್ನು ಡಾಕ್ಟರರಹತ್ತಿರ ಕೊಂಡೊಯ್ಯಲೇ ಬೇಕಾಗಿತ್ತು."ಗೊತ್ತಾ ನಿಮಗೆ?" ಡಾಕ್ಟರೆಂದರು"ಮನುಷ್ಯರ ಮಗುವಿಗೂ ನಾಯಿ ಮರಿಗೂ ಬೆಳೆಯುವಲ್ಲಿ ವ್ಯತ್ಯಾಸ? ೧:೧೨ ಅಂದರೆ ಮನುಷ್ಯರ ಮಗು ಹನ್ನೆರಡು ತಿಂಗಳು ಎಷ್ಟು ಬೆಳೆಯುತ್ತದೋ ಅಷ್ಟು ಬೆಳವಣಿಗೆ ನಾಯಿ ಮರಿ ಒಂದೇ ತಿಂಗಳಲ್ಲಿ ಪೂರೈಸುತ್ತದೆ.ಇನ್ನೊಂದು ವಿಷಯ ನೀವು ನೆನಪಿನಲ್ಲಿಡಬೇಕಾಗಿದ್ದುದು, ನಾಯಿಗೆ ನೀವು ಎಷ್ಟೇ ತಿಂಡಿ ಹಾಕಿ ಅದಕ್ಕೆ ತೃಪ್ತಿಯೆಂಬುದು ಇರಲ್ಲ, ಅದು ನನಗೆ ನಾಳೆಗೆ ತಿಂಡಿ ಸಿಗದಿದ್ದರೆ? ಎಂಬ ಚಿಂತೆಯಲ್ಲೇ ಯಾವಾಗಲೂ ಇರುತ್ತದೆ, ಅದಕ್ಕೆ ನೀವು ನೀವೇ ಅಂದಾಜು ಮಾಡಿ ಆಹಾರ ಹಾಕಬೇಕಾಗುತ್ತದೆ.ಮಾತನಾಡುತ್ತಾ ಅಡುತ್ತಾ ಡಾಕ್ಟರು ಲೂಯಿಯ ಬಾಯಿಗೆ ಬಾಯಿ ಕವಚವೊಂದನ್ನು ತೊಡಿಸಿದರು. "ಇದು ಯಾಕೆ ಡಾಕ್ಟರೇ ಲೂಯಿ ಯಾರಿಗೂ ಕಚ್ಚಲ್ಲವಲ್ಲ" ಎಂದರೆ, ಲೂಯಿ ಲೂಯಿಯೇ ಎಂದರು ಡಾಕ್ಟರು.ಲೂಯಿಯನ್ನು ಹಿಡಿದು ಮಲಗಿಸಿ ಚುಚ್ಚು ಮದ್ದು ಚುಚ್ಚಿಯೇ ಬಿಟ್ಟರು. ನನಗಂತೂ ಒಂದೇ ಬಾರಿಗೆ ಹೊಸ ಲೂಯಿಯನ್ನು ಕೊಳ್ಳುವಷ್ಟು ಬಿಲ್ಲು ತೆರಲೇ ಬೇಕಾಯಿತು.

                      ಲೂಯಿಯನ್ನು ನೋಡಿದಾಗಲೆಲ್ಲಾ ನನಗೆ ತಂದೆಯವರು ಹೇಳುತ್ತಿದ್ದಮಾತು ನೆನಪಿಗೆ ಬರುತ್ತದೆ. "ಋಣಾನುಬಂಧ ರೂಪೇಣಾಂ ಪಶು ಪತ್ನಿ ಸುತ ಆಲಯ".ಇದು ಎಲ್ಲಿಯದ್ದೋ ಇದಕ್ಕೂ ನಮಗೂ ಎಂತಹಾ ಸಂಬಂಧ? ಅದಕ್ಕೆ ಹಾಕಿದ ಅನ್ನ ಮಾತ್ರದ ಕೃತಜ್ಞತೆ ಇದಾಗಿರಲಿಕ್ಕಿಲ್ಲ.ಒಂದು ದಿನ ಲೂಯಿ ಒಂದು ವಿಚಿತ್ರ ಸ್ವರದಲ್ಲಿ ಕೂಗಿಕೊಂಡಾಗ, ಇವಳು ಗಾಬರಿಯಾಗಿ ಕಟ್ಟಿದ್ದ ಹಗ್ಗ ಬಿಚ್ಚಿದಳು. ಲೂಯಿ ಸೀದಾ ಅಡುಗೆ ಮನೆಗೆ ಓಡಿ ಅಲ್ಲಿ ಎಲ್ಲಾ ಕಡೆ ಮೂಸುತ್ತಾ ಪುನಃ ವಿಚಿತ್ರ ಧ್ವನಿ ಹೊರಡಿಸತೊಡಗಿತಂತೆ.ಇವಳು ಗಾಬರಿಯಾಗಿ ನನಗೆ ಫ಼ೋನಾಯಿಸಿದಳು. ನಾನು ಆಫ಼ೀಸಿನಿಂದ ಓಡಿ ಬಂದೆ, ಹುಡುಕಿ ನೋಡಿದಾಗ ಹಾವೊಂದು ಕಂಡು ಬಂತು. ಪ್ರಾಯಶಃ ಇಲಿಯನ್ನು ಅರಸಿ ಪೈಪಿನ ಮುಖಾಂತರ ಮೇಲೆ ಬಂದಿತ್ತದು, ಮತ್ತು ನಮ್ಮ ಲೂಯಿಯ ಸೂಕ್ಷ್ಮ ಗೃಹಿಕೆಗೆ ಸಿಕ್ಕಿ ಅದು ನಮಗೆ ಮುನ್ಸೂಚನೆ ನೀಡಿತು.ಅದು ನಮಗೆ ತಿಳಿಸದಿದ್ದರೆ? ..ನನ್ನವಳ ಲೂಯಿಯ ಬಗೆಗಿನ ಅಭಿಪ್ರಾಯ ಸ್ವಲ್ಪ ಸ್ವಲ್ಪವೇ ಬದಲಾಗುತ್ತಿದ್ದ ಹಾಗೆ ಕಂಡಿತು.
                      ಇನ್ನೊಂದು ಸಾರಿ ನಾವು ವಾರದ ಮಟ್ಟಿಗೆ ಊರಿಗೆ ಹೋದಾಗ ಮೂರ್ನಾಲ್ಕು ದಿನ ಅದು ಯಾರು ಏನು ಕೊಟ್ಟರೂ ತಿನ್ನದೇ, ನಮ್ಮ ಬಾಗಿಲ ಬಳಿಯಲ್ಲೇ ಕಣ್ಣೀರಿಡುತ್ತಾ ಕುಳಿತಿತ್ತಂತೆ. ನಾವು ವಾಪಾಸು ಬಂದಮೇಲೆ ಇದೆಲ್ಲಾ ಕೇಳಿದ ನಮಗೆ ಹೃದಯ ತುಂಬಿ ಬಂದರೆ ಲೂಯಿ ನಮ್ಮನ್ನೆಲ್ಲಾ ನೋಡಿ ತುಂಬಾನೇ ಸಂತಸ ಪಟ್ಟ.ಲೂಯಿಗೆ ನಮ್ಮ ಹಾಗೇ ಸಸ್ಯಾಹಾರ್ ಅಂದರೆ ತುಂಬಾ ಇಷ್ಟ. ಅದರಲ್ಲೂ ನಾನ್, ಐಸ್ ಕ್ರೀಮ್ ಎಂದರೆ ಪಂಚ ಪ್ರಾಣ.ನಾವು ಎಷ್ಟೇ ಅಡಗಿಸಿ ತಂದರೂ ಅವನಿಗೆ ತಿಳಿದು,ಅವ್ನಿಗೆ ಸಿಗುವವರೆಗೆ ಕಿರುಚಾಡುತ್ತಿರುತ್ತಾನೆ.ಮಕ್ಕಳಂತೂ ಅವನನ್ನು ತುಂಬಾನೇ ಹಚ್ಚಿಕೊಂಡಿದ್ದಾರೆ, ಆದರೆ ಅದು ಪ್ರೀತಿಗಷ್ಟೇ ಸೀಮಿತ.
                      ಹೀಗಿರುವಾಗ ಬಂದೆರಗಿದ ಎರಡು ತರಹದ ವಿಪತ್ತು ನನ್ನನ್ನು ದೀರ್ಘ ಚಿಂತೆಯಲ್ಲಿ ಮುಳುಗಿಸಿತು. ಮೊದಲನೆಯದು, ನಮ್ಮ ಈ ಹೊಸ ಸದಸ್ಯನ ಆಗಮನ ಜಾತಕ, ಕುಂಡಲಿಗಳನ್ನು ನಂಬುವ ಮನೆತನದವರಾದ ನಮ್ಮ ಮನೆಯವರಲ್ಲಿ,ನಡೆದು ಬಂದ ಹಿಂದಿನ ಅಚಾರದ ಪ್ರಕಾರ, ಹೊರಗಿನಿಂದ ಬಂದ ನಾಯಿತಿಥಿ ಮಾಡಿಸುತ್ತದೆ, ಬಂದ ಬೆಕ್ಕು ಮದುವೆ ಮಾಡಿಸುತ್ತೆ ಅಂತ ಪ್ರಚಾರವಿದ್ದು, ನನ್ನ ತಾಯಿಯಿಂದ ಅವಳ ಸೊಸೆ ಅರ್ಥಾತ್ ನನ್ನ ಧರ್ಮಪತ್ನಿಗೆ ಎಲ್ಲಿಂದಲೋ ಬಂದ ಈ ಲೂಯಿಯನ್ನು ಇಟ್ಟುಕೊಳ್ಳಲೇ ಬಾರದು ಅಂತ ಅಪ್ಪಣೆಯಾಯಿತು, ಅಲ್ಲದೇ ಇದಕ್ಕೆ ಇಂಬು ಕೊಡುವಂತೆ ನನ್ನ ಸಹ ಧರ್ಮಿಣಿಯ ತಾಯಿಯವರಿಂದ ಕೂಡಾ ಇದೇ ವಿಷಯ ರವಾನೆಯಾಗಿ, ಲೂಯಿಯ ಕೊರಳಿಗೆ ಯಮ ಪಾಶವಾಗಿ ಪರಿಣಮಿಸಿತು.ಜತೆಯಲ್ಲೇ ನನಗೆ ಬೆಂಗಳೂರಿಗೆ ವರ್ಗಾವಣೆಯಾದ ವಿಷಯವೂ ಬರಸಿಡಿಲಿನಂತೆ ಬಂದೊರಗಿತು.ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಡಿಮೆಯೆಂದರೆ ನಾಲ್ಕೈದು ತಿಂಗಳಾದರೂ ನಾನು ಒಬ್ಬನೇ ಬೆಂಗಳೂರಿನಲ್ಲಿರಬೇಕಾಗಿರುವುದರಿಂದ ಲೂಯಿಯ ಗತಿ? ಅವನು ನಮ್ಮನ್ನು ಎಷ್ಟು ಹೊಂದಿಕೊಂಡಿದ್ದಾನೆಂದರೆ ಮನೆಯವನೇ ಆಗಿದ್ದಾನೆ, ಆದರೆ ಗೃಹಮಂತ್ರಿ ಸುತರಾಂ ಒಪ್ಪಲಿಲ್ಲ, ಮನೆಯಲ್ಲಿ ಮೊದಲೇ ಇದ್ದ ಎರಡು ಪ್ರಾಣಿಗಳನ್ನೇ ತುಂಬಾ ಕಷ್ಟದಲ್ಲಿ ಸಾಕುತ್ತಿರುವಾಗ, ಇನ್ನೊಂದು ತಾಪತ್ರಯ ಕಟ್ಟಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಕಡಾಖಂಡಿತವಾಗಿ ಹೇಳಿಬಿಟ್ಟಳು.ಅದು ನಿಜವೂ ಕೂಡಾ. ನನ್ನ ವರ್ಗಾವಣೆಯ ಟೆನ್ಷನ್, ಮಕ್ಕಳ ಓದು,ಮನೆಯ ಉಸ್ತುವಾರಿ,ಸಾಗಾಟದ ಪ್ಯಾಕಿಂಗ್, ಇವೆಲ್ಲದರ ಜತೆ ಲೂಯಿಯ ಹೊಸತೊಂದು ಸಮಸ್ಯೆ ಬೇಡವೇ ಬೇಡ,ಎಂದುದದರಿಂದ ನಾನು ಬೆಂಗಳೂರಿಗೆ ಹೋಗುವುದರೊಳಗಾಗಿ ಲೂಯಿಯನ್ನು ಹೇಗಾದರೂ, ಎಲ್ಲಾದರೂ ಸರಿಯಾದ ಜಾಗದಲ್ಲಿ ಸೇರಿಸುವ ಹೊಸದೊಂದು ಜವಾಬ್ದಾರಿ ನನ್ನ ಹೆಗಲಿಗೆ ಜೋತು ಬಿದ್ದಿತು.

                    ಪ್ರತಿದಿನ ನನಗಂತೂ ಆಫ಼ೀಸಿನಲ್ಲಿ ಅದರದ್ದೇ ವಿಷಯ, ಲೂಯಿಯ ಲೀಲಾಮೃತ ಹೇಳಿ ಎಂದೂ ದಣಿವೆನ್ನಿಸಲಿಲ್ಲ, ನನ್ನ ಸೆಕ್ಷನ್ ಸಹೋದ್ಯೋಗಿ ಆಶಾಲತ ಎಲ್ಲಾ ವಿಷಯ ಕೇಳಿ ಲೂಯಿಯನ್ನು ಯಾರ ಹತ್ತಿರ ಬಿಟ್ಟರೆಒಳ್ಳೆಯದು ಎಂದು ಪ್ಲಾನ್ ಮಾಡುತ್ತಿದ್ದರು.ಅಗೊಮ್ಮೆ ಇದೆಲ್ಲಾ ಕೇಳುತ್ತಿದ್ದ ತ್ರಿವೇಣಿ ಬಾಯಿ ಬಂದು "ಲೂಯಿಯನ್ನು ನನಗೆ ಕೊಡಿಸಾರ್, ನಾನು ಬಡವಳು ನಿಜನನ್ನ ಮನೆಯಲ್ಲಿ ನಾನೂ ನನ್ನ ಮಗ ಇಬ್ಬರೇ ಇರುವುದು, ನೀವು ಲೂಯಿಯನ್ನ ನನಗೆ ಕೊಟ್ಟರೆ ಮೂರು ಜನರಾದ ಹಾಗೆ ಆಯ್ತು. ನನಗೂ ಕಳ್ಳ ಕಾಕರ ಭಯ ತಪ್ಪಿದ ಹಾಗೆ ಆಯ್ತು, ಆಲೋಚನೆ ಮಾಡಿ ಹೇಳಿ ಸಾರ್" ಎಂದಳು. ನೋಡೋಣ, ಆಲೋಚನೆ ಮಾಡಿ ಹೇಳ್ತೇನೆ" ಎಂದೆ. ನಿಜ ಹೇಳಬೇಕೆಂದರೆ ಲೂಯಿಯನ್ನು ಅವಳಿಗೆ ಕೊಡಲು ಆಗ ನನ್ನ ಮನಸ್ಸೊಪ್ಪಲಿಲ್ಲ.

                   ಮೊದಲು, ನನ್ನ ಖಾಸಾ ದೋಸ್ತ್ ಅಗಿದ್ದ ಪರಶುರಾಮನಲ್ಲಿ ಇದನ್ನು ಹೇಳಿದಾಗ ಆತ ಚುಟಕಿ ಹಾಕೋದ್ರಲ್ಲಿ ಅದನ್ನು ಬಗೆಹರಿಸಿ ಬಿಡುವೆ, ನಿನ್ನ ನಾಯಿಯನ್ನು ನಾನೇ ಸಾಕುತ್ತೇನೆ ಎಂದಂದು ತನ್ನ ಕಾರಿನಲ್ಲಿ ಕೂಡಲೇ ನನ್ನ ಮನೆಗೆ ಹೊರಟ.ಕಷ್ಟಪಟ್ಟು ಲೂಯಿಯನ್ನು ಹಿಡಿದು ಕೆಳತಂದೆ. ಅದನ್ನು ನೋಡಿದ ಪರಶು ರಾಮ ಗಾಬರಿಯಲ್ಲಿ " ನಾನೇನೋ ಇದನ್ನು ಸಣ್ಣ ಮರಿಯೆಂದುಕೊಂಡಿದ್ದೆ,ಇದು ದೊಡ್ಡ ನಾಯಿ" ಎಂದ. ನಾನು "ಇದು ದೊಡ್ಡದಲ್ಲ, ನೋಡಿ"ಎಂದು ಲೂಯಿಯನ್ನು ಎರಡೂ ಕೈಯ್ಯಲ್ಲಿಎತ್ತಿಕೊಂಡು (ಕುರಿಮರಿ ಎತ್ತುವ ಹಾಗೆ) ತೋರಿಸಿದೆ.ಲೂಯಿಗೇ ಇಷ್ಟವಾದ ಬಟರ್ ತುಂಡು ಕೊಟ್ಟು ಅವನಿಗೆ ಸ್ವಲ್ಪಾಭ್ಯಾಸ ಮಾಡಿಸಲು ಹೇಳಿದೆ, ಆತ ಕೊಟ್ಟ ಬಟರ್ ತಿಂದ ಲೂಯಿ ಅಷ್ಟು ಹೊತ್ತು ಅವನ ಆಜ್ಞಾಕಾರಿಯಾದ. ಆದರೆ ಆತ ಯಾವಾಗ ಇವನನ್ನು ಎತ್ತಿಕೊಳ್ಳಲು ಹೋದನೋ ತನ್ನ ಎಲ್ಲಾ ಹಲ್ಲುಗಳನ್ನೂ ಒಮ್ಮೆಲೇ ವಿಚಿತ್ರ ರೀತಿಯಲ್ಲಿ ತೋರಿಸಿಬಿಟ್ಟ.ಲೂಯಿಯ ತೆರೆದ ಬಾಯಿ ನೋಡಿದ ಪರಶುರಾಮ ಇಲಿಯಮರಿಯಾಗಿಬಿಟ್ಟ. ಹೇಗೆ ಬಂದಿದ್ದನೋ ಅವನ ಮಾರುತಿ ಕಾರಿನಲ್ಲಿ ಹಾಗೆಯೇ ವಾಪಾಸು ಹೋದ, ಸುತರಾಮ್ ಒಪ್ಪದೇ, ಆಫ಼ೀಸಿನಲ್ಲಿ ನನ್ನ ಬಂಗ್ಲೆಯಲ್ಲಿ ತುಂಬ ಚೆನ್ನಗಿ ಇರ್ತಾನೆ ಅವ, ಅವನಿಗೆ ಏನೂ ಕಮ್ಮಿಯಾಗದು, ನೋಡು ನಿನಗೆ ನಾನು ನಾಯಿ ಸಾಕುವುದು ಹೇಗೆ ಅಂತ ತೋರಿಸಿ ಕೊಡ್ತೇನೆ, ಎಂದೆಲ್ಲಾ ಹೇಳಿದ್ದ, ಆದರೆ ಈಗ ಹಾಗೆಯೇ ಹೊರಟು ಹೋಗಿದ್ದ. ನನ್ನ ಮೊದಲನೆಯ ಪ್ರಯತ್ನ ಫ಼ಲಿಸಲಿಲ್ಲ. ಮರನೆಯ ದಿನ ಈತ ಆಫ಼ೀಸಿನಲ್ಲಿ ಏನು ಹೇಳಿದನೋ ಮತ್ತಿಬ್ಬರುದಿನಾ ನನ್ನ ಮುಖ ನೋಡದೇ, ನನ್ನ ಹತ್ತಿರ ಮಾತನಾಡದಿದ್ದರೆ ಬೆಳಗೇ ಆಗಲ್ಲ ಅಂತಿದ್ದವರು, ಆ ದಿನದಿಂದ ನನ್ನ ಹತ್ತಿರವೂ ಬರಲಿಲ್ಲ.

                     ಇನ್ನು ಬೇರೆ ಸೆಕ್ಷನಿನಲ್ಲಿದ್ದ ವೀಣಾ ರಾಣಿಯನ್ನು ಸಂಪರ್ಕಿಸಿದೆ. ಇವಳೂ ನಾನೂ ಮೊದಲೊಮ್ಮೆ ಒಟ್ಟಿಗೆ ಕೆಲಸ ಮಾಡಿದವರು,  ಹಿಂದಿನ ಒಂದು ವಾರದಿಂದ ಅವಳು ರಜೆಯಲ್ಲಿದ್ದಳು.ನನ್ನ ಸಂಸಾರದ ಹಾಗೇ ಅವಳದ್ದೂ ಸಣ್ಣ ಸಂಸಾರವೇ. ಲೂಯಿಯ ವಿಷಯ ನನ್ನಿಂದ ಕೇಳಿ, ಅದರ ವಿಡಿಯೋ ಚಿತ್ರವನ್ನು ನನ್ನ ಮೊಬಾಯಿಲ್ ನಲ್ಲಿ ನೋಡಿ, ಇವಳು ಆಸೆ ಪಟ್ಟಳು.ಅವಳ ಯಜಮಾನರು ಪ್ರೈವೇಟ್ ಕಂಪೆನಿಯಲ್ಲಿದ್ದಾರೆ. "ನಿಜ ಹೇಳಬೇಕೆಂದರೆ ನಮಗೂ ಇಂತಹಾ ಒಂದು ಒಳ್ಳೆಯ ಬುದ್ದಿವಂತ ನಾಯಿಯ ಅವಶ್ಯಕಥೆ ತುಂಬಾ ದಿವಸಗಳಿಂದ ಇತ್ತು, ದಿನದಲ್ಲಿಯಾದರೆ ನಮ್ಮ ಮನೆಯಲ್ಲಿ ನನ್ನ ಮುದಿ ಅತ್ತೆ ಮಾತ್ರ ಇರುತ್ತಾರೆ, ಕಾಂಪೌಂಡಿನ ಒಳಗೆ ನಾಯಿ ಇದ್ದರೆ ನಮಗೂ ಒಂದು ಧೈರ್ಯ. ನಾಳೆನೇ ನನ್ನ ಯಜಮಾನರೊಂದಿಗೆನಮ್ಮ ಹೊಸ ಸ್ಯಾಂಟ್ರೋ ಕಾರಲ್ಲಿ ಬಂದು ನಿಮ್ಮ ನಾಯಿಯನ್ನು ಕೊಂಡೊಯ್ಯುತ್ತೇವೆ" ಎಂದಳು. ನಾನು ಪರಶು ರಾಮನ ವಿಷಯ ಸೂಚ್ಯವಾಗಿ ತಿಳಿಸಿದೆ, ಅದಕ್ಕವಳು "ಹಾಗೆ ಎಲ್ಲರಿಗೂ ನಾಯಿ ಸಾಕಲು ಬರೋದಿಲ್ಲ ಇವರೇ, ನೋಡಿ, ನಾನು ನಿಮ್ಮ ನಾಯಿಯನ್ನು ಹೇಗೆ ಸಾಕ್ತೇನೆ, ನಿಮ್ಮ ನೆನಪೂ ಅದಕ್ಕೆ ಬರಲಿಕ್ಕಿಲ್ಲ" ಎನ್ನುತ್ತಾ ತನ್ನ ಜಂಬದ ಚೀಲ ತೆಗೆದುಕೊಂಡು ಒಂದು ರೀತಿಯಲ್ಲಿ ತಿರುವುತ್ತಾ ಹೊರಟು ಹೋದಳು ಮಹಾರಾಯಿತಿ. ನಾನು ನಿಜವಾಗಿಯೂ ಸಂತಸ ಪಟ್ಟೆ.

                    ಅಂತೂ ಸಂಡೇ ಹೇಳಿದಂತೆ ವೀಣಾ ರಾಣಿ ಮತ್ತು ಅವಳ ಯಜಮಾನರೂ ತಮ್ಮ ಸಾಂಟ್ರೋ ಕಾರಲ್ಲಿ ಬಂದರು ಸರಿ ಸುಮಾರು ಆರು ಘಂಟೆ ತಡವಾಗಿ, ನಾನು ಅವರಿಗಾಗಿ ಕಾದೂ ಕಾದೂ ಸುಸ್ತಾಗಿ ಮಾರ್ಕೇಟಿಗೆ ಹೋಗಿ ನಾಲ್ಕು ಘಂಟೆ ಶಾಪಿಂಗ್ ಮಾಡಿ ಮಧ್ಯಾಹ್ನ ಊಟ ಮುಗಿಸಿದರೂ ಅವರ ಸುಳಿವಿರದೇ ಬೇರೆ ಕೆಲಸಕ್ಕಾಗಿ ಹೋಗಿದ್ದೆ.ಎಂದಿನ ಹಾಗೆ ಕಾಫ಼ೀ ಲಘು ತಿಂಡಿ ಕೊಟ್ಟ ನನ್ನವಳು ಲೂಯಿಯನ್ನು ಅವರಿಗೆ ಪರಿಚಯಿಸಿಕೊಟ್ಟಳು.ನಿಜವಾದ ಬೀಳ್ಕೊಡುಗೆಯ ಸಮಯ ಬಂತು. ಈಸಾರಿ ನಾನೂ ಅವಳೂ ಒಂದು ಪ್ಲಾನ್ ಮಾಡಿದ್ದೆವು. ಅದರಂತೆ ಲೂಯಿಯನ್ನು ನನ್ನವಳು ಹೊರ ಕೆಳ ತಂದು ಅವನ ಪ್ರೀತಿಯ ತಿಂಡಿಯನ್ನು ಕೊಡುತ್ತಾ ತಾನು ಕಾರಲ್ಲಿ ಬಂದು ಕೂತಳು, ಅವಳ ಜತೆ ಲೂಯಿ ತಾನೂ ಹತ್ತಿ ಕುಳಿತಿತು, ಅಷ್ಟರಲ್ಲಿ ವೀಣಾ ರಾಣಿ ಯಜಮಾನರು ತಮ್ಮಲ್ಲಿದ್ದ ( ನಾವು ಮೊದಲೇ ಕೊಟ್ಟಿದ್ದ) ಲೂಯಿ ಬಿಸ್ಕಿಟ್ ಕೊಟ್ಟಾಗ ಆತ ಅದನ್ನು ಖುಷಿಯಲ್ಲಿ ಸವಿಯುತ್ತ ಕುಳಿತ, ನನ್ನವಳು ಪಕ್ಕದಿಂದ ಇಳಿದದ್ದೂ ಕಾರು ಹೊರಟಿದ್ದೂ ಅವನಿಗೆ ತಿಳಿಯಲೇ ಇಲ್ಲ.ನಾನು  ಮನೆಗೆ ಬಂದಾಗ ವಿಷಯವೆಲ್ಲ ತಿಳಿದದ್ದು. ಆದರೆ ಕೊನೆಯಲ್ಲಿ ಅವಳಂದ ಒಂದು ಮಾತು ನನ್ನನ್ನು ಅಲ್ಲಾಡಿಸಿಬಿಟ್ಟಿತು, ಕಾರು ತಿರುವಿನಲ್ಲಿ ಮರೆಯಾಗುವ ಮುನ್ನ ಲೂಯಿ ಘಾಬರಿಯಿಂದೆಂಬಂತೆ ತನ್ನ ಮುಂದಿನ ಕಾಲಲ್ಲಿ ಕಾರಿನ ಹಿಂದಿನ ಗ್ಲಾಸನ್ನು ಕೆರೆಯುತ್ತಲಿದ್ದನಂತೆ. ಖುಷಿಯಾದರೂ ಯಾಕೋ ಮನದಲ್ಲಿ ದುಗುಡ ಮನೆ ಮಾಡಿತ್ತು.

                    ಸೋಮವಾರ ಅಫ಼ೀಸಿಗೆ ತಲುಪಿದ ನಾನು ಎಲ್ಲಕ್ಕಿಂತ ಮೊದಲು ವೀಣಾ ರಾಣಿಯನ್ನು ಭೇಟಿಯಾದೆ. ಅವಳು ಅರ್ಧ ಘಂಟೆಯಲ್ಲಿ ತಾನೂ ತನ್ನ ಯಜಮಾನರೂ ಲೂಯಿಯನ್ನು ಹೇಗೆ ಮೋಸ ಮಾಡಿ ತಮ್ಮ ಮನೆಗೆ ಕರೆದುಕೊಂಡು ಹೋದೆವು, ಹೇಗೆ ಅದನ್ನು ಮನೆಯಲ್ಲಿ ಕಟ್ಟಿ ಹಾಕಿದೆವು,ರಾತ್ರೆ ಹೇಗೆ ಗಲಾಟೆ ಮಾಡಿ ನಮ್ಮ ನಿದ್ರೆಗೆಡಿಸಿದ,ಎಂಬುದನ್ನು ವಿವರಿಸುತ್ತ,ನಿಮಗಿಂತ ಒಳ್ಳೆಯದಾಗಿ ಸಾಕುತ್ತಿದ್ದೇವೆ, ಎಂಬುದನ್ನು ಹೇಳಲು ಮರೆಯಲಿಲ್ಲ. ಇದನ್ನು ಮನೆಯಲ್ಲಿ ತಿಳಿಸಿದಾಗ, ಸರಿ ಆತ ಅಲ್ಲಾದರೂ ಸುಖವಾಗಿರಲಿ ಎಂದಳು ನನ್ನ ಯಜಮಾನತಿ.
                      ಇದಾಗಿ ಎರಡು ದಿನ ಕಳೆದಿರಬಹುದು, ನಮ್ಮ ಬೆಳಗಿನ ತಿಂಡಿಯ ಸಮಯ, ಎಲ್ಲೋ ಕ್ಷೀಣವಾಗಿ ಗೆಜ್ಜೆಯ ಶಬ್ದ ಕೇಳಿಸಿತು. ಮುಚ್ಚಿದ ಬಾಗಿಲು ನೋಡಿ ಇದು ನನ್ನ ಭ್ರಮೆಯೇನೋ ಎಂದುಕೊಳ್ಳುವಷ್ಟರಲ್ಲಿ ಇನ್ನೊಮ್ಮೆ ಜೋರಾದ ಗೆಜ್ಜೆಯ ಸದ್ದೂ ಗಲಾಟೆಯೂ ಕೇಳಿಸಿತು,ನಾನು ತಡೆಯದೇ ಬಾಗಿಲು ಒಮ್ಮೆಲೇ ತೆರೆದೆ, ಏನಾಯಿತೆಂದು ಅರಿವಾಗುವಷ್ಟರಲ್ಲಿ ನನ್ನಮೈಮೇಲೆಯೇ ಆತ ಹಾರಿದ್ದ, ನಾನು ಕೆಳ ಬಗ್ಗಿದರೆ ಆತನನ್ನ ಮುಖವೆಲ್ಲಾ ತನ್ನ ನಾಲಿಗೆಯಿಂದ ಒದ್ದೆ ಮಾಡಿ ಬಿಟ್ಟ.ಎರಡು ಕೈಯಲ್ಲಿ ಆತನನ್ನೆತ್ತಿಕೊಂಡು ಸಂತೈಸಿದೆ, ಕಂಪಿಸುತ್ತಿದ್ದ ಆತ ತುಂಬಾ ದೂರದಿಂದ ಓಡಿ ಬಂದವರ ಹಾಗೆ ಉಸಿರು ಬಿಡುತ್ತಿದ್ದ, ಪಾದವೆಲ್ಲಾ ರಕ್ತಮಯ, ಅವನನ್ನು ಸುಶ್ರೂಷೆ ಮಾಡಿ ತಿಂಡಿ ತಿನ್ನಿಸಿ ನಾನು ಆಫ಼ೀಸಿಗೆ ನಡೆದೆ.
                    ವೀಣಾರಾಣಿ ನಿಮ್ಮ ನಾಯಿ ಹಾಗೆ ಹೀಗೆ ಎಂತೆಲ್ಲ ಲೂಯಿ ಮಾಡಿದ ಕಾರುಭಾರವನ್ನು ಸಾವಿರದೊಂದು ತಪ್ಪನ್ನಾಗಿ ಮಾಡಿ ಬೈದಳು.ಅದಕ್ಕೆ ತಾನು ಕಾರಲ್ಲೇ ತಂದು ಮನೆ ಬಾಗಿಲಿಗೆ ಬಿಟ್ಟೆ ಎಂದಳು, ಲೂಯಿಯ ಕಾಲಿನ ರಕ್ತ ಸತ್ಯ ಹೇಳುತ್ತಿತ್ತು. "ಸರಿ ಬಿಡಿ, ಎಲ್ಲಾ ಪ್ರಾಣಿಗಳೂ ಎಲ್ಲರ ಜತೆಯೂ ಹೊಂದಿಕೊಳ್ಳಲಾರವು" ಎಂದೆ."ಅದಕ್ಕೆ ನಿಮ್ಮ ನಾಯಿ ನಿಮ್ಮ ಜತೆಯೇ ಸರಿ, ಅಲೇ ಇರಲಿ ಬಿಡಿ" ಎಂದಳು.
                  ಅದೇ ದಿನ ಸಂಜೆ ತ್ರಿವೇಣಿ ಬಾಯಿ ಪುನಃ ನನ್ನ ಹತ್ತಿರ ಬಂದಳು." ಸಾರ್ ದಯವಿಟ್ಟು ನನ್ನ ಹತ್ತಿರ ಲೂಯಿಯನ್ನು ಬಿಡಿ,ನಾನೂ ನನ್ನ ಮಗನೂ ಅದನ್ನು ಚೆನ್ನಾಗಿ ನೋಡಿಕೊಳುತ್ತೇವೆ, ಅವನಿಗೂ ಪ್ರಾಣಿಯೆಂದರೆ ತುಂಬಾ ಇಷ್ಟ, ಈಗಲೇ ಲೂಯಿ ಮನೆಗೆ ಬಂದರೆ ಏನೆಲ್ಲಾ ತರಬೇಕು, ಮಾಡಬೇಕು ಎಂತ ಪಟ್ಟಿ ಮಾಡಿ ಇಟ್ಟಿದ್ದಾನೆ ಆತ" ಎಂದಳು. ನಾನೆಂದೆ" ಅಮ್ಮಾ ನನ್ನ ಲೂಯಿ ಒಂದು ಪ್ರಾಣಿ ಅಲ್ಲ, ಅದರ ಅರಿವಳಿಕೆ ಯಾವುದೇ ಮನುಷ್ಯರಿಗಿಂತ ಕಡಿಮೆ ಇಲ್ಲ,ಅದು ಈಗಾಗಲೇ ನನಗೆ ಮನವರಿಕೆಯಾಗಿದೆ, ನಿನಗೆ ಅಷ್ಟು ಇಷ್ಟ ಆದರೆ, ಸ್ವಲ್ಪ ದಿನ ಇಟ್ಟುಕೊಂಡು ನೋಡು ಆತ ಅಲ್ಲಿ ಇದ್ದರೆ ನನಗೇನೂ ಅಭ್ಯಂತರವಿಲ್ಲ" ಎಂದೆ."ಹಾಗಾದರೆ ಮಾರನೆಯ ದಿನವೇ ತಾನು ಬರುತ್ತೇನೆ" ಎಂದಳು ತ್ರಿವೇಣಿ ಬಾಯಿಎಲ್ಲಿಲ್ಲದ ಖುಶಿಯಿಂದ, ಅಲ್ಲಿ ಸಂತಸ ಜಿನುಗುತ್ತಿತ್ತು.
                  ಆ ದಿನ ಸಂಜೆ ಸಂಸಾರ ಸಮೇತ (ಅಂದರೆ ಲೂಯಿಯನ್ನೊಳಗೊಂಡು ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ?) ಹತ್ತಿರದ ಪಾರ್ಕ್ ನಲ್ಲಿ ತುಂಬಾನೇ ಸಂತಸದಿಂದ ಕಾಲ ಕಳೆದೆವು.ನಾನು ಲೂಯಿಯ ಮುಖವನ್ನು ಎರಡೂ ಕೈಯಲ್ಲಿ ಹಿಡಿದು ಮುದ್ದಿಸುತ್ತಾ ಹೇಳಿದೆ." ನೋಡಯ್ಯಾ ಲೂಯಿ,ನಮ್ಮ ನಿನ್ನ ಋಣ ಇನ್ನೆಷ್ಟು ದಿನವೋ ಗೊತ್ತಿಲ್ಲ,ನಾನೂ ಬೆಂಗಳೂರಿಗೆ ಹೋದರೆ ನಿನ್ನನ್ನು ಸುತ್ತಾಡಿಸಲು ಯಜಮಾನತಿಯಿಂದಂತೂ ಆಗಲಿಕ್ಕಿಲ್ಲ, ಮಕ್ಕಳು ಅವರ ಕೆಲ್ಸ ಮಾಡಲೂ ಜನ ಬೇಕೆನ್ನುತ್ತಾರೆ, ಆಚೀಚೆಯ ಮನೆಯವರನ್ನು ನೀನು ಹೆದರಿಸುತ್ತಾ ಇರುವೆ, ನಿನ್ನ ಮೊದಲಿನ ಯಜಮಾನರ ಪತ್ತೆಯೇ ಇಲ್ಲ, ಹೀಗಿರುವಾಗ ನಿನ್ನ ಭವಿಷ್ಯದ ಬಗ್ಗೆ ಚಿಂತೆಯಾಗುತ್ತಿದೆ, ನೋಡು ನಾಳೆ ನಿನ್ನನ್ನು ಕರೆದೊಯ್ಯಲು ಹೊಸ ಯಜಮಾನತಿಯೊಬ್ಬಳು ಬರುತ್ತಿದ್ದಾಳೆ, ಅವಳ ಹತ್ತಿರ ಹಣ ಬಂಗ್ಲೆ ಕಾರು ಇಲ್ಲ, ಅದಿದ್ದವರೊಟ್ಟಿಗೆ ನಿನಗೆ ಸರಿ ಬರಲ್ಲ, ನಿನ್ನನ್ನು ಅವಳು ಪೀತಿಯಿಂದ ನೋಡಿಕೊಂಡಾಳು ಎಂಬ ನಂಬಿಕೆ ನನಗಿದೆ, ಮತ್ತೆ ಇದೆಲ್ಲಾ ಕೆಲವೇ ತಿಂಗಳು ಮಾತ್ರ, ಇನ್ನು ನಿನ್ನ ಇಷ್ಟ" ಎಂದೆ. ನನ್ನ ಮಾತು ಅರ್ಥವಾಯಿತೋ ಎಂಬಂತೆ ಲೂಯಿ ನನ್ನ ಮುಖ ನೆಕ್ಕಿದ,ಅವನ ಮೈದದವಿ ಅಪ್ಪಿಕೊಂಡೆ, ನಮ್ಮೆಲ್ಲರ ಕಣ್ಣುಗಳೂ ತೇವಗೊಂಡವು

######

PHOTO: Internet