Friday, March 27, 2015

ಗುರುತು ಹಿಡಿಯುವ ಪ್ರಕರಣಗಳು



ಗೋಪು ಅಲ್ಲವಾ..? ಕಂಡ್ಯಾ ಹೆಂಗ್ ಗುರುತ್ ಹಿಡ್ದ್ ಬಿಟ್ಟೆ..?
ಆತ ಅಂದರು. ಹಾಗೆ ಮುಂದುವರಿದು ನಾನ್ ಯಾರ್ ಹೇಳ್ ನೋಡುವಾ ಅಂದು ಬಿಟ್ಟರು.
ಪಕ್ಕದಲ್ಲಿಯೇ ಕುಳಿತ ಅಮ್ಮನ ತಮ್ಮನ ಮುಖ ನೋಡಿದೆ. ಉಹೂಂ ಅವರಿಂದ ಯಾವ ಸುಳಿವು ಸಿಗಲಿಲ್ಲ ಇವರು ಯಾರಿರಬಹುದು ಅಂತ.
ಸನ್ನಿವೇಶ ಅರ್ಥೈಸಿಕೊಳ್ಳಿ, ಮಧ್ಯಾಹ್ನ ಜಾರಿ ಹೋಗುವ ಮಟ ಮಟ ಸಮಯ. ಆಗಷ್ಟೇ ಹೊರಗಿನ ಬಿಸಿಲಿನ ಜಳ ಕುಡಿದುಡಿದು ಸಾಕಾಗಿ ಬಸವಳಿದು ಬಂದಿದ್ದೀರಾ..ಬಿಸಿಲಿನ ಕಾರಣ ಮನ ಮತ್ತು ಅಕ್ಷಿ ಎರಡು ಮಂಕಾಗಿರುವವು. ಮನೆಯೊಳಗೆ ಹೊಕ್ಕ ಕೂಡಲೇ ಈ ರೀತಿಯ ಪದಪುಂಜಗಳ ಧ್ವನಿ ನಿಮ್ಮನ್ನ ಅಟ್ಯಾಕ್ ಮಾಡಿದರೆ ಮೊದಲು ಎಚ್ಚೆತ್ತು ಕೊಳ್ಳುವುದು ಯಾರು ಹೇಳಬಲ್ಲಿರಾ..? ನೀವೋ ನಿಮ್ಮ ನೆನಪೋ ಆಥವಾ ಈ ಗುರುತು ಹಿಡಿಯೋ ಪ್ರ..ಪ್ರಕ್ರಿಯೆಯೋ..?

ಹ್ಯಾಗೆ ಸಿಕ್ಕುತ್ತೆ ಇಷ್ಟು ವರ್ಷಗಳು ಊರಿಂದ ಹೊರಗಿದ್ದು ಬಂದ ಬಳಿಕ.
ನನ್ನ ಮನಸ್ಸಿಗೇ ಸವಾಲು ಇದು. ಇದನ್ನ ಹೇಗಾದರೂ ಮಾಡಿ ಗೆಲ್ಲಲೇ ಬೇಕೆಂಬ ನಿರ್ಧಾರ ತಕೊಂಡೆ. ಮನ ಇನ್ನಷ್ಟು ಕ್ಲೂ ಹುಡುಕಲೂ ಸಜ್ಜಾಯ್ತು.
ನನ್ನ ಜತೆಗೇ ಬಂದ ನನ್ನ ಮಗನನ್ನು ಮುದ್ದು ಮಾಡತೊಡಗಿದರವರು ಬಲಾತ್ಕಾರವಾಗಿ. ಆತ ಕೊಸರಾಡಿದರೂ ಬಿಡದೇ. ಮಧ್ಯೆ ಮಧ್ಯೆ ಬಾಯಿಂದ ಹೊರ ಬಿದ್ದವು ನನ್ನ ಗೆಲಿಸುವಂತಹಾ ಮುತ್ತಿನಂತಹಾ ಮಾತುಗಳು
ಸಣ್ಣಿಪ್ಪತ್ತಿಗೆ ನಿನ್ನ ಅಪ್ಪನಿಗ್ ಕಲ್ಸದ್ ನಾನೇ....
ಅದೊಂದು ಸಂಜ್ಞೆ ನನಗೆ. ಥಟ್ಟನೆ ಹೊಳೆಯಿತು ಇವರು ನಂಗ್ ಕಲಿಸಿದ ಶೆಟ್ರು ಮಾಶ್ತ್ರು.
ಗೆದ್ದೆನೆಂಬ ನಗೆಯಲ್ಲಿ ಹೇಳಿದೆ ನೀವು ಹೇಗೆ ಗುರ್ತ ಹಿಡಿದಿರಿ ಸರ್ ನಾನು ಬದಲಾಗಲಿಲ್ಲವಲ್ಲ..? ನಕ್ಕರು ಅವರು, ನಿನ್ನ ಮಗನೂ ನಿನ್ನ ಹಾಗೇ ಇದ್ದಾನೆ.

ಆದರೆ ಈ ನನ್ನ ಗುರ್ತು ಹಿಡಿಯೋ ಬುದ್ದಿ ಹೀಗೆ ಸದಾ ಕಾಲ ನನಗೆ ಸಹಾಯ ಮಾಡುವುದಿಲ್ಲ ಬದಲು ಕೆಲವೊಮ್ಮೆ ಸತ್ಯಾ ನಾಶ್ ಕೂಡಾ ಮಾಡುತ್ತದೆ, ನಮ್ಮ ಮರ್ಯಾದೆಯ ಚಿಂದಿ ಎಬ್ಬಿಸಿ. ಇಂಗು ತಿಂದ ಮಂಗನಂತೆ ಆಗುವುದೂ ಉಂಟು.
ನನ್ನಮದುವೆಯಲ್ಲಿ ಅದೇ ಆಗಿತ್ತು.
ಮದುವೆ ಮುಗಿದು ನವ ವಧೂವರರು ಕುಳಿತಿದ್ದಾರೆ ಆಗ ಬಂದ ಒಬ್ಬರು ನನ್ನ ಬಳಿ ನನ ಪರಿಚಯ ಮಾಡಿ ಕೊಡೋ ನಿನ್ನ ಹೆಂಡತಿಗೆ ಅಂತ ದಂಬಾಲು ಬಿದ್ದರು. ಹತ್ತಿರದಲ್ಲೆಲ್ಲೂ ಅಪ್ಪ ಅಮ್ಮ ಹೋಗಲಿ ಅಣ್ಣ ತಮ್ಮ ಉಹುಂ ಯಾರೂ ಇರಲಿಲ್ಲ ಏನು ಮಾಡೊದು..? ನಾನೇ ವರ್ಶಕ್ಕೊಮ್ಮೆಯೋ ಎರಡು ವರ್ಶಕ್ಕೋ ನಮ್ಮ ಮನೆಗೇ ಅತಿಥಿಯಾಗಿ ಬರುವವ, ನನ್ನ ಬಳಿ ಹೆಂಡತಿಗೆ ತನ್ನನ್ನು ಪರಿಚಯ ಮಾಡಿ ಕೊಡು ಅಂದರೆ..... ನನ್ನ ಇಡೀ ಮನಸ್ಸನ್ನು ಪರ ಪರ ಕೆರೆದರೂ ಪ್ರಯೋಜನ ಆಗಲೇ ಇಲ್ಲ... ಹೇಗೋ ಅಡಿಗೆ ಬಿದ್ದರೂ ಮೀಸೆ ಮೇಲೆ ಅಂತ ಹೇಗೇಗೋ ಆ ಪ್ರಸಂಗ ಮುಗಿಸಿದೆನೆನ್ನಿ.
ಈಗಲೂ ತಮಾಷೆ ಮಾಡುತ್ತಿರುತ್ತಾರೆ ನನ್ನ ಮನೆಯವರು.

ನನ್ನೊಬ್ಬ ಹಳೇ ಕ್ಲಾಸ್ ಮೆಟ್ಟು ಆಲ್ಲಲ್ಲ ಕ್ಲಾಸಿನ ಹಳೇ ಸ್ನೇಹಿತ ಮೊದಲೊಮ್ಮೆ ನೀನು ನನ್ನೆದುರಿಗೆ ನಾಲ್ಕೇ ನಾಲ್ಕು ಹೆಜ್ಜೆ ನಡೆದರೂ ಗುರುತು ಹಿಡಿದು ಬಿಡುತ್ತೇನೆ ಅಂತ ಬಡಾಯಿ ಕೊಚ್ಚುತ್ತಿದ್ದ. ಕಳೆದ ಸಾರಿ ಊರಿಗೆ ಹೋದಾಗ ಗುರ್ತ ಹಿಡಿಯುತ್ತಾನಾ ಅಂತ ಅವನ ಅಂಗಡಿ ಇದಿರು ನಿಂತು ಇಪ್ಪತ್ತು ಅಲ್ಲಲ್ಲ ನೂರು ಹೆಜ್ಜೆ ಠಳಾಯಿಸಿದರೂ ಪ್ರಾಣಿಗೆ ಗೊತ್ತಾಗಲೇ ಇಲ್ಲ. ಜತೆಗೇ ಇದ್ದ ನನ್ನ ಧರ್ಮ ಪತ್ನಿಯವರೂ ನಗುತ್ತಿದ್ದರು. ಬದಲು ಆ ಪ್ರಾಣಿಯೇ ನನಗೆ ’ಯಾಕೆ ಆಗಿನಿಂದ ನೋಡುತ್ತಿದ್ದೇನೆ ಆಚೆ ಈಚೆ ತಿರುಗಾಡುತ್ತಿದ್ದೀರಲ್ಲಾ ಏನು? ಬಾತ್ ರೂಮಿಗೆ ಹೋಗಲಿಕ್ಕಿತ್ತಾ..? ಎನ್ನಬೇಕೇ.
ಕೊನೆಗೆ ನಾನೇ ನನ್ನ ಪರಿಚಯ ಮಾಡಿಕೊಂಡೆ. ನಕ್ಕೂ ನಕ್ಕೂ ಸುಸ್ತಾದೆವು ಮೊದಲಿನದೆಲ್ಲಾನೆನಪಿಸಿಕೊಂಡು, ಯಾಕಯ್ಯಾ ಗುರುತು ಹಿಡಿಯಲಿಲ್ಲ ಅಂದ್ರೆ ಹೋಗಾ ನೀನು ಸೈನ್ಯಕ್ಕೆ ಸೇರಿಯೇ ನಿನ್ನ ನಡೆಯನ್ನೂ ಬದಲಿಸಿಕೊಂಡೆ ಅನ್ನಬೇಕೆ?

ಅಗಿನ್ನೂ ನಮ್ಮ ಮದುವೆ ನಿಶ್ಚಯವಾಗಿತ್ತಷ್ಟೆ. ನನಗೂ ನನ್ನವಳಿಗೂ -ಪ್ರೇಮ ಪತ್ರಗಳ ಪುಂಖಾನು ಪುಂಖ ಶೃಂಖಲೆಗಳೇ ನಮ್ಮ- ದೈಹಿಕ ದೂರವನ್ನೂ ಮಾನಸಿಕವಾಗಿ ಹತ್ತಿರ ಮಾಡುತ್ತಿದ್ದ ಕಾಲವದು. ನನ್ನವಳು ನನ್ನ ನಾನು ನನ್ನವಳ ಭಾವಚಿತ್ರಗಳನ್ನೇ ನೋಡುತ್ತಾ ವಿರಹದ ದಳ್ಳುರಿಯನ್ನು ಶಮನಗೊಳಿಸಿಕೊಳ್ಳುತ್ತಿದ್ದೆವು. ಅಂದರೆ ಆಗ ನಾನು ಕಾಶ್ಮೀರದಲ್ಲಿದ್ದೆ ನನ್ನವಳು ಕಾಸರಗೋಡಿನಲ್ಲಿ. ಪುಟಗಟ್ಟಳೆ ನನ್ನವಳು ಬರೆಯುತ್ತಿದ್ದ ಪ್ರೇಮ ಪತ್ರಗಳ ಸಂಖ್ಯೆಯನ್ನೂ ಬರ ಹೋಗುತ್ತಿರುವ ಅಂಚೆಗಳನ್ನೂ ನೋಡಿ ಅವಳ ತಮ್ಮ, ಭಾವ ನಿನ್ನ ಪತ್ರ ಓದಲಿಕ್ಕಿಲ್ಲ ಕಣೇ ಅನ್ನುತ್ತಿದ್ದನಂತೆ, ಅದಿರಲಿ.
ಅಲ್ಲಿ ನನ್ನ ಗೆಳೆಯರೂ ಸಹಾ ಅವಳ ಭಾವಚಿತ್ರವನ್ನೂ ನೋಡಿ ನಿಮ್ಮ ಜೋಡಿ ಮೇಡ್ ಫಾರ್ ಈಚ್ ಅದರ್ ಕಣೋ ಅನ್ನುತ್ತಾ ಸಿನೇಮಾ, ಕಾಫೀ .ತಿಂಡಿಗಳನ್ನೆಲ್ಲಾ ಗಿಟ್ಟಿಸಿಕೊಳ್ಳುತ್ತಲೂ ಇದ್ದರು. ನಮ್ಮ ಮದುವೆಯಾದ ಮೇಲೆ ಅಗ ನಮ್ಮ ಮನೆಯಲ್ಲಿ ಪ್ರತಿ ರವಿವಾರವೂ ಕನ್ನಡವರ ಹಬ್ಬ ಇರುತ್ತಿತ್ತು. ಮೊದಲ ದಿನ ಬಡಿಸಲು ಬಂದ ನನ್ನಾಕೆಯನ್ನು ನೋಡಿದ ನನ್ನ ಸ್ನೇಹಿತನೊಬ್ಬ ನನ್ನ ಕಿವಿಯಲ್ಲಿ ಪಿಸುಗುಟ್ಟಿದ್ದ ‘ ಯಾಕೋ ಮೊದಲಿನವಳಿಗೇನಾಯ್ತೋ ಲಕ್ಷಣ ವಾಗಿದ್ದಳಲ್ಲ, ಪ್ರೀತಿಸುವದೊಬ್ಬಳನ್ನ ಮದುವೆಯಾಗೋದು ಇನ್ನೊಬ್ಬಳನ್ನ ಆದರೆ ಅಷ್ಟೂ ಚೆನಾಗಿರಲ್ಲ ಎನ್ನಬೇಕೇ, ಅವಳೇ ಕಣೋ ಇವಳು ಅಂದರೂ ಬೇರೆ ಯಾರನ್ನು ಬೇಕಾದರೂ ಯಾಮಾರಿಸಬಹುದು ನನನ್ನಲ್ಲ ಅನ್ನುತ್ತಿದ್ದ. ಕೊನೆಗೂ ನಮಿಬ್ಬರ ಪ್ರೇಮ ಪತ್ರಗಳ ಅಟ್ಟಿಗಳನ್ನೇ ತೋರಿಸ ಬೇಕಾಯ್ತು ಅವನನ್ನು ನಂಬಿಸಲು.

ನಾವು ಬೊಂಬಾಯಿಯಲ್ಲಿರೋ ಸಮಯವದು. ಅಲ್ಲಿ ನಾನು ರಾವ್ ಅದುದರಿಂದ ತೆಲುಗು ಕನ್ನಡ ಎರಡು ಸಂಘದಲ್ಲೂ ,ನನ್ನ ಧರ್ಮ ಪತ್ನಿ ಕೇರಳದರಾದುದರಿಂದ ಮಲೆಯಾಳಿಗಳ ಸಂಘದಲ್ಲೂ ಸದಸ್ಯರಾಗಿದ್ದುದರಿಂದ ತಿಂಗಳಿಗೆ ನಾಲ್ಕೈದಾದರೂ ಪಿಕ್ನಿಕ್ ಇರುತ್ತಿತ್ತು. ಅಲ್ಲಿ ಎಲ್ಲರೂ ಸಕ್ರಿಯರಾಗಿ ಅತ್ಯಂತ ಚೆನ್ನಾಗಿ ಹೊಂದಿಕೊಂಡಿರುತ್ತಿದ್ದೆವು. ಆಗ ನಮ್ಮ ಹತ್ತಿರದವರು ಎಂದರೆ ಸಂಭಂಧಿಕರಲ್ಲ ಇವರೇ ಅನ್ನುವಂತೆ ನಮ್ಮ ಭಾಂಧವ್ಯವಿತ್ತು ಎಲ್ಲರ ಜತೆ. ಅದರಲ್ಲೊಂದು ಮಲೆಯಾಳೀ ಫ಼್ಯಾಮಿಲಿ ನಮ್ಮೊಡನೆ ತುಂಬಾ ಹೊಂದಿಕೊಂಡಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಸುನಿ ಹಿರಿಯವಳು ಅವಳಿಗೆ ೭ನೆಯ ಕ್ಲಾಸು, ಕಿರಿಯವಳು ಲಾವಣ್ಯ ( ಬಿಟ್ಟೂ) ನಮ್ಮ ಜತೆ ತುಂಬಾನೇ ಹೊಂದಿಕೊಂಡಿದ್ದರು. ಬಿಟ್ಟು ಅಮ್ಮನಿಗೆ ಸುಮಾರು ಜನ ಅಣ್ಣಂದಿರು. ಎಲ್ಲರೂ ಹೊರದೇಶದಲ್ಲಿದ್ದು ವರುಷಕ್ಕೊಮ್ಮೆ ಮಾತ್ರ ಬರುವವರೇ. ಸ್ವಾಭಾವಿಕವಾಗಿ ಕಾಸ್ಟ್ಲೀ ಉಡುಗೊರೆ ತರುವವರೇ. ಮಾತಿನ ಮಧ್ಯೆ ಮಕ್ಕಳನ್ನು ಅಮ್ಮ ಕೇಳಿದರಂತೆ ಮಕಳೇ ನಿಮಗೆ ಯಾವ ಮಾವ ಇಷ್ಟ ಅಂತ. ಅವರ ಮನಸ್ಸಿನಲ್ಲಿ ತನ್ನ ಅಣ್ಣಂದಿರನ್ನು ಹೇಳುತ್ತಾರೆ ಅಂತಿತ್ತು. ಆದರೆ ಎರಡು ಮಕ್ಕಳೂ ಒಕ್ಕೊರಲಿನಲ್ಲಿ ಹೇಳಿದರಂತೆ ಗೋಪಿನಾಥ ರಾವ್ ಅಂಕಲ್ ಇಷ್ಟ ಅಂತ. ಅದನ್ನೇ ತುಂಬಾ ಸಮಯದವರೆಗೆ ನೆನಪಿಸಿಕೊಳ್ಳುತ್ತಿದ್ದರು ಅವರೂ ನಾವೂ.
ಅಲ್ಲಿಯೇ ನಮ ಮೊದಲ ಮಗ ಹುಟ್ಟಿದ್ದು ಆತ ಎರಡು ವರುಷ ಆಗುವರೆಗೆ ಮಕ್ಕಳಿಬ್ಬರೂ ನಮ್ಮ ಮನೆಗೆ ಬಂದು ಮಗುವನ್ನು ಕಕ್ಕುಲಾತಿಯಿಂದ ನೋಡಿಕೊಳ್ಳುತ್ತಿದ್ದರು. ಆಮೇಲೆ ಅವರಿಗೂ ವರ್ಗವಾಯ್ತು.
ಅನಂತರ ಸುಮಾರು ಎರಡನೆಯ ಮಗ ಐದು ವರುಶ ಆಗುವಾಗ ಪುನಃ ಎಲ್ಲಿಯೋ ಸಿಕ್ಕಿದಾಗ ಬಿಟ್ಟು ಮತ್ತು ಸುನೀ ಇಬ್ಬರೂ ಓಡಿ ಬಂದು ಚಿಕ್ಕವನನ್ನು ಅನೂ ಅನೂ ಅಂತ ಮುದ್ದು ಮಾಡುತ್ತಿದ್ದರು. ಹಿರಿಯವ ಅನೂ ಗೆ ಆಗ ಹನ್ನೆರಡು ವರ್ಶ. ಚಿಕ್ಕವನಲ್ಲ ಅನೂ ದೊಡ್ದವನಾಗಿದ್ದಾನೆ ಅಂದರೆ ಒಪ್ಪುವುದೇ ಇಲ್ಲ , ಚಿಕ್ಕವನೇ ಅನು, ಹಾಗೇ ಇದ್ದಾನೆ ಅನ್ನೋ ಶಭಾಶೀ ಬೇರೆ. ನಾವೆಲ್ಲಾ ನಕ್ಕೆವು. ಅದರಲ್ಲೂ ಅಚ್ಚರಿ ಎಂದರೆ ನಮ್ಮ ಗುರುತು ಆ ಮಕ್ಕಳಿಗಾಗಿದ್ದು ನಮ್ಮನ್ನ ನೋಡಿ ಅಲ್ಲ... ಅನೂವಿನ ಹಾಗೇ ಇರೋ ರಾಘುವನ್ನ ನೋಡಿ. ಹೇಗಿದೆ ಗುರುತಿನ ಮಹಿಮೆ..?

ಸುಮಾರು ೧೯೮೨ ರ ಮಧ್ಯೆ. ನಾನು ಜಿ ಡೀ ಸಿ ಕಂಪೆನಿಯಲ್ಲಿದ್ದೆ. ನನ್ನ ಜತೆ ಬಾಳಿಗಾ, ಪೈ ಶಣೈ, ವಸಂತ್ ಇದ್ದರು, ನಾನೂ ಬಾಳಿಗ ಕ್ಲಾಸ್ ಮೇಟ್ಸ್, ಶಣೈ ಮತ್ತು ಪೈ ನಮ್ಮ ಹಾಗೇ ಮಂಗಳೂರಿನವರು. ನಾವಿದ್ದು ಆಗ ಕಡಪ್ಪಾ ಜಿಲ್ಲೆಯ ಕಮ್ಮಗೂಡಮ್ ನಲ್ಲಿ. ಅಲ್ಲಿ ಕನ್ನಡಿಗರೇ ಇಲ್ಲ. ನಮ್ಮನ್ನು ಬಿಟ್ಟರೆ. ಎಲ್ಲಾ ಕಡೆ ತೆಲುಗು. ಅದೂ ರಾಯಲ್ ಸೀಮಾ. ಒಂದು ರವಿವಾರ ನಾವೆಲ್ಲಾ ಹೈದಾರಾಬಾದಿನ ಯಾವುದೋ ಗಲ್ಲಿಯಲ್ಲಿ ಅಡ್ಡಾಡುತ್ತಿದ್ದೆವು. ನಮಗೆ ಆಗ ಕಂಪೆನಿ ವಾರದ ರ’ಜೆಯಲ್ಲಿ ಹೊರ ತಿರುಗಾಡಲು ಗಾಡಿಯನ್ನೂ ಕೊಡುತ್ತಿತ್ತು. ಹಾಗೇ ಸುತ್ತಾಡುತ್ತಿದ್ದಾಗ ಶೆಣೈ ನರ್ಸಿಂಗ್ ಹೋಮ್ ಅನ್ನೋ ಬೋರ್ಡ್ ಕಂಡಿತು. ಶಣೈ ಗೆ ತನ್ನವರನ್ನು ಈ ದೂರದ ಆಂದ್ರದಲ್ಲಿ ಮಾತನಾಡಿಸುವ ಆಸೆ. ಆದರೆ ಹೇಗೆ? ಅದಕ್ಕೊಂದು ಉಪಾಯ ಮಾಡಿದೆವು. ಹುಷಾರಿಲ್ಲ ಅನ್ನೂ ಹಾಗಿಲ್ಲ, ಎಲ್ಲರೂ ಆರೋಗ್ಯವಂತರಾಗೇ ಇದ್ದೇವೆ, ಸರಿ ಅತ್ಯಂತ ಕಡಿಮೆ ಖರ್ಚು ಎಂದರೆ ರಕ್ತ ಪರೀಕ್ಷೆ ಮಾಡಿಸೋದಲ್ವಾ. ಅದನ್ನು ನಾನು ಹೇಳಿದ್ದರಿಂದ ನನ್ನ ತಲೆಗೇ ಕಟ್ಟಲಾಯ್ತು. ಶಣೈ ನರಪೇತಲ, ಪೈ ಮಹಾ ಕುಡುಕ, ಬಾಳಿಗನಿಗೆ ರಕ್ತ ನೋಡಿದರೆ ಆಗಲ್ಲ ಅಂತ ಸಬೂಬು ಹೇಳಿ ನನ್ನ ಬಲಿಪಶು ಮಾಡಲಾಯ್ತು. ನನ್ನ ರಕ್ತದ ಸ್ಯಾಂಪಲ್ ತೆಗೆದು ನೋಡಿ ನನ್ನ ಗುಂಪು ಏ ಪ್ಲಸ್ ಅಂದರು.ಈ ಮಧ್ಯೆ ಸಣೈ ಮತ್ತು ಪೈ ತಮ್ಮ ಭಾಶೆಯಲ್ಲಿ ಮಾತನಾಡಿಸಲು ನೋಡಿದ ಎಲ್ಲಾ ಪ್ರಯತ್ನಗಳು ಅಸಫಲವಾಗಿ ನಾನೇ ಕೇಳಬೇಕಾಯ್ತು. ಇಲ್ಲಿ ಶಣೈ ಅಂದರೆ ಯಾರು? ಅಂತ. ಆಗ ಅವರು ಹೇಳಿದರು ನಮಮ್ಮನಿಗೆ ಮಂಗಳೂರಿನಲ್ಲಿರುವಾಗ ಹೆರಿಗೆ ಮಾಡಿಸಿದ್ದು ಶಣೈ ಅನ್ನೋ ವೈದ್ಯರು . ಅದಕ್ಕೇ ಅವರ ಹೆಸರು ಇಡಲಾಯ್ತು. ಅಂತ. ಸುಮ್ಮನೇ ನನ್ನ ಹಣವನ್ನು ಖರ್ಚು ಮಾಡಿದ್ದಕ್ಕಾಗಿ ಸಹ ಶಣೈಗೆ ಗೂಸಾವೂ ಬಿತ್ತೆನ್ನಿ.

ಕೊನೆಯಲ್ಲೋಂದು ಕೊಸರು. ನಮ್ಮ ಊರಲ್ಲಿನ ಮೆಟ್ಟಿನ ಅಂಗಡಿ ಇದೆಯಲ್ಲ ಅದರ ಮಾಲೀಖ ನನ್ನ ಕ್ಲಾಸ್ ಮೇಟ್ ನ ಅಣ್ಣ. ನಾನು ಕಳೆದ ಸಾರಿ ಹೋದಾಗ ಎರಡು ಜತೆ ಮೆಟ್ಟು ಕೊಂಡಿದ್ದೆ. ಈಸಾರಿಯೂ ಊರಿಗೆ ಹೋದಾಗ ಅಲ್ಲಿಗೆ ಹೋದೆ, ಆದರೆ ಆತನಿಗೆ ನನ್ನ ಗುರ್ತವೇ ಸಿಗಲಿಲ್ಲ. ನನ್ನ ಕಾಲಿನ ಸೈಜ಼ು ನೋಡಲು ಮೆಟ್ಟು ತೆಗೆದದ್ದೇ ತಡ ಹೋ ಗೋಪು ಯಾವಾಗ ಬಂದೆ? ಕೇಳಿದ.

ಈಗಲೂ ನನಗೊಂದು ಹೆದರಿಕೆ ಇದೆ. ಈ ಗುರುತು ಸಿಗದ ಪ್ರಕರಣದ ಬಗ್ಗೆ. ಹೀಗೇ ಒಂದು ದಿನ ಗಣೇಶರೂ ಇದಿರಿಗೇ ಬಂದು ನಾನು ನಿಮ್ಮ ಗುರ್ತು ಹಿಡಿದೇ ಬಿಟ್ಟೆ ನಾನು ಯಾರು ಹೇಳಿ ನೋಡೋಣ ಅಂದ್ರೆ ಏನು ಮಾಡುವುದು ಅಂತ ಯೋಚಿಸುತ್ತಿದ್ದೇನೆ.
ನಿಮ್ಮಲ್ಲೇನಾದರೂ ಉಪಾಯ ಇದೆಯಾ..?
####

PHOTO:  Internet

2 comments:

  1. ನನ್ನದೂ ಇದೇ ಗೋಳು!
    ನನಗೆ ಚಹರೆಗಳು, ಧ್ವನಿ ಮತ್ತು ಯಾವತ್ತೊ ಒಮ್ಮೆ ಹೋಗಿಬರುವ ರಸ್ತೆ, ಪ್ರದೇಶ ಜಪ್ಪಯ್ಯ ಎಂದರೂ ನೆನಪಿನಲ್ಲಿ ಉಳಿಯೋದಿಲ್ಲ! ಏನು ಮಾಡುವುದೋ ನಾನರಿಯೇ!! :-(
    ಕೊಸರು ಬೊಂಬಾಟಾಗಿದೆ...

    ReplyDelete
  2. ನಿಮ್ಮ ಮೆಚ್ಚುಗೆಗೆ ಧನ್ಯ Badarinath Palavall ಯವರೇ

    ReplyDelete