Thursday, April 2, 2015

ಓ ಬಾಲ್ಯವೇ ನೀನೆಷ್ಟು ಚೆನ್ನು ೩


೪.  ಸಾವಿನ ಹತ್ತಿರ

ನಾನು ಚಿಕ್ಕವನಿರಬೇಕಾದ್ರೆ ನಮ್ಮದು ಅವಿಭಕ್ತ ಕುಟುಂಬವಾಗಿತ್ತು ಎಂದಿದ್ದೆನಲ್ಲ.
ನಮ್ಮ ಕೆಲಸದವರ ಪೈಕಿ ಒಂದು ಸಂಸಾರ ನಮ್ಮ ಹೊಲದ ಒಂದು ಭಾಗದಲ್ಲೇ ಇತ್ತು.
ಅವರೆಲ್ಲರೂ ನಮ್ಮ ಲ್ಲಿಯೇ ಕೆಲಸ ಮಾಡಿಕೊಂಡು ಸಂಸಾರ ನಡೆಸುತ್ತಿದ್ದರು.
ಪಿಣಿಯ ಮನೆಯ ಹಿರಿಯಣ್ಣ ಮತ್ತು ಶೀನ ನನ್ನ ಸಮಕಾಲೀನ ಮತ್ತು ಮುಜ್ತ್ತ ಅವನ ತಮ್ಮ.
ಮಕ್ಕಳೇ ಇರುವಾಗ ಎಲ್ಲರೂ ನಮ್ಮ ಜತೆ ಹೊಂದಿಕೊಂಡು ಇದ್ದರೂ ಪ್ರಾಯಶಃ ಸಸ್ಯಾಹಾರ ಮಾಂಸಾಹಾರಗಳ ನಡುವಿನ ಪ್ರಭೇಧದ ಚಿಕ್ಕ ಪರದೆ ಇದ್ದೇ ಇರುತ್ತಿತ್ತು.

ಅವರೆಲ್ಲಾ ಮಾಂಸಾಹಾರಿಗಳಾದ್ದರಿಂದ ಅವರ ಮನೆಯಲ್ಲಿ ನಾವು ಏನನ್ನೂ ತಿನ್ನುವುದು ಮತ್ತು ಕುಡಿಯುವುದು ನಿಶಿದ್ಧವಾಗಿತ್ತು.
ಈ ಕಾರಣಕ್ಕಾಗಿ ಯೇ ಆಗ ನಮ್ಮ ನಡುವೆ ಒಂದು ರೀತಿಯ (ಮಕ್ಕಳಲ್ಲಿ) ಇದ್ದರೂ ಇಲ್ಲದ ಮತ ಭೇಧವೂ ಇರುತ್ತಿತ್ತು.
ಇದರಿಂದಾಗಿ ಏನಾಗುತ್ತಿತ್ತು ಎಂದರೆ ಒಟ್ಟಿಗೆ ಆಡುತ್ತಿರುವಾಗ ಅಥವಾ ನಮ್ಮ ಇಷ್ಟದ ಗುಡ್ಡ ಗಾಡು ಅಲೆಯುತ್ತಿರುವಾಗ (ರಜೆಯಲ್ಲಿ) ಅವರಲ್ಲಿನ ಶೀನನೇ ನಮ್ಮ ನಾಯಕ. ಕಾಡಿನ ಮರ ಗಿಡಗಳ ಬಗ್ಗೆ ಅವನ ಜ್ಞಾನ ಅತ್ಯಧಿಕ.
ಎಲ್ಲೆಲ್ಲಿ ಯಾವ ಯಾವ ಕಾಡು ಹಣ್ಣುಗಳು ಯಾವಯಾವಾಗ ಆಗುತ್ತವೆ , ಎಲ್ಲವೂ ಅವನಿಕೆ ಕರತಲಾಮಲಕ.
ನಮ್ಮ ಹೊಲದ ನಡುವೆ ಒಂದು ಕೆರೆಯಿತ್ತು. ಆಗ ನಮ್ಮ ಗುಡ್ದದಲ್ಲಿ ಇರೋ ಎರಡು ಮುಂಘಳಿಕೆ ನೀರಿನ ಒರತೆಯಿಂದಾಗಿ ಸದಾ ಕಾಲ ತೋಡುಗಳಲ್ಲಿ ಈರು ಹರಿಯುತ್ತಿದ್ದು ಕೆರೆ ಬಾವಿಗಳು ತುಂಬಿಕೊಂಡೇ ಇರುತ್ತಿದ್ದವು.
ಈಜಾಡುವುದೆಂದರೆ ಶೀನ ಮೀನೇ . ನಮಗೆಲ್ಲಾ ಅದೊಂದು ಚೋದ್ಯ. ನಮಗೆಲ್ಲಾ ಈಜು ಬರದೇ ನೀರಿಳಿಯಲಿಲ್ಲ, ನೀರಿಳಿಯದೇ ಈಜು ಬರಲ್ಲ ಅನ್ನೋ ಸ್ಥಿತಿ.
ಅದಕ್ಕೇ ಇದೊಂದು ವಿದ್ಯೆ ನಮಗೆ ಗೊತ್ತಿಲ್ಲದ ಅವರಿಗೆ ಮಾತ್ರ ಗೊತ್ತಿರುವ ಮಹಾ ವಿದ್ಯೆಯಾಗಿತ್ತು.
ಅದನ್ನು ಕಲಿಯಲು ನಾನು ಹಾತೊರೆಯುತ್ತಿದ್ದೆ. ಅದಕ್ಕೇ ಶೀನನ ಬಳಿ ಯಾವಾಗಲೂ ಈಜು ಕಲಿಸಿಕೊಡಲು ಕೇಳಿಕೊಳ್ಳುತ್ತಿದ್ದೆ,
ಬಹು ಒತ್ತಾಯದಿಂದ ಆತ ನನಗೆ ಈಜು ಕಲಿಸಿಕೊಡಲು ಒಪ್ಪಿದ. ನಮ್ಮ ಮನೆಯಿಂದ ಸುಮಾರು ಎರಡು ಕಿ ಮೀ ದೂರದಲ್ಲಿ ಒಂದು ನದಿ ಇದೆ.
ಮುಂಬರುವ ರವಿವಾರ ನಮ್ಮ ಜಾನುವಾರುಗಳನ್ನು ಮೈ ತೊಳೆಯಲು ಒಯ್ಯುವ ನೆಪದಲ್ಲಿ ನಾನೂ ಅವನ ಜತೆಗೆ ಹೋಗಿ ಈಜಲು ಕಲಿಯುವದೆಂತ ನಿಶ್ಚೈಸಿಕೊಂಡೆವು.
ಸಾಮಾನ್ಯವಾಗಿ ಬೇಸಗೆಯಲ್ಲಿ ಹದಿನೈದು ಇಪ್ಪತ್ತು ದಿನಗಳಿಗೊಮ್ಮೆ ನಮ್ಮ ಜಾನುವಾರುಗಳನ್ನು ಹೊಳೆಗೆ ಒಯ್ಯುವ ಪರಿಪಾಠವಿತ್ತು.
ಹೀಗೆ ನಾನು ಮುಂದಿನ ರವಿವಾರ ಶೀನನ ಜತೆಗೆ ಯಾರಿಗೂ ( ಮನೆಯಲ್ಲಿ ಹೇಳಿದರೆ ನನ್ನನ್ನು ಅವನ ಜತೆ ಹೋಗಲು ಬಿಡುವುದಿಲ್ಲವೆಂದುಕೊಂಡು ) ಹೇಳದೇ ಹೊರಟಿದ್ದೆ.
ಅದು ಬೇಸಗೆಯ ಪ್ರಾರಂಭವಾದ್ದರಿಂದ ನದಿಯಲ್ಲಿ ನೀರಿನ ಹರವು ಸ್ವಲ್ಪ ಕಡಿಮೆಯೇ ಇತ್ತು. ಆದರೂ ಅವನು ಆರಿಸಿದ ಜಾಗದಲ್ಲಿ ನೀರು ಸಾಕಷ್ಟು ಆಳವಾಗಿಯೇ ಇತ್ತು.
ನನ್ನನ್ನು ನೀರಿಗೆ ಹೊಂದಿಕೊಳ್ಳುವುದನ್ನು ಕಲಿಸಲೋಸುಗ ಆತನೇ ನೀರಲ್ಲಿ ಧುಮುಕಿ ಈಜುತ್ತಾ ನಾನಾ ರೀತಿಯ ತರದಲ್ಲಿ ಈಜಿ ತೋರಿಸಿದ,
ಯಾವ ಯಾವ ಮೀನು ಯಾವ ರೀತಿಯಲ್ಲಿ ಈಜುತ್ತೋ ಅದನ್ನು ಮಾಡಿ ತೋರಿಸಿದ.
ನಂತರ ನನ್ನ ಸರದಿ, ಆತನು ಲೀಲಾಜಾಲವಾಗಿ ಈಜುತ್ತಿದ್ದ ಪರಿ ನನ್ನನ್ನು ಎಷ್ಟು ಪ್ರಚೋದಿಸಿತ್ತೆಂದರೆ ನಾನು ನೀರಿಗಿಳಿದು ಕೈಆಡಿಸಿದರೆ ಸಾಕು ತನ್ನಿಂದ ತಾನೇ ಈಜು ಬರುತ್ತೆ ಅಂತ ಎಣೆಸಿದ್ದೆ.
ಆದರೆ ನನಗೆ ಈಜು ಕಲಿಸಲು ಆತ ತನ್ನದೇ ಆದ ವಿಧಾನವನ್ನ ಆರಿಸಿಕೊಂಡಿದ್ದ. ಅನಿವಾರ್ಯತೆ..
ಆತ ನನ್ನನ್ನು ತನ್ನ ಬೆನ್ನ ಮೇಲೇರಿಸಿಕೊಂಡು ಈಸುತ್ತಾ ಹೋಗಿ ಮಡುವಿನ ನಟ್ಟ ನಡುವೆ ನೀರಲ್ಲೇ ಬಿಟ್ಟು ಮುಳುಗಿದ ಆತ ಅಲ್ಲಿಂದಲೇ ಬೇರೆ ಜಾಗದಲ್ಲಿಂದ ಮೇಲೆದ್ದ..
ನೀರಲ್ಲಿ ಬೀಳುವುದೇ ಈಜು ಅಂತ ತಿಳಿದ ನಾನು ನನ್ನ ಯೋಚನೆಯೊಂದಿಗೆ ನೀರಲ್ಲಿ ಮುಳುಗಿದ್ದೆ,
ಮೇಲೆ ಬರಲಾಗದೇ ಏನಾಗುತ್ತಿದೆ ಎಂತ ತಿಳಿಯುವುದರೊಳಗಾಗಿ ನೀರಲ್ಲಿ ಮುಳುಗೇಳುತ್ತಾ, ನಾಲ್ಕಾರು ಗುಟುಕು ನೀರೂ ಕುಡಿದಿದ್ದೆ. ಪ್ರಥಮ ಚುಂಬನಂ...... ಎಂಬಂತಾಗಿತ್ತು ನನ್ನ ಪರಿಸ್ಥಿತಿ.
ಶ್ವಾಸದೊಟ್ಟಿಗೆ ನೀರನ್ನೂ ಕುಡಿಯುತ್ತಾ,.... ಆಗಲೂ ನನ್ನ ಮರಣ ಹತ್ತಿರ ಬಂತು ಅಂತ ಎಣಿಸಿ ರಾಮ ರಾಮ ಅಂತ ಜಪ ಮಾಡತೊಡಗಿದೆ. ಅಮ್ಮನ ಕಲಿಕೆಯಿಂದಾಗಿ ಈ ರಾಮ ಶಬ್ದವೊಂದು ಮನದಲ್ಲಿ ಗಟ್ಟಿ ಇತ್ತು.
ಅವನ ಹೆಸರು ಹೇಳಿದರೆ ಕಷ್ಟ ಪರಿಹಾರವಾಗುತ್ತೆ ಎಂಬ ನಂಬಿಕೆ ನೋಡಿ.
ಇನ್ನೇನು ಮುಗಿದೇ ಹೋಯ್ತು......ಅಂತ ಎಣಿಸುವಾಗ ಅದೆಲ್ಲಿಂದಲೋ ಬಂದ ಶೀನನ ಅಣ್ಣ ಪಿಣಿಯ ನನ್ನನ್ನೆತ್ತಿ ದಡ ಸೇರಿಸಿದ,
ಮತ್ತು ಎಂತ ದೊಡ್ಡ ಗಂಡಾಂತರವಾಗುತ್ತಿತ್ತು ಅಂತ ಅವನದ್ದೇ ರೀತಿಯಲ್ಲಿ ವಿವರಿಸಿದ ಮತ್ತು ಪಾಪ!! ಶೀನನಿಗೆ ಶಿಕ್ಷೆಯೂ ಸಿಕ್ಕಿತ್ತು, ಪಾಪ..
ಮುಂದಿನ ಒಂದು ವರ್ಷ ನನಗೆ ನದಿ ಮತ್ತು ಶೀನ ಇಬ್ಬರೂ ಔಟ್ ಒಪ್ ಬಾಂಡ್ ಅಗಿದ್ದುವು.


2 comments:

  1. ಮತ್ತೊಮ್ಮೆ ಮರು ಜನುಮ...

    ReplyDelete
  2. ಅದಕ್ಕೇ ಹೀಗಿದ್ದೇನೋ ಏನೋ ಬದರಿಯವರೇ. ನಿಮ್ಮ ಆಸ್ಥೆಗೆ ಧನ್ಯವಾದಗಳು

    ReplyDelete