Monday, April 6, 2015

ಪ್ರಹರಿ ಆ ಕರಾಳ ನೆನಪು

ಉಳಿದೆಲ್ಲೆಡೇಯಂತೆ ಮತ್ತೆ ಕಾಲಿರಿಸಿತು ವಸಂತ ಕಾರ್ಗಿಲ್ಲಿನಲ್ಲಿ
ಬೆಳ್ಸೆರಗು ಕರಗ ತೊಡಗಿತು. ಚಿಗುರುಗಳ ದಿರೊಡೆದವು ಸಸ್ಯ ವನರಾಜಿಯಲ್ಲಿ.
ಎಂದಿನಂತೆ ಬುವಿ ಹಸಿರೊಡೆದರೆ ಬಾನು ಖುಶಿ ಸುರಿಸಿತು.
ದರೆ ಎದೆಯೆತ್ತಿ ನಿಂತ ಹೆಬ್ಬಂಡೆಗಳು ಚಿಗುರಿಯಾವೇ..?
ಮುಗಿಲೆತ್ತಕ್ಕೇರಿ ನಿಂತ ಬೆತ್ತಲ ಮಲೆ ಬಸಿರಾದೀತೇ..?

ಕರಿ ನೆರಳ ಆ ಕರಾಳನೆನಪು....ಉಳಿದವರನ್ನೂ ಎದೆಗುಂದಿಸೀತು..
ಆ ನೆನಪಿನ ಒಂದೆಳೆ...



ಪ್ರಹರಿ.... 


ಅರಿವಿಲ್ಲದವನೆಡೆಗೆ ಎಸೆಯದಿರಿ ಹೂವುಗಳ
ಕಲ್ಲಾಗಿ ನಾನಿಹೆನು ಮರೆತಂತೆ ನೆನಹುಗಳ
ಕಾರ್ಗಿಲ್ನ ಅಘಾತ ಮರೆಸಿತ್ತು ಅರಿವುಗಳ
ಕರಟಿಸಿ ಕದಿರೊಡೆದ ಭಾವನೆಯ ಚಿಗುರುಗಳ



ಪ್ರಹರಿಯಾದ ನನ್ನಾಸೆ ಅರಳಿತ್ತು ಆಗೊಮ್ಮೆ
ಟಿಸಿಲೊಡೆದ ಭಾವನೆಯ ಚಿಗುರುಗಳ ಕಡೆಗೊಮ್ಮೆ
ಹಸಿರುನೆಲ ತಿಳಿನೀಲದಂಬರದ ರಕ್ಷೆಯಲಿ
ತನ್ನವರ ಸ್ಥಿರನೆಲೆಯ ಸುಖನಗೆಯ ಕಕ್ಷೆಯಲಿ

ಸುಡುಸುಡುವ ಬಿಸಿಲಿರಲಿ ಮೈಕೊರೆವ ಚಳಿಯಿರಲಿ
ಬಸಿದ ಕಣ್ಣೀರಿರಲಿ ಹರಿದ ಕೆನ್ನೀರಿರಲಿ
ನೊವಿರಲಿ ನಲಿವಿರಲಿ ತನ್ನವರ ನೆನಪಿನಲಿ
ಕಾವನೀ ಪರಿ ಪ್ರಹರಿ ಬತ್ತದಾವೇಶದಲಿ

ಕೊಚ್ಚಿ ಬಿಸುಟರೂ ಸಖರ, ಮತ್ತೆ ತರಿದರೂ ಹಲರ
ಒರಸಿ ನಡೆವರು ಮುಂದೆ ಸೆಲೆಯೊಡೆವ ಕಣ್ಣೀರ
ತಮ್ಮೊಡಲ ಪ್ರಿಯಸಖರ ,ಏಕಾಂಗೀ ಕಳೆವರವ
ಬಿಟ್ಟು ಕೊಡುವರು ಜೀವ, ಕಾಯೆ ತಾಯಿಯ ನೆಲವ

ಯಾರದೋ ಸ್ವಾರ್ಥಕ್ಕೆ ಕಾಟ ಸೆಣಸಾಟಕ್ಕೆ
ಸೆಣೆಸಿ ನಿಲುವರು ತಮ್ಮ ಪ್ರಾಣ ಬಲಿದಾನಕ್ಕೆ
ಉಳಿಯೆ ಕಾಯ್ವರು ಮತ್ತೆ ಮಲೆ ಹತ್ತಿ ಗಡಿ ಸುತ್ತೆ
ಅಳಿದುಳಿವ ಕೆಚ್ಚೊಲವು ಇದುವೆ ಪ್ರಹರಿಯ ನಿತ್ತೆ

ಮುಗಿಯದೀ ಸೆಣಸಾಟ ಈ ಹೂಟ ಕೆಣಕಾಟ
ಅಳಿದವರ ಮನೆಮನೆಯ ಕಣ್ಣೊರಸೋ ಹೆಣಗಾಟ
ಮತ್ತೆ ದುರ್ಲಭ ಅವರ ಹೆತ್ತೊಡಲ ಸರಸಾಟ
ಪ್ರಹರಿಯಾ ಪ್ರಿಯಜನರ ಹುಸಿನಗೆಯ ಸವಿಯೂಟ

ನನಗೀಗ ಬಲುದೂರ ಕರಗುವಾ ಬೆಳ್ಸೆರಗು
ಮಿಡುಕುವಾ ಹಸಿರೆಲೆಯ ಪ್ರಕೃತಿಯ ನಲ್ಸೆರಗು
ಅರಿವಿಲ್ಲದವನೆಡೆಗೆ ಎಸೆಯದಿರಿ ಪುಷ್ಪಗಳ
ಕಲ್ಲಾಗಿ ನಾನಿಹೆನು ಮರೆತಂತೆ ನೆನಹುಗಳ

2 comments:

  1. ಅದೆಲ್ಲೋ ಕೂತು ವಾಸ್ತವ ಚಿತ್ರಣದ ಅರಿವಿಲ್ಲದೆ ಲೊಚಗುಟ್ಟುವ ಮತ್ತು ಪೊಳ್ಳು ನಿಟ್ಟುಸಿರೂಯುವ ರಾಜಕಾರಣಿಗಳಿಗೆ, ಅವರು ಸೃಷ್ಟಿಸುವ ಘೋರ ಬ್ಲಂಡುರುಗಳಿಗೆ ನಮ್ಮ ಧಿಕ್ಕಾರವಿದೆ.

    ಪ್ರಹರಿಯ ನಿರ್ಭಾವುಕ ಮೈಮೇಲೆ ನೆರೆಯವರ ಗಾಯಗಳ ಮಾಯಲಾರದ ಹುಣ್ಣುಗಳಿವೆ. ಅನುಕ್ಷಣ ಮೈ ಎಲ್ಲಾ ಕಣ್ಣಾದರೂ ನಮ್ಮವರಿಗೆ ಸಾವು ಹೊಂಚಿಕುಳಿತ ವೇದನೆ ಇದೆ.

    ಮತ್ತೆ ದುರ್ಲಭ ಅವರ ಹೆತ್ತೊಡಲ ಸರಸಾಟ ಎಂಬ ತಮ್ಮ ನೋವಿನ ಉದ್ಗಾರ ಕಣ್ಣೀರ ತರಿಸಿತು.

    ಇನ್ನೂ ಬದುಕುಳಿದವರಿಗಾದರೂ ನ್ಯಾಯ ದೊರೆಯೊತೇ ಎಂದರದೂ ಅರೆ ಹೊಟ್ಟ!

    ಜೈ ಜವಾನ್... ಜೈ ಹಿಂದ್....

    ReplyDelete
  2. ಬದರಿಯವರೇ
    ಯುದ್ಧದ ಕರಾಳ ದೃಶ್ಯ ಮತ್ತು ಅದರಲ್ಲಿ ಭಾಗವಹಿಸಿ ನೊಂದವರ ಸಂಸಾರಗಳಲ್ಲಿನ ಭಿರುಗಾಳಿಗಳು ನಾವು ಯೋಚಿಸಲೂ ಆಗದಷ್ಟು ಕಠೋರ.
    ಅದನ್ನು ನನ್ನಿಂದ ಸಾಧ್ಯವಾದಷ್ಟು ಹೊರ ಹಾಕಲು ಪ್ರಯತ್ನಿಸಿದ್ದೆ. ತಮ್ಮ ಪ್ರೋತ್ಸಾಹದಾಯಕ ಮೆಚ್ಚುಗೆಗಳು ನನ್ನ ಪ್ರಯತ್ನಕ್ಕೆ ತಕ್ಕ ಸಂಭಾವನೆ ಒದಗಿಸಿವೆ.
    ಧನ್ಯವಾದಗಳು

    ReplyDelete